ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ರಕ್ಷಿಸದವರು ಕನ್ನಡಿಗರ ರಕ್ಷಿಸುವರೇ

Last Updated 25 ಡಿಸೆಂಬರ್ 2017, 5:49 IST
ಅಕ್ಷರ ಗಾತ್ರ

ಷಡಕ್ಷರದೇವ ವೇದಿಕೆ (ಮಳವಳ್ಳಿ): ಕನ್ನಡವನ್ನು ಉತ್ತೇಜಿಸುವವರೇ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದುರಂತವೆಂದರೆ ಕನ್ನಡ ಮಾತನಾಡುವರೆಲ್ಲಾ ರೈತರು. ರೈತರನ್ನು ರಕ್ಷಣೆ ಮಾಡಲಾಗದ ದೇಶ, ಆರು ಕೋಟಿ ಕನ್ನಡಿಗರನ್ನು ರಕ್ಷಣೆ ಮಾಡಲು ಸಾಧ್ಯವೆ? ಎಂದು ಮೇಲುಕೋಟೆ ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಪ್ರಶ್ನಿಸಿದರು. ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ನಡೆದ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಮ್ಮೇಳನಗಳ ಮೂಲಕ ನಾವು ಹೋರಾಟ ಮಾಡುತ್ತಿದ್ದೇವೆ. ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಹದಿನೈದು ಮಂದಿಗೆ ರಾಗಿ ಮುದ್ದೆ ಉಣಬಡಿಸುವವನು ಶ್ರೀಮಂತನೇ ಹೊರತು ₹ 15 ಸಾವಿರ ಕೋಟಿ ಹಣ ಮಾಡುವವನು ಶ್ರೀಮಂತನಲ್ಲ ಎಂದರು.

ಒಬ್ಬ ಐಎಎಸ್ ಅಧಿಕಾರಿ ಮೃತ ಪಟ್ಟರೆ ರಾಜ್ಯವ್ಯಾಪ್ತಿ ಹೋರಾಟ ಮಾಡುವ ಹೋರಾಟಗಾರರು ಸಾವಿ ರಾರು ರೈತರು ಆತ್ಮಹತ್ಯೆ ಮಾಡಿಕೊಂಡರೆ ಹೋರಾಟ ಮಾಡುವುದಿಲ್ಲ. ರೈತರ ಆತ್ಮಹತ್ಯೆ ಮುಂದುವರಿಯುತ್ತಲೇ ಇದೆ. ಆದರೂ ಹೋರಾಟಗಳು ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನುಮುಂದೆ ಸಂಸದ, ಶಾಸಕರಿಗೆ ರೈತರ ಸಂಕಷ್ಟಗಳ ಬಗ್ಗೆ ತರಬೇತಿ ನೀಡುವಂಥ ಶಾಲೆಗಳನ್ನು ತೆರೆದು ಆಯ್ಕೆಮಾಡುವಂಥ ಪದ್ಧತಿ ಜಾರಿಗೆ ತರಬೇಕು. ಆಗಮಾತ್ರ ವಿಧಾನ ಸಭೆಯಲ್ಲಿ ಸದ್ದುಮಾಡದೆ ಕುಳಿತುಕೊಂಡು ಕೃಷಿ ಸಂಬಂಧಿ, ರೈತರ ಬಗ್ಗೆ ಚರ್ಚೆಮಾಡುತ್ತಾರೆ ಎಂದರು.

ಕನ್ನಡ ಸಮ್ಮೇಳನಗಳಲ್ಲಿ ಕನ್ನಡ ವನ್ನು ಉಳಿಸಿ ಎಂದು ನಿರ್ಣಯಗಳನ್ನು ಮಂಡಿಸುತ್ತಲೇ ಬರಲಾಗುತ್ತಿದೆ. ಆದರೆ ಇಂಗ್ಲಿಂಷ್‌ ಮಾತ್ರ ಮೇಲಕ್ಕೆ ಹೋಗುತ್ತಿದೆ. ಜತೆಗೆ, ಕನ್ನಡ ಶಾಲೆಗಳಲ್ಲಿ ಓದಿದ ಶೇ 20 ಮಂದಿಗೆ ಉದ್ಯೋಗ ಕೊಡಬೇಕೆಂದು ನಿರ್ಣಯ ಮಾಡುವಂತೆ ಸಲಹೆ ನೀಡಿದರು.

ಕುಡಿಯುವ ನೀರಿಗಾಗಿ ದೇಶದ ಯಾವ ರಾಜ್ಯಗಳು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕೆಂದು ಸಂಸತ್‌ನಲ್ಲಿ ಒಂದು ಸಾಲಿನ ಒಮ್ಮತದ ನಿರ್ಣಯ ಕೈಗೊಳ್ಳುವುದರಿಂದ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಬಹುದು. ರಾಜಕೀಯ ದುರು ದ್ದೇಶಕ್ಕಾಗಿ ಜನಸಾಮಾನ್ಯರನ್ನು ಬಲಿ ಕೊಡುವುದು ನ್ಯಾಯವಲ್ಲ ಎಂದರು. ಸಂಶೋಧಕ, ಸಾಹಿತಿ ತೈಲೂರು ವೆಂಕಟಕೃಷ್ಣ ಮಾತನಾಡಿ, ಕೃಷಿಯ ಬಗ್ಗೆ ಮಾತನಾಡುವುದು ಬೆಕ್ಕಿಗೆ ಗಂಟೆ ಕಟ್ಟಿದಂತೆ ಎಂದು ಬೇಸರ ವ್ಯಕ್ತ ಪಡಿಸಿದರು.

ಇಂದಿನ ಬೋರ್‌ವೆಲ್‌ ನರಕವನ್ನು ತೋರಿಸುತ್ತಿವೆ. ಪ್ರಕೃತಿಯನ್ನು ಉಳಿಸಿಕೊಂಡರೆ ಮಾತ್ರ ನಿರುದ್ಯೋಗ ಸಮಸ್ಯೆ ನಿವಾರಣೆ ಸಾಧ್ಯ. ಕೃಷಿಯಲ್ಲಿನ ನಷ್ಟವನ್ನು ನೋಡಲಾಗದೇ ಕುಟುಂಬದ ಹಿರಿಯರೇ ಮಕ್ಕಳನ್ನು ದುಡಿಮೆಗಾಗಿ ನಗರ ಪ್ರದೇಶಗಳತ್ತ ಗುಳೆ ಹೋಗಲು ಪ್ರೇರೇಪಿಸುತ್ತಿದ್ದಾರೆ ಎಂದರು.

ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಪುಷ್ಪಾ, ಇಂದು ಜೀವನ ಶೈಲಿ, ಆಹಾರ ಪದ್ಧತಿಯಿಂದ ಆರೋಗ್ಯದಲ್ಲಿ ವ್ಯತಿರಿಕ್ತ ಬದಲಾವಣೆಯಾಗುತ್ತಿದೆ. ಪ್ರತಿಯೊಂದಕ್ಕೂ ವೈದ್ಯರನ್ನು ಅವಲಂಬಿಸಿಕೊಳ್ಳುವ ಬದಲಿಗೆ ನಿಸರ್ಗದಲ್ಲಿರುವ ಒಳ್ಳೆಯ ಆಹಾರ ಗಳನ್ನು ಬಳಸುವುದರಿಂದ ಶೇ 80ರಷ್ಟು ಅನಾರೋಗ್ಯವನ್ನು ತಡೆಗಟ್ಟಬಹುದು ಎಂದರು. ಸಹಾಯಕ ಪ್ರಾಧ್ಯಾಪಕ ಎಂ.ವೈ.ಶಿವರಾಮು, ಇಂದಿನ ಸ್ಪರ್ಧಾತ್ಮಕ ಪರಿಕ್ಷೆಗಳಲ್ಲಿ ಕನ್ನಡ ಮಾಯ ವಾಗುತ್ತಿರುವುದು ನೋವಿನ ಸಂಗತಿ ಎಂದರು.

ನಕ್ಕು ನಗಿಸಿದ ನಗೆಹಬ್ಬ 
ಮಳವಳ್ಳಿ: ಸಮ್ಮೇಳನದಲ್ಲಿ ಹಾಸ್ಯ ಕಲಾವಿದ ರಿಚರ್ಡ್‌ ಲೂಯಿಸ್, ಮೈಸೂರು ಆನಂದ್, ಕಿರ್ಲೋಸ್ಕರ್ ಸತ್ಯ ತಂಡದವರು ನಡೆಸಿಕೊಟ್ಟ ಹಾಸ್ಯಲಾಸ್ಯ ಕಾರ್ಯಕ್ರಮ ಮನ ರಂಜಿಸಿತು. ಹೊಟ್ಟೆತುಂಬಾ ನಕ್ಕು ಖುಷಿ ಪಟ್ಟರು. ಹಾಸ್ಯ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಹಲವಾರು ಮಂದಿ ಹೊರನಡೆದರು..

ಭರ್ಜರಿ ಭೋಜನ: ‌ ಸಾಹಿತ್ಯಾಭಿಮಾನಿಗಳಿಗೆ ಹೋಳಿಗೆ, ತುಪ್ಪ, ಗೋಧಿ ಪಾಯಸ, ಬೊಂಡಾ, ಮೆಂತ್ಯೆ ಪಲಾವ್, ಮೊಸರು ಬಜ್ಜಿ, ಉಳ್ಳಿ ಸಾಂಬಾರು, ತರಕಾರಿ ಪಲ್ಯ ಬಡಿಸಲಾಯಿತು.

ಸಾವಯವ ಪದ್ಧತಿ ಅಳವಡಿಸಿಕೊಳ್ಳಿ

ಷಡಕ್ಷರದೇವ ವೇದಿಕೆ (ಮಳವಳ್ಳಿ): ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಭಾನುವಾರ ನಡೆದ ಗೋಷ್ಠಿಗಳಲ್ಲಿ ವಿಚಾರ ಮಂಡನೆ ಹಾಗೂ ಹಾಸ್ಯ ಕಲಾವಿದರ ಹಾಸ್ಯಲಾಸ್ಯ, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮಗಳು ಕನ್ನಡದ ಕಂಪು ಪಸರಿಸಿದರೆ, ಸೊಗಸಾದ ಭೋಜನ ಸಾಹಿತ್ಯಾಭಿಮಾನಿಗಳ ಉದರ ತಣಿಸಿತು.

‘ಭವಿಷ್ಯದಲ್ಲಿ ಮಂಡ್ಯಜಿಲ್ಲೆ’ ಗೋಷ್ಠಿ ಉದ್ಘಾಟಿಸಿದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ದೊಡ್ಡಲಿಂಗೇಗೌಡ, ಜಿಲ್ಲೆಯಲ್ಲಿ ಕೈಗಾರಿಕೆ, ಪ್ರವಾಸೋದ್ಯಮ, ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಹಿನ್ನಡೆಯಾಗಿದೆ. ಈ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರೊ.ಜಿ.ಟಿ.ವೀರಪ್ಪ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

ಕೋಟಿ ಹಣ ಇಟ್ಟಿರುವವರು ಶಾಸಕರಾದರೆ ಮಂಡ್ಯಜಿಲ್ಲೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಕೋಲಾರ ಜಿಲ್ಲೆಗಿಂತ ಮಂಡ್ಯ ಜಿಲ್ಲೆ ನಿಕೃಷ್ಟ ವಾಗಿಲ್ಲ. ಏಕಬೆಳೆ ಪದ್ಧತಿ ಕೈಬಿಟ್ಟು, ಕಡಿಮೆ ವೆಚ್ಚದಲ್ಲಿ ಕೃಷಿ ಉತ್ಪನ್ನಗಳನ್ನು ಬೆಳೆಯುವಂತಾಗಬೇಕು ಸಾವಯವ ಪದ್ಧತಿ ಅಳವಡಿಸಿಕೊಂಡಾಗ ಮಾತ್ರ ಜಿಲ್ಲೆ ಅಭಿವೃದ್ಧಿ ಹೊಂದದಲು ಸಾಧ್ಯ ಎಂದು ತಿಳಿಸಿದರು.

ಪ್ರಗತಿಪರ ವಿಭಿನ್ನ ಚಿಂತನೆ ಹಾಗೂ ನ್ಯಾಯಯುತ ವಿಷಯಗಳ ಬಗ್ಗೆ ಗಟ್ಟಿತನದ ಹೋರಾಟ ಮಾಡುವಲ್ಲಿ ಜಿಲ್ಲೆಯ ಜನರು ಮಾದರಿಯಾಗಿದ್ದಾರೆ. ಹಳ್ಳಿಗಳ ಯುವ ರೈತರು ಸಾವಯವ ಕೃಷಿಯನ್ನು ಜಿಲ್ಲೆಯಾದ್ಯಂತ ಪಸರಿಸಲು ಮುಂದಾಗಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT