ಅವರು ಗೆದ್ದಾಗಿದೆ, ಈಗಿರುವುದು ಮಾತುಕತೆ ಮಾತ್ರ

ಗುಜರಾತಿನಲ್ಲಿ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಜಯ ಗಳಿಸಿದೆ. ಇದಕ್ಕೆ ಕಾರಣಗಳು ಏನು ಎಂಬ ಬಗ್ಗೆ ನಾವು ಊಹೆ ಮಾಡಬಹುದು.

ಗುಜರಾತಿನಲ್ಲಿ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಜಯ ಗಳಿಸಿದೆ. ಇದಕ್ಕೆ ಕಾರಣಗಳು ಏನು ಎಂಬ ಬಗ್ಗೆ ನಾವು ಊಹೆ ಮಾಡಬಹುದು. ಆದರೆ ಚುನಾವಣಾ ಫಲಿತಾಂಶದಲ್ಲಿ ಗೊಂದಲಗಳು ಇಲ್ಲ. ಗುಜರಾತಿನ ಮತದಾರರು ಕಳೆದ 20 ವರ್ಷಗಳಿಂದ ಮಾತನಾಡುತ್ತಿರುವ ರೀತಿಯಲ್ಲಿಯೇ ಈ ಫಲಿತಾಂಶವೂ ಇದೆ. ಕಾಂಗ್ರೆಸ್ಸಿನ ಮತ ಗಳಿಕೆಯ ಪ್ರಮಾಣದಲ್ಲಿ ಆಗಿರುವ ಹೆಚ್ಚಳವು, ದೇಶದಲ್ಲಿ ಬೀಸುತ್ತಿರುವ ದೊಡ್ಡ ಬದಲಾವಣೆಯೊಂದರ ಸೂಚನೆ ಎನ್ನಲು ಇನ್ನಷ್ಟು ಅಂಕಿ-ಅಂಶಗಳು ಹಾಗೂ ಇನ್ನಿತರ ರಾಜ್ಯಗಳ ಚುನಾವಣಾ ಫಲಿತಾಂಶಕ್ಕೆ ಕಾಯಬೇಕಾಗುತ್ತದೆ. ಗುಜರಾತಿನಲ್ಲಿ ಬಿಜೆಪಿ ವಿಜಯ ಸಾಧಿಸಿದೆ ಎಂಬುದು ಸ್ಪಷ್ಟ.

ಇಷ್ಟನ್ನು ಸ್ಪಷ್ಟಪಡಿಸಿಕೊಂಡ ನಂತರ, ಗುಜರಾತಿನಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮೆರೆಯಲಿ ಎಂದು ಹಲವರು ಏಕೆ ಬಯಸಿದ್ದರು ಎಂಬುದನ್ನು ಪರಿಶೀಲಿಸೋಣ. ಇನ್ನೂ ಸ್ಪಷ್ಟವಾಗಿ ಹೇಳಬೇಕು ಅಂದರೆ, ಬಿಜೆಪಿ ಮತ್ತೆ ಗೆಲ್ಲದಿರಲಿ ಎಂದು ಏಕೆ ಬಯಸಿದ್ದು ಎಂಬುದನ್ನು ನೋಡೋಣ. ಇಂತಹ ವ್ಯಕ್ತಿಗಳನ್ನು ಸಾಮಾನ್ಯವಾಗಿ 'ಮೋದಿ-ನಿಂದಕರು' ಎಂದು ಕರೆಯಲಾಗುತ್ತದೆ. ಆದರೆ, ಅದು ಯಾವ ಅರ್ಥ ನೀಡುತ್ತದೆ ಎಂಬುದು ಸ್ಪಷ್ಟವಿಲ್ಲ. ವಂಶಪಾರಂಪರ್ಯ ರಾಜಕಾರಣವನ್ನು ನೇರಾನೇರ ಸಮರ್ಥಿಸುವವರನ್ನು ನಾನು ಭೇಟಿ ಮಾಡಿದ್ದು ಕಡಿಮೆ. ಹಾಗಾಗಿ, ಬಿಜೆಪಿ ಸಾಧಿಸಿದ ಇನ್ನೊಂದು ಗೆಲುವಿನಿಂದ ಚಿಂತಿತರಾಗಿರುವವರಲ್ಲಿ ಬಹುತೇಕರು ಕಾಂಗ್ರೆಸ್ಸಿನ ಬೆಂಬಲಿಗರಲ್ಲ ಎಂದು ಸಕಾರಾತ್ಮಕ ನೆಲೆಯಲ್ಲಿ ಆಲೋಚಿಸಬಹುದು. ಅವರು ಬೇರೇನೋ ವಿಷಯವೊಂದರ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಹಾಗಾದರೆ ಅದೇನು?

ಈ ಪ್ರಶ್ನೆಗೆ ಉತ್ತರ, ಬಿಜೆಪಿಯು ಉದ್ದೇಶಪೂರ್ವಕವಾಗಿ ಮುಂದೆ ನೂಕುತ್ತಿರುವ 'ಧಾರ್ಮಿಕ ರಾಷ್ಟ್ರೀಯತೆ'. ರಾಷ್ಟ್ರೀಯತೆಯು ಹಲವು ರೀತಿಗಳಲ್ಲಿ ಇರಬಹುದು. ಎಲ್ಲ ಧರ್ಮಗಳ, ಎಲ್ಲ ಸಮುದಾಯಗಳ, ಎಲ್ಲ ಪ್ರದೇಶಗಳ ಭಾರತೀಯರನ್ನು ಒಳಗೊಳ್ಳುವ ರಾಷ್ಟ್ರೀಯತೆಯನ್ನು ಒಬ್ಬರು ಪ್ರತಿಪಾದಿಸಬಹುದು. ಆದರೆ ಬಿಜೆಪಿ ಹೇಳುತ್ತಿರುವುದು ಇದನ್ನಲ್ಲ. ನಾಗಾ ಅಥವಾ ಮಿಜೋ ವ್ಯಕ್ತಿ ತನ್ನ 'ಭಾರತೀಯ ಅಸ್ಮಿತೆ'ಯನ್ನು ಹೆಮ್ಮೆಯಿಂದ ವ್ಯಕ್ತಪಡಿಸಬಹುದೇ? ಬಿಜೆಪಿ ಕಟ್ಟಿಕೊಟ್ಟಿರುವ ರೀತಿಯಲ್ಲಿ ಅದನ್ನು ವ್ಯಕ್ತಪಡಿಸಬೇಕು ಎಂದಾದರೆ, ಆ ವ್ಯಕ್ತಿ ಅಸ್ಮಿತೆಯನ್ನು ಹಿಂದಿ ಘೋಷಣೆಗಳ ಮೂಲಕ (ಉದಾಹರಣೆಗೆ, ಭಾರತ್ ಮಾತಾ ಕಿ ಜೈ), ಸಾವಿರಾರು ವರ್ಷಗಳಿಂದ ತಮ್ಮ ಸಾಂಪ್ರದಾಯಿಕ ಆಹಾರವಾಗಿರುವ ಗೋಮಾಂಸವನ್ನು ಬಿಟ್ಟುಬಿಡುವ ಮೂಲಕ ಮಾತ್ರ ವ್ಯಕ್ತಪಡಿಸಬಹುದು.

ಕೇರಳದ ಮುಸ್ಲಿಂ ಪುರುಷ ತನ್ನ ಭಾರತೀಯ ಅಸ್ಮಿತೆಯನ್ನು ವ್ಯಕ್ತಪಡಿಸಬಹುದೇ? ಹಿಂದೂ ಮಹಿಳೆಯನ್ನು ಪ್ರೀತಿಸುವುದಿಲ್ಲ ಎಂದು ಭರವಸೆ ನೀಡಿದರೆ ಮಾತ್ರ ಆತ ಹಾಗೆ ಮಾಡಲು ಸಾಧ್ಯ. ಬಿಜೆಪಿ ಪ್ರತಿಪಾದಿಸುತ್ತಿರುವ ರಾಷ್ಟ್ರೀಯತೆಯು ಎಲ್ಲಾ ಭಾರತೀಯರಿಗಾಗಿ ರೂಪಿಸಿರುವಂಥದ್ದಲ್ಲ. ಅದು ನಿರ್ದಿಷ್ಟ ಭಾರತೀಯರಿಗಾಗಿ ಮಾತ್ರ ಇರುವಂಥದ್ದು. ಆ ನಿರ್ದಿಷ್ಟ ಗುಂಪುಗಳಿಗೆ ಸೇರಿದ ಭಾರತೀಯರಲ್ಲಿ ಕೂಡ ಎಲ್ಲರೂ ಇದನ್ನು ಇಷ್ಟಪಡುವುದಿಲ್ಲ ಎಂಬುದು ವಾಸ್ತವ. ಉತ್ತರ ಭಾರತದ ಹಿಂದೂ ಪುರುಷ ನಾನು (ಗುಜರಾತ್ ರಾಜ್ಯ ಉತ್ತರ ಭಾರತಕ್ಕೆ ಸೇರಿದ್ದೇ ಎಂಬುದು ಚರ್ಚಾಸ್ಪದ). ಆದರೆ ಇತರ ಭಾರತೀಯರನ್ನು ಹೊರಗಿಡುವ ರಾಷ್ಟ್ರೀಯತೆಯ ಭಾಗವಾಗುವುದು ನನಗೆ ಇಷ್ಟವಿಲ್ಲ.

ಸರಳ ಮಾತಿನಲ್ಲಿ ಹೇಳಬೇಕು ಎಂದಾದರೆ, ನನಗೆ ಎಲ್ಲ ಬಗೆಯ ರಾಷ್ಟ್ರೀಯತೆಗಳ ಜೊತೆಯಲ್ಲೂ ತಕರಾರು ಇದೆ. ಏಕೆಂದರೆ, ಒಂದು ಗುಂಪನ್ನು ಇನ್ನೊಂದರ ವಿರುದ್ಧ ಸಂಘಟಿಸಲು ರಾಷ್ಟ್ರೀಯತೆಯನ್ನು ಬಳಸಿಕೊಳ್ಳಲಾಗುತ್ತದೆ. 'ಇನ್ನೊಂದು' ಗುಂಪನ್ನು ಕೆಟ್ಟ ರೀತಿಯಲ್ಲಿ, ಹೇವರಿಕೆ ಬರುವಂತೆ ಚಿತ್ರಿಸಲಾಗುತ್ತದೆ. ರಾಷ್ಟ್ರೀಯತೆಯು ಸಾಮಾನ್ಯವಾಗಿ ಹಿಂಸೆಗೆ ಕಾರಣವಾಗುವುದರಿಂದ, ಅದನ್ನು ಅತ್ಯಂತ ನಾಜೂಕಿನಿಂದ ನಿಭಾಯಿಸಬೇಕು. ರಾಷ್ಟ್ರೀಯತೆಯ ವಿವಿಧ ರೂಪಗಳ ಪೈಕಿ, ಧಾರ್ಮಿಕ ಮತ್ತು ಜನಾಂಗೀಯ ರಾಷ್ಟ್ರೀಯತೆಗಳು ತೀರಾ ಕೊಳಕಾಗಿರುತ್ತವೆ, ಅಪಾಯಕಾರಿಯೂ ಆಗಿರುತ್ತವೆ. ಅದರಲ್ಲೂ ಮುಖ್ಯವಾಗಿ, ನಮ್ಮಂತಹ ದೇಶಗಳು ಇರುವ ಕಡೆ ಇವುಗಳ ಪ್ರಭಾವ ಹೆಚ್ಚಿರುತ್ತದೆ. ಪಾಕಿಸ್ತಾನದ ಮುಸ್ಲಿಂ ರಾಷ್ಟ್ರೀಯತೆ ಹಾಗೂ ಚೀನಾದ ಹಾನ್ ರಾಷ್ಟ್ರೀಯತೆಯನ್ನು ಕೂಡ ನಾನು ಒಪ್ಪುವುದಿಲ್ಲ.

ನಾನು ಹೇಳಿರುವ ಮಾತುಗಳು ದೇಶದ ಅನೇಕರ ಮಾತುಗಳೂ ಆಗಿವೆ. ಹಾಗಾಗಿ ಅವರು ಬಿಜೆಪಿಯನ್ನು ಎಚ್ಚರಿಕೆಯ ಕಣ್ಣುಗಳಿಂದ ನೋಡುತ್ತಾರೆ. ಒಂದು ಧರ್ಮವನ್ನು ಆಧರಿಸಿರುವ ರಾಷ್ಟ್ರೀಯತೆಯನ್ನು ವಿರೋಧಿಸುವ ಹಾಗೂ ಬಹುಜನ ಸಮಾಜ ಪಕ್ಷವನ್ನು ಬೆಂಬಲಿಸುವ ನನ್ನಂತಹ ವ್ಯಕ್ತಿ ನೀವೂ ಆಗಿರಬಹುದು. ಅಥವಾ, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಎನ್‌ಸಿಪಿ, ಟಿಡಿಪಿ, ಪಿಡಿಪಿ, ಜೆಡಿಯು, ಸಿಪಿಎಂ ಅಥವಾ ಯಾವುದೇ ಭಾಗದ ಯಾವುದೇ ಪಕ್ಷದ ಬೆಂಬಲಿಗ ಆಗಿರಬಹುದು. ಆದರೆ, ನೀವು ದೇಶದ ಯಾವುದೇ ಭಾಗದಲ್ಲಿ ನೆಲೆಸಿಯೂ ಧಾರ್ಮಿಕ ರಾಷ್ಟ್ರೀಯತೆಯನ್ನು ಬೆಂಬಲಿಸುವಿರಿ ಎಂದಾದರೆ, ನೀವು ಬಿಜೆಪಿ ಬೆಂಬಲಿಗರು ಎಂದೇ ಅರ್ಥ. ಧಾರ್ಮಿಕ ರಾಷ್ಟ್ರೀಯತೆಯನ್ನು ತನ್ನ ಪ್ರಮುಖ ಅಜೆಂಡಾ ಎಂದು ಮುಂದು ಮಾಡುತ್ತಿರುವ ಪಕ್ಷ ಒಂದೇ ಒಂದು. ಹಾಗಾಗಿ ಆ ಪಕ್ಷದ ಕೃತ್ಯಗಳು ಮತ್ತು ಆ ಪಕ್ಷದ ಮಾತುಗಳಿಂದ, ಅವು ದೇಶಕ್ಕೆ ಮಾಡುವ ಹಾನಿಯಿಂದ ಕಳವಳಗೊಂಡವರು ಆ ಪಕ್ಷದ ಬಲ ಗುಜರಾತಿನಲ್ಲಿ ಕುಗ್ಗಲಿ ಎಂದು ಬಯಸಿದ್ದರು. ಅಂತಹ ವ್ಯಕ್ತಿಗಳ ರಾಜಕೀಯ ಒಲವುಗಳು ಏನೇ ಇದ್ದಿರಬಹುದು, ಅವು ಇಲ್ಲಿ ಮುಖ್ಯವಲ್ಲ.

ಧಾರ್ಮಿಕ ರಾಷ್ಟ್ರೀಯತೆಯನ್ನು ಬದಿಗೆ ಸರಿಸಿ ನೋಡಿದರೆ, ಬಿಜೆಪಿಯ ನೀತಿಗಳು ಇತರ ಪಕ್ಷಗಳ ನೀತಿಗಳಿಗಿಂತ ತೀರಾ ಭಿನ್ನವಾಗೇನೂ ಇಲ್ಲ ಎಂಬುದು ಗೊತ್ತಾಗುತ್ತದೆ. ಎಲ್ಲ ಪಕ್ಷಗಳಲ್ಲೂ ಕಾಣುವ ನೀತಿಗಳು ಒಳ್ಳೆಯವು ಎಂದು ನಾನು ಹೇಳುತ್ತಿಲ್ಲ. ವಾಸ್ತವದಲ್ಲಿ ಅವು ಒಳ್ಳೆಯವಲ್ಲ. ನಾನು ಕೆಲಸ ಮಾಡುವ ಮಾನವ ಹಕ್ಕುಗಳ ಸಂಘಟನೆಯು ಕಾಣುತ್ತಿರುವ ಎಲ್ಲಾ ಸಮಸ್ಯೆಗಳು ಸೃಷ್ಟಿಯಾಗಿದ್ದು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ. ಎಎಫ್‌ಎಸ್‌ಪಿಎ (ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ) ಬಳಕೆ ಅಥವಾ ಆದಿವಾಸಿಗಳ ಜಮೀನನ್ನು ದುರ್ಬಳಕೆ ಮಾಡಿಕೊಂಡಿದ್ದನ್ನು ಉದಾಹರಣೆಗಳಾಗಿ ಹೇಳಬಹುದು. ಈ ಸಮಸ್ಯೆಗಳನ್ನು ಸೃಷ್ಟಿಸಿದ್ದು ಬಿಜೆಪಿಯೂ ಅಲ್ಲ, ಮೋದಿಯೂ ಅಲ್ಲ.

ಆದರೆ, ಬಿಜೆಪಿ ಈ ಎಲ್ಲ ಸಮಸ್ಯೆಗಳ ಜೊತೆ ತನ್ನದೂ ಒಂದು ಸಮಸ್ಯೆಯನ್ನು ಸೇರ್ಪಡೆಗೊಳಿಸುತ್ತಿದೆ. ಧಾರ್ಮಿಕ ರಾಷ್ಟ್ರೀಯತೆಯನ್ನು ತೀರಾ ಜೋರಾಗಿ ಮುಂದಕ್ಕೆ ತರುತ್ತಿರುವುದರ ಪರಿಣಾಮಗಳನ್ನು ಪ್ರತಿದಿನದ ಸುದ್ದಿಗಳಲ್ಲಿ ಕಾಣಬಹುದು. ಗೋಮಾಂಸ ತಿಂದ ವ್ಯಕ್ತಿಯನ್ನು ಗುಂಪೊಂದು ಥಳಿಸುವ ವಿದ್ಯಮಾನ ಮತ್ತೆ ಮತ್ತೆ ನಡೆಯುತ್ತಿರುವುದು ಬಿಜೆಪಿಯ ಉದ್ದೇಶಪೂರ್ವಕ ಸೃಷ್ಟಿ. ಪ್ರದೇಶ, ಜಾತಿ, ಲಿಂಗದ ಆಧಾರದಲ್ಲಿ, ಅದರಲ್ಲೂ ಮುಖ್ಯವಾಗಿ ಧರ್ಮದ ಆಧಾರದಲ್ಲಿ ಭಾರತೀಯರನ್ನು ವಿಭಜಿಸುವ ಕೆಲಸವನ್ನು ಅವರು ಮಾಡದಿದ್ದರೆ ಇಂತಹ ಬಹುತೇಕ ಘಟನೆಗಳು ನಡೆಯುತ್ತಿರಲಿಲ್ಲ.

ನಮ್ಮ ದೇಶದ ಬೀದಿಗಳಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಮಾಧ್ಯಮಗಳಲ್ಲಿನ ಹಿಂಸಾಚಾರ (ವ್ಯಕ್ತಿಗಳನ್ನು ಪಾಕಿಸ್ತಾನದ 'ದಲ್ಲಾಳಿ' ಎಂದು ಕರೆಯುವುದು) ಧಾರ್ಮಿಕ ರಾಷ್ಟ್ರೀಯತೆಯ ಅವತಾರಗಳು. ನಮ್ಮಂಥ ಅನೇಕರು ನಿರ್ಲಕ್ಷಿಸಲಾಗದ ಈ ಸಮಸ್ಯೆಯನ್ನು ಇನ್ನಷ್ಟು ತುರ್ತಾಗಿ ಪರಿಹರಿಸಬೇಕು ಎಂಬುದನ್ನು ಇವು ಹೇಳುತ್ತವೆ. ಇಂತಹ ಸಮಸ್ಯೆಗಳು ಕೊನೆಗೊಳ್ಳಲಿ, ಭಾರತೀಯರಿಗೆ ತೊಂದರೆ ಆಗದಿರಲಿ, ಬಡತನ, ಆರೋಗ್ಯ ಮತ್ತು ಶಿಕ್ಷಣದಂತಹ ಆದ್ಯತಾ ಕ್ಷೇತ್ರಗಳ ಬಗ್ಗೆ ಗಮನ ನೀಡಲು ಸಾಧ್ಯವಾಗಲಿ ಎಂದು ನಾವು ಆಶಿಸುತ್ತೇವೆ.

ಬಿಜೆಪಿಯು ಗುಜರಾತಿನಲ್ಲಿ ಮತ್ತೆ ಗೆಲುವು ಸಾಧಿಸದಿರಲಿ ಎಂದು ಹಲವರು ಆಶಿಸಿದ್ದಕ್ಕೆ ಇದು ಬೇರೆಲ್ಲವುಗಳಿಗಿಂತಲೂ ಮುಖ್ಯವಾದ ಕಾರಣ. ಆದರೆ ಬಿಜೆಪಿ ಗೆದ್ದಾಗಿದೆ. ಇದನ್ನು ನಾವು ಒಪ್ಪಿಕೊಳ್ಳಬೇಕು. ನಾವು ಬಿಜೆಪಿಯ ಬೆಂಬಲಿಗರ ಜೊತೆ ಮಾತನಾಡಬೇಕಿದೆ, ಅವರು ನಮ್ಮ ದೃಷ್ಟಿಕೋನವನ್ನು ಅರ್ಥ ಮಾಡಿಕೊಳ್ಳುವಂತೆ ಪ್ರಯತ್ನನಡೆಸಬೇಕಿದೆ.

ಲೇಖಕ ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ

Comments
ಈ ವಿಭಾಗದಿಂದ ಇನ್ನಷ್ಟು
ನಮ್ಮ ತನಿಖಾ ಸಂಸ್ಥೆಗಳ ಕಥೆ-ವ್ಯಥೆ

ದೂರ ದರ್ಶನ
ನಮ್ಮ ತನಿಖಾ ಸಂಸ್ಥೆಗಳ ಕಥೆ-ವ್ಯಥೆ

12 Mar, 2018
ಅಧಿಕಾರದಲ್ಲಿರುವ ಪಕ್ಷದ ಏಳು ಅನುಕೂಲಗಳು

ದೂರ ದರ್ಶನ
ಅಧಿಕಾರದಲ್ಲಿರುವ ಪಕ್ಷದ ಏಳು ಅನುಕೂಲಗಳು

5 Mar, 2018
ಗುಜರಾತ್ ಮಾದರಿಯ ಇನ್ನೊಂದು ಮುಖ!

ದೂರ ದರ್ಶನ
ಗುಜರಾತ್ ಮಾದರಿಯ ಇನ್ನೊಂದು ಮುಖ!

26 Feb, 2018

ದೂರ ದರ್ಶನ
ಹಿಂಸೆಯಿಲ್ಲದ ಯುದ್ಧದಲ್ಲಿ ತಂತ್ರಜ್ಞಾನದ್ದೇ ಮೇಲುಗೈ

ಆಧುನಿಕ ರಾಷ್ಟ್ರವು ಯುದ್ಧದ ವೇಳೆ ಶತ್ರು ರಾಷ್ಟ್ರದ ಸಂಪರ್ಕ ಸಾಧನಗಳನ್ನು ನಿಷ್ಕ್ರಿಯಗೊಳಿಸುವತ್ತ ಗಮನ ನೀಡುತ್ತದೆ. ಇಂಟರ್ನೆಟ್‌ ಸೇವೆಗಳು ಸ್ಥಗಿತವಾಗುವಂತೆ ಮಾಡಿದರೆ ಯಾವುದೇ ಆಧುನಿಕ ರಾಷ್ಟ್ರ...

19 Feb, 2018
ಕಲ್ಲೆಸೆಯುವ ಕಾಶ್ಮೀರದ ಕೈಗಳ ಬಗ್ಗೆ...

ದೂರ ದರ್ಶನ
ಕಲ್ಲೆಸೆಯುವ ಕಾಶ್ಮೀರದ ಕೈಗಳ ಬಗ್ಗೆ...

12 Feb, 2018