ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಹುಡುಗಿಯ ಚೆಂದದ ಕನಸು

Last Updated 24 ಡಿಸೆಂಬರ್ 2017, 9:17 IST
ಅಕ್ಷರ ಗಾತ್ರ

ಧಾರವಾಡ: ‘ಗ್ರಾಮೀಣ ಭಾಗದಿಂದ ಬಂದ ನನಗೆ ಅಲ್ಲಿನ ವೈದ್ಯಕೀಯ ಸೌಲಭ್ಯಗಳ ಪರಿಚಯವಿದೆ. ಹೀಗಾಗಿ ಅವಕಾಶ ಸಿಕ್ಕರೆ ಗ್ರಾಮೀಣ ಪರಿಸರದಲ್ಲಿ ಕೆಲಸ ಮಾಡುವಾಸೆ’ ಎಂದು 15 ಬಂಗಾರದ ಪದಕದೊಂದಿಗೆ ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದ ವೈದ್ಯಕೀಯ ಪದವೀಧರೆ ಡಾ. ಜೆ.ಎಸ್‌.ಅರ್ಪಿತಾ ತಮ್ಮ ಮನದಾಸೆ ಹಂಚಿಕೊಂಡರು.

ಎಸ್‌ಡಿಎಂ ವೈದ್ಯಕೀಯ ಕಾಲೇಜಿನ 9ನೇ ಪದವಿ ಪ್ರದಾನ ಸಮಾರಂಭದಲ್ಲಿ ವಿವಿಧ ವಿಭಾಗಗಳಲ್ಲಿ 15 ಚಿನ್ನದ ಪದಕ ಪಡೆದ ಅರ್ಪಿತಾ ದಾವಣಗೆರೆ ಜಿಲ್ಲೆಯ ಜಗಳೂರಿನವರು. ತಂದೆ ಜಯಶೀಲರಡ್ಡಿ ಹಾಗೂ ತಾಯಿ ಶಾಂತಕುಮಾರಿ ಇಬ್ಬರೂ ಶಾಲಾ ಶಿಕ್ಷಕರಾಗಿದ್ದಾರೆ.

‘ಬಡಜನರಿಗೆ ವೈದ್ಯಕೀಯ ಸೌಲಭ್ಯ ದೊರೆಯುತ್ತಿಲ್ಲ ಎಂಬ ಸಂಗತಿಯನ್ನು ಬಾಲ್ಯದಲ್ಲೇ ಮನಗಂಡು ವೈದ್ಯೆಯಾಗಬೇಕು ಎಂಬ ಕನಸು ಕಂಡೆ. ಅದು ಈಗ ನನಸಾಗಿದೆ. ಉತ್ತಮ ಅಂಕಗಳೊಂದಿಗೆ ಪದವಿ ಪಡೆದದ್ದು ನನ್ನ ಉದ್ದೇಶದ ಹಾದಿಯ ಮೊದಲ ಮೆಟ್ಟಿಲು. ಗ್ರಾಮೀಣ ಜನರ ಸೇವೆ ಮಾಡುವುದು ನನ್ನ ಧ್ಯೇಯ’ ಎಂದರು.

ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಡಾ. ಡಿ.ವೀರೇಂದ್ರ ಹೆಗ್ಗಡೆ, ‘ಆರೋಗ್ಯ ಕಾಳಜಿ ಇಲ್ಲದ ಕಾರಣ ಗ್ರಾಮೀಣ ಭಾಗದಲ್ಲಿ ಸಾವಿನ ಸಂಖ್ಯೆ ಹೆಚ್ಚಳವಾಗಿದೆ. ವೈದ್ಯಕೀಯ ಕ್ಷೇತ್ರ ಆರೋಗ್ಯ ಮತ್ತು ಸಂಪತ್ತನ್ನು ಕಾಪಾಡುವ ಕ್ಷೇತ್ರವಾಗಿದೆ. ರೋಗಿಗಳಿಗೆ ವೈದ್ಯರು ಉತ್ತಮ ಚಿಕಿತ್ಸೆ ನೀಡುವುದರ ಜತೆಗೆ ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಳ್ಳಬೇಕು. ಆಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದರು.

‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗ್ರಾಮೀಣ ಜನರಲ್ಲಿ ಆರೋಗ್ಯ ಕಾಳಜಿ, ನೈರ್ಮಲ್ಯ ಕಾಪಾಡುವ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಪದವಿ ಪಡೆದ ವಿದ್ಯಾರ್ಥಿಗಳು ಸಮಾಜ ಸೇವೆ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಹೇಳಿದರು.

ಧರ್ಮಸ್ಥಳದ ಧರ್ಮಾಧಿಕಾರಿಯಾಗಿ 50 ವರ್ಷಗಳನ್ನು ಪೂರೈಸಿದ ವೀರೇಂದ್ರ ಹೆಗ್ಗಡೆ ಅವರನ್ನು ಕಾಲೇಜಿನ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ ಕುಲಪತಿ ಡಾ. ಎಚ್.ವಿನೋದ್ ಭಟ್‌ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಡಾ. ಕೆ.ಬಿ.ವಿಸ್ಮಯ, ಡಾ.ಪೂಜಾ ಬಿರಾದಾರ, ಡಾ. ಅಖಿಲಾ ಪಾಗಾ ತಲಾ ಎರಡು ಚಿನ್ನದ ಪದಕ, ಡಾ. ಐಶ್ವರ್ಯ ರಾಜು, ಡಾ. ಕಲ್ಯಾಣಿ ಸುಂದರರಾಜ್‌ ಮತ್ತು ಡಾ. ಕೀರ್ತನ್‌ ಶಂಕರ ತಲಾ ಒಂದು ಪದಕ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT