ಚಾಮರಾಜನಗರ

ಜನರಲ್ಲಿ ಭೀತಿ ಮೂಡಿಸುವ ಶ್ವಾನಗಳು

ಬೀದಿನಾಯಿಗಳ ಹಾವಳಿಯಿಂದ ಕೆಲ ಬೀದಿಗಳಲ್ಲಿ ಜನರು ಓಡಾಡಲು ಹಿಂದೇಟು ಹಾಕುವಂತಾಗಿದೆ.

ಚಾಮರಾಜನಗರದ ಭುವನೇಶ್ವರಿ ವೃತ್ತದ ಬಳಿ ನಾಯಿಗಳ ಹಿಂಡು ಕಾದಾಡುತ್ತಿರುವುದು

ಚಾಮರಾಜನಗರ: ಸಂಜೆಯಾಗುತ್ತಿದ್ದಂ ತೆಯೇ ಗುಂಪುಗೂಡುವ ಶ್ವಾನಗಳು ನಗರದ ರಸ್ತೆಗಳಲ್ಲಿ ಓಡಾಡುತ್ತಿದ್ದು ಜನರಲ್ಲಿ ಭಯ ಹುಟ್ಟಿಸುತ್ತಿವೆ. ಪ್ರಮುಖ ರಸ್ತಗಳಲ್ಲದೆ ಎಲ್ಲ ಬೀದಿ ಬೀದಿಗಳಲ್ಲಿ ಸಂಚರಿಸುವ ಹತ್ತಾರು ಶ್ವಾನ ಗುಂಪುಗಳು ಕಾಣುವುದು ಸರ್ವೇಸಾಮಾನ್ಯ. ರಾತ್ರಿ ವೇಳೆಯಂತೂ ಇವುಗಳ ಉಪಟಳ ಮಿತಿ ಮೀರುತ್ತಿದ್ದು ಜನರು ಭಯದಿಂದಲೇ ಓಡಾಡುವ ಸ್ಥಿತಿ ಇದೆ. ಮಧ್ಯರಾತ್ರಿ ಏಕಾಏಕಿ ಬೊಳಗುತ್ತಾ ಸವಿನಿದ್ದೆಯಲ್ಲಿರುವವರು ದಿಗಿಲುಗೊಳ್ಳುವಂತೆ ಮಾಡುತ್ತಿವೆ.

ಬೀದಿನಾಯಿಗಳ ಹಾವಳಿಯಿಂದ ಕೆಲ ಬೀದಿಗಳಲ್ಲಿ ಜನರು ಓಡಾಡಲು ಹಿಂದೇಟು ಹಾಕುವಂತಾಗಿದೆ. ಪ್ರತಿ ಬಡಾವಣೆಯಲ್ಲಿಯೂ ಕನಿಷ್ಠ ನಾಲ್ಕೈದು ಬೀದಿನಾಯಿಗಳನ್ನು ಒಳಗೊಂಡ ಹಿಂಡು ಅಲೆದಾಡುತ್ತಿರುತ್ತವೆ. ರಸ್ತೆಯಲ್ಲಿ ಸಾಗುವಾಗ ಬೊಗಳುತ್ತಾ ಕಚ್ಚುವಂತೆ ಮೈಮೇಲೆಯೇ ಬರುತ್ತವೆ ಎನ್ನುವುದು ಬಹಳಷ್ಟು ಜನರ ದೂರು.

ಮಾಂಸದ ರುಚಿ: ನಗರದ ಮುಖ್ಯ ರಸ್ತೆಯಲ್ಲಿಯೇ ಮಾಂಸದಂಗಡಿಗಳಿವೆ. ಇಲ್ಲಿನ ಮಾಂಸದ ತ್ಯಾಜ್ಯಗಳನ್ನು ಸರಿಯಾಗಿ ವಿಲೇವಾರಿ ಮಾಡುತ್ತಿಲ್ಲ. ಹೀಗಾಗಿ ಅಂಗಡಿ ಮುಂದೆ ನಿಲ್ಲುವ ನಾಯಿಗಳಿಗೆ ಮಾಂಸದ ತುಂಡುಗಳನ್ನು ಎಸೆಯಲಾಗುತ್ತಿದೆ. ತ್ಯಾಜ್ಯಗಳನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ಎಸೆದಿರುತ್ತಾರೆ. ಮಾಂಸದ ರುಚಿ ಹತ್ತಿದ ನಾಯಿಗಳು ಅವುಗಳಿಗಾಗಿ ನಿರಂತರ ಹುಡುಕಾಟ ನಡೆಸುತ್ತಿರುತ್ತವೆ. ಮಾಂಸದ ಹೊರತು ಬೇರೇನನ್ನೂ ತಿನ್ನಲು ಇಷ್ಟಪಡದ ನಾಯಿಗಳು ಮನೆಗಳ ಮುಂದೆ ಕಟ್ಟಿರುವ ಕುರಿ, ಮೇಕೆಗಳ ಮೇಲೆ ದಾಳಿ ನಡೆಸಿದ ಹಲವು ನಿದರ್ಶನಗಳಿವೆ.

ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಮಾಂಸದ ಅಂಗಡಿಗಳ ಸಾಲು ಹೆಚ್ಚಿರುವುದರಿಂದ ಸುತ್ತಮತ್ತ ನಾಯಿಗಳ ಹಾವಳಿಯೂ ಹೆಚ್ಚು. ಹಗಲಿನ ವೇಳೆಯೂ ಈ ಭಾಗದಲ್ಲಿ ನಾಯಿಗಳ ಗುಂಪು ಓಡಾಡುವುದು, ಕಚ್ಚಾಡಿಕೊಳ್ಳುವುದು ಸಾರ್ವಜನಿಕರಲ್ಲಿ ಇನ್ನಿಲ್ಲದ ಆತಂಕ ಮೂಡಿಸುತ್ತಿವೆ.

ರಾತ್ರಿ ವೇಳೆ ಎಲ್ಲೆಂದರಲ್ಲಿ ಸೇರಿಕೊಳ್ಳುವ ನಾಯಿಗಳಿಂದ ಜನರು ಮನೆಯಿಂದ ಹೊರಬರಲೂ ಹಿಂದೇಟು ಹಾಕುವಂತಾಗಿದೆ. ಕೆಲಸ ಮುಗಿಸಿ ಬಂದು ತಡರಾತ್ರಿ ಮನೆ ಸೇರಿಕೊಳ್ಳುವವರು ಬೊಗಳುತ್ತಾ ಬೆನ್ನತ್ತಿ ಬರುವ ನಾಯಿಗಳಿಂದಾಗಿ ಜೀವ ಕೈಯಲ್ಲಿ ಹಿಡಿದು ಮನೆ ಸೇರುವಂತಾಗಿದೆ ಎನ್ನುತ್ತಾರೆ.

ನಿಯಂತ್ರಣವೇ ಇಲ್ಲ: ನಗರದಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಅವುಗಳಿಗೆ ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಿಸುವ ಕೆಲಸವನ್ನು ನಗರಸಭೆ ಮಾಡುತ್ತಿಲ್ಲ ಎಂಬ ದೂರು ಜನರಿಂದ ಕೇಳಿ ಬರುತ್ತಿವೆ.

ಸಣ್ಣ ಮರಿಗಳ ಜತೆಗೆ ಓಡಾಡುವ ನಾಯಿಗಳು ಎಲ್ಲೆಂದರಲ್ಲಿ ಕಾಣಿಸುತ್ತವೆ. ಮರಿಗಳ ಜತೆಗಿರುವ ನಾಯಿಗಳು ಇನ್ನೂ ಅಪಾಯಕಾರಿ. ಇವುಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.

ಇತ್ತೀಚೆಗೆ ಭುವನೇಶ್ವರಿ ವೃತ್ತದ ಮಧ್ಯಭಾಗದಲ್ಲಿಯೇ ಹತ್ತಾರು ನಾಯಿಗಳು ಹಲವು ನಿಮಿಷ ಕಚ್ಚಾಡಿ ಕೊಳ್ಳುತ್ತಿದ್ದವು. ಇಂತಹ ಸನ್ನಿವೇಶಗಳಲ್ಲಿ ಅಲ್ಲಿ ಪಾದಚಾರಿಗಳು, ಬೈಕ್ ಸವಾರರು ಓಡಾಡುವುದು ಅಪಾಯಕಾರಿ. ಅಲ್ಲದೆ, ಬೈಕ್‌ ನಲ್ಲಿ ಹೋಗುವಾಗ ಕೆಲವೊಮ್ಮೆ ಬೆನ್ನಟ್ಟುತ್ತವೆ. ಮೊದಲೇ ರಸ್ತೆಗಳು ಕೆಟ್ಟಿರುವುದರಿಂದ ವೇಗವಾಗಿ ಬೈಕ್ ಚಲಾಯಿಸಲೂ ಸಾಧ್ಯವಿಲ್ಲ. ದಾಳಿ ಮಾಡಲು ಬರುವ ನಾಯಿಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಬಿದ್ದು ಗಾಯಗೊಳ್ಳುವ ಸಂಭವ ಹೆಚ್ಚು ಎನ್ನುತ್ತಾರೆ ವ್ಯಾಪಾರಿ ರಾಕೇಶ್.

ನಾಯಿಗಳಿಗೆ ಸಂತಾನಶಕ್ತಿಹರಣ ಚಿಕಿತ್ಸೆ ಮಾಡಿಸಬೇಕು. ಅವುಗಳು ಕಚ್ಚಿದರೆ ಸೋಂಕು ಹರಡದಂತೆ ಅವುಗಳನ್ನು ಹಿಡಿದು ಚುಚ್ಚುಮದ್ದು ಹಾಕಿಸಬೇಕು. ಮುಖ್ಯವಾಗಿ ನಾಯಿಗಳಿಗೆ ಮಾಂಸದ ಚೂರುಗಳನ್ನು ಎಸೆಯದಂತೆ ಹಾಗೂ ಅವುಗಳಿಗೆ ತ್ಯಾಜ್ಯ ದೊರೆಯದಂತೆ ನಿಗಾವಹಿಸಲು ಮಾಂಸದ ಅಂಗಡಿಗಳ ಮಾಲೀಕರಿಗೆ ಸೂಚನೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಏಳುದಂಡು ಜೋಡಿ ಮುನೇಶ್ವರ ಜಾತ್ರೆ ಸಡಗರ

ಹನೂರು
ಏಳುದಂಡು ಜೋಡಿ ಮುನೇಶ್ವರ ಜಾತ್ರೆ ಸಡಗರ

17 Jan, 2018
ವೀರಗಾಸೆ ಕಲೆ ಬೆಳೆಸುವ ಹಂಬಲ

ಚಾಮರಾಜನಗರ
ವೀರಗಾಸೆ ಕಲೆ ಬೆಳೆಸುವ ಹಂಬಲ

17 Jan, 2018

ಸಂತೇಮರಹಳ್ಳಿ
ಕೆಂಪನಪುರ: ಸಂಭ್ರಮ ಮೂಡಿಸಿದ ಸುಗ್ಗಿ–ಹುಗ್ಗಿ

ವೀರಗಾಸೆ ಕುಣಿತ, ಗೊರವರ ಕುಣಿತ, ಮಾರಿಕುಣಿತಗಳು ಹಾಗೂ ಹುಲಿವೇಷಧಾರಿಗಳು ಗಮನಸೆಳೆದವು.

17 Jan, 2018

ಕೊಳ್ಳೇಗಾಲ
ರಸ್ತೆ ಮೇಲೆ ಹರಿಯುತ್ತಿರುವ ಕೊಳಚೆ

ನಗರದ ಸರ್ಕಾರಿ ಆಸ್ಪತ್ರೆ ರಸ್ತೆಯ ಎ.ಡಿ.ಬಿ ವೃತದಲ್ಲಿ ಇರುವ ಒಳ ಚರಂಡಿ ಪೈಪು ಒಡೆದು ಮಲ ಮಿಶ್ರಿತ ನೀರು ಬಾರಿ ಪ್ರಮಾಣದಲ್ಲಿ 2 ದಿನಗಳಿಂದ...

17 Jan, 2018
ಜಿಲ್ಲೆಯಲ್ಲಿ ಸಡಗರದಿಂದ ಸಂಕ್ರಾಂತಿ ಆಚರಣೆ

ಚಾಮರಾಜನಗರ
ಜಿಲ್ಲೆಯಲ್ಲಿ ಸಡಗರದಿಂದ ಸಂಕ್ರಾಂತಿ ಆಚರಣೆ

16 Jan, 2018