ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋರಿ ನೀರಿನಿಂದ ಕಲುಷಿತಗೊಂಡ ದೊಡ್ಡಕೆರೆ

Last Updated 25 ಡಿಸೆಂಬರ್ 2017, 9:37 IST
ಅಕ್ಷರ ಗಾತ್ರ

ಬಂಗಾರಪೇಟೆ: ಪಟ್ಟಣದ ದೊಡ್ಡಕೆರೆಗೆ ನಿತ್ಯ ಮೋರಿ ನೀರು ಹರಿಯುತ್ತಿರುವುದರಿಂದ ಕೆರೆ ನೀರು ಕಲುಷಿತಗೊಳ್ಳುತ್ತಿದೆ. ಕೆರೆಯಲ್ಲಿ ಬಹುಪಾಲು ಪಾಚಿ ಆವರಿಸಿದ್ದು, ದುರ್ವಾಸನೆ ಬೀರುತ್ತಿದೆ. ಪಟ್ಟಣದ ವಿಜಯನಗರ, ವಿವೇಕಾನಂದ ನಗರ ಹಾಗೂ ಶಾಂತಿನಗರದ ಮೋರಿ ನೀರು ಕೆರೆಗೆ ಹರಿಯುತ್ತಿದೆ. ಮತ್ತೊಂದೆಡೆ ಕಾರಹಳ್ಳಿಯ ಚರಂಡಿ ನೀರು ಕೂಡ ಕೆರೆಗೆ ಸೇರುತ್ತಿದೆ. ಜತೆಗೆ ಕೆರೆ ಪಕ್ಕದ ನಿವಾಸಿಗಳು ನಿತ್ಯ ಕಸ, ಪ್ಲಾಸ್ಟಿಕ್ ವಸ್ತುಗಳನ್ನು ಎಸೆಯುತ್ತಿದ್ದಾರೆ.

ಸುಮಾರು ₹ 3 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿಗೊಳಿಸಿ, ವಾಕಿಂಗ್ ಪಾತ್ ನಿರ್ಮಿಸುತ್ತಿರುವ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ಕೆರೆ ನೀರಿನ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎನ್ನುವುದು ಸ್ಥಳೀಯರ ಒತ್ತಾಯಿಸಿದ್ದಾರೆ.

ಕೆರೆ ಸುತ್ತ ವಾಕಿಂಗ್ ಪಾತ್ ನಿರ್ಮಿಸುತ್ತಿದ್ದು, ಎರಡೂ ಅಂಚಿನಲ್ಲಿ ತಂತಿ ಬೇಲಿ ಅಳವಡಿಸುವ ಕೆಲಸ ಪ್ರಗತಿಯಲ್ಲಿದೆ. ಅಲಂಕಾರಿಕ ಗಿಡಗಳನ್ನು ನೆಟ್ಟು, ಪಾತ್‌ ಉದ್ದಕ್ಕೂ ಅಲ್ಲಲ್ಲಿ ಕಲ್ಲುಹಾಸುಗಳನ್ನು ಅಳವಡಿಸುವ ಕೆಲಸ ಕೂಡ ನಡೆಯಲಿದೆ.

ಸುಸಜ್ಜಿತ ನಡಿಗೆ ಪಥ ನಿರ್ಮಿಸಲಾಗುತ್ತಿದೆ. ಆದರೆ ಕಲುಷಿತ ವಾತಾವರಣ ಆವರಿಸಿದೆ. ಬೆಳಿಗ್ಗೆ ಹಾಗೂ ಸಂಜೆ ವಿಹಾರಕ್ಕಾಗಿ ಇಲ್ಲಿಗೆ ಬರುವ ಜನರು ದುರ್ವಾಸನೆ ಸಹಿಸಿಕೊಳ್ಳುವುದು ಅನಿವಾರ್ಯ ಸ್ಥಿತಿಯಾಗಿದೆ. ಇದರಿಂದ ಪಟ್ಟಣದ ಸೌಂದರ್ಯ ಮತ್ತು ಕರೆ ಅಂದ ಹೆಚ್ಚಿಸಲು ಕೈಗೊಂಡಿರುವ ಶಾಸಕರ ಕ್ರಮ ಸಫಲತೆ ಕಾಣುವುದಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಕಾಲುವೆಗಳ ಮಾರ್ಗ ಬದಲಾವಣೆ: ಕೆರೆಗೆ ನೀರು ಹರಿಯುವ ಪ್ರಮುಖ ಕಾಲುವೆಗಳನ್ನು ಮುಚ್ಚಲಾಗಿದೆ. ಹಾಗಾಗಿ ನಿರೀಕ್ಷಿತ ಪ್ರಮಾಣದಷ್ಟು ನೀರು ಕೆರೆಗೆ ಹರಿಯುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.

ಪಟ್ಟಣ-ಕೋಲಾರ ಮುಖ್ಯರಸ್ತೆಯ ಪೂರ್ವಕ್ಕೆ ಇರುವ ವಿವೇಕಾನಂದ ನಗರ, ವಿಜಯನಗರ, ನ್ಯೂಟೌನ್ ಸೇರಿದಂತೆ ಹಲವು ನಗರಗಳಲ್ಲಿ ಬಿದ್ದ ಮಳೆ ನೀರು ಅಯ್ಯಪ್ಪಸ್ವಾಮಿ ದೇಗುಲದ ಬಳಿ ಇದ್ದ ಚರಂಡಿ ಮೂಲಕ ಕೆರೆಗೆ ಸೇರುತ್ತಿತ್ತು. ಆದರೆ ಆ ಚರಂಡಿ ನೀರನ್ನು ಬೇರೆಡೆಗೆ ತಿರುಗಿಸಲಾಗಿದೆ ಎನ್ನುವುದು ಇಲ್ಲಿನ ನಾಗರಿಕರ ದೂರು.

ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಒಂದೂವರೆ ತಿಂಗಳು ಸತತವಾಗಿ ಮಳೆ ಸುರಿಯಿತು. ಪ್ರಮುಖ ನೀರಿನ ಸೆಲೆಗಳಾದ ಬೇತಮಂಗಲ ಕೆರೆ. ರಾಮಸಾಗರ ಕೆರೆ, ಮಾರ್ಕಂಡೇಯ ಜಲಾಶಯ, ಮುಷ್ಟ್ರಹಳ್ಳಿ ಜಲಾಶಯ, ಕಾಮಸಮುದ್ರ ಕೆರೆಗಳು ತುಂಬಿ ಕೋಡಿ ಹರಿದವು. ಆದರೆ ಈ ಬಾರಿ ದೊಡ್ಡಕೆರೆ ಮಾತ್ರ ನಿರೀಕ್ಷಿತ ಪ್ರಮಾಣದಷ್ಟು ತುಂಬಲಿಲ್ಲ.

ಬೇರೆಡೆ ತಿರುಗಿಸಿರುವ ಕಾಲುವೆ ನೀರನ್ನು ಕೆರೆಗೆ ಹರಿಸಿ, ಕೆರೆ ಒತ್ತುವರಿ ತೆರವುಗೊಳಿಸಬೇಕು. ಕೆರೆಯ ಸ್ವಚ್ಛತೆ, ನೀರಿನ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕೆರೆ ಒತ್ತುವರಿ

36 ಎಕರೆ ವಿಸ್ತೀರ್ಣವಿರುವ ಈ ಕೆರೆ ಒತ್ತುವರಿಯಾಗಿದೆ. ಸುಮಾರು ಆರು ಎಕರೆ ಕೆರೆಯ ಅಂಗಳದಲ್ಲಿ ಕಟ್ಟಡಗಳು ತಲೆ ಎತ್ತಿವೆ. ರಾಜಕಾಲುವೆ ಹಾಗೂ ಕೆರೆ ಒತ್ತುವರಿ ತೆರವುಗೊಳಿಸಿ ಸಂರಕ್ಷಿಸಬೇಕು ಎನ್ನುವ ಸುಪ್ರೀಂ ಕೋರ್ಟ್ ಆದೇಶಕ್ಕೆ ಸ್ಥಳೀಯ ಆಡಳಿತ ಕಿಂಚಿತ್ತು ಬೆಲೆ ನೀಡಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.

* * 

ಮೋರಿ ನೀರಿನಿಂದ ಕೆರೆ ಸಂಪೂರ್ಣವಾಗಿ ಕಲುಷಿತಗೊಂಡಿದೆ. ಆ ನೀರನ್ನು ಸಂಸ್ಕರಿಸಿ ಕೆರೆಗೆ ಬಿಡಬೇಕು. ಕೆರೆಯಲ್ಲಿನ ಕಳೆ ಮತ್ತು ಪಾಚಿ ತೆರವಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು
-ಪ್ರದೀಪ್ ಕುಮಾರ್, ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT