ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ, ಫುಟ್‌ಬಾಲ್‌ಗೆ ಸಾಧನಾ ವರ್ಷ

Last Updated 24 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಭಾರತಕ್ಕೆ ಹಾಕಿ ಮತ್ತು ಫುಟ್‌ಬಾಲ್‌ನಲ್ಲಿ 2017 ‘ಸಾಧನಾ ವರ್ಷ’ವಾಗಿತ್ತು. ಕೋಚ್ ಬದಲಾವಣೆಗೆ ಸಂಬಂಧಿಸಿ ಸಂಚಲನ ಉಂಟು ಮಾಡಿದ್ದ ಹಾಕಿ ಕ್ಷೇತ್ರ ಗೊಂದಲಗಳ ನಡುವೆಯೂ ಪ್ರಶಸ್ತಿಗಳನ್ನು ಗಳಿಸಿ ಗಮನ ಸೆಳೆದಿದೆ.

ವಿಶ್ವ ಹಾಕಿ ಲೀಗ್‌ ಫೈನಲ್‌ನಲ್ಲಿ ಕೊನೆಯ ಹಂತದಲ್ಲಿ ಎಡವಿದರೂ ವರ್ಷದ ಒಟ್ಟು ಸಾಧನೆ ಹಾಕಿ ಪ್ರಿಯರಿಗೆ ತೃಪ್ತಿಕರವಾಗಿತ್ತು. ಶ್ರೀಜೇಶ್‌ ಅವರ ಅನುಪಸ್ಥಿತಿಯಲ್ಲಿ ಗೋಲ್‌ಕೀಪರ್‌ಗಳಾದ ಆಕಾಶ್ ಚಿಕ್ಟೆ ಮತ್ತು ಸೂರಜ್ ಕರ್ಕೇರಾ ಭರವಸೆಯ ಆಟವಾಡಿದ್ದು ಈ ವರ್ಷದ ವೈಶಿಷ್ಟ್ಯ.

ವರ್ಷದ ಆರಂಭದಲ್ಲಿ ಸುಲ್ತಾನ್‌ ಅಜ್ಲಾನ್ ಷಾ ಕಪ್‌ನಲ್ಲಿ ಭಾರತ ಮೂರನೇ ಸ್ಥಾನ ಗಳಿಸಿ ಮಿಂಚಿತ್ತು. ಟೂರ್ನಿಯ ಲೀಗ್ ಹಂತದಲ್ಲಿ ಬ್ರಿಟನ್‌ ಜೊತೆ 2–2ರ ಡ್ರಾ ಸಾಧಿಸಿದ್ದ ತಂಡ ನ್ಯೂಜಿಲೆಂಡ್‌ ಎದುರು 3–0 ಅಂತರದ ಜಯ ಗಳಿಸಿತ್ತು. ಮೂರನೇ ಸ್ಥಾನ ನಿರ್ಣಯಿಸುವ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಏಕಪಕ್ಷೀಯ ನಾಲ್ಕು ಗೋಲುಗಳಿಂದ ಗೆದ್ದಿತ್ತು. ಐದು ಗೋಲು ಗಳಿಸಿದ ಮನ್‌ದೀಪ್ ಸಿಂಗ್‌ ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿದವರ ಸಾಲಿನಲ್ಲಿ ಮೂರನೇ ಸ್ಥಾನ ಪಡೆದಿದ್ದರು.

ಮಹಿಳಾ ತಂಡದ ಕೋಚ್ ಆಗಿದ್ದ ಶೋರ್ಡ್ ಮ್ಯಾರಿಜ್ ಅವರು ರೋಲಂಟ್ ಓಲ್ಟಮನ್ಸ್ ಅವರ ನಂತರ ಪುರುಷರ ತಂಡದ ಕೋಚ್ ಆಗಿ ನೇಮಕಗೊಂಡರು. ಇದು ತಂಡದ ಸಾಧನೆಗೆ ಹೊಸ ದಿಸೆ ತೋರಿಸಿತು. ಅವರ ಮಾರ್ಗದರ್ಶನದಲ್ಲಿ ತಂಡ ಉತ್ತರೋತ್ತರ ಶ್ರೇಯಸ್ಸು ಗಳಿಸಿತು. ಅಕ್ಟೋಬರ್‌ನಲ್ಲಿ ನಡೆದ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ತಂಡ ಚಾಂಪಿಯನ್ ಆಗಿ ಪ್ರಶಂಸೆ ಗಳಿಸಿತ್ತು.

ಬಲಿಷ್ಠ ಪಾಕಿಸ್ತಾನ, ದಕ್ಷಿಣ ಕೊರಿಯ, ಜಪಾನ್‌ ಮುಂತಾದ ದೇಶಗಳನ್ನು ಮಣಿಸಿದ್ದ ಮನ್‌ಪ್ರೀತ್‌ ಸಿಂಗ್ ಬಳಗ ಫೈನಲ್‌ನಲ್ಲಿ ಮಲೇಷ್ಯಾವನ್ನು 2–1ರಿಂದ ಬಗ್ಗುಬಡಿದಿತ್ತು. ಡಿಸೆಂಬರ್‌ ಒಂದರಿಂದ ನಡೆದ ವಿಶ್ವ ಹಾಕಿ ಫೈನಲ್‌ ಲೀಗ್‌ನ ಗುಂಪು ಹಂತದಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಿದ ತಂಡ ಸೆಮಿಫೈನಲ್‌ನಲ್ಲಿ ಮುಗ್ಗರಿಸಿತ್ತು. ಆದರೂ ಮೂರನೇ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿತ್ತು.

ಮಹಿಳೆಯರ ಅಪೂರ್ವ ಸಾಧನೆ
ಶೋರ್ಡ್ ಮ್ಯಾರಿಜ್ ಮಹಿಳಾ ತಂಡದ ಕೋಚ್‌ ಹುದ್ದೆಯಿಂದ ಬದಲಾದ ಕೂಡಲೇ ಹರೇಂದರ್ ಸಿಂಗ್‌ ಅವರನ್ನು ಮಹಿಳಾ ತಂಡದ ಕೋಚ್‌ ಆಗಿ ನೇಮಕ ಮಾಡಲಾಗಿತ್ತು. ಅವರ ಮಾರ್ಗದರ್ಶನದಲ್ಲಿ ಮಹಿಳೆಯರು ಕೂಡ ಅತ್ಯಪೂರ್ವ ಸಾಧನೆ ಮಾಡಿದ್ದಾರೆ.

ಪುರುಷರ ಹಾದಿಯಲ್ಲೇ ಹೆಜ್ಜೆ ಹಾಕಿದ ಅವರು ಏಷ್ಯಾ ಕಪ್‌ ಪ್ರಶಸ್ತಿ ಎತ್ತಿ ಹಿಡಿದರು. ದಶಕದ ನಂತರ ಈ ಸಾಧನೆ ಮಾಡಿದ ಗರಿಮೆ ಸುಶೀಲಾ ಚಾನು ಬಳಗದ್ದಾಯಿತು. ಮುಖ್ಯ ವಾಹಿನಿಯಲ್ಲಿ ಇಷ್ಟೆಲ್ಲಾ ಸಾಧನೆ ನಡೆಯುತ್ತಿದ್ದಾಗಲೂ ಐಸ್ ಹಾಕಿಯಲ್ಲಿ ಭಾರತದ ಮಹಿಳೆಯರು ಮಾಡಿದ ಸಾಧನೆ ಗಮನಕ್ಕೆ ಬಾರದೇ ಹೋಗಿತ್ತು. ಮಾರ್ಚ್‌ನಲ್ಲಿ ಬ್ಯಾಂಕಾಕ್‌ನಲ್ಲಿ ನಡೆದಿದ್ದ ಚಾಲೆಂಜ್ ಕಪ್‌ನಲ್ಲಿ ಭಾರತ ತಂಡ ಮೊತ್ತಮೊದಲ ಬಾರಿ ಅಂತರರಾಷ್ಟ್ರೀಯ ಪಂದ್ಯವೊಂದನ್ನು ಗೆದ್ದು ಬೀಗಿತ್ತು.

*


ವಿಶ್ವಕಪ್‌ನ ಮೊದಲ ಗೋಲು
ಫುಟ್‌ಬಾಲ್‌ಗೆ ಸಂಬಂಧಿಸಿ 2017 ಭಾರತಕ್ಕೆ ಮರೆಯಲಾಗದ ವರ್ಷ. ಮೊದಲ ಬಾರಿ 17 ವರ್ಷದೊಳಗಿನವರ ವಿಶ್ವಕಪ್‌ಗೆ ಆತಿಥ್ಯ ವಹಿಸಿದ ಭಾರತ ಈ ಟೂರ್ನಿಯಲ್ಲಿ ಚೊಚ್ಚಲ ಪಂದ್ಯವನ್ನೂ ಆಡಿತು. ಮೊತ್ತಮೊದಲ ಗೋಲು ಗಳಿಸಿದ ಜೀಕ್ಸನ್ ಅವರು ಭಾರತ ಫುಟ್‌ಬಾಲ್‌ನ ಹೀರೊ ಆಗಿ ಮೆರೆದರು. ಒಂದು ಪಂದ್ಯವನ್ನು ಕೂಡ ಗೆಲ್ಲಲಾಗದೆ ಲೀಗ್ ಹಂತದಿಂದ ಹೊರ ಬಿದ್ದರೂ ಈ ಟೂರ್ನಿಯಿಂದಾಗಿ ಭಾರತದ ಯುವ ಪಡೆ ಫುಟ್‌ಬಾಲ್ ಪ್ರಿಯರ ಮನಕ್ಕೆ ಲಗ್ಗೆ ಇರಿಸುವಲ್ಲಿ ಯಶಸ್ವಿಯಾಗಿದ್ದರು.

ಈ ನಡುವೆ ಜುಲೈನಲ್ಲಿ ಸುನಿಲ್ ಚೆಟ್ರಿ ನೇತೃತ್ವದ ಭಾರತ ಫುಟ್‌ಬಾಲ್‌ ತಂಡ ಫಿಫಾ ರ‍್ಯಾಂಕಿಂಗ್‌ನಲ್ಲಿ ನೂರರ ಒಳಗೆ ಸ್ಥಾನ ಗಳಿಸಿ ಗಮನ ಸೆಳೆದಿತ್ತು. 1996ರಲ್ಲಿ 94ನೇ ಸ್ಥಾನ ಗಳಿಸಿದ್ದು ಭಾರತದ ಸಾರ್ವಕಾಲಿಕ ದಾಖಲೆಯಾಗಿದೆ. ಈ ಬಾರಿ ಎರಡು ಸ್ಥಾನಗಳ ಅಂತರದಲ್ಲಿ ಈ ದಾಖಲೆ ಮುರಿಯುವ ಅವಕಾಶ ಕಳೆದುಕೊಂಡಿತ್ತು. ಏಷ್ಯಾಕಪ್‌ ಅರ್ಹತಾ ಸುತ್ತಿನಲ್ಲಿ ಆಡಿದ ಚೆಟ್ರಿ ಬಳಗ ಮುಂದಿನ ವರ್ಷದ ಏಷ್ಯಾಕಪ್‌ಗೆ ಪದಾರ್ಪಣೆ ಮಾಡಿದೆ.

ಇಂಡಿಯನ್‌ ಸೂಪರ್ ಲೀಗ್‌ (ಐಎಸ್‌ಎಲ್‌) ಈ ಬಾರಿ ಪ್ರೇಕ್ಷಕರಿಗೆ ರಸದೂಟ ಉಣಬಡಿಸಿದೆ. ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಮತ್ತು ಜಮ್‌ಷೇಡ್‌ಪುರ ಎಫ್‌ಸಿ ತಂಡಗಳು ಹೊಸದಾಗಿ ಸೇರ್ಪಡೆಗೊಂಡಿರುವ ಕಾರಣ ಸ್ಪರ್ಧೆಯ ರೋಮಾಂಚನ ಹೆಚ್ಚಿದೆ. ಫಿಫಾ ರ‍್ಯಾಂಕಿಂಗ್‌ನಲ್ಲಿ ಭಾರತ ಮಹಿಳಾ ಫುಟ್‌ಬಾಲ್‌ ತಂಡ ನಾಲ್ಕು ಸ್ಥಾನಗಳ ಏರಿಕೆ ಕಂಡಿದ್ದು 56ನೇ ಸ್ಥಾನಕ್ಕೆ ತಲುಪಿದೆ.

*

ವೇಟ್‌ಲಿಫ್ಟಿಂಗ್‌: ದೇಶದ ಕೀರ್ತಿ ಪತಾಕೆ ಎತ್ತಿದ ಮೀರಾಬಾಯಿ
ನವೆಂಬರ್‌ನಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನಡೆದ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಸಾಯಿಕೋಮ್‌ ಮೀರಾಬಾಯಿ ಚಾನು ಭಾರತದ ಕೀರ್ತಿಪತಾಕೆ ಎತ್ತಿದರು. 48 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದ ಅವರು ಮಹಿಳಾ ವೇಟ್‌ಲಿಫ್ಟಿಂಗ್‌ನಲ್ಲಿ ಎರಡು ದಶಕಗಳ ಪದಕದ ಬರವನ್ನು ನೀಗಿಸಿದರು.

ಮುಂದಿನ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲು ಭಾರತದ 16 ಮಂದಿ ವೇಟ್‌ಲಿಫ್ಟರ್‌ಗಳು ಅರ್ಹತೆ ಗಿಟ್ಟಿಸಿದರು. ಅಕ್ಟೋಬರ್‌ನಲ್ಲಿ ವಿಶ್ವ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಮೀರಾಬಾಯಿ ಚಾನು ಒಳಗೊಂಡಂತೆ ಎಂಟು ಮಹಿಳೆಯರು ಮತ್ತು ಎಸ್,ಸತೀಶ್‌ ಕುಮಾರ್‌ ಸೇರಿದಂತೆ ಎಂಟು ಪುರುಷ ವೇಟ್‌ಲಿಫ್ಟರ್‌ಗಳು ಸ್ಥಾನ ಪಡೆದಿದ್ದಾರೆ.

*

ಅಥ್ಲೆಟಿಕ್ಸ್‌: ಐತಿಹಾಸಿಕ ಸಾಧನೆ
ಜುಲೈನಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಪಾರಮ್ಯ ಮೆರೆದ ಭಾರತದ ಕ್ರೀಡಾಪಟುಗಳು ಚೀನಾದ ಆಧಿಪತ್ಯಕ್ಕೆ ಅಂತ್ಯ ಹಾಡಿ ಚಾಂಪಿಯನ್ ಪಟ್ಟ ಅಲಂಕರಿಸಿದರು. 12 ಚಿನ್ನದೊಂದಿಗೆ 29 ಪದಕಗಳನ್ನು ಬಗಲಿಗೆ ಹಾಕಿಕೊಂಡ ಭಾರತ ಇದೇ ಮೊದಲ ಬಾರಿ ಏಷ್ಯಾದ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿತು. ಓಟದಲ್ಲಿ ಜಿ.ಲಕ್ಷ್ಮಣನ್‌, ಮಹಮ್ಮದ್ ಅನಾಸ್‌ ಮತ್ತು ಮಹಿಳೆಯರ ಹೆಪ್ಟಾಥ್ಲಾನ್‌ನಲ್ಲಿ ಸ್ವಪ್ನಾ ಬರ್ಮನ್‌ ಗಮನ ಸೆಳೆದರು. ಪುರುಷರ ಜಾವೆಲಿನ್‌ ಥ್ರೋದಲ್ಲಿ ನೀರಜ್‌ ಚೋಪ್ರಾ ದಾಖಲೆ ಬರೆದು ಮಿಂಚಿದರು.

ಆದರೆ ಆಗಸ್ಟ್‌ನಲ್ಲಿ ಬ್ರಿಟನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಒಂದು ಪದಕ ಕೂಡ ಗಳಿಸಲಾಗದೆ ಭಾರತದ ಅಥ್ಲೀಟ್‌ಗಳು ಮರಳಿದ್ದರು. ಈ ಚಾಂಪಿಯನ್‌ಷಿಪ್‌ಗೆ ಕೇರಳದ ಚಿತ್ರಾ ಅವರನ್ನು ಭಾರತ ಅಥ್ಲೆಟಿಕ್ ಫೆಡರೇಷನ್ ಆಯ್ಕೆ ಮಾಡದೇ ಇರುವುದು ವಿವಾದ ಸೃಷ್ಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT