ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಕ್ರಾಸಿಂಗ್‌: ವಾಹನ ಸಂಚಾರಕ್ಕೆ ಅಡೆತಡೆ

Last Updated 25 ಡಿಸೆಂಬರ್ 2017, 7:06 IST
ಅಕ್ಷರ ಗಾತ್ರ

ಸಂಡೂರು: ಸಂಡೂರು–ತೋರಣಗಲ್‌ ರಾಜ್ಯ ಹೆದ್ದಾರಿಯಲ್ಲಿ ತಾಳೂರಿನಿಂದ ತೋರಣಗಲ್‌ವರೆಗೆ ಒಟ್ಟು 5 ಕಡೆ ರೈಲ್ವೆ ಕ್ರಾಸಿಂಗ್‌ ಇದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಪ್ರತಿ ಬಾರಿ ರೈಲ್ವೆ ಗೇಟ್‌ ಹಾಕಿದರೆ ಅರ್ಧ ಗಂಟೆಗೂ ಹೆಚ್ಚು ಕಾಲ ಕಾಯಬೇಕಾದ ಅನಿವಾರ್ಯತೆ ಇದೆ ಎಂದು ವಾಹನ ಸವಾರರ ಅಳಲು ತೋಡಿಕೊಂಡಿದ್ದಾರೆ.

ಗಂಟೆಗೊಮ್ಮೆ ಗೂಡ್ಸ್‌ ರೈಲು: ತೋರಣಗಲ್‌ದಿಂದ ಜಿಂದಾಲ್ ಕಾರ್ಖಾನೆ ಮತ್ತು ರಣಜಿತ್‌ಪುರದ ಕಡೆಗೆ ಗೂಡ್ಸ್‌ಗಾಡಿಗಳು ಪ್ರತಿ ಗಂಟೆಗೊಮ್ಮೆ ಸಂಚರಿಸುತ್ತವೆ. ರೈಲು ಬಂದಾಗ ಗೇಟ್‌ ಹಾಕುವುದರಿಂದ, ವಾಹನ ಸವಾರರು, ಅಂಬುಲೆನ್ಸ್‌ ಕೂಡ ಕಾದು ನಿಲ್ಲಬೇಕಾಗಿರುತ್ತದೆ. ತಾಲ್ಲೂಕು ಮೊದಲೇ ಗಣಿ ಪ್ರದೇಶವಾಗಿದ್ದು, ಅವಗಢಗಳೂ ಹೆಚ್ಚು. ಅವಗಢ ಸಂದರ್ಭದಲ್ಲಿ ಗಾಯಾಳು ಅಥವಾ ರೋಗಿಗಳನ್ನು ಬಳ್ಳಾರಿ, ತೋರಣಗಲ್‌ನ ಸಂಜೀವಿನಿ ಆಸ್ಪತ್ರೆಗೆ ಕರೆದೊಯ್ಯಬೇಕಾದರೆ ರೈಲ್ವೆ ಕ್ರಾಸಿಂಗ್ ದಾಟಿಕೊಂಡೇ ಹೋಗಬೇಕು. ಆದರೆ, ಇಲ್ಲಿ ಗೂಡ್ಸ್‌ ರೈಲು ಸಂಚಾರದಿಂದ ವಾಹನ ಸವಾರರು ಹಾಗೂ ಜನರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.

ಬೈಪಾಸ್‌ ನಿರ್ಮಾಣಕ್ಕೆ ಸಿದ್ಧತೆ: ರೈಲ್ವೆ ಕ್ರಾಸಿಂಗ್‌ನಿಂದಾಗಿ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸುವ ಸಲುವಾಗಿ ತಾಲ್ಲೂಕಿನ ಬನ್ನಿಹಟ್ಟಿಯಿಂದ ತೋರಣಗಲ್‌ ಬಳಿಯ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಲು 6 ಕಿ.ಮೀ. ಬೈಪಾಸ್ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈಗಾಗಲೇ ರಸ್ತೆ ನಿರ್ಮಾಣಕ್ಕೆ ರೈತರಿಂದ ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯೂ ಆರಂಭವಾಗಿದೆ. ಕೆಲವು ರೈತರು ಹೆಚ್ಚಿನ ಪರಿಹಾರ ನೀಡಬೇಕೆಂದು ಒತ್ತಾಯಿಸಿ ನ್ಯಾಯಾಲಯದ ಮೊರೆ ಹೋಗಿರುವುದರಿಂದ, ರಸ್ತೆ ನಿರ್ಮಾಣ ಕಾರ್ಯಕ್ಕೆ ತಡೆ ಉಂಟಾಗಿದೆ ಎಂಬುದು ಅಧಿಕಾರಿಗಳ ದೂರು. ರೈತರಿಗೆ ಸೂಕ್ತ ಪರಿಹಾರ ನೀಡಿ, ಬೈಪಾಸ್ ರಸ್ತೆ ನಿರ್ಮಿಸಬೇಕು. ಎಂದು ತಾಳೂರಿನ ತಾಲ್ಲೂಕು ಪಂಚಾಯ್ತಿ ಕ್ಷೇತ್ರದ ಸದಸ್ಯ ಮೇಘನಾಥ್, ಡಿವೈಎಫ್‌ಐ ತಾಲ್ಲೂಕು ಸಮಿತಿ ಅಧ್ಯಕ್ಷ ಎಸ್. ಕಾಲುಬಾ ಒತ್ತಾಯಿಸಿದ್ದಾರೆ.

ಬೈಪಾಸ್‌ ರಸ್ತೆ ನಿರ್ಮಾಣದ ಹೊಣೆ ಹೊತ್ತಿರುವ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆ.ಆರ್‌.ಡಿ.ಸಿ.ಎಲ್)ದ ಕಾರ್ಯನಿರ್ವಾಹಕ ಎಂಜಿನಿಯರ್ ರವೀಂದ್ರ ಮಾತನಾಡಿ, ಬನ್ನಿಹಟ್ಟಿಯಿಂದ ತೋರಣಗಲ್‌ವರೆಗೆ 6 ಕಿ.ಮೀ. ವರೆಗೆ ರಸ್ತೆ ನಿರ್ಮಿಸಲು ಜಿಂದಾಲ್ ಕಂಪೆನಿಯವರು 14 ಎಕರೆ ಜಾಗ ಕೊಡಬೇಕಿದೆ. ರೈಲ್ವೆ ಇಲಾಖೆ ಸ್ವಲ್ಪ ಜಮೀನು ನೀಡಬೇಕಿದೆ. ಈ ಕಾಮಗಾರಿಗೆ ಟೆಂಡರ್ ಆಗಿದೆ. ರಸ್ತೆ ನಿರ್ಮಾಣಕ್ಕೆ ಬೇಕಾದ ಜಮೀನನ್ನು ಹಸ್ತಾಂತರಿಸಿದರೆ, ರಸ್ತೆ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದರು.

3–4 ಕಿ.ಮೀ ಅಂತರದಲ್ಲಿ 5 ಕಡೆಗಳಲ್ಲಿ ರೈಲ್ವೆ ಕ್ರಾಸಿಂಗ್‌ಗಳಿರುವ ಕಾರಣ ಜನರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ತುರ್ತು ಚಿಕಿತ್ಸೆಗೆ ತೆರಳುವ ಸಂದರ್ಭದಲ್ಲಿ ರೈಲ್ವೆ ಗೇಟ್‌ನಿಂದ ತೊಂದರೆಯಾಗುತ್ತಿದೆ. ಹಾಗಾಗಿ ಅಧಿಕಾರಿಗಳು ಕೂಡಲೇ ಬೈಪಾಸ್‌ ರಸ್ತೆ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT