ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕೆಯ ಖುಷಿ

Last Updated 24 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಕಲಿಯುವ ಸಂಕಲ್ಪ ವ್ಯಕ್ತಿಯೊಳಗಿನಿಂದ ಮೂಡಿದಾಗಲೇ ಕಲಿಕೆ ಸಾರ್ಥಕವಾಗುತ್ತದೆ. ಮೊದಲನೆ ಸೆಮಿಸ್ಟರ್‌ನ ಒಂದು ಪಾಠವನ್ನು ತೃಪ್ತಿಕರವಾಗಿ ಮಾಡಿ ಕೊಠಡಿಯಿಂದ ಹೊರಬರುತ್ತಿದ್ದಂತೆ ಹಿಂದಿನಿಂದ ಕರೆಯಿತೊಂದು ಧ್ವನಿ, ‘ಸಾರ್...ಸಾರ್...’. ಹಿಂತಿರುಗಿ ಕೇಳಿದೆ, ‘ಏನಪ್ಪಾ?’  ‘ನಿಮ್ಹತ್ರ ಮಾತಾಡ್ಬೇಕು ಸಾರ್...’. ಸ್ಟಾಫ್‌ರೂಮಿನಲ್ಲಿ ಸಂವಾದ ಮುಂದುವರೆಯಿತು. ‘ಸಾರ್, ಇವತ್ತಿನ ನಿಮ್ಮ ಪಾಠ ಅಮೋಘವಾಗಿತ್ತು. ಪಾಠದ ವಿಷಯವನ್ನು ಪ್ರಸ್ತುತ ಸಂದರ್ಭಕ್ಕೆ ಸಮೀಕರಿಸಿದ ರೀತಿ ನನಗೆ ಇಷ್ಟವಾಯಿತು.

ನಾನೂ ಈ ದೇಶಕ್ಕಾಗಿ ಏನಾದರೂ ಮಾಡಬೇಕೆಂಬ ಸ್ಫೂರ್ತಿ ಉಂಟಾಗಿದೆ. ನಾನೇನು ಮಾಡಲಿ ಹೇಳಿ ಸಾರ್?’ ಕತ್ತೆತ್ತಿ ಅವನನ್ನೇ ದಿಟ್ಟಿಸಿದೆ. 19ರ ಯುವಕ. ದೃಢಶರೀರ, ಕಾಂತಿಯುಕ್ತ ಕಣ್ಣುಗಳು. ಮೈಮನ ಕಾದ ಕಬ್ಬಿಣ. ನಾನೀಗ ಸರಿಯಾಗಿ ಬಡಿಯಬೇಕು. ಇದು ಸಕಾಲ. ಹೇಳಿದೆ:‘ನಿನ್ನ ವೃತ್ತಿಧರ್ಮ ಪಾಲಿಸಿದರೆ ಸಾಕು’ ‘ಅಂದರೆ?’ ‘ನೀನು ನಿನ್ನ ವಿದ್ಯಾರ್ಥಿದೆಸೆಯ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು’‘?!’
‘ನೀನು ಪಿ.ಯು.ಸಿ.ಯಲ್ಲಿ ಗಳಿಸಿದ ಶೇಕಡವಾರು ಅಂಕಗಳೆಷ್ಟು?’ ಹೆಮ್ಮೆಯಿಂದ ಹೇಳಿದ: ‘ಪ್ರಥಮ ಶ್ರೇಣಿ ಸಾರ್, ಶೇ.65,’ ‘ಭೇಷ್... ಪ್ರಶ್ನಪತ್ರಿಕೆ ರೂಪಿತವಾಗಿದ್ದುದು ಎಷ್ಟು ಅಂಕಗಳಿಗೆ?’ ‘ನೂರು ಅಂಕಗಳಿಗೆ ಸಾರ್’‘ಹಾಗಾದರೆ ನೀನು ಗಳಿಸಬೇಕಾದ ಬಾಕಿ 35 ಅಂಕಗಳು ಎಲ್ಲಿ ಹೋದವು?’‘...’ ‘ಒಬ್ಬ ಸಮರ್ಥ, ಸಮರ್ಪಕ ವಿದ್ಯಾರ್ಥಿಯಾಗಿ ನೀನು ಮಾಡಬಹುದಾದ ದೇಶಸೇವೆ ಎಂದರೆ, ನೀನು ಪೂರ್ಣಶ್ರದ್ಧೆಯಿಂದ ಕಲಿಕೆಯಲ್ಲಿ ತೊಡಗಿಕೊಳ್ಳುವುದು.’ ‘ಅರ್ಥವಾಯಿತು ಸಾರ್.’

ಈ ಸಂವಾದ ಮುಗಿದು ಮೂರು ತಿಂಗಳಾಯಿತು. ನಾನಂತೂ ಮರೆತಿದ್ದೆ. ಮೂರುಸಾವಿರ ಮಕ್ಕಳನ್ನು ಗುರುತಿಟ್ಟುಕೊಳ್ಳಲು ಸಾಧ್ಯವೆ? ಆದರೆ ಈಗ ಅವನು ಮತ್ತೆ ಅಧ್ಯಾಪಕರ ಕೊಠಡಿಯಲ್ಲಿ ಪ್ರತ್ಯಕ್ಷನಾದ. ಮೊಗದಲ್ಲಿ ಪೂರ್ಣಚಂದಿರನ ನಗೆ. ‘ಸಾರ್, ಮೊದಲ ಸೆಮಿಸ್ಟರ್‌ನ ಫಲಿತಾಂಶ ಬಂದಿದೆ. ಗಣಿತ 100, ಫಿಸಿಕ್ಸ್ 98, ಎಲೆಕ್ಟ್ರಾನಿಕ್ಸ್ 99.’ ಕುರ್ಚಿಯಿಂದೆದ್ದು ಬಾಚಿ ತಬ್ಬಿಕೊಂಡೆ. ಪದವಿಯ ಬಳಿಕ ಮೈಸೂರು ವಿ.ವಿ.ಯಲ್ಲಿ ಸ್ನಾತಕೋತ್ತರ ಓದು ಮುಂದುವರೆಸಿ ಅಲ್ಲಿಯೂ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿ ಈಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದ್ದಾನೆ. ಓದುವ ಉಮೇದು ಒಳಗಿನಿಂದ ಬರಬೇಕು. ಹೊರಗಿನಿಂದ ಹೇರಿದರೆ ಪ್ರಯೋಜನವಿಲ್ಲ.

ಹೊರಗಿನಿಂದ ಆರೋಪಿತವಾದ ಮಾಹಿತಿಗಳು ವಿಷಯಸಂಗ್ರಹವಾಗಬಲ್ಲವೇ ಹೊರತು ಅದೇ ವಿದ್ಯೆಯ ಉದ್ದೇಶವಂತೂ ಅಲ್ಲ. ವಿಷಯದ ಆಧಾರದ ಮೇಲೆ ಹೊಸ ವಿಚಾರದ ಹೊಳಹು ಬುದ್ಧಿಯಲ್ಲಿ ಮಿಂಚದಿದ್ದರೆ, ಹೊಸತೊಂದು ಆಯಾಮ ತೆರೆದುಕೊಳ್ಳದಿದ್ದರೆ ವಿದ್ಯೆ ಕಲಿತಂತಾಗುವುದಿಲ್ಲ. ಪಠ್ಯವನ್ನು ಮೂಲವಾಗಿಸಿ ಸಂಬಂಧಿಸಿದ ವಿಷಯದಲ್ಲಿ ವಿದ್ಯಾರ್ಥಿಗಳ ಆಸಕ್ತಿ ಕೆರಳಿಸಿ ಅವರು ಆ ವಿಷಯವನ್ನು ಹೆಚ್ಚೆಚ್ಚು ಪ್ರೀತಿಸುವಂತೆ ಅದರ ಅಧ್ಯಯನದಲ್ಲಿ ತೊಡಗಿಕೊಳ್ಳುವಂತೆ ಮಾಡುವುದು ಶಿಕ್ಷಣದ ಪ್ರಥಮ ಉದ್ದೇಶ.

ಜ್ಞಾನದ ವಿಸ್ತಾರ ಬೆಳೆಯುವುದು ಹೀಗೆ. ಆದರೆ ಪಠ್ಯದ ಶಿಲುಬೆಗೆ ವಿದ್ಯಾರ್ಥಿಯನ್ನು ಏರಿಸಿಬಿಡುವುದರಲ್ಲೇ ಸಾರ್ಥಕತೆ ಕಂಡುಕೊಳ್ಳುವವರ ದಂಡು ಇಂದು ಹೆಚ್ಚಾಗಿದೆ. ಇದರಲ್ಲಿ ಪೋಷಕರ ಪಾತ್ರವೂ ಹಿರಿದೇ. ತಮ್ಮ ಮಗು ಡಾಕ್ಟರೋ ಎಂಜಿನಿಯರೋ ಆಗಬೇಕೆಂದು ಅದು ಹುಟ್ಟುವ ವೇಳೆಗಾಗಲೇ ನಿರ್ಧರಿಸಿಬಿಟ್ಟಿರುತ್ತಾರೆ. ಮಾನವಿಕಶಾಸ್ತ್ರಗಳನ್ನು ಓದುವವರು ದಡ್ಡರು ಎಂಬ ರಮ್ಯಕಲ್ಪನೆ ಅದು ಹೇಗೋ ಜನಮನದಲ್ಲಿ ಹಾಸುಹೊಕ್ಕಾಗಿದೆ.

ಪಿ.ಯು. ಕಾಲೇಜುಗಳು, ಪದವಿ ಕಾಲೇಜುಗಳು ಮಾನವಿಕ ವಿಭಾಗಗಳನ್ನು ಹಂತಹಂತವಾಗಿ ಮುಚ್ಚುತ್ತ ಬರುತ್ತಿವೆ. ಅದು ಲಾಭದಾಯಕವಾದ ಕೋರ್ಸುಗಳಲ್ಲ (ಅರ್ಥಾತ್ ಹೆಚ್ಚಿನ ಫೀಸು ಸಂಗ್ರಹಿಸಲು ಸಾಧ್ಯವಿಲ್ಲ) ಎಂಬುದು ಒಂದು ಕಾರಣವಾದರೆ, ಅದನ್ನು ಕೇಳಿಕೊಂಡು ಬರುವ ವಿದ್ಯಾರ್ಥಿಗಳ ಸಂಖ್ಯೆ ಕುಸಿದಿರುವುದು ಇನ್ನೊಂದು ಕಾರಣ. ಜ್ಞಾನದ ಎಲ್ಲ ಶಾಖೆಗಳು ಬೆಳೆಯಬೇಕು. ಕೇವಲ ಹಣಗಳಿಸುವ ಸಾಮರ್ಥ್ಯ ಕಲ್ಪಿಸುವ ಶಿಕ್ಷಣವೇ ಗುರಿಯಾಗಬಾರದು. ಈ ಬಗ್ಗೆ ನಾವು ಗಂಭೀರವಾಗಿ ಯೋಚಿಸುವ ಸಮಯ ಸನ್ನಿಹಿತವಾಗಿದೆ.

ವಿದ್ಯಾಭ್ಯಾಸ ಪದ್ಧತಿಯಲ್ಲಿ ಹೇಳಿಕೊಡುವುದರ ಪಾತ್ರಕ್ಕಿಂತ ಕಲಿತುಕೊಳ್ಳುವ ಪಾತ್ರ ಮುಖ್ಯ. ಗುರುವು ಪಠ್ಯವಿಷಯಗಳಲ್ಲಿ ಆಸಕ್ತಿ ಮೂಡಿಸಿದರೆ ಸಾಕು. ವಿಚಾರಗಳನ್ನು ಕಂಡು, ಕೇಳಿ ಅದನ್ನು ಅಂತರಂಗದ ಪುಟಕ್ಕಿಟ್ಟು ನೂತನ ಚಿಂತನೆಯನ್ನು ಪ್ರತಿಫಲಿಸುವ ಶಕ್ತಿಯನ್ನು ವಿದ್ಯಾರ್ಥಿ ಗಳಿಸಿಕೊಳ್ಳಬೇಕು. ಲೋಕ, ಗುರು, ಗ್ರಂಥ - ಈ ಮೂರು ಮೂಲಗಳಿಂದ ವ್ಯಕ್ತಿ ಕಲಿಯುತ್ತಾನೆ. ಈ ಮೂರರಲ್ಲಿ ಗುರುವಿಗೇ ಮೊದಲ ಸ್ಥಾನ.

ಇಂದು ಅತ್ಯಾಧುನಿಕ ಉಪಕರಣಗಳೇ ಆವಿಷ್ಕಾರಗೊಂಡು ಮಾಹಿತಿಗಳೆಲ್ಲ ಕಣ್ಣೆದುರಿಗೇ ಹರಡಿಕೊಳ್ಳುತ್ತಿದ್ದರು ಒಬ್ಬ ಜೀವಂತ ಗುರುವಿನ ಮಾದರಿ, ಮಾರ್ಗದರ್ಶನ ಅನಿವಾರ್ಯ. ಗುರುವು ಗ್ರಂಥದಲ್ಲಿರುವುದನ್ನೇ ಅಥವಾ ಅನುಭವವನ್ನೇ ಶ್ರುತಪಡಿಸುತ್ತಾನಾದರೂ ಕೇಳುಗರಿಗೆ ಗುರುವಿನ ಸಾಹಚರ್ಯದಲ್ಲಿ ಮಾನುಷಸಂಬಂಧದ ಲೇಪದಿಂದ ವಿಚಾರ ಸ್ಪಷ್ಟವಾಗುತ್ತದೆ.

ಗುರುವಿನ ಬೋಧನೆ ಕೇವಲ ಶಬ್ದವಲ್ಲ, ಮಾತಲ್ಲ; ಮಾತಿನ ಹಿಂದಿನ ಭಾವ, ಭಾವಕ್ಕೆ ತಕ್ಕ ಅಂಗನ್ಯಾಸ, ಕರನ್ಯಾಸಗಳು ಕಲಿಕೆಗೆ ಪೂರಕವಾಗಿರುತ್ತವೆ. ಇವು ವಿಷಯದ ಅರಿವು ಮೂಡಿಸುವಲ್ಲಿ ನೆರವಾಗುತ್ತವೆ. ಹೀಗಾಗಿ ಔಪಚಾರಿಕ ಶಿಕ್ಷಣದಲ್ಲೂ ಗುರುವಿನ ಪಾತ್ರ ಪ್ರಥಮಸ್ಥಾನ ಪಡೆಯುತ್ತದೆ.

ಗ್ರಂಥೋಕ್ತವಿಚಾರಗಳ ಅರಿವು ವ್ಯಕ್ತಿಯ ವಿಕಾಸದಲ್ಲಿ, ಕಲಿಕೆಯಲ್ಲಿ ಎರಡನೆಯ ಸ್ಥಾನವನ್ನು ಗಳಿಸುತ್ತದೆ. ಗುರುವು ತೋರಿದ ಹಾದಿಯಲ್ಲಿ ಮುಂದುವರಿಯಲು ಗ್ರಂಥಗಳು ನೆರವಾಗಬಲ್ಲವು. ಅಧ್ಯಯನದ ಆಳ, ವೇಗ ವೃದ್ಧಿಯಾಗುತ್ತಿರುವಂತೆ ವ್ಯಕ್ತಿಯ ವಿಷಯ ಸಂಗ್ರಹಣೆಯ ಪರಿಧಿ ವಿಸ್ತಾರವಾಗುತ್ತಾ ಹೋಗುತ್ತದೆ. ಜೊತೆಗೆ ಆಸಕ್ತಿಗನುಸಾರವಾಗಿ ಇಚ್ಛಿಸಿದ ಕ್ಷೇತ್ರದ ಸಮಗ್ರ ಗ್ರಹಿಕೆಗೂ ಅಧ್ಯಯನ ನೆರವಾಗುತ್ತದೆ. ತನ್ನ ನಂಬಿಕೆಗಳನ್ನು ಪುಷ್ಟಿಗೊಳಿಸಿಕೊಳ್ಳಲು ಅಥವಾ ವಾದಗಳನ್ನು ಹರಿತಗೊಳಿಸಿಕೊಳ್ಳಲೂ ಅಧ್ಯಯನ ಸಹಕಾರಿಯಾಗುತ್ತದೆ.

ವಿದ್ಯಾರ್ಥಿಗಳಲ್ಲಿ ಪುಸ್ತಕಪ್ರೇಮ ಬಿತ್ತದ ಶಿಕ್ಷಕ ಅವನನ್ನು ಅರ್ಧಕೊಂದಂತೆ. ಗುರುವು ಮರೆಯಾದರೂ ಶಾಸ್ತ್ರಗ್ರಂಥಗಳು, ಆಕರಗಳು ಶಿಷ್ಯನಿಗೆ ಆಸರೆಯಾಗಿ ನಿಲ್ಲುತ್ತವೆ. ಆದುದರಿಂದ ಅಧ್ಯಯನದಲ್ಲಿ ಪರಾಮರ್ಶನ ಕಲೆಯನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕು. ನಾನು ಕೆಲಸ ಮಾಡಿದ ಕಾಲೇಜುಗಳಲ್ಲಿ ಆಗಾಗ ಗ್ರಂಥಾಲಯಕ್ಕೆ ಭೇಟಿ ನೀಡಿ ಅಲ್ಲಿನ ರಿಜಿಸ್ಟರ್ ಅವಲೋಕಿಸಿ ಯಾರು ಯಾರು ಗ್ರಂಥಾಲಯವನ್ನು ಬಳಸಿಕೊಳ್ಳುತ್ತಿದ್ದಾರೆಂದು ಗಮನಿಸುತ್ತಿರುತ್ತೇನೆ. ಮತ್ತು ಗ್ರಂಥಾಲಯವನ್ನು ಬಳಸಲು ಪ್ರೋತ್ಸಾಹಿಸುತ್ತೇನೆ.‌

ಗುರುವಿನಿಂದ, ಗ್ರಂಥಗಳಿಂದ ಕಲಿತ ವಿಚಾರಗಳು ಲೋಕದಲ್ಲಿ ಹೇಗೆ ಜೀವಂತ ಭಾಷ್ಯಗಳಾಗುತ್ತವೆ ಎಂಬುದನ್ನು ಕಲಿಯುವುದು ಮುಂದಿನ ಹಂತ. ವ್ಯಕ್ತಿಯು ಕಲಿತ ಎಲ್ಲ ವಿಚಾರಧಾರೆಗಳ ಪ್ರಾಯೋಗಿಕ ಮೂಸೆ ಈ ಲೋಕ. ಈ ವಿಶ್ವಪ್ರಯೋಗಾಲಯದಲ್ಲಿ ಪರಿಪಾಕಗೊಳ್ಳಲೆಂದೇ ಜೀವಿಯು ತಯಾರಿ ನಡೆಸಿರುತ್ತಾನೆ. ಜೊತೆಗೆ ತಾನು ಕಲಿತದ್ದನ್ನು ಪ್ರಯೋಗಿಸಲು ಅವನಿಗೆ ಇಲ್ಲಿ ವಿಪುಲ ಅವಕಾಶಗಳಿವೆ.

ತನ್ನ ಅಸ್ತಿತ್ವದ ಸ್ಥಾಪನೆಗೆ, ತನ್ನ ಕೊಡುಗೆಯ ಪ್ರಸಾರಕ್ಕೆ ಲೋಕವು ವ್ಯಕ್ತಿಗೆ ನೆರವಾಗುತ್ತದೆ. ಹೀಗೆ ಕಲಿಕೆಗೆ ನೂರಾರು ಆಯಾಮಗಳು, ಅದನ್ನು ಕೇವಲ ಶಿಕ್ಷಣಸಂಸ್ಥೆಯ ಜವಾಬ್ದಾರಿ ಎಂದು ಭಾವಿಸದೆ ವಿಶಾಲ ಹಿನ್ನೆಲೆಯಲ್ಲಿ ಕಂಡು ನಮ್ಮ ನಮ್ಮ ವ್ಯಕ್ತಿತ್ವವನ್ನು, ಜೀವನವನ್ನು ರೂಪಿಸಿಕೊಳ್ಳಬೇಕು.

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT