ದೊಡ್ಡ ಉದ್ಯಮ

ತಿಂದಿದ್ದೀರಾ ಬಾಳೆದಿಂಡಿನ ಡೈಸ್?

ತಮಿಳುನಾಡಿನಲ್ಲಿ ಬಾಳೆ ದಿಂಡನ್ನು ಕನಿಷ್ಠ ಸಂಸ್ಕರಣೆ – ಮಿನಿಮಲ್ ಪ್ರೊಸೆಸಿಂಗ್ ಮಾಡಿ (ಅಂದರೆ ಚಿಕ್ಕದಾಗಿ ಹೆಚ್ಚಿ) ಮಾರಾಟ ಮಾಡುವ ಅರ್ಧ ಡಜನ್ನಿಗೂ ಹೆಚ್ಚು ದೊಡ್ಡ ಉದ್ದಿಮೆಗಳೇ ಇವೆ!

ಬಾಳೆ ದಿಂಡಿನ ಪ್ಯಾಕೆಟ್‌ಗಳೊಂದಿಗೆ ಮುತ್ತುಕುಮಾರ್‌

ಹಳ್ಳಿಗರಿಗೆ, ಅದರಲ್ಲೂ ಕೃಷಿಕರಿಗೆ, ಹಿಂದಿನಿಂದಲೂ ಬಾಳೆಯ ದಿಂಡು ಒಂದು ನಡುನಡುವೆ ಬಳಸುವ ತರಕಾರಿ. ಪಟ್ಟಣಗಳಲ್ಲೂ ಇದನ್ನು ಮಾರುವುದಿದೆ. ರಸ್ತೆ ಬದಿಯಲ್ಲಿ ತುಂಡು ಮಾಡಿ ಅಥವಾ ಸಣ್ಣಗೆ ಕೊಚ್ಚಿ ಮಾರುವ ಕ್ರಮವೂ ಕೆಲವೆಡೆ ಇದೆ. ಇದೆಲ್ಲಾ ಈಗ ಹಳತಾಯಿತು. ತಮಿಳುನಾಡಿನಲ್ಲಿ ಸಣ್ಣಗೆ ಹೆಚ್ಚಿದ ಬಾಳೆದಿಂಡು ಈಗ ಉದ್ದಿಮೆಯ ಉತ್ಪನ್ನ. ತರಕಾರಿ ಅಂಗಡಿಗಳಲ್ಲಿ ಪ್ಯಾಕೆಟುಗಳಲ್ಲಿ ಸಿಗುವ ತರಕಾರಿ. ಹೋಟೆಲುಗಳಿಗೂ ಪ್ರವೇಶಿಸಿಬಿಟ್ಟಿದೆ.

ತಮಿಳುನಾಡಿನಲ್ಲಿ ಬಾಳೆ ದಿಂಡನ್ನು ಕನಿಷ್ಠ ಸಂಸ್ಕರಣೆ – ಮಿನಿಮಲ್ ಪ್ರೊಸೆಸಿಂಗ್ ಮಾಡಿ (ಅಂದರೆ ಚಿಕ್ಕದಾಗಿ ಹೆಚ್ಚಿ) ಮಾರಾಟ ಮಾಡುವ ಅರ್ಧ ಡಜನ್ನಿಗೂ ಹೆಚ್ಚು ದೊಡ್ಡ ಉದ್ದಿಮೆಗಳೇ ಇವೆ!

ಇಂಥ ಒಂದು ಉದ್ದಿಮೆ ತೂತುಕುಡಿಯ ಗ್ರಾಮೀಣ ಪ್ರದೇಶ ದಲ್ಲಿದೆ. ಇನ್ನೊಂದು ಕೊಯಮತ್ತೂರಿನಲ್ಲಿ. ಇವು ಪ್ರತಿದಿನ ತಲಾ ಒಂದು ಟನ್ನು ಉತ್ಪನ್ನ ಮಾರುತ್ತವೆ! ತೂತುಕುಡಿಯ ಅಡಿಚ್ಚಾನೆಲ್ಲು ಎಂಬಲ್ಲಿದೆ ಶ್ರೀವೇಲ್ ಫುಡ್ಸ್ ಉದ್ದಿಮೆ. ಅಣ್ಣ ವಿ.ಮುತ್ತುಕುಮಾರ್ ಮತ್ತು ತಮ್ಮ ವಿ. ಅರುಮುಗಂ ಇದರ ಮಾಲೀಕರು. ಏಳು ವರ್ಷದಿಂದ ನಡೆಯುತ್ತಿದೆ. ಒಂದೇ ಉತ್ಪನ್ನ - ಬನಾನಾ ಸ್ಟೆಮ್ ಡೈಸಸ್ ಎಂದು ಕರೆಯುವ ಬಾಳೆದಿಂಡಿನ ಚಿಕ್ಕಚಿಕ್ಕ ಚೌಕದ ತುಂಡುಗಳು.


ಅರುಮುಗಂ ಹಿಂದೆ ದುಬೈಯಲ್ಲಿ ಎಲೆಕ್ಟ್ರೀಶಿಯನ್ ಕೆಲಸ ಮಾಡುತ್ತಿದ್ದರು. ಊರಿಗೆ ಬಂದು ಏನಾದರೂ ಸ್ವ–ಉದ್ಯೋಗ ಮಾಡಬೇಕು ಎನಿಸಿತು. ಹೀಗೆ ಮರಳಿ ಮಣ್ಣಿಗೆ ಬಂದವರಿಗೆ ಹೊಳೆದದ್ದು ಈ ಹೊಸ ವೃತ್ತಿ. ಅಣ್ಣ ಮುತ್ತುಕುಮಾರ್ ಜತೆ ಸೇರಿ ಪುಟ್ಟ ಘಟಕ ಆರಂಭಿಸಿಯೇಬಿಟ್ಟರು. ಸುತ್ತಮುತ್ತಲಿನಿಂದ ಬಾಳೆದಿಂಡು ತಂದು ರಟ್ಟೆಬಲದಲ್ಲಿ ಕತ್ತರಿಸಿ ಪ್ಯಾಕ್ ಮಾಡಿ ಮಾರಲಾರಂಭಿಸಿದರು. ಏಳು ವರ್ಷ ಹಿಂದೆ ಈ ಉದ್ದಿಮೆ ಆರಂಭಿಸಿದಾಗ ದಿನಕ್ಕೆ ಇನ್ನೂರು ಕಿಲೋ ಹೋಗುತ್ತಿತ್ತು, ಕಾಲಕ್ರಮದಲ್ಲಿ ಬೇಡಿಕೆ ಹೆಚ್ಚಿತು. ದೂರದ ಊರುಗಳಿಗೂ ಸರಬರಾಜು ಮಾಡತೊಡಗಿದರು.

ಶ್ರೀವೆಲ್ ಫುಡ್ಸ್ ಎರಡು ರೀತಿಯ ಪ್ಯಾಕಿಂಗ್ ಮಾಡುತ್ತದೆ. ಮುನ್ನೂರ ಐವತ್ತು ಗ್ರಾಮಿನ ಮನೆಬಳಕೆಯ ಪೊಟ್ಟಣ ಮತ್ತು ಹೋಟೆಲುಗಳಿಗೆ ಹತ್ತು ಕಿಲೋ ಬಲ್ಕ್ ಪ್ಯಾಕಿಂಗ್. ಮೊದಲನೆಯದಕ್ಕೆ 15 ರೂಪಾಯಿ ಬೆಲೆ. ಹತ್ತು ಕಿಲೋದ ಸಗಟು ಪ್ಯಾಕಿಗೆ 200 ರೂಪಾಯಿ. ‘ನಮಗೆ ಹೋಟೆಲು ಉದ್ಯಮಿಗಳೇ ಮುಖ್ಯ ಗ್ರಾಹಕರು. ಅವರಿಗೆ ಸಗಟಾಗಿ ಕೊಡುತ್ತೇವೆ. ಮಧುರೈನ ಆರ್ಯಾಸ್ ಹೋಟೆಲ್, ಜಾನಕಿರಾಂ, ತಿರುನೆಲ್ವೇಲಿಯ ಲಕ್ಷ್ಮೀಗಾಯತ್ರಿ, ಲೆವಿನ್ ಹೋಟೆಲ್ ಮತ್ತು 500 ಕಿ.ಮೀ ದೂರದ ಚೆನ್ನೈ ಹೋಟೆಲುಗಳಿಗೂ ನಾವು ಕಳಿಸಿಕೊಡುತ್ತೇವೆ” ಎನ್ನುತ್ತಾರೆ ಮುತ್ತುಕುಮಾರ್.

ಹೋಟೆಲುಗಳಲ್ಲಿ ಈ ಕೊಚ್ಚಿದ ಬಾಳೆ ಟ್ಯೂಬ್ ಲೈಟನ್ನು ಮುಖ್ಯವಾಗಿ ‘ಪೊರಿಯಲ್’ (ಪಲ್ಯ) ತಯಾರಿಗೆ ಬಳಸುತ್ತಾರಂತೆ. ಪ್ಯಾಕೆಟನ್ನು 2-3 ದಿನದವರೆಗೆ ಇಟ್ಟುಕೊಳ್ಳಬರುತ್ತದೆ ಎನ್ನುತ್ತಾರೆ ಅವರು. ಕಳೆದೆರಡು ವರ್ಷಗಳಿಂದ ಶ್ರೀವೇಲ್ ಫುಡ್ಸ್ ಬಾಳೆ ಕಾಂಡದಿಂದ ಕೊನೆ ಉತ್ಪನ್ನದವರೆಗಿನ ತಯಾರಿಯನ್ನು ಯಾಂತ್ರೀಕರಿಸಿದೆ.

ಈ ಕೆಲಸದಲ್ಲಿ ಇವರಿಗೆ ಕೊಯಮತ್ತೂರಿನಲ್ಲಿರುವ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರ್ ಎಂಜಿನಿಯರಿಂಗ್ (ಸಿಐಎಇ) ಸಹಾಯ ಒದಗಿಸಿದೆ. ಸಿಐಎಇ ಯಾವುದೇ ಯಂತ್ರವನ್ನು ಸ್ವತಃ ತಯಾರಿಸಿ ಮಾರಾಟಕ್ಕೆ ಒದಗಿಸುವುದಿಲ್ಲ. ಯಂತ್ರಾಭಿವೃದ್ಧಿಯಷ್ಟೇ ಅದರ ಕೆಲಸ. ಅಭಿವೃದ್ಧಿಪಡಿಸಿದ ಅಥವಾ ಮಾರ್ಪಾಡು ಮಾಡಿದ ಯಂತ್ರಗಳನ್ನು ಕೊಯಮತ್ತೂರಿನ ಬೇರೆ ವಾಣಿಜ್ಯಪರ ಫ್ಯಾಬ್ರಿಕೇಟಿಂಗ್ ಕಂಪನಿಗಳಲ್ಲಿ ಮಾಡಿಸಿಕೊಳ್ಳಬಹುದು.

‘ಬಾಳೆ ಟ್ಯೂಬ್ ಲೈಟಿನ ಕನಿಷ್ಠ ಸಂಸ್ಕರಣೆಗೆ ನಾಲ್ಕೈದು ಯಂತ್ರಗಳು ಬೇಕಾಗುತ್ತವೆ’ ಎಂದು ಸಿಐಎಇ ವಿಜ್ಞಾನಿ, ಕನ್ನಡಿಗ ರವೀಂದ್ರ ನಾಯ್ಕ್ ತಿಳಿಸುತ್ತಾರೆ. ‘ಬಾಳೆಯ ಹೊರ ಸಿಪ್ಪೆ ಪ್ರತ್ಯೇಕಿಸಲು, ಒಳಗಿನ ದಿಂಡನ್ನು ಅಡ್ಡಡ್ಡಲಾಗಿ ಕತ್ತರಿಸಲು, ಅದನ್ನೇ ಚಿಕ್ಕ ಚೂರುಗಳಾಗಿಸಲು, ಹೀಗೆ ಮಾಡುವಾಗ ಬರುವ ನಾರನ್ನು ಪ್ರತ್ಯೇಕಿಸಲು ಮತ್ತು ಕೊಚ್ಚಿದ ತುಂಡುಗಳಲ್ಲಿ ಉಳಿದಿರುವ ಹೆಚ್ಚಿನ ತೇವಾಂಶ ಹೊರತೆಗೆಯಲು ಯಂತ್ರ ಬಳಸಬಹುದು’ ಎಂದು ಹೇಳುತ್ತಾರೆ.

ಶ್ರೀವೇಲ್ ಫುಡ್ಸ್ ತನಗೆ ಬೇಕಾದ ಕಚ್ಚಾವಸ್ತುವನ್ನು ಸುತ್ತಲಿನ ರೈತರಿಂದ ಪಡೆದುಕೊಳ್ಳುತ್ತದೆ. ಒಂದು ಬಾಳೆ ಕಾಂಡಕ್ಕೆ ಐದು ರೂಪಾಯಿ ಪಾವತಿಸುತ್ತಾರೆ. ಈ ಉದ್ದಿಮೆಯಲ್ಲಿ 15 ಜನ ಸಿಬ್ಬಂದಿ ದುಡಿಯುತ್ತಿದ್ದಾರೆ. ತೂತುಕುಡಿಯ ಶ್ರೀವೇಲ್ ಫುಡ್ಸ್ ಮುಖ್ಯವಾಗಿ ಹೋಟೆಲುಗಳಿಗೆ ಕೊಚ್ಚಿದ ಬಾಳೆ ದಿಂಡು ಪೂರೈಸುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ ಕೊಯಮತ್ತೂರಿನ 6 ವರ್ಷ ಹಳೆಯ ವಿ.ಎಸ್.ನ್ಯಾಚುರಲ್ ಫುಡ್ ಗೃಹ ಬಳಕೆ ಮತ್ತು ಸಗಟು ಬಳಕೆ ಎರಡೂ ಬಗೆಯ ಸರಿಸಮ ಪ್ರಮಾಣದ ಗ್ರಾಹಕರನ್ನು ಹೊಂದಿದೆ. ಈ ಕಂಪನಿಯಲ್ಲಿ ಎಂಟು ಮಂದಿ ಸಿಬ್ಬಂದಿ ಇದ್ದಾರೆ. ಕಂಪನಿ ತನ್ನ ಉತ್ಪನ್ನವನ್ನು ಇಂಗ್ಲಿಷಿನಲ್ಲಿ ‘ಇನ್‍ಸ್ಟಂಟ್ ಫ್ರೆಶ್ ಪ್ಲಾಂಟೈನ್ ತುಂಡು’ ಎಂದು ಕರೆದಿದೆ.

ವಿ.ಎಸ್.ನ್ಯಾಚುರಲ್ ಫುಡ್ ಮಾಲೀಕ ವಿ.ಎಸ್. ಸುಂದರಂ ಅವರಿಗೆ ಅಲ್ಪಸ್ವಲ್ಪ ಕನ್ನಡ ಬರುತ್ತದೆ. ಹೋಟೆಲು, ಹಾಸ್ಟೆಲುಗಳಿಗೂ ಇವರ ಉತ್ಪನ್ನ ರವಾನೆ ಆಗುತ್ತದೆ. ಇವರು ಕೊಯಮತ್ತೂರು ನಗರದ ಪರಿಧಿಯಲ್ಲಷ್ಟೇ ಮಾರುಕಟ್ಟೆ ಮಾಡುತ್ತಿದ್ದಾರೆ. ನಗರದ ಬಹುತೇಕ ತರಕಾರಿ ಅಂಗಡಿಗಳಲ್ಲೂ ಇವರ ಕೊಚ್ಚಿದ ಬಾಳೆ ಟ್ಯೂಬ್ ಲೈಟ್ ಲಭ್ಯ.

ಸುಮಾರು ನೂರರಷ್ಟು ಅಂಗಡಿಗಳಿಗೆ ಇವರು ಉತ್ಪನ್ನ ಸರಬರಾಜು ಮಾಡುತ್ತಾರೆ. ದಿನಂಪ್ರತಿ 300 ಗ್ರಾಮಿನ ಸುಮಾರು ಸಾವಿರ ಪ್ಯಾಕೆಟುಗಳು ಮಾರಾಟವಾಗುತ್ತವೆ. 15 ಕಿಲೋ ತೂಕದ ಪ್ಯಾಕೆಟ್‌ಗಳನ್ನು ಮಾಡುತ್ತಾರೆ. ಇಂತಹ 500 ಪ್ಯಾಕೆಟುಗಳು ಬಿಕರಿ ಆಗುತ್ತವೆ. ಕಿಲೋಗೆ ಇಪ್ಪತ್ತು ರೂಪಾಯಿ ಬೆಲೆ.

‘ಪೊರಿಯಲ್ ಮತ್ತು ಕೂಟುಗಳಿಗೆ ನಮ್ಮ ಕೊಚ್ಚಿದ ಬಾಳೆ ದಿಂಡನ್ನು ಬಳಸುತ್ತಾರೆ. ಕಿಡ್ನಿ ಕಲ್ಲು ಇರುವವರಿಗೆ ಇದು ಒಳ್ಳೆಯ ಆಹಾರ ಎಂಬ ವಿಶ್ವಾಸ ಎಲ್ಲರಲ್ಲಿದೆ’ ಎನ್ನುತ್ತಾರೆ ಸುಂದರಂ.

ಕೊಚ್ಚಿದ ಬಾಳೆದಿಂಡು ಉದ್ದಿಮೆಗೆ ಒಟ್ಟು ಐದು ಯಂತ್ರ ಬೇಕಾಗುತ್ತದೆ. ಇವುಗಳ ಈಗಿನ ಅಂದಾಜು ಬೆಲೆ ₹ 4.50 ಲಕ್ಷ. ಸುಂದರಂ ನಾಗರಕೋಯಿಲ್, ತಿರುನೆಲ್ವೇಲಿ, ತಿರುಚೆಂದೂರು, ಚೆನ್ನೈ ಮತ್ತು ಈರೋಡಿನ ಒಟ್ಟು ಐದು ಉದ್ಯಮಿಗಳಿಗೆ ಇಂಥ ಯಂತ್ರದ ಸೆಟ್ ಮಾಡಿಸಿಕೊಟ್ಟಿದ್ದಾರಂತೆ. ಇವರೆಲ್ಲಾ ಹೀಗೆ ಯಂತ್ರದ ಸೆಟ್ ಕೊಂಡಿದ್ದಾರೆಂದ ಮೇಲೆ ಅಲ್ಲೂ ಗಣನೀಯ ಪ್ರಮಾಣದ ಹೆಚ್ಚಿದ ಬಾಳೆ ದಂಡು ಮಾರಾಟ ಆಗುತ್ತಿರಬೇಕು.

ತರಕಾರಿಯ ಅಭಾವ, ಬಾಳೆ ದಿಂಡು–ಮೂತಿಗಳಲ್ಲಿರುವ ನಾರು, ಕಿಡ್ನಿ ಕಲ್ಲು ಕರಗಿಸುವ ಗುಣ, ಪೀಡೆನಾಶಕಗಳ ಬಳಕೆಯಿಂದ ಉಳಿದ ತರಕಾರಿಗಳಿಗಿಂತ ಬಾಳೆದಿಂಡಿನ ಜನಪ್ರಿಯತೆ ಹೆಚ್ಚಲು ಕಾರಣ. ಔಷಧಗುಣವುಳ್ಳ ಸ್ಥಳೀಯ ಆಹಾರ ಮೂಲವನ್ನು ಬಳಸುವುದು ನಿಜಕ್ಕೂ ಸ್ವಾಗತಾರ್ಹ.

ಆದರೆ ಒಂದೇ ಒಂದು ಎಚ್ಚರ ಬೇಕು. ವಾಣಿಜ್ಯಮಟ್ಟದ ಬಾಳೆ ಕೃಷಿಯಲ್ಲಿ ಕಾಂಡಕೊರಕ, ಗಡ್ಡೆಕೊರಕಗಳ ನಿಯಂತ್ರಣಕ್ಕೆ ರಸ ಕೀಟನಾಶಿನಿ ಬಳಸಿರುವ ಕಚ್ಚಾವಸ್ತುವನ್ನು ಬಳಸಲೇಬಾರದು. ಅದು ನಿಧಾನವಿಷ ತಿಂದಂತಾಗಬಹುದು.
ಸಂಪರ್ಕಕ್ಕೆ: ವಿ. ಮುತ್ತುಕುಮಾರ್ – 99442 17494
ವಿ.ಎಸ್.ಸುಂದರಂ - 96295 50097.

Comments
ಈ ವಿಭಾಗದಿಂದ ಇನ್ನಷ್ಟು
ಸಿರಿಧಾನ್ಯಗಳ ಐಸಿರಿ

ಕೃಷಿ
ಸಿರಿಧಾನ್ಯಗಳ ಐಸಿರಿ

16 Jan, 2018
ಗಂಟೆಗೆ 60 ಮರಗಳ ಅಡಿಕೆ ಕೊಯ್ಲು

ಕೃಷಿ
ಗಂಟೆಗೆ 60 ಮರಗಳ ಅಡಿಕೆ ಕೊಯ್ಲು

16 Jan, 2018
ಬಿಸಿಲ ನಾಡಿನಲ್ಲೂ ಜೇನಿನ ಹೊಳೆ

ಕೃಷಿ
ಬಿಸಿಲ ನಾಡಿನಲ್ಲೂ ಜೇನಿನ ಹೊಳೆ

9 Jan, 2018
ಮರೆಯಾದ ಸುಗ್ಗಿ ಕಣಗಳು

ಕೃಷಿ
ಮರೆಯಾದ ಸುಗ್ಗಿ ಕಣಗಳು

9 Jan, 2018
ತಾಜಾ ಶರಬತ್ತಿನ ಹಣ್ಣು

ಕೃಷಿ
ತಾಜಾ ಶರಬತ್ತಿನ ಹಣ್ಣು

9 Jan, 2018