ಆಧುನಿಕತೆಗೆ ನಲುಗಿದ ಕಮ್ಮಾರರ ಬದುಕು

ಆಧುನಿಕ ಯಾಂತ್ರೀಕರಣ ಇಂದು ಉಸಿರುಕಟ್ಟುವಷ್ಟು ಭಾರಿ ಪ್ರಮಾಣದಲ್ಲಿ ವಸ್ತುಗಳನ್ನು ಉತ್ಪಾದಿಸುತ್ತಿದೆ.

ಬೆಂಕಿಯ ಜ್ವಾಲೆಗಳೊಂದಿಗೆ ಆಟವಾಡುತ್ತಾ ಗಡಸು ಕಬ್ಬಿಣದ ಸಾಧನ ಹದಗೊಳಿಸಿ, ತಿದ್ದಿ–ತೀಡಿ ಅದಕ್ಕೊಂದು ರೂಪ ನೀಡುವ ಕಮ್ಮಾರರ ಬದುಕು ಮಾತ್ರ ಇಂದಿಗೂ ಹಸನಾಗಿಲ್ಲ..!

ಆಧುನಿಕ ಯಾಂತ್ರೀಕರಣ ಇಂದು ಉಸಿರುಕಟ್ಟುವಷ್ಟು ಭಾರಿ ಪ್ರಮಾಣದಲ್ಲಿ ವಸ್ತುಗಳನ್ನು ಉತ್ಪಾದಿಸುತ್ತಿದೆ. ಈ ಕೈಗಾರಿಕಾ ಕ್ರಾಂತಿಯು ಮಾನವ ವೈವಿಧ್ಯತೆ ಹಾಗೂ ಜೀವ ವೈವಿಧ್ಯತೆ ಮೇಲೆ ಯಾವ ಪರಿಣಾಮ ಬೀರಿದೆಯೋ ಅದಕ್ಕೂ ಹೆಚ್ಚು ಪರಿಣಾಮ ಗ್ರಾಮೀಣ ಗುಡಿ ಕೈಗಾರಿಕೆಗಳ ಮೇಲೆ ಉಂಟಾಗಿರುವುದು ಸುಳ್ಳಲ್ಲ.

ಕೈಗಾರಿಕೆ ಕ್ರಾಂತಿ ಕೃಷಿ ಸಂಬಂಧಿ ಸಲಕರಣೆ ತಯಾರಿಕೆ ಮೇಲೆ ಅವಲಂಬಿತ ಕಮ್ಮಾರಿಕೆ ಕುಲ ಕಸುಬಿನ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ. ಈ ಹಿಂದೆ ಪ್ರತಿ ಗ್ರಾಮಗಳಲ್ಲಿ ಕಮ್ಮಾರಿಕೆ ಕೆಲಸದಲ್ಲಿ ತೊಡಗಿರುವ ಕುಟುಂಬಗಳನ್ನು ಕಾಣಬಹುದಿತ್ತು. ಆದರೆ, ಇಂದು ಅಲ್ಲೊಂದು, ಇಲ್ಲೊಂದು ಮಾತ್ರ ಇಂಥ ಕುಟುಂಬ ಕಾಣಸಿಗುತ್ತಿವೆ. ಕೃಷಿಗೆ ಅಗತ್ಯವಾದ ಕುಡಗೋಲು, ಕಂದಲಿ, ಎತ್ತಿನ ಬಂಡಿಗಳ ಹಳಿ, ಗುದ್ದಲಿ, ಸಲಿಕಿ, ಹಾರಿ ಇನ್ನಿತರ ಸಲಕರಣೆಗಳನ್ನು ಕುಲುಮೆಯಲ್ಲಿ ಕೆಂಪಗೆ ಕಾಸಿ ಬಡಿದು ಸಿದ್ಧ ಮಾಡುತ್ತಿದ್ದ ಕಮ್ಮಾರರು ಇಂದು ಕೆಲಸವಿಲ್ಲದೇ ಜೀವನೋಪಾಯಕ್ಕೆ ಬೇರೆ ಬೇರೆ ಕಸುಬುಗಳತ್ತ ಮುಖ ಮಾಡುವಂತಾಗಿದೆ.

ಹೆಚ್ಚುತ್ತಿರುವ ಟ್ರ್ಯಾಕ್ಟರ್ ಬಳಕೆಯಿಂದ ಹಿಂದಿನ ಕೃಷಿಕ ಸಲಕರಣೆಗಳ ಬಳಕೆ ಕಡಿಮೆಯಾಗುತ್ತಿದ್ದು, ಕಮ್ಮಾರರ ಕೈಗಳಿಗೆ ಕೆಲಸ ಸಿಗುವುದು ದುರ್ಲಬವಾಗುತ್ತಿದೆ. ಬಹುತೇಕ ರೈತ ಕುಟುಂಬಗಳಲ್ಲಿ ಟ್ರ್ಯಾಕ್ಟರ್ ಸಾಮಾನ್ಯವಾಗಿದ್ದು, ಕೃಷಿ ಸಲಕರಣೆಗಳು ಪಳಯುಳಿಕೆಗಳಾಗಿವೆ. ಅವುಗಳ ಮಧ್ಯೆ ಕಡಿಮೆ ಬೆಲೆಯ ಯಾಂತ್ರೀಕೃತ ಕೃಷಿ ಸಲಕರಣೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಪರಿಣಾಮ ಕಮ್ಮಾರರ ಬದುಕು ಬೀದಿಗೆ ಬರುವಂತಾಗಿದೆ.

ಅಕ್ಕಿಆಲೂರ ಸಮೀಪ ಗ್ರಾಮೀಣ ಭಾಗದಲ್ಲಿ ನೂರಕ್ಕೂ ಹೆಚ್ಚು ಕುಲುಮೆಗಳಿಗೀಗ ಬೀಗ ಬಿದ್ದಿದೆ. ಎತ್ತಿನ ಬಂಡಿಗಳಿಗಾಗಿ ವಿಶೇಷವಾಗಿ ಸಿದ್ಧಗೊಳಿಸಲಾಗುತ್ತಿದ್ದ ಹಳಿಗಳು ಒಂದು ಕಾಲಕ್ಕೆ ಅತ್ಯಂತ ಪ್ರಸಿದ್ಧಿ ಪಡೆದಿದ್ದವು. ಆದರೆ ಉರುಳಿದ ಕಾಲಚಕ್ರದಲ್ಲಿ ಎತ್ತಿನ ಬಂಡಿಗಳೇ ಅಪರೂಪವಾಗಿದ್ದು, ಚಕ್ರಗಳಿಗೆ ಹಳಿ ಹಾಕುವ ಕೆಲಸವೇ ಇಲ್ಲದಂತಾಗಿದೆ.

‘ಸರ್ಕಾರದಿಂದ ಸಾಲ ಸೌಲಭ್ಯ ಇಲ್ಲ. ಸಿದ್ಧವಸ್ತುಗಳು ಮಾರುಕಟ್ಟೆಗೆ ಬಂದು ನಮ್ಮ ಕೈಗೆ ಕೆಲಸ ಇಲ್ಲದಂತಾಗೈತಿ, ಬಾಳ ದಿನ ಬಳಕಿ ಬರದಿದ್ರೂ ರೈತ್ರು ಮಾರುಕಟ್ಟೆಯಲ್ಲಿ ಸಿಗೊ ಸಲಕರಣೆ ಖರೀದಿಸುತ್ತಾರೆ. ಹೀಗಾಗಿ ನಾವ ಜೀವನ ನಡೆಸೋದು ಕಷ್ಟ ಆಗೈತಿ’ ಎಂದು ‘ಪ್ರಜಾವಾಣಿ’ಯೊಂದಿಗೆ ದಾನಪ್ಪ  ಕಮ್ಮಾರ ಅವರು ಅಳಲು ತೋಡಿಕೊಂಡರು.

‘ಕಮ್ಮಾರರು ಅಸಂಘಟಿತರಾಗಿದ್ದು, ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಅವರ ಬದುಕು ಹಸನುಗೊಳಿಸುವ ಸರ್ಕಾರದ ಯೋಜನೆಗಳು ಇದುವರೆಗೂ ಅನುಷ್ಠಾನಗೊಂಡಿಲ್ಲ’ ಎಂದು ಕಾರ್ಮಿಕ ಮುಖಂಡ ಗೆಜ್ಜಿಹಳ್ಳಿಯ ವಿನಾಯಕ ಕುರುಬರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಕಿಯ ಒಡನಾಟದಿಂದ ಕಮ್ಮಾರರು ದಮ್ಮು (ಅಸ್ತಮಾ) ಮತ್ತಿತರ ಖಾಯಿಲೆಗಳಿಂದ ಬಳಲುತ್ತಿದ್ದು, ಆಧುನಿಕತೆಯಿಂದ ಸಂಕಷ್ಟಕ್ಕೀಡಾಗಿರುವ ಕಮ್ಮಾರರ ನೆರವಿಗೆ ಸರ್ಕಾರ ಧಾವಿಸಬೇಕಿದೆ.

 

Comments
ಈ ವಿಭಾಗದಿಂದ ಇನ್ನಷ್ಟು
ಬಸವಣ್ಣ ಕೆರೆಗೆ ವರದೆಯ ನೀರು

ಹಾವೇರಿ
ಬಸವಣ್ಣ ಕೆರೆಗೆ ವರದೆಯ ನೀರು

22 Jan, 2018
ಅಕ್ಕಿಆಲೂರ ನೂತನ ತಾಲ್ಲೂಕು ಕೇಂದ್ರ

ಅಕ್ಕಿಆಲೂರ
ಅಕ್ಕಿಆಲೂರ ನೂತನ ತಾಲ್ಲೂಕು ಕೇಂದ್ರ

22 Jan, 2018
ಏಳು ತೂಬು ಇರುವಲ್ಲಿ ಪ್ರತಿಷ್ಠಾಪನೆ ಮಾಡಲು ಹೇಳಿದ ದುರ್ಗಾದೇವಿ

ಹಿರೇಕೆರೂರ
ಏಳು ತೂಬು ಇರುವಲ್ಲಿ ಪ್ರತಿಷ್ಠಾಪನೆ ಮಾಡಲು ಹೇಳಿದ ದುರ್ಗಾದೇವಿ

22 Jan, 2018
‘ಕನಕ: ದಾಸಶ್ರೇಷ್ಠರು ಎಂದು ಸೀಮಿತಗೊಳಿಸಬೇಡಿ’

ಹಾವೇರಿ
‘ಕನಕ: ದಾಸಶ್ರೇಷ್ಠರು ಎಂದು ಸೀಮಿತಗೊಳಿಸಬೇಡಿ’

21 Jan, 2018

ಹಾವೇರಿ
65 ಲಕ್ಷ ಮೀಟರ್‌ ಬಟ್ಟೆ ಖರೀದಿ: ಲಮಾಣಿ

‘ಈ ಪೈಕಿ ಬೇಡಿಕೆಯ 50ಲಕ್ಷ ಮೀಟರ್‌ ಬಟ್ಟೆಯನ್ನು ನೀಡುವುದಾಗಿ ನೇಕಾರರು ತಿಳಿಸಿದ್ದಾರೆ’ ಎಂದ ಅವರು, ‘ಹೊಸ ಜವಳಿ ನೀತಿಯನ್ನು ರೂಪಿಸಲಾಗುತ್ತಿದ್ದು, ಇದರಿಂದ ನೇಕಾರರಿಗೆ ಅನುಕೂಲವಾಗಲಿದೆ....

21 Jan, 2018