ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದ ಸಾಮಾಜಿಕ ಜವಾಬ್ದಾರಿ ಏನು?

Last Updated 24 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಇಂದು ಶಿಕ್ಷಣಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಸಂಶೋಧನೆಗಳಾಗುತ್ತಿವೆ. ಆ ಸಂಶೋಧನೆಗಳನ್ನು ಜಾರಿಗೆ ತರುವ ಪ್ರಾಮಾಣಿಕ ಮತ್ತು ದಕ್ಷ ಪ್ರಯೋಗಗಳು ಸಹ ನಡೆಯುತ್ತಿವೆ. ಕಳೆದ ಸರಿಸುಮಾರು ಅರ್ಧ ಶತಮಾನದಲ್ಲಿನ ಎಲ್ಲ ಜನಗಣತಿಯನ್ನು ನೋಡಿದರೆ ಸಾಕ್ಷರತೆ ಹೆಚ್ಚಾಗುತ್ತಿರುವುದು ಕಂಡುಬರುತ್ತದೆ. ಅನೇಕ ಅಧ್ಯಯನಗಳ ಅಂಕಿ–ಅಂಶಗಳ ಪ್ರಕಾರ ಶಾಲಾ ದಾಖಲಾತಿ ಸಹ ಗಣನೀಯವಾಗಿ ಹೆಚ್ಚುತ್ತಿದೆ.

ಪ್ರೌಢಶಾಲಾ ಶಿಕ್ಷಣ ಪಡೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಪ್ರೌಢಶಾಲೆ ಮತ್ತು ಅದಕ್ಕೂ ಕೆಳಗಿನ ಹಂತದಲ್ಲಿಯೂ ಮಕ್ಕಳು ಶಾಲೆ ಬಿಡುವ ಪ್ರವೃತ್ತಿಯಿದೆಯಾದರೂ ಅದು ಕಡಿಮೆಯಾಗುತ್ತಿದೆ, ಇದು ಸಂತೋಷದ ಸಂಗತಿ. ಹಾಗೆಯೇ, ಸ್ನಾತಕ – ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿರುವವರ ಸಂಖ್ಯೆಯೂ ಬೆಳೆಯುತ್ತಿದೆ. ವಿದೇಶಗಳಿಗೆ ಹೋಗಿ ಶಿಕ್ಷಣ ಪಡೆಯುತ್ತಿರುವವರ ಸಂಖ್ಯೆ ಸಹ ಏರುಮುಖವಾಗಿದೆ.

ಒಟ್ಟಾರೆ, ಈ ಅಧ್ಯಯನಗಳ ಸಾರವೆಂದರೆ ಕಳೆದ ಅರ್ಧ ಶತಮಾನದಲ್ಲಿ ಶಿಕ್ಷಣ ಪಡೆಯುತ್ತಿರುವವರ ಸಂಖ್ಯೆ ಗಣನೀಯವಾದ ಏರಿಕೆಯನ್ನು ಕಂಡಿದೆ. ಆದರೆ, ಇದರ ಅರ್ಥ ನಾವು ಹೆಚ್ಚು ಆರೋಗ್ಯವಂತ ಸಮಾಜದಲ್ಲಿ ಬದುಕುತ್ತಿದ್ದೇವೆಯೇ – ಎಂಬ ಕುತೂಹಲಕರ, ಅಷ್ಟೇ ಗಂಭೀರ ಪ್ರಶ್ನೆ ಏಳುತ್ತದೆ. ಸದ್ಯದ ವಿದ್ಯಮಾನಗಳನ್ನು ಗಮನಿಸಿದರೆ ಈ ಪ್ರಶ್ನೆಗೆ ಸಕಾರಾತ್ಮಕ ಉತ್ತರ ಕೊಡಲು ಧೈರ್ಯ ಬಾರದು! ಬದ್ಧತೆಯ ಪ್ರಶ್ನೆ (ಯಾವುದೇ ಕ್ಷೇತ್ರದಲ್ಲಿ) ನಗಣ್ಯವಾಗುತ್ತಿದೆ. ಪ್ರಾಮಾಣಿಕತೆ ಅಪರೂಪವಾಗುತ್ತಿದೆ.

‘ನಿವೃತ್ತರ ಸ್ವರ್ಗ’, ‘ಉದ್ಯಾನ ನಗರಿ’ ಎನಿಸಿಕೊಂಡಿದ್ದ ಬೆಂಗಳೂರು ಪಾತಕಿಗಳ ಸ್ವರ್ಗ, ಅಪರಾಧ ನಗರಿ ಎನಿಸಿಕೊಂಡಿದೆ. ದೇಶದ ಇತರ ಪ್ರದೇಶಗಳ ಸ್ಥಿತಿಯೂ ಇದಕ್ಕಿಂತಲು ಭಿನ್ನವಾಗಿಯೇನೂ ಇಲ್ಲ. ‘ಒಂದು ಹೆಣ್ಣು ರಾತ್ರಿಯ ಹೊತ್ತು ನಿರ್ಭಯವಾಗಿ ಓಡಾಡಿದ ದಿನ ನಾವು ಸ್ವಾತಂತ್ರ್ಯ ಬಂತು’ ಎಂದುಕೊಳ್ಳುವ ಎನ್ನುವ ಗಾಂಧೀಜಿಯವರ ಮಾತಿನಲ್ಲಿನ ನಿರ್ಭಯ ಎಂಬ ಪದವೇ ಭಯ ಮೂಡಿಸುವ ಘಟನೆಯ ಸೂಚಕವಾಗಿಬಿಟ್ಟಿದೆ.

ಶಿಕ್ಷಣಕ್ಕೂ ಈ ಹೊಸಜಗತ್ತಿಗೂ ಸಂಬಂಧ ಕಲ್ಪಿಸಬೇಕೆ ಎಂಬ ಪ್ರಶ್ನೆಗೆ ಉತ್ತರ ‘ಖಂಡಿತವಾಗಿ’ ಎಂಬುದೇ. ಮನುಷ್ಯನನ್ನು ಮಾನವನನ್ನಾಗಿ ಶಿಕ್ಷಣ ತಿದ್ದದಿದ್ದಲ್ಲಿ ಇನ್ನೇನು ತಿದ್ದೀತು?! ನಿಜ, ಆ ಶಿಕ್ಷಣ ಕೇವಲ ಶಾಲೆ ಕಾಲೇಜುಗಳಲ್ಲಿ ಸಿಗಬೇಕಿಲ್ಲ. ಸಮಾಜ, ಮನೆ, ಪೋಷಕರು – ಈ ಮೂರೂ ಬಹುಮುಖ್ಯ ಪಾಲುದಾರರಿಂದ ಅದು ದೊಡ್ಡ ಪ್ರಮಾಣದಲ್ಲಿ ದೊರೆಯಬೇಕು. ಅಧ್ಯಯನ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಒದಗಿಸಬೇಕು. ಆದರೆ ಇಂದು ನಗರಪ್ರದೇಶಗಳಿಂದ ಗ್ರಾಮೀಣ ಪ್ರದೇಶಗಳಿಗೆ ಹರಡುತ್ತಿರುವ ಸೋಂಕು ರೋಗವೆಂದರೆ ಪ್ರತಿಯೊಬ್ಬರೂ ಅಪರಿಚಿತವಾಗಿಯೇ ಉಳಿಯುವುದು. ‘ನಾನು, ನನ್ನಿಷ್ಟ’ ಎಂಬ ಪ್ರವೃತ್ತಿ. ಇದು ಕಲಿಕೆಯನ್ನು ತರದು, ಭದ್ರತೆಯನ್ನೂ ಮೂಡಿಸದು. ಒಂದು ಸಮಾಜ ಎನ್ನಿಸಿಕೊಳ್ಳಲು ಅನರ್ಹವಾದ ಪರಿಸರ ನಿರ್ಮಾಣವಾಗುತ್ತಿದೆ.

ಇದು ಖಂಡಿತವಾಗಿಯೂ ಒಳ್ಳೆಯ ಬೆಳವಣಿಗೆಯಲ್ಲ. ಹಿಂದೆ ಮನೆಯಲ್ಲಿ ಕಥೆ– ಪುರಾಣಗಳನ್ನು ಹೇಳುವ ಅಜ್ಜಿಯರಿರುತ್ತಿದ್ದರು. ಮಹಾಕಾವ್ಯಗಳನ್ನು ಓದುವ, ಓದಿಸುವ ಪರಿಪಾಠವಿತ್ತು. ಅಲ್ಲದೆ ಬಹುತೇಕ ಹಿರಿಯರು ಮಕ್ಕಳಿಗೆ ಮಾದರಿಯಾಗಿರುತ್ತಿದ್ದರು. (ಇದಕ್ಕೆ ಅಪವಾದಗಳು ಯಾವುದೇ ಸಮಾಜದಲ್ಲಿ ಸಿದ್ಧ, ಆ ಮಾತು ಬೇರೆ). ಮನೆಯಲ್ಲಿನ ಅತ್ಯಂತ ಹಿರಿಯರೇ ಮನೆಯ ಯಜಮಾನರೂ ಆಗಿರುತ್ತಿದ್ದರು. ಇದರಿಂದ ಬಹುತೇಕ ಒಳ್ಳೆಯದೇ ಆಗುತ್ತಿತ್ತು. ಇಂದು ಒಂದೇ ಮಕ್ಕಳನ್ನು ಮಾಡಿಕೊಳ್ಳುವ ಕುಟುಂಬಗಳು ಹೆಚ್ಚಾಗಿವೆ.

ಅರ್ಧಮಗು ಸಾಧ್ಯವಿಲ್ಲವಲ್ಲ! ಇದರಿಂದಾಗಿ ಆ ಮಗುವೇ ಮನೆಯ ಯಜಮಾನ! ಜೊತೆಗೆ ಅಣ್ಣ–ತಂಗಿ, ಅಕ್ಕ–ತಮ್ಮ ಬಾಂಧವ್ಯಗಳು ನಿಘಂಟಿನತ್ತ ಸಾಗುತ್ತಿರುವ ಪದಗಳಾಗಿವೆ. ಇನ್ನು ಸದ್ಭಾವನೆ ಮೂಡುವುದು ಹೇಗೆ? ಸಮಾಜದಲ್ಲಿ ಹೇಗೆ ಬದುಕಬೇಕು ಎಂಬ ಶಿಕ್ಷಣವನ್ನು ಇಂತಹ ‘ನಾನು ನನ್ನ ಕಣ್ಣ ಬೊಂಬೆ ಅಷ್ಟೇ’ ಎನ್ನುವ ಮನೆ ಕೊಡುವುದು ಹೇಗೆ?

ಒಂದು ಆದರ್ಶ ವ್ಯವಸ್ಥೆಯಲ್ಲಿ ಒಂದು ದೇಶದಲ್ಲಿ ಸಿಗುತ್ತಿರುವ ಶಿಕ್ಷಣಕ್ಕೂ ಅಲ್ಲಿನ ಸಾಮಾಜಿಕ ಆರೋಗ್ಯಕ್ಕೂ ನೇರವಾದ ಸಂಬಂಧವಿರಬೇಕು. ಸಮಾಜ ನೀಡಲಾಗುವುದಿಲ್ಲ ಎಂಬ ಶಿಕ್ಷಣವನ್ನು ಶಾಲೆಯೂ ನೀಡಲಾಗದಿದ್ದಲ್ಲಿ ಅಂತಹ ಸಮಾಜ ಮೊದಲು ನೈತಿಕವಾಗಿ ಆನಂತರ ಸರ್ವವಿಧದಲ್ಲಿಯೂ ಅಧಃಪತನ ಹೊಂದುವುದು ನಿಶ್ಚಿತ. ಹಾಗಾಗಿ, ಇಂದು ಶಿಕ್ಷಣಕ್ಕೆ ಇದು ಹೆಚ್ಚುವರಿ ಮಾತ್ರವಲ್ಲ ಗುರುತರವಾದಂತಹ ಒಂದು ಜವಾಬ್ದಾರಿ, ಹೊರಲೇ ಬೇಕಾದಂತಹ ಒಂದು ಜವಾಬ್ದಾರಿ. ಮಾಹಿತಿ ಆಧಾರಿತ, ಅಂಕ ಗಳಿಕೆಯ ಗುರಿಯುಳ‍್ಳ ಇಂದಿನ ಈ ವ್ಯವಸ್ಥೆಯಲ್ಲಿ ಇದನ್ನು ಹೇಗಾದರೂ ಸಾಧಿಸಲೇಬೇಕಾದ ಅನಿವಾರ್ಯತೆಯಿದೆ.

ಸಮಸ್ಯೆ ಮತ್ತು ಪರಿಹಾರ
ಇಲ್ಲಿ ಪ್ರಾಥಮಿಕ ಶಿಕ್ಷಣ ಬಹಳ ಮುಖ್ಯ. ಶಿಕ್ಷಣಾರ್ಥಿಗಳಲ್ಲಿ ಸದ್ಗುಣಗಳನ್ನು ಮೈಗೂಡಿಸಬೇಕಾಗಿರುವುದು ಈ ವಯಸ್ಸಿನಲ್ಲಿಯೇ. ಇಂದು ಪ್ರಾಥಮಿಕ ಶಿಕ್ಷಣವನ್ನು ಬಹುತೇಕರು ಪಡೆಯುತ್ತಿರುವ ಸಂದರ್ಭ ನಮಗೆ ಆಶಾದಾಯಕವಾಗಿ ಕಾಣಿಸಬೇಕಲ್ಲವೆ? ಆದರೆ ವಸ್ತುಃಸ್ಥಿತಿ ಹಾಗಿಲ್ಲ. ಕಾರಣವೆಂದರೆ ನೈತಿಕ ಶಿಕ್ಷಣಕ್ಕೆ ನಮ್ಮಲ್ಲಿ ಪ್ರಾಶಸ್ತ್ಯವೇ ಇಲ್ಲ. ಅದರಲ್ಲಿಯೂ ಅಣ್ಣ-ತಮ್ಮ, ಅಕ್ಕ-ತಂಗಿ ಎಂಬ ಭಾವ ಬೆಳೆಯಲು ಅವಕಾಶವಿರದ ಸಮಾಜದಲ್ಲಿ ನಾವಿರುವಾಗ ಅತಿ ಮಹತ್ವದ ಲೈಂಗಿಕ ಶಿಕ್ಷಣ ಇಲ್ಲವೇ ಇಲ್ಲ. ಹಾಗೆಂದ ಕೂಡಲೆ ಮೂಗುಮುರಿಯುವವರೇ ಅಧಿಕ! ಕಳೆದ ವಾರವಷ್ಟೇ ನಾಡು ನಡುಗುವಂತಹ ಎರಡು ಅತ್ಯಾಚಾರದ ಘಟನೆಗಳು ನಡೆದುಹೋದವು. ಇದರಲ್ಲಿ ನಮ್ಮ ಶಿಕ್ಷಣವ್ಯವಸ್ಥೆಯ ಪಾಲೆಷ್ಟು ಎಂಬ ಪ್ರಶ್ನೆ ನಮಗೆ ಮುಖ್ಯವಾಗಬೇಡವೇ? ಪಾತಕಿಗಳಿಗೆ ಅವರ ಶಾಲಾದಿನಗಳಲ್ಲಿ ಅಗತ್ಯ ಲೈಂಗಿಕ ಶಿಕ್ಷಣ ದೊರೆತಿದ್ದರೆ ಪ್ರಾಯಶಃ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ.

ಲೈಂಗಿಕ ಶಿಕ್ಷಣ ಹೇಗೆ? – ಎಂಬುದನ್ನು ಕುರಿತು ನಡೆದ ಚರ್ಚೆಗಳ ಗಂಟೆಗಳನ್ನು ಲೆಕ್ಕಹಾಕಿದರೆ ಅದು ವರ್ಷಗಳನ್ನೇ ಮುಟ್ಟಬಹುದು! ಆದರೆ, ಬಹಳ ಹಿಂದೆಯೇ  ಎಚ್. ನರಸಿಂಹಯ್ಯನವರು ಒಂದು ಅದ್ಭುತವಾದ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ ಈ ನಿಟ್ಟಿನಲ್ಲಿ. ಅದು ಬಹಳ ಸರಳವಾದ ಮಾರ್ಗ: ಆ ವಯಸ್ಸಿನ ಗಂಡು-ಹೆಣ್ಣುಮಕ್ಕಳನ್ನು ಬೇರೆ ಬೇರೆ ಕೂರಿಸಿ ತಜ್ಞರಿಂದ ಉಪನ್ಯಾಸ! ಅಂದು ಗಂಡುಮಕ್ಕಳಿಗೆ ಜಯರಾಮ್‍, ಹೆಣ್ಣುಮಕ್ಕಳಿಗೆ ಅನುಪಮಾ ನಿರಂಜನ. ಇವು ಕ್ರಮವಾಗಿ, ‘ಕೇಳು ಕಿಶೋರ, ಕೇಳು ಕಿಶೋರಿ’ ಎಂಬ ಹೆಸರಿನಲ್ಲಿ ಪುಸ್ತಕವಾಗಿ ಬಂದು ಹತ್ತಾರು ಮುದ್ರಣಗಳನ್ನು ಕಂಡವು. ಇದು ಈಗ ಅಗತ್ಯ ಆಗಬೇಕಾಗಿರುವ ಕಾರ್ಯ. ಮಕ್ಕಳಿಗೆ ಲೈಂಗಿಕಕ್ರಿಯೆಯ ಪರಿಣಾಮ ಮತ್ತು ಜವಾಬ್ದಾರಿಗಳನ್ನು ಸ್ಪಷ್ಟವಾಗಿ ತಿಳಿಹೇಳುವುದು ಇಂದಿನ ತುರ್ತು ಅಗತ್ಯಗಳಲ್ಲೊಂದು. ಯುಕ್ತಲೈಂಗಿಕ ಶಿಕ್ಷಣ ನೀಡಿದೆಡೆಗಳಲ್ಲಿ ಲೈಂಗಿಕ ಅಪರಾಧಗಳು ಕಡಿಮೆಯಾಗಿರುವ ಅನೇಕ ದೃಷ್ಟಾಂತಗಳಿವೆ.

ಹಾಗೆಯೇ ಸಾಮಾಜಿಕ ಜವಾಬ್ದಾರಿಗಳು, ಕಾನೂನಿನ ಅರಿವು, ಚುನಾವಣೆ ಮತದಾನ ಮತ್ತು ಅದರ ಪರಿಣಾಮಗಳನ್ನು ಕುರಿತ ಚರ್ಚೆಗಳು ನಮ್ಮ ಶಿಕ್ಷಣವ್ಯವಸ್ಥೆಯಲ್ಲಿ ಬರಬೇಕು. ನಮ್ಮಲ್ಲಿ ಅನೇಕ ಸಿದ್ಧಾಂತಗಳಿವೆ, ವಾದಗಳಿವೆ. ಸ್ತ್ರೀವಾದ, ಪ್ರಗತಿಪರ ಚಿಂತನೆ, ಸಮಾಜವಾದ, ಸಮತಾವಾದ, ಧಾರ್ಮಿಕತೆ, ತತ್ತ್ವಶಾಸ್ತ್ರ - ಹೀಗೆ ಅನೇಕ ಗಹನವಾದ ವಿಚಾರಗಳಿವೆ. ಆದರೆ ಅವು ಮಕ್ಕಳಿಗೆ ಮುಟ್ಟುತ್ತಲೇ ಇಲ್ಲ!

ಪಠ್ಯಪರಿಷ್ಕರಣೆಯಲ್ಲಿ ಇವುಗಳತ್ತ ಯಾರೂ ಗಮನಹರಿಸಲೇ ಇಲ್ಲ! ಹಾಗಾಗಿ, ಮಕ್ಕಳಿಗೆ ಅದು ಪೂರ್ತಿ ಅಪರಿಚಿತ. ಮಗು ವಯಸ್ಕನಾದೊಡನೆ ಎಲ್ಲೊ ಹೊರಗಿನಿಂದ ಧುತ್ತನೆ ಎದುರಿಗೆ ನಿಲ್ಲುತ್ತದೆ ಅಥವಾ ಎದೆಗೆ ತಗಲುತ್ತದೆ. ಬದಲಾಗಿ, ಅವನ್ನು ಆ ಹೊತ್ತಿಗೆ ವಿಮರ್ಶೆ ಮಾಡುವ ಮಟ್ಟಕ್ಕೆ ಬಂದರೆ ಎಷ್ಟು ಚಂದ ಅಲ್ಲವೆ? ಇವೆಲ್ಲವೂ ಆದಷ್ಟು ಬೇಗ ಮತ್ತು ಕೆಳ ಹಂತದಲ್ಲಿಯೇ ಬರಬೇಕಾಗಿದೆ.

ಕೆಳಹಂತದಲ್ಲಿ ಏಕೆಂದರೆ, ಗಣನೀಯ ಪ್ರಮಾಣದಲ್ಲಿ ಮಕ್ಕಳು ಪ್ರೌಢಶಾಲೆಯ ಆನಂತರ ಮಕ್ಕಳು ಶಿಕ್ಷಣವನ್ನು ತೊರೆಯುತ್ತಿದ್ದಾರೆ. (ಜೊತೆಗೆ ಶಿಕ್ಷಣ ಮುಂದುವರೆಸಿದ ವಿದ್ಯಾರ್ಥಿಯ ಜ್ಞಾನ ಶಾಖೆ ಬೇರೆಯಾಗಿ ಇಂತಹ ಶಿಕ್ಷಣಕ್ಕೆ ಅವಕಾಶವಿರದೆ ಹೋಗುತ್ತದೆ) ಒಂದು ಮಗು ಹತ್ತನೇ ತರಗತಿ ದಾಟಿದೆ ಎಂದರೆ ಅದರಲ್ಲಿ ಸಮಾಜದಲ್ಲಿ ಸಭ್ಯವ್ಯಕ್ತಿಯಾಗಿ ಬದುಕಲು ಬೇಕಾದ ಸದ್ಗುಣಗಳು ಇವೆ ಎಂದರ್ಥ ಎಂಬಂತಹ ವಾತಾವರಣವನ್ನು ನಿರ್ಮಿಸಬೇಕಾಗಿದೆ.ಸಮಾಜದಲ್ಲಿ ಒಬ್ಬ ಸಭ್ಯವ್ಯಕ್ತಿಯಾಗಿ ಬದುಕಲು ಬೇಕಾದ ಕೌಶಲ ಎ ಪ್ಲಸ್‍ ಬಿ ಹೋಲ್ ಸ್ಕ್ವೇರ್‍ ಏನಾಗುತ್ತದೆ ಎಂಬುದಕ್ಕಿಂತ ಮುಖ್ಯ, ಅಲ್ಲವೆ? 

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT