ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲನೆಯಾಗದ ಜಿಲ್ಲಾಧಿಕಾರಿ ಆದೇಶ

Last Updated 25 ಡಿಸೆಂಬರ್ 2017, 6:39 IST
ಅಕ್ಷರ ಗಾತ್ರ

ಶಹಾಪುರ: ‘ನಗರಸಭೆ ಆಡಳಿತಾಧಿಕಾರಿಯ ಅನುಮೋದನೆ ಇಲ್ಲದೆ ಹಿಂದಿನ ಪೌರಾಯುಕ್ತ ರಮೇಶ ಪಟ್ಟೆದಾರ ಖರ್ಚು ವೆಚ್ಚ ಮಾಡಿ ಆಕ್ರಮ ಎಸಗಿದ ಬಗ್ಗೆ ತನಿಖೆ ನಡೆಸಲು ನಗರಸಭೆಯ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜೆ. ಮಂಜುನಾಥ ನೀಡಿದ ಆದೇಶ ಪಾಲನೆಯಾಗಿಲ್ಲ’ ಎಂದು ಶಹಾಪುರ ಹಿತ ರಕ್ಷಣಾ ಸಮಿತಿ ಸಂಚಾಲಕ ಮಲ್ಲಣ್ಣ ಶಿರಡ್ಡಿ ಆರೋಪಿಸಿದ್ದಾರೆ.

ನವೆಂಬರ್‌ 13ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಗರಸಭೆಯ ಸಾಮಾನ್ಯ ಸಭೆ ನಡೆದಿತ್ತು. ಆಗ ಕೆಲ ಸದಸ್ಯರು ಪೌರಾಯುಕ್ತರು ಕಾನೂನು ವ್ಯಾಪ್ತಿ ಮೀರಿ ಕೆಲಸ ನಿರ್ವಹಿಸಿದ್ದಾರೆ. ಆಡಳಿತಾಧಿಕಾರಿಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ಎಸಗಿದ್ದರ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದರು.

‘ಇದಕ್ಕೆ ಸ್ಪಂದಿಸಿದ್ದ ಜಿಲ್ಲಾಧಿಕಾರಿ ತನಿಖೆ ನಡೆಸಿ ಒಂದು ವಾರದಲ್ಲಿ ವರದಿ ನೀಡುವಂತೆ ಸೂಚಿಸಿದ್ದರು. ಅದರಂತೆ ಹಿರಿಯ ಎಂಜಿನಿಯರ್ ಮಲ್ಲಿಕಾರ್ಜುನ ಗೊಬಶೆಟ್ಟಿ ನೇತೃತ್ವದಲ್ಲಿ ತಂಡವು ನವೆಂಬರ 15ರಂದು ನಗರಸಭೆಗೆ ಬಂದು ಕಡತಗಳನ್ನು ಪರಿಶೀಲಿಸುವ ಜೊತೆಗೆ ಅಗತ್ಯವಾದ 250ಕ್ಕೂ ಹೆಚ್ಚು ಕಡತಗಳನ್ನು ತೆಗೆದುಕೊಂಡು ಹೋಗಿದ್ದಾರೆ’ ಎಂದು ಮಲ್ಲಣ್ಣ ಶಿರಡ್ಡಿ ತಿಳಿಸಿದರು.

ನಗರಸಭೆಯ ಕಡತಗಳನ್ನು ತೆಗೆದುಕೊಂಡು ಹೋಗಿದ್ದರಿಂದ ಸಾರ್ವಜನಿಕರು ಪರದಾಡುವಂತೆ ಆಗಿದೆ. ‘ನಿವೇಶನಗಳ ದಾಖಲೆ ಹಾಗೂ ಇನ್ನಿತರ ಅಗತ್ಯ ಕಾಗದ ಪತ್ರಗಳನ್ನು ಪಡೆಯಬೇಕು ಎಂದು ಕಚೇರಿಗೆ ಬಂದ ಸಿಬ್ಬಂದಿಯನ್ನು ವಿಚಾರಿಸಿದರೆ ನಮ್ಮ ಬಳಿ ಯಾವುದೇ ದಾಖಲೆ ಇಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿವೆ ಎಂದು ತಿಳಿಸುತ್ತಾರೆ. ಇದರಿಂದ ಮತ್ತಷ್ಟು ತೊಂದರೆಯಾಗಿದೆ’ ಎನ್ನುತ್ತಾರೆ ಶಹಾಪುರ ನಿವಾಸಿ ಬಸವರಾಜ ಕುಂಬಾರ.

‘ಒಂದು ವಾರದಲ್ಲಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದ ಆದೇಶವನ್ನು ಪಾಲಿಸದ ಎಂಜಿನಿಯರ್ ಮಲ್ಲಿಕಾರ್ಜುನ ಗೋಬಶೆಟ್ಟಿ ನೇತೃತ್ವದ ತಂಡವು ಯಾವುದೋ ಪ್ರಭಾವಕ್ಕೆ ಒಳಗಾಗಿ ಅಕ್ರಮವನ್ನು ಮುಚ್ಚಿ ಹಾಕುವ ಹುನ್ನಾರ ನಡೆದಿದೆ. ಅಲ್ಲದೆ ಜಿಲ್ಲಾಧಿಕಾರಿ ಆದೇಶವನ್ನು ಪಾಲಿಸದೆ ನಿಷ್ಕಾಳಜಿ ತೋರಿಸುತ್ತಿದ್ದಾರೆ. ಒಂದು ವಾರದಲ್ಲಿ ತನಿಖಾ ವರದಿಯನ್ನು ನೀಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಬೇಕಾಗುತ್ತದೆ’ ಎಂದು ಶಹಾಪುರ ಹಿತ ರಕ್ಷಣಾ ಸಮಿತಿ ಸಂಚಾಲಕ ಮಲ್ಲಣ್ಣ ಶಿರಡ್ಡಿ ಎಚ್ಚರಿಕೆ ನೀಡಿದ್ದಾರೆ.

ಮನವಿ: ನಗರಸಭೆಯ ವ್ಯಾಪ್ತಿಯಲ್ಲಿ ಸಾರ್ವಜನಿಕ ಆಸ್ತಿಯನ್ನು ದುರ್ಬಳಕೆ ಮಾಡಿಕೊಂಡ ವ್ಯಕ್ತಿಗಳನ್ನು ಹೊರ ಹಾಕಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮತ್ತು ನಗಸರಭೆ ಅಧೀನದಲ್ಲಿರುವ 108 ವಾಣಿಜ್ಯ ಮಳಿಗೆ ಬಾಡಿಗೆ ವಸೂಲು ಮಾಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಅಲ್ಲದೆ, ಅವಧಿ ಮುಗಿದ ಬಾಡಿಗೆದಾರರನ್ನು ಹೊರ ಹಾಕುವಂತೆ ನಿರ್ದೇಶನ ನೀಡಿದ್ದರೂ ಸಹ ಪೌರಾಯುಕ್ತರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ತಕ್ಷಣ ಇದರ ಬಗ್ಗೆ ಗಮನಹರಿಸಬೇಕು ಎಂದು ಹೈದರಾಬಾದ್‌ ಕರ್ನಾಟಕ ವಾಲ್ಮೀಕಿ ನಾಯಕ ಪರಿಷತ್ ಮುಖಂಡ ಅಮರೇಶ ನಾಯಕ ಇಟಗಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT