ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಂಜದ ಬಿರಿಬ

Last Updated 25 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನೋಡಿದರೆ ದೊಡ್ಡ ಸೀತಾಫಲವೋ ಲಕ್ಷ್ಮಣ ಫಲವೋ ಎಂದು ಭಾಸವಾಗಬಹುದು; ಆದರೆ ಈ ಹಣ್ಣು ಎರಡೂ ಅಲ್ಲ, ಇದರ ಹೆಸರು ಬಿರಿಬ.

ಸಸ್ಯಶಾಸ್ತ್ರದಲ್ಲಿ ರೊಲಿನಿಯಾ ಡೆಲಿಸಿಯೋಸಾ ಎಂದು ಹೆಸರಿರುವ ಬಿರಿಬ ಮೂಲತಃ ಉಷ್ಣವಲಯದ ಫಲ. ದಕ್ಷಿಣ ಅಮೆರಿಕದ ಆಸುಪಾಸಿನ ದೇಶಗಳಲ್ಲಿ ಹೇರಳವಾಗಿ ಬೆಳೆಯುತ್ತದೆ. ಬ್ರೆಜಿಲ್ ದೇಶದಲ್ಲಿ ಇದನ್ನು ವಾಣಿಜ್ಯ ದೃಷ್ಟಿಯಿಂದ ತೋಪುಗಳಲ್ಲಿ ಬೆಳೆಯಲಾಗುತ್ತಿದೆ.

ಭಾರತದಲ್ಲಿಯೂ ಸಲೀಸಾಗಿ ಬೆಳೆಯುವ ಹಣ್ಣಿದು. ಬೆಳ್ತಂಗಡಿ ತಾಲ್ಲೂಕಿನ ಬಳಂಜದ ಅನಿಲ್, ಬಿರಿಬದ ಗಿಡ ನೆಟ್ಟು ಧಾರಾಳವಾಗಿ ಹಣ್ಣು ಕೊಯ್ಯುತ್ತಿರುವ ಕಾರಣ ನಮ್ಮ ದೇಶದ ಕರಾವಳಿಯಲ್ಲಿಯೂ ಕಷ್ಟವಿಲ್ಲದೆ ಕೃಷಿಯಾಗುತ್ತದೆಂಬುದರಲ್ಲಿ ಏನೂ ಸಂದೇಹವಿಲ್ಲ. ಅವರು ರಸಗೊಬ್ಬರ ಉಪಯೋಗಿಸುವುದಿಲ್ಲ. ಸಾವಯವ ಗೊಬ್ಬರ ಉಣಿಸಿಯೇ ಗಿಡವನ್ನು ಪುಷ್ಟಿಗೊಳಿಸಿದ್ದಾರೆ.

ಅನಿಲ್ ಅವರು ಇದರ ಬೀಜವನ್ನು ಹವಾಯಿ ದ್ವೀಪದಿಂದ ತರಿಸಿ ಗಿಡ ಮಾಡಿದ್ದಾರೆ. ಅನ್ಯ ದೇಶಗಳಿಂದ ಬೀಜ, ಗಿಡಗಳನ್ನು ತರಿಸುವುದು ಸುಲಭವಲ್ಲ. ತುಂಬ ಕಷ್ಟವಾಗಿದೆ, ಜೊತೆಗೆ ಒಂದು ಬೀಜಕ್ಕೆ ಎಂಟುನೂರು ರೂಪಾಯಿಗಳಷ್ಟು ವೆಚ್ಚವೂ ಆಗುತ್ತದೆ.

ಬಿರಿಬ ಶಂಕುವಿನಾಕೃತಿಯ ಹಣ್ಣು. ಕಾಯಿ ತೀರ ಹಸುರಾಗಿದ್ದರೆ ಹಣ್ಣಾದಾಗ ಹಳದಿ ಯಾಗುತ್ತದೆ. ಹೊರಭಾಗದಲ್ಲಿ ಮುಳ್ಳುಗಳಂತೆ ಕಾಣಿಸಿದರೂ ಸಿಪ್ಪೆ ಬಹು ಮೃದು. ರಾಮಫಲ, ಲಕ್ಷ್ಮಣ ಫಲಗಳ ಸಮ್ಮಿಶ್ರ ರುಚಿಯಿದೆ. ಸ್ವಲ್ಪ ಸಿಹಿ ಕಡಿಮೆ ಎನ್ನಬಹುದು. ಒಳಗೆ ಕೆನೆಯಂತಹ ಬಿಳಿವರ್ಣದ ತಿರುಳಿದೆ.

ಸುಗಂಧಭರಿತವಾದ ತಿರುಳಿಗೆ ಹುಳಿಮಿಶ್ರಿತವಾದ ಸಿಹಿ ರುಚಿಯಿದೆ. ಒಂದು ಹಣ್ಣು ನಾಲ್ಕು ಕಿಲೋ ತನಕ ತೂಗುತ್ತದೆಂಬ ಮಾಹಿತಿಯಿದೆ. ಆದರೆ ಅನಿಲರ ಗಿಡದಲ್ಲಿ ಗರಿಷ್ಠ ಒಂದೂವರೆ ಕಿಲೋ ತೂಕದ ಹಣ್ಣುಗಳಾಗಿವೆ. ಹಣ್ಣು ಹದಿನೈದು ಸೆಂ.ಮೀ. ಉದ್ದ, ಐದು ಸೆಂ.ಮೀ. ಸುತ್ತಳತೆಯಿರುತ್ತದೆ.

ಹಲವು ವರ್ಷಗಳ ಕಾಲ ಬದುಕುವ ಬಿರಿಬದ ಮರ ಐವತ್ತು ಅಡಿಯವರೆಗೂ ಎತ್ತರ ಬೆಳೆಯುತ್ತದೆ. 35 ಸೆಂ.ಮೀ. ಉದ್ದದ ಎಲೆಗಳಿವೆ. ಮರದ ತುಂಬ ಹಣ್ಣುಗಳಾಗುತ್ತವೆ. ಡಿಸೆಂಬರ್ ತಿಂಗಳಲ್ಲಿ ಹೂ ಬಿಡುತ್ತದೆ. ಮಾರ್ಚ್‌ನಿಂದ ಮೇ ತಿಂಗಳು ಭಾರತದಲ್ಲಿ ಫಲ ಕೊಡುವ ಸಮಯ. ಅಪರೂಪವಾಗಿ ಎರಡು ಸಲ ಫಲ ಕೊಡುವುದುಂಟು. ಒಳಗೆ ವಿರಳವಾಗಿರುವ ಬೀಜದ ಮೂಲಕ ಗಿಡ ತಯಾರಿಸಬಹುದು.

ಸೀತಾಫಲದ ಗಿಡಕ್ಕೆ ಕೊಂಬೆ ಕಸಿಯೂ ಆಗುತ್ತದೆ. ಕಸಿ ಗಿಡದಲ್ಲಿ ಶೀಘ್ರ ಹಣ್ಣುಗಳಾಗುತ್ತವೆ. ಹಣ್ಣು ಎರಡು ದಿನಗಳಿಗಿಂತ ಹೆಚ್ಚು ದಿನ ಇಡುವಂತಿಲ್ಲ. ಇದನ್ನು ಹಾಗೆಯೇ ತಿನ್ನಬಹುದು. ಐಸ್‍ಕ್ರೀಂ, ಜ್ಯೂಸ್ ಮತ್ತಿತರ ಕೆಲವು ಸಿಹಿವಸ್ತುಗಳ ತಯಾರಿಕೆಗೂ ಸೂಕ್ತವಾಗುತ್ತದೆ. ಜ್ಯೂಸ್ ಬಲು ರುಚಿಯಾಗಿರುತ್ತದೆಂದು ಅನಿಲ್ ಹೇಳುತ್ತಾರೆ. ಬ್ರೆಜಿಲ್ ದೇಶದಲ್ಲಿ ಅದರಿಂದ ತಯಾರಿಸಿದ ವೈನ್ ತುಂಬ ಬೇಡಿಕೆ ಪಡೆದಿದೆ.

ಶೇ. 77ರಷ್ಟು ನೀರಿನಂಶ ಹೊಂದಿರುವ ಬಿರಿಬ ಪೋಷಕಾಂಶಗಳ ನಿಧಿಯೇ ಆಗಿದೆ. 80 ಕ್ಯಾಲೊರಿಗಳಿವೆ. ಸಕ್ಕರೆ, ಕಬ್ಬಿಣ, ಪ್ರೊಟೀನ್, ನಾರು, ರಂಜಕ, ನಿಯಾಸಿನ್, ಆಸ್ಕೊರ್ಬಿಕ್, ಐಸಿನ್, ಅಮೈನೋ ಆಮ್ಲಗಳು, ಮೆಥಿಯೊನೈನ್, ಥ್ರಿಯೊನೈನ್ ಇತ್ಯಾದಿಗಳಲ್ಲದೆ ಬಿ1 ಮತ್ತು ಬಿ2 ಜೀವಸತ್ವಗಳೂ ಅದರಲ್ಲಿವೆ. ಬೀಜಗಳಿಂದ ಕೀಟನಾಶಕ ತಯಾರಿಸಬಹುದು. ಹಲವು ದೈಹಿಕ ಸಮಸ್ಯೆಗಳಿಗೆ ಔಷಧವಾಗಿಯೂ ಬಿರಿಬದ ಹಣ್ಣನ್ನು ಸೇವಿಸುವ ಪದ್ಧತಿಯಿದೆ ಎನ್ನಲಾಗಿದೆ. ಹಳದಿ ವರ್ಣದ ಮರ ಕೂಡ ತುಂಬ ದೃಢ. ಪೆಟ್ಟಿಗೆಗಳು, ದೋಣಿಗಳ ತಯಾರಿಕೆಗೂ ಬಳಕೆ ಮಾಡುತ್ತಾರೆ.

ಅನಿಲ್, ಬೀಜದಿಂದ ತಯಾರಿಸಿದ ಗಿಡ ಎರಡನೆಯ ವರ್ಷದಲ್ಲಿ ಫಲ ಕೊಟ್ಟಿದೆ. ಗಿಡಕ್ಕೆ ಶೇ.50 ನೆರಳು, ಬೇಸಿಗೆ ಯಲ್ಲಿ ಬುಡಕ್ಕೆ ನೀರು ಬೇಕಾಗುತ್ತದೆ. ಅವರು ಲಕ್ಷ್ಮಣ ಫಲದ ಗಿಡಕ್ಕೆ ಇದರ ಕಸಿ ಕಟ್ಟಿ ಒಂದು ಸಾವಿರ ಗಿಡಗಳನ್ನು ಕೇರಳದ ನರ್ಸರಿಯವರಿಗೆ ಕೊಟ್ಟಿದ್ದಾರೆ. ನರ್ಸರಿಯವರು ಮಾರುವ ಬೆಲೆ ಒಂದೂವರೆ ಸಾವಿರ ರೂಪಾಯಿ.
ಮಾಹಿತಿಗೆ: anilbalanja@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT