ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಬಾನಿಯನ್ನು ನೋಡಿ ಮೋಸ ಹೋದವರೇ ಹೆಚ್ಚು

Last Updated 24 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಇಪ್ಪತ್ತೈದು ತುಂಬಲು ಕೆಲವೇ ದಿನಗಳಿವೆ ಎಂದು ಹೇಳಲು ಸಾಧ್ಯವಾಗದ ಕೃಶ ದೇಹ. ಕಣ್ಣುಗಳಲ್ಲಿ ಹೊಳಪು. ಗುರಿ ಸ್ಪಷ್ಟ; ಮೈದಾನದಲ್ಲಿ ಅಷ್ಟೇ ಅಲ್ಲ, ವೈಯಕ್ತಿಕವಾಗಿಯೂ.

ರಜನೀಶ್ ಗುರುಬಾನಿ ಈ ಸಲದ ರಣಜಿ ಕ್ರಿಕೆಟ್ ಋತು ಶುರುವಾದಾಗ ಹೆಚ್ಚೇನೂ ಸದ್ದು ಮಾಡಿರಲಿಲ್ಲ. ಮೊದಲ ಪಂದ್ಯದಲ್ಲಿ ಪಂಜಾಬ್ ಎದುರು ಎರಡು ವಿಕೆಟ್ ಪಡೆದರಾದರೂ ಮುಂದಿನ ಎರಡು ಪಂದ್ಯಗಳಲ್ಲಿ ಬೆಂಚು ಕಾಯ್ದರು. ಬಂಗಾಳದ ವಿರುದ್ಧ ಆಡುವ ಅವಕಾಶ ಸಿಕ್ಕಿದ್ದೇ ಮತ್ತೆ ಎರಡು ವಿಕೆಟ್ ದಕ್ಕಿತು.

ಆಡುವ ಹನ್ನೊಂದು ಮಂದಿಯಲ್ಲಿ ಒಬ್ಬರಾಗಲು ಅಷ್ಟು ಸಾಕಾಗಲಿಲ್ಲ. ಮತ್ತೆರಡು ಪಂದ್ಯ ನೀರು ಕೊಡುವ ಕೆಲಸ. ವಿದರ್ಭ ತಂಡದ ಮಧ್ಯಮ ವೇಗದ ಬೌಲರ್ ಗುರುಬಾನಿ ಅದರಿಂದ ತುಸುವೂ ಬೇಸರ ಪಟ್ಟುಕೊಳ್ಳಲಿಲ್ಲ. ತಂಡದ ತರಬೇತುದಾರ ಚಂದ್ರಕಾಂತ್ ಪಂಡಿತ್ ತೀರ್ಮಾನದ ಕುರಿತು ಗುರುಬಾನಿ ಅವರಿಗೆ ಹೆಮ್ಮೆ ಇದೆ.

ಸರಿಯಾದ ಸಮಯಕ್ಕೆ ತಕ್ಕ ಯೋಚನೆ ಮಾಡುವಷ್ಟು ಅನುಭವಿ ತಮ್ಮ ಕೋಚ್ ಎಂದೇ ಅವರು ಹೇಳುತ್ತಾರೆ. ಪೂರ್ವ ಮಹಾರಾಷ್ಟ್ರದ ವಿದರ್ಭ ಖನಿಜ ಸಂಪತ್ತು, ಅರಣ್ಯ ಸಂಪತ್ತಿಗೆ ಹೆಸರುವಾಸಿ. ಅಲ್ಲಿನ ಬಡತನ, ಅಸ್ಥಿರ ರಾಜಕಾರಣ, ಅಪೌಷ್ಟಿಕತೆ ಕೂಡ ಸುದ್ದಿಯಾಗುತ್ತಲೇ ಇದೆ. ದಶಕವೊಂದರಲ್ಲಿ ಮಹಾರಾಷ್ಟ್ರದ ಸುಮಾರು 2 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರಲ್ಲಿ ಮುಕ್ಕಾಲುಪಾಲು ವಿದರ್ಭದವರೇ.

ಪ್ರಕೃತಿ ಸಂಪತ್ತು ಚೆನ್ನಾಗಿದ್ದರೂ ಬಡತನ ಅಲ್ಲಿನವರಿಗೆ ತುಂಬಾ ಚೆನ್ನಾಗಿ ಗೊತ್ತು. ಇಂಥ ಪ್ರದೇಶದಲ್ಲಿ ಬೆಳೆದ ರಜನೀಶ್ ಗುರುಬಾನಿ, ನಾಗಪುರದ ಕೆ.ಡಿ.ಕೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿತರು. ಸಿವಿಲ್ ಎಂಜಿನಿಯರಿಂಗ್ ಕೊನೆ ಸೆಮಿಸ್ಟರ್‌ನಲ್ಲಿ ಅವರಿಗೆ ಶೇ 80ರಷ್ಟು ಅಂಕ ಸಿಕ್ಕಿತು.

ಕ್ಯಾಂಪಸ್ ಸಂದರ್ಶನದಲ್ಲಿ ಯಾವುದಾದರೂ ಕಂಪನಿ ಕೆಲಸ ಕೊಡಲು ಈ ಅಂಕ ಸಾಕಿತ್ತು. ಎಂಟೂ ಸೆಮಿಸ್ಟರ್‌ಗಳಿಂದ ಶೇ 68 ಅಂಕ ಗುರುಬಾನಿ ಅಂಕಪಟ್ಟಿಗಳಲ್ಲಿ ಇತ್ತು. ಆದರೆ, ಅವರು ಎಂಜಿನಿಯರ್ ಆಗದೇ ಕ್ರಿಕೆಟರ್ ಆಗಲು ಬಯಸಿದರು. ಓದುವಾಗಲೂ ಅವರಲ್ಲಿ ಭವಿಷ್ಯದ ಬಗೆಗೆ ಗೊಂದಲವಿತ್ತು. ಎಂಜಿನಿಯರ್ ಆಗಿದ್ದ ಅಪ್ಪನಿಗೆ ಮಗ ಚೆನ್ನಾಗಿ ಓದಲಿ ಎನ್ನುವ ಸಹಜ ಬಯಕೆ.

ಅಮ್ಮನಿಗೆ ಮಗ ಏನೇ ಆಗಲಿ, ಚೆನ್ನಾಗಿ ನಿದ್ದೆ ಮಾಡಿದರೆ ಸಾಕು ಎಂಬ ಮಮಕಾರ. ಬೆಳಿಗ್ಗೆ ಕಾಲೇಜು ಮುಗಿದದ್ದೇ ಅಂಬೇಡ್ಕರ್ ಕ್ರಿಕೆಟ್ ಅಕಾಡೆಮಿಗೆ ಓಡಿಹೋಗಿ ಆಡಿ ದಣಿದು ಬರುತ್ತಿದ್ದ ಮಗ ಹಾಕುತ್ತಿದ್ದ ಶ್ರಮದ ಅರಿವು ಆ ಅಮ್ಮನಿಗೆ ಇತ್ತು. ನಡುರಾತ್ರಿ ಓದುತ್ತಲೇ ನಿದ್ರೆಗೆ ಜಾರುತ್ತಿದ್ದ ಗುರುಬಾನಿಗೆ ಹೊದಿಕೆ ಹೊದಿಸಿ ಬರುವಾಗ ಅವರು ಕಣ್ಣೀರಿಟ್ಟ ದಿನಗಳೂ ಇವೆ. ಎಂಜಿನಿಯರಿಂಗ್ ಮುಗಿಸಿ ಆರು ತಿಂಗಳ ನಂತರ ಗುರುಬಾನಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಕಾಲಿಟ್ಟರು.

‘ಎಂಜಿನಿಯರಿಂಗ್ ಛೋಡ್ಕೆ ಕ್ಯಾ ಕ್ರಿಕೆಟ್ ಖೇಲೇಗಾ?’ (ಎಂಜಿನಿಯರಿಂಗ್ ಬಿಟ್ಟು ಅದೇನು ಕ್ರಿಕೆಟ್ ಆಡುತ್ತೀಯೋ?) ಎಂಬ ಕುಟುಕು ಮಾತನ್ನು ಅವರು ಪದೇ ಪದೇ ಕೇಳಬೇಕಾಯಿತು. ಆಯ್ಕೆದಾರರಿಗೆ ಗುರುಬಾನಿಯನ್ನು ತೋರಿಸಿ, ‘ಇವನಲ್ಲಿ ಪ್ರತಿಭೆ ಇದೆ’ ಎಂದವರಿಗೆ, ‘ಯೇ ಕ್ಯಾ ಫಾಸ್ಟ್ ಬೌಲಿಂಗ್ ಕರೇಗಾ’ ಎಂದು ಪ್ರತಿಕ್ರಿಯಿಸಿದವರೂ ಇದ್ದಾರೆ.

ಕ್ವಾರ್ಟರ್ ಫೈನಲ್‌ನಲ್ಲಿ ಕೇರಳ ವಿರುದ್ಧ ಒಂದು ಇನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದ ಗುರುಬಾನಿ, ಸೆಮಿಫೈನಲ್ಸ್‌ನಲ್ಲಿ ಕರ್ನಾಟಕದ ಜಂಘಾಬಲ ಉಡುಗಿಸಿದ ತಾಜಾ ಉದಾಹರಣೆ ಕಣ್ಮುಂದೆ ಇದೆ.

ಎರಡನೇ ಇನಿಂಗ್ಸ್‌ನಲ್ಲಿ ಏಳು ವಿಕೆಟ್ ಪಡೆದು, ತಮ್ಮ ತಂಡ ಮೊದಲ ಸಲ ರಣಜಿ ಫೈನಲ್ ತಲುಪಲು ಕಾರಣರಾದ ಅವರ ಶರೀರ ನೋಡಿ ಮೋಸ ಹೋದವರೇ ಹೆಚ್ಚು. ಬಹುಶಃ ಕರ್ನಾಟಕದ ಬ್ಯಾಟ್ಸ್‌ಮನ್‌ಗಳೂ ಅವರ ಒಳನುಗ್ಗುವ, ಹೊರಹೋಗುವ ಎಸೆತಗಳಿಂದ ಮೋಸಹೋದರೇನೋ?

ಮೂದಲಿಕೆಗೆ ಗುರಿಯಾದ, ಕಾಲೇಜಿನಲ್ಲಿ ಹಾಜರಿ ಸಮಸ್ಯೆ ಸೃಷ್ಟಿಸಿಕೊಳ್ಳದೆಯೂ ಕ್ರಿಕೆಟ್ ಪ್ರೀತಿ ಉಳಿಸಿಕೊಂಡ ಗುರುಬಾನಿ ಯುವೋತ್ಸಾಹಕ್ಕೆ ಇಂಧನವಾಗಬಲ್ಲ ಕಿಚ್ಚನ್ನು ತೋರಿಸಿದ್ದಾರೆ. ಅದು ಭರವಸೆಯ ಬೆಳಕಾಗಬೇಕಷ್ಟೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT