ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆರೆ... ಸಹ್ಯಾದ್ರಿಯ ಸುಂದರಿ!

Last Updated 25 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಒಂದು ಕ್ಷಣ ನನ್ನ ಕಣ್ಣುಗಳು ಕಿರಿದಾದವು. ಆ ಪಕ್ಷಿ ಮಾಮೂಲಿಯದು ಅಂದುಕೊಂಡಿದ್ದವನಿಗೆ, ಅಲ್ಲ, ಅದು ಬಲು ವಿಶೇಷ ಹಕ್ಕಿ ಅನ್ನಿಸಿತು. ಪ್ರಕೃತಿಯ ಸಾಂಗತ್ಯದಲ್ಲಿ ಮೈಮರೆಯಲು ಹಾಗೇ ಸಾಗಿದ್ದಾಗ ದಾರಿ ಪಕ್ಕದ ಬೇಲಿಯ ಮೇಲೆ ಪಟ್ಟಾಂಗ ನಡೆಸಿದ್ದ ಈ ಬಾನಾಡಿಗಳತ್ತ ಕಣ್ಣು ಛಕ್ಕನೆ ಹೊರಳಿತು.

ಗಾಢ ಕಂದು ಬಣ್ಣ, ಬೀಸಣಿಗೆಯಂಥ ಬಾಲ, ಗುಬ್ಬಿಗಿಂತ ಸ್ವಲ್ಪ ಹೆಚ್ಚೆನಿಸುವ ಗಾತ್ರ ಇರುವ ಈ ಪಕ್ಷಿಗಳ ಗುಂಪಿನ ಕಡೆಗೆ ದೃಷ್ಟಿ ಸ್ಥಿರವಾಯಿತು. ಆದರೆ ನನ್ನ ತಿಳಿವಳಿಕೆ ಅಥವಾ ಜ್ಞಾನಕ್ಕೆ ಮೀರಿದ ವಿಶಿಷ್ಟ ಪಕ್ಷಿಗಳವು ಎಂದು ಗೊತ್ತಾದದ್ದು ನಂತರ ಮಾಹಿತಿಗಾಗಿ ತಡಕಾಡಿದಾಗಲೇ.

ಅಯ್ಯೋ, ಕ್ಯಾಮೆರಾ ತಂದಿಲ್ಲ ಎಂಬುದು ನೆನಪಾಗಿ ಸ್ಕೂಟರ್‌ನಲ್ಲಿ ಮನೆ ಕಡೆಗೆ ರೊಂಯ್ಯನೆ ಹೊರಟೆ. ಕ್ಯಾಮೆರಾದೊಂದಿಗೆ ವಾಪಸ್ ಬರುವಾಗ ದಾರಿಯುದ್ದಕ್ಕೂ ಪಕ್ಷಿಯ ಬಗೆಗೆ ಸಿಕ್ಕ ಮಾಹಿತಿಯೇ ಮನದಲ್ಲಿ ಕದಲತೊಡಗಿದವು.

ಧಾರವಾಡ ಜಿಲ್ಲೆಯ ಕಲಘಟಗಿ ಹೊರವಲಯದ ಬಿಲವನಗಟ್ಟಿ ಗ್ರಾಮದ ಬಳಿ ಕಂಡ ಆ ಪಕ್ಷಿಯ ಹೆಸರು ಜೊಂಡು ಉಲಿಯಕ್ಕಿ. (ಬ್ರಾಡ್ ಟೇಲ್ಡ್ ಗ್ರಾಸ್ ಬರ್ಡ್‌–ವೈಜ್ಞಾನಿಕ ಹೆಸರು: ಸ್ಕೋಯನಿಕೊಲಾ ಪ್ಲೆಟಿರಸ್). ಏಷ್ಯಾ ಖಂಡದಲ್ಲಿ ಅಪಾಯದಂಚಿನಲ್ಲಿ ಇರುವ ಹಾಗೂ ಅಪರೂಪದಲ್ಲಿ ಅಪರೂಪ ಎನಿಸುವಂಥ ಪಕ್ಷಿಯದು. ಹಲವು ದಶಕಗಳ ಹಿಂದೆಯೇ ಈ ಪುಟ್ಟ ಪಕ್ಷಿ ದೇಶದಿಂದ ವಲಸೆ ಹೋಗಿದೆ.

ಆದರೀಗ, ಮತ್ತೆ ಮಲೆನಾಡು ಪ್ರದೇಶಗಳತ್ತ ಹಿಂತಿರುಗಿದೆ. ಅಲ್ಲೂ ಇದಕ್ಕೆ ವಾಸ ಸಾಧ್ಯವಾಗಿಲ್ಲ. ಯಾಕೆ ಹೀಗೆ ಅಂತ ಪ್ರಶ್ನೆ ಬರುವುದು ಸಹಜ. ಅದಕ್ಕೆ ಕಾರಣ ಜೀವವೈವಿಧ್ಯ ತಾಣಗಳಲ್ಲಿ ಬದಲಾದ ವಾತಾವರಣ. ಇವುಗಳ ಆವಾಸ ಸ್ಥಾನಗಳ ಮೇಲೆ ನಗರ ಜೀವನದ ಒತ್ತಡ ಬಿದ್ದಿದೆ. ಯಾವ ಕೈಗಾರಿಕೆಗಳನ್ನು ಅಭಿವೃದ್ಧಿಯ ಕಿರೀಟ ಅನ್ನುತ್ತೇವೋ ಅವು ಈ ಪಕ್ಷಿಗಳ ಕಲರವ ನಿಲ್ಲಿಸಿವೆ ಎನ್ನುತ್ತಾರೆ ಪಕ್ಷಿ ತಜ್ಞರು. ‘ಇದೊಂದು ಅಪರೂಪದ ಹಾಗೂ ಅಳವಿನಂಚಿನಲ್ಲಿರುವ ಪಕ್ಷಿ. ಇದರ ಬದುಕಿಗೆ ಇಲ್ಲಿನ ಪರಿಸರ ಅನುಕೂಲಕರವಾಗಿಲ್ಲ’ ಎಂದು ವಿಷಾದಿಸುತ್ತಾರೆ ಹುಬ್ಬಳ್ಳಿಯ ಪಕ್ಷಿ ವೀಕ್ಷಕ ಪ್ರಕಾಶ ತಾಂಬಳೆ.

ಈ ಬಗ್ಗೆ ಮತ್ತೂ ವಿವರ ಸಂಗ್ರಹಿಸುವಾಗ ತಿಳಿದಿದ್ದೇನೆಂದರೆ, ಬೆಂಗಳೂರಿನ ‘ಅಶೋಕ ಟ್ರಸ್ಟ್‌ ಫಾರ್‌ ರಿಸರ್ಚ್‌ ಇನ್‌ ಇಕಾಲಜಿ ಅಂಡ್ ಎನ್ವಿರಾನ್‌ಮೆಂಟ್‌’ ಸಂಸ್ಥೆಯು 2003ರಲ್ಲಿ ಕೇಂದ್ರ ಪರಿಸರ ಸಚಿವಾಲಯಕ್ಕೆ ಇಂಥ ಪಕ್ಷಿಗಳನ್ನು ಉಳಿಸುವ ಪ್ರಯತ್ನವಾಗಬೇಕು ಎಂದು ಮನವಿ ಕೂಡ ಸಲ್ಲಿಸಿತ್ತು.

ಈಗಾಗಲೇ ಹೇಳಿದ ಹಾಗೆ ಅಳಿವಿನಂಚಿನಲ್ಲಿರುವ ಈ ಹಕ್ಕಿ ಹೆಚ್ಚಾಗಿ ಕಾಣಿಸುವುದು ಪಶ್ಚಿಮಘಟ್ಟದಲ್ಲಿ ಮಾತ್ರ. ಪ್ರಮುಖವಾಗಿ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಮಳೆ ಹೆಚ್ಚು ಬೀಳುವ ಪ್ರದೇಶಗಳೇ ಇವುಗಳ ನೆಚ್ಚಿನ ತಾಣ. ಆದರೆ ಅಂಥಲ್ಲಿಯೂ ಈಗ ಕಾಣಿಸುವುದು ಅಪರೂಪವಾಗಿದೆ ಎನ್ನುತ್ತಾರೆ ಪಕ್ಷಿತಜ್ಞರು.

ಇವುಗಳಿಗೆ ಎತ್ತರದ ಹುಲ್ಲುಗಾವಲು, ಯಥೇಚ್ಛವಾಗಿರುವ ಬಿದಿರು, ಪೊದೆಗಳಿರುವ ಪ್ರದೇಶ ಅಚ್ಚುಮೆಚ್ಚು. ‘ಲೋಕಸ್ಟೆಲಿಡಿ’ ಪ್ರಭೇದಕ್ಕೆ ಸೇರಿರುವ ಇವುಗಳ ಸಂಖ್ಯೆ ಸ್ಥಳೀಯವಾಗಿ ಕ್ಷೀಣವಾಗಿವೆ. ಶ್ರೀಲಂಕಾಕ್ಕೆ ವಲಸೆ ಹೋಗಿವೆ. ಆದರೆ ಅಲ್ಲಿಯೂ ಹೊಂದಿಕೊಳ್ಳಲು ಕಷ್ಟವಾಗಿದೆ ಎನ್ನುತ್ತಾರೆ ಸಂಶೋಧಕರು.

ಮಾರ್ಚ್‌ನಿಂದ ಮೇ ತನಕ ಇದರ ಸಂತಾನೋತ್ಪತ್ತಿ ಸಮಯ. ಆದರೆ ಜುಲೈ, ಸೆಪ್ಟೆಂಬರ್‌ನಲ್ಲಿ ಮಾತ್ರ ಹೆಚ್ಚು ಕಾಣುತ್ತದೆ. ಈ ಹಕ್ಕಿಯ ಮೊಟ್ಟೆಯ ಮೇಲೆ ಕಂದು ಬಣ್ಣದ ಮಚ್ಚೆಗಳು ಕಾಣುತ್ತವೆ. ಇದರ ಬಾಲ ಹಾಗೂ ಮೈ ಗರಿಗಳ ಅಂಚು ಬಿಳಿ ಬಣ್ಣ ಹೊಂದಿರುತ್ತದೆ. ಒಳಗಿನ ಗರಿಯು ಗಾಢವಾದ ಬೂದು ಬಣ್ಣ ಹೊಂದಿರುತ್ತದೆ. ಇದರ ಕೊಕ್ಕು ಗಟ್ಟಿಯಾಗಿದ್ದು, ಏಕದಳ ಧಾನ್ಯ, ಹುಳುಗಳನ್ನು ತಿನ್ನಲು ಸಹಕಾರಿಯಾಗಿದೆ.

ಅಂದು ಆ ಬಾನಾಡಿಗಳು ಚಿಂವ್ ಚಿಂವ್ ಎಂಬ ಸದ್ದು ಹೊರಡಿಸುತ್ತಾ ಬೆಳಗಿನ ಚಿನ್ನಾಟದಲ್ಲಿ ತೊಡಗಿದ್ದವು. ಆಗೊಮ್ಮೆ, ಈಗೊಮ್ಮೆ ಸಂಗಾತಿಗಾಗಿ ಕೂಗು ಹಾಕುತ್ತಿರುವಂತೆಯೂ ತೋರಿತು. ಆದರೆ ತನ್ನಂತೆಯೇ ಅಳಿವಿನ ಹಾದಿಯಲ್ಲಿರುವ ಪೇಂಟೆಡ್ ಬುಷ್‌ ಕ್ವೇಲ್, ಮಲಬಾರ್ ಗ್ರೇ ಹಾರ್ನ್ ಬಿಲ್‌, ವಯನಾಡ್ ಲಾಫಿಂಗ್ ಥ್ರಶ್, ನೀಲಗಿರಿ ಪಿಟ್‌ಗಳ ಉಳಿವಿಗಾಗಿ ಇವುಗಳು ಧ್ವನಿ ಎತ್ತಿದಂತೆ ಭಾಸವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT