ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಪುಟ್ಟಣ್ಣಯ್ಯ ಆದೇಶದಂತೆ ಹಣ ಬಳಕೆ

Last Updated 26 ಡಿಸೆಂಬರ್ 2017, 5:42 IST
ಅಕ್ಷರ ಗಾತ್ರ

ಮಂಡ್ಯ: ‘ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಅವರ ಆದೇಶದ ಮೇರೆಗೆ ಪಾಂಡವಪುರ ತಾಲ್ಲೂಕಿನ ಚಿನಕುರಳಿ, ಹೊನಗಾನಹಳ್ಳಿ, ಗುಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಆರು ಪಿಡಿಒಗಳು ಹಣ ಬಳಸಿದ್ದಾರೆ. ಪಿಡಿಒಗಳು ಯಾವುದೇ ತಪ್ಪು ಮಾಡಿಲ್ಲ’ ಎಂದು ಸಂಸದ ಸಿ.ಎಸ್‌.ಪುಟ್ಟರಾಜು ಹೇಳಿದರು.

‘2009–10ರಿಂದ 2015–16ರವರೆಗೆ ಕಾರ್ಯ ನಿರ್ವಹಿಸಿದ ಪಿಡಿಒ, ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ನಿಯಮಬಾಹಿರವಾಗಿ ಸಂಗ್ರಹಿಸಿದ ತೆರಿಗೆ ಹಾಗೂ ಇತರ ಶುಲ್ಕವನ್ನು ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಜಿಲ್ಲಾ ಪಂಚಾಯಿತಿ ಲೆಕ್ಕಪತ್ರ ವಿಭಾಗ ವಿಶೇಷ ಪರಿಶೋಧನೆ ನಡೆಸಿ ವರದಿ ನೀಡಿದೆ. ಆದರೆ ವಸೂಲಾದ ಎಲ್ಲಾ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗಿದೆ. ಹೀಗಾಗಿ ಲೆಕ್ಕ ಪರಿಶೋಧನೆ ವರದಿಯನ್ನು ಕೈಬಿಟ್ಟು ಪಿಡಿಒಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಪುಟ್ಟಣ್ಣಯ್ಯ ನ.25ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ’ ಎಂದು ಪುಟ್ಟರಾಜು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಅವರು ಪುಟ್ಟಣ್ಣಯ್ಯ ಬರೆದಿರುವ ಪತ್ರ ಪ್ರದರ್ಶಿಸಿದರು.

‘ಹಣ ದುರುಪಯೋಗವಾಗಿರುವ ಆರೋಪದ ಮೇಲೆ ಪಿಡಿಒ, ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಬಿ.ಶರತ್‌ ಪಾಂಡವಪುರ ಇಒಗೆ ಸೂಚನೆ ನೀಡಿದ್ದಾರೆ. ತಪ್ಪು ಮಾಡಿರುವ ಪಿಡಿಒ ಹಾಗೂ ಇತರ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನನ್ನದೇನೂ ಅಭ್ಯಂತರವಿಲ್ಲ. ಆದರೆ ಪಿಡಿಒಗಳು ಶಾಸಕರ ಸೂಚನೆಯ ಮೇರೆಗೆ ಹಣ ಬಳಸಿದ್ದಾರೆ. ಹೀಗಾಗಿ ಅವರು ಯಾವುದೇ ತಪ್ಪು ಮಾಡಿಲ್ಲ’ ಎಂದು ಹೇಳಿದರು.

‘ಈ ಗ್ರಾಮ ಪಂಚಾಯಿತಿಗಳ ಸ್ವಂತ ಸಂಪನ್ಮೂಲ ಕ್ರೂಡೀಕರಣ ನಿಧಿ 2, 13 ಮತ್ತು 14ನೇ ಹಣಕಾಸು ಯೋಜನೆ ಅಡಿ ಕೇಂದ್ರ ಸರ್ಕಾರ ನೀಡಿರುವ ಅನುದಾನವನ್ನು ಅನ್ಯಕಾರ್ಯಗಳಿಗೆ ಬಳಸಿದ್ದಾರೆ ಎಂದು ಪಿಡಿಒಗಳ ವಿರುದ್ಧ ಆರೋಪವಿದೆ. ಆದರೆ ಶಾಸಕ ಪುಟ್ಟಣ್ಣಯ್ಯ ಅವರು ಈ ಅನುದಾನವನ್ನು ಬೇಬಿ ಬೆಟ್ಟದ ಭಾರಿ ದನಗಳ ಜಾತ್ರೆಗೆ ಮೂಲ ಸೌಲಭ್ಯ ಒದಗಿಸುವ ಉದ್ದೇಶಕ್ಕೆ ಬಿಡುಗಡೆ ಮಾಡುವಂತೆ ಆದೇಶ ನೀಡಿದ್ದಾರೆ. ಈ ಹಣವನ್ನು ಮೂಲ ಸೌಲಭ್ಯಕ್ಕೆ ಬಳಕೆ ಮಾಡಿಕೊಳ್ಳಲು ಅವಕಾಶ ಇರುವುದರಿಂದ ಪಿಡಿಒಗಳು ಹಣ ನೀಡಿದ್ದಾರೆ. ಪಿಡಿಒಗಳು ಈ ಹಣವನ್ನು ವೈಯಕ್ತಿಕವಾಗಿ ಬಳಸಿಲ್ಲ’ ಎಂದು ಹೇಳಿದರು.

‘ಈ ಮೂರು ಗ್ರಾಮ ಪಂಚಾಯಿತಿಗಳಲ್ಲದೆ ಡಿಂಕಾ, ಬನ್ನಂಗಾಡಿ, ನಾರಾಯಣಪುರ ಗ್ರಾಮಗಳ ಮೂಲ ಸೌಲಭ್ಯಕ್ಕೂ ಹಣ ಬಳಸಲಾಗಿದೆ. ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಣ ಬಳಕೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಡಿ ಗ್ರಾಮ ಪಂಚಾಯಿತಿಗಳು ಕ್ರಮ ಕೈಗೊಂಡಿವೆ. ಇದನ್ನು ತಪ್ಪು ಎಂದು ಪರಿಗಣಿಸುವುದು ಸರಿಯಲ್ಲ. ಗ್ರಾಮ ಪಂಚಾಯಿತಿ ಹಣದಲ್ಲಿ ಒಂದು ರೂಪಾಯಿಯೂ ದುರುಪಯೋಗ ಆಗಿಲ್ಲ’ ಎಂದು ಹೇಳಿದರು.

‘ಆರ್‌.ಟಿ.ಐ ಕಾರ್ಯಕರ್ತ ಭಾನುವಾರ ಬಿಡುಗಡೆ ಮಾಡಿರುವ ದಾಖಲೆಯಲ್ಲಿ ಈ ಮೂರು ಗ್ರಾಮ ಪಂಚಾಯಿತಿಯಲ್ಲಿ ₹ 3.30 ಕೋಟಿ ಹಣ ದುರುಪಯೋಗ ಆಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದು ಶುದ್ಧ ಸುಳ್ಳು. ಯಾರದೋ ಪ್ರಭಾವಕ್ಕೆ ಒಳಗಾಗಿ ತಪ್ಪು ದಾಖಲೆ ನೀಡಿದ್ದಾರೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಂ.ಬೀರಪ್ಪ, ಜೆಡಿಎಸ್‌ ಕಾನೂನು ಘಟಕದ ಅಧ್ಯಕ್ಷ ಬಸವರಾಜು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕ್‌ ಹಾಜರಿದ್ದರು.

ಆರ್‌ಟಿಐ ಕಾರ್ಯಕರ್ತನ ವಿರುದ್ಧ ಆಕ್ರೋಶ

‘ಕಾಂಗ್ರೆಸ್‌ ಸರ್ಕಾರದ ಅಣತಿಯಂತೆ ಕೆಲಸ ಮಾಡುತ್ತಿರುವ ಆರ್‌.ಟಿ.ಐ ಕಾರ್ಯಕರ್ತ ಕೆ.ಆರ್‌.ರವೀಂದ್ರ ಖೊಟ್ಟಿ ದಾಖಲೆಗಳ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ’ ಎಂದು ಸಿ.ಎಸ್‌.ಪುಟ್ಟರಾಜು ಆಕ್ರೋಶ ವ್ಯಕ್ತಪಡಿಸಿದರು.

‘ರಾಜಕಾರಣಿಗಳ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವ ರವೀಂದ್ರ ಅಕ್ರಮವಾಗಿ ಅಪಾರ ಹಣ ಗಳಿಸಿದ್ದಾರೆ. ಬೃಹತ್‌ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಲೇವಾದೇವಿ ವ್ಯವಹಾರ ಮಾಡುತ್ತಿರುವ ಇವರು ಅತ್ಯಧಿಕ ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದಾರೆ. ಸಾಲ ನೀಡುವ ಬಗ್ಗೆ ಇವರು ಮುಂದೆ ರಶೀದಿ ನೀಡಬೇಕು. ಇವರ ವಿರುದ್ಧ ಹೋರಾಟ ರೂಪಿಸಲಾಗುವುದು’ ಎಂದು ಆರೋಪಿಸಿದರು.

ಸಾವಿರ ಕೋಟಿ ಒಡೆಯ

‘ನಾನು ಯಾವುದೇ ಲೇವಾದೇವಿ ವ್ಯವಹಾರ ಮಾಡುತ್ತಿಲ್ಲ. ಹೋಟೆಲ್‌ ವಹಿವಾಟು ನಡೆಸುತ್ತಿದ್ದ ನಮ್ಮ ತಂದೆಯ ವ್ಯವಹಾರದ ಮೇಲೆ 1965ರಿಂದ ಮೂರು ಬಾರಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಮ್ಮ ಕುಟುಂಬ ಹಿಂದಿನಿಂದಲೂ ನ್ಯಾಯಯುತವಾಗಿ ಆದಾಯ ತೆರಿಗೆ ಪಾವತಿ ಮಾಡುತ್ತಿದೆ. ಲಾರಿ ಡ್ರೈವರ್‌ ಆಗಿದ್ದ ಪುಟ್ಟರಾಜು ಅವರು ಈಗ ಸಾವಿರ ಕೋಟಿಯ ಒಡೆಯ. ಅವರಿಗೆ ಇಷ್ಟೊಂದು ಹಣ ಎಲ್ಲಿಂದ ಬಂತು ಎಂದು ತನಿಖೆ ನಡೆಸಬೇಕು. ತಮ್ಮ ಅಕ್ರಮ ಆಸ್ತಿಗಳನ್ನು ಕಾಪಾಡಿಕೊಳ್ಳಲು ಅವರು ಈಗ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಕೆ.ಆರ್‌.ರವೀಂದ್ರ ತಿರುಗೇಟು ನೀಡಿದರು.

ಇಒಗಳ ವಿರುದ್ಧವೂ ಕ್ರಮ: ಸಿಇಒ

‘ಈ ಹಣ ದುರುಪಯೋಗ ಪ್ರಕರಣದಲ್ಲಿ ಸರಣಿ ತಪ್ಪುಗಳಾಗಿವೆ. ಕೇಂದ್ರ ಸರ್ಕಾರದ ಹಣವನ್ನು ಅನ್ಯಕಾರ್ಯಗಳಿಗೆ ನೀಡುವಂತೆ ಅದೇಶ ನೀಡುವ ಅಧಿಕಾರ ಶಾಸಕರಿಗೆ ಇಲ್ಲ. ಶಾಸಕರು ಪಿಡಿಒಗಳ ಮೇಲೆ ಒತ್ತಡ ತಂದು ಹಣವನ್ನು ಅನ್ಯಕಾರ್ಯಕ್ಕೆ ಬಳಸಿದ್ದಾರೆ. ಆದರೆ ಪಂಚಾಯತ್‌ ರಾಜ್‌ ಸಮಿತಿ ಸಭೆಯಲ್ಲಿ ಹಣ ದುರುಪಯೋಗವಾಗಿರುವ ಬಗ್ಗೆ ಶಾಸಕರೇ ಆಕ್ಷೇಪಣೆ ಸಲ್ಲಿಸಿದ್ದಾರೆ. ಈಗ ಪಿಡಿಒಗಳ ಮೇಲೆ ಕ್ರಮ ಕೈಗೊಳ್ಳಬೇಡಿ ಎಂದು ಪತ್ರ ಬರೆದಿದ್ದಾರೆ. ಕಾನೂನು ಕ್ರಮವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಚೆಕ್‌ ನೀಡಿರುವ ತಾಲ್ಲೂಕು ಪಂಚಾಯಿತಿ ಇಒಗಳ ವಿರುದ್ಧವೂ ಕ್ರಮ ಜರುಗಿಸಲಾಗುವುದು. ಆರು ಮಂದಿ ಪಿಡಿಒ, ಈ ಅವಧಿಯಲ್ಲಿ ಕಾರ್ಯ ನಿರ್ವಹಿಸಿದ ಇಒಗಳು, ಅಧ್ಯಕ್ಷರು, ಕಾರ್ಯದರ್ಶಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಬಿ.ಶರತ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT