ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

38 ಸಾವಿರ ಕುಟುಂಬಗಳಿಗೆ ಅನಿಲ ಭಾಗ್ಯ

Last Updated 24 ಡಿಸೆಂಬರ್ 2017, 9:23 IST
ಅಕ್ಷರ ಗಾತ್ರ

ಹಾಸನ: ಹೊಗೆ ಮುಕ್ತ ರಾಜ್ಯ ಮಾಡಲು ಜಾರಿಗೆ ತಂದಿರುವ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಲ್ಲಿ ರಾಜ್ಯದ 10 ಲಕ್ಷ ಕುಟುಂಬಗಳಿಗೆ ಉಚಿತವಾಗಿ ಅನಿಲ ಸಂಪರ್ಕ ನೀಡಲಾಗುತ್ತಿದೆ ಎಂದು ಪಶುಸಂಗೋಪನೆ ಸಚಿವ ಎ.ಮಂಜು ತಿಳಿಸಿದರು.

ಜಿಲ್ಲೆಯಲ್ಲಿ 1,19,453 ಜನರು ಸೀಮೆಎಣ್ಣೆ ಬಳಕೆ ಮಾಡುತ್ತಿದ್ದು, ಮೊದಲ ಹಂತದಲ್ಲಿ 38 ಸಾವಿರ ಕುಟುಂಬಗಳಿಗೆ ಈ ಯೋಜನೆಯಲ್ಲಿ ಎರಡು ಸಿಲಿಂಡರ್, ಸ್ಟೌ ವಿತರಿಸಲಾಗುವುದು ಇದರಲ್ಲಿ ಶೇ 25 ರಷ್ಟು ಪರಿಶಿಷ್ಟ ಜಾತಿ ಮತ್ತು ಕುಟುಂಬಗಳು ಸೇರಿಕೊಂಡಿವೆ. ಗ್ಯಾಸ್ ಸಂಪರ್ಕ ಕಲ್ಪಿಸುವ ಏಜೆನ್ಸಿಗಳಿಗೆ ಒಂದು ಕುಟುಂಬಕ್ಕೆ ₹ 4040 ರಂತೆ ಹಣ ಪಾವತಿ ಮಾಡಲಾಗುತ್ತದೆ. ಇದರಲ್ಲಿ ಫಲಾನುಭವಿ ಹಣ ಪಾವತಿಸುವಂತಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಗೂ ನ್ಯಾಯ ಬೆಲೆ ಅಂಗಡಿವಾರು ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕ್ಷೇತ್ರವಾರು ಮಾಹಿತಿ ಹೀಗಿದೆ. ಅರಸೀಕೆರೆ– 6215, ಬೇಲೂರು –7214, ಹಾಸನ –1419, ಸಕಲೇಶಪುರ– 4527, ಅರಕಲಗೂಡು– 7389, ಚನ್ನರಾಯಪಟ್ಟಣ –5361, ಹೊಳೆನರಸೀಪುರ– 5978 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ವಿವರಿಸಿದರು.

ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಗೂ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಉಜ್ವಲ ಯೋಜನೆಗೂ ಯಾವುದೇ ಸಂಬಂಧವಿಲ್ಲ. ಅನಿಲ ಸಂಪರ್ಕ ಪಡೆಯಲು ಫಲಾನುಭವಿ ಆಧಾರ್‌ ಕಾರ್ಡ್‌ ನೀಡಬೇಕು. ಈಗಾಗಲೇ ಇತರೆ ಯೋಜನೆಯಲ್ಲಿ ಸಂಪರ್ಕ ಪಡೆದುಕೊಂಡಿದ್ದರೆ ಸೌಲಭ್ಯ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮುಖ್ಯಮಂತ್ರಿಗಳ ಅನಿಲಭಾಗ್ಯ ಯೋಜನೆಯ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಜು, ಕಾರ್ಮಿಕ ಇಲಾಖೆ, ಅರಣ್ಯ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳಿಂದ ಗುರುತಿಸಲ್ಪಟ್ಟಿರುವ ಫಲಾನುಭವಿಗಳಿಗೆ ಉಚಿತ ಅನಿಲ ಸಂಪರ್ಕ ಒದಗಿಸುವ ಮಹತ್ವದ ಯೋಜನೆ ಇದಾಗಿದೆ ಎಂದು ಹೇಳಿದರು.

ಫಲಾನುಭವಿಗಳ ಆಯ್ಕೆಗೆ ಸಂಪೂರ್ಣ ಅಧಿಕಾರ ಆಯಾ ಕ್ಷೇತ್ರದ ಶಾಸಕರಿಗೆ ನೀಡಲಾಗಿದೆ. ಈಗಾಗಲೇ ಆಹಾರ ಇಲಾಖೆ ಮೂಲಕವೇ ಪಟ್ಟಿ ಮಾಡಲಾಗಿದೆ. ಯಾವುದೇ ತಾರತಮ್ಯವಿಲ್ಲದೆ ಅವರಿಗೆ ಈ ಸೌಲಭ್ಯ ತಲುಪಿಸಬೇಕೆಂದು ಸಚಿವರು ಹೇಳಿದರು.

ಶಾಸಕರಾದ ಕೆ.ಎಂ.ಶಿವಲಿಂಗೇಗೌಡ ಹಾಗೂ ಸಿ.ಎನ್.ಬಾಲಕೃಷ್ಣ ಅವರು ಪ್ರತಿ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ ಹತ್ತಾರು ಮಂದಿ ಅನಿಲರಹಿತ ಕುಟುಂಬಗಳಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳ ಆಯ್ಕೆ ಸುಲಭವಾಗಿ ನಡೆಯುತ್ತದೆ. ಉಳಿದವರನ್ನು ಲಾಟರಿ ಮೂಲಕ ಅಥವಾ ಇಲಾಖೆ ಮೂಲಕವೇ ಆಯ್ಕೆ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಅನಿಲ ಸಂಪರ್ಕ ವಿತರಣೆಯಲ್ಲಿ ತಾರತಮ್ಯ ಬೇಡ ಎಲ್ಲಾ ಬಡವರಿಗೂ ಈ ಅನುಕೂಲ ತಲುಪಿಸಲು ನ್ಯಾಯ ಬೆಲೆ ಅಂಗಡಿ ವ್ಯಾಪ್ತಿಯಲ್ಲಿ ಸ್ಥಳೀಯವಾಗಿ ಫಲಾನುಭವಿಗಳ ಆಯ್ಕೆಯಾಗಲಿ ಎಂದು ಶಾಸಕರು ಸಲಹೆ ನೀಡಿದರು. ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ ನೀಡಲಾಗುತ್ತಿರುವ ಅನಿಲ ಸಂಪರ್ಕದಲ್ಲಿ ಬಡವರಿಗೆ ಕೆಲವು ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದರು.

ಆಹಾರ ನಾಗರೀಕ ಸರಬರಾಜು ಇಲಾಖೆ ಉಪ ನಿರ್ದೇಶಕ ಶ್ರೀಕಂಠಮೂರ್ತಿ ಮಾತನಾಡಿ, ಮುಖ್ಯಮಂತ್ರಿ ಅನಿಲ ಯೋಜನೆಗೆ ಅರ್ಹ ಫಲಾನುಭವಿಗಳು ಹತ್ತಿರದ ಗ್ರಾಮ ಪಂಚಾಯಿತಿಯಲ್ಲಿ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು. ಫಲಾನುಭವಿಗಳ ಆಯ್ಕೆ ಮೇರೆಗೆ ಯಾವುದಾದರೂ ಅನಿಲ ಕಂಪೆನಿಗಳಿಗೆ ಕಳುಹಿಸಲಾಗುವುದು.

ನಂತರ ಕಂಪೆನಿ, ನೋಂದಣಿಯಾದ ಫಲಾನುಭವಿಗಳ ಆಧಾರ್ ಕಾರ್ಡ್ ದಾಖಲೆ ಪಡೆದು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿಕೊಡುತ್ತದೆ. ಬಳಿಕ ಈ ಪಟ್ಟಿಯನ್ನು ಪರಿಶೀಲಿಸಿ ಆಯ್ಕೆ ಫಲಾನುಭವಿಗಳಿಗೆ ಉಚಿತ ಅನಿಲಭಾಗ್ಯ ಒದಗಿಸಲಾಗುತ್ತದೆ ಎಂದು ವಿವರಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಪೂರ್ಣಿಮಾ, ನಗರಸಭೆ ಪೌರಾಯುಕ್ತ ಪರಮೇಶ್, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT