ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ

Last Updated 26 ಡಿಸೆಂಬರ್ 2017, 6:25 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರದಲ್ಲಿ ಕ್ರಿಸ್‌ಮಸ್‌ಅನ್ನು ಸಂಭ್ರಮ–ಸಡಗರದಿಂದ ಸೋಮವಾರ ಆಚರಿಸಲಾಯಿತು. ಒಂದೂವರೆ ಶತಮಾನದ ಇತಿಹಾಸ ಹೊಂದಿರುವ ನಗರದ ಎರಡು ಚರ್ಚ್‌ಗಳಲ್ಲಿ ಬೆಳಿಗ್ಗೆ 9.30ಕ್ಕೆ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಕ್ರಿಶ್ಚಿಯನ್ನರು ಪಾಲ್ಗೊಂಡು, ಶಾಂತಿ–ನೆಮ್ಮದಿಗಾಗಿ ತಮ್ಮ ಆರಾಧ್ಯ ದೈವನಲ್ಲಿ ಪ್ರಾರ್ಥಿಸಿದರು. ನಂತರ ಏಸು ಕುರಿತ ಭಕ್ತಿಗೀತೆಗಳು ಅನುರಣಿಸಿದವು.

ನಗರದ ಗಾಂಧಿವೃತ್ತದ ಬಳಿಯ ಸಂತ ಅನ್ನಮ್ಮ ಚರ್ಚ್‌ನಲ್ಲಿ ಫಾದರ್‌ ಜೆರಾಲ್ಡ್‌ ಡಿಸೋಜಾ, ಕೇಂದ್ರ ಬಸ್ ನಿಲ್ದಾಣದ ಬಳಿಯಿರುವ ಸಿಎಸ್ಐ ಚರ್ಚ್‌ನಲ್ಲಿ ರೆವರೆಂಡ್ ಬಾಲರಾಜ್ ಸುಚಿತ್‌ಕುಮಾರ್‌ ಕ್ರಿಸ್‌ಮಸ್‌ ಸಂದೇಶ ಬಿತ್ತರಿಸಿದರು.

ಶನಿವಾರ ರಾತ್ರಿಯೇ ಕ್ರಿಸ್‌ಮಸ್‌ ಸಂಭ್ರಮ ಎರಡೂ ಚರ್ಚ್‌ಗಳಲ್ಲಿ ಮುಗಿಲು ಮುಟ್ಟಿತ್ತು. ‘ಕ್ರಿಸ್‌ಮಸ್‌ ಇವ್‌’ನಲ್ಲಿ ಕ್ರಿಶ್ಚಿಯನ್ನರ ಜತೆ ಬೇರೆ ಧರ್ಮೀಯರು ಪಾಲ್ಗೊಂಡು ಆಚರಣೆಗೆ ಸೌಹಾರ್ದತೆಯ ಮೆರುಗು ತುಂಬಿದರು.

‘ಯೇಸು ಸ್ವಾಮಿ ಗುರುಗಳು...’, ‘ಯೇಸು ಬಂದರು, ಆನಂದ ತಂದರು...’ ‘ಯೇಸು ಸ್ವಾಮಿ... ಏಸು ಸ್ವಾಮಿ...’ ಎಂಬ ಹಲ ಯೇಸುಕ್ರಿಸ್ತರ ಕುರಿತ ಗೀತೆಗಳು ಈ ಸಂದರ್ಭ ಮೊಳಗಿದವು. ಪ್ರತಿಯೊಬ್ಬರು ‘ಮೇರಿ ಕ್ರಿಸ್‌ಮಸ್... ಮೇರಿ ಕ್ರಿಸ್‌ಮಸ್’, ಹ್ಯಾಪಿ ಕ್ರಿಸ್‌ಮಸ್‌ ಎಂಬ ಶುಭಾಶಯ ವಿನಿಮಯ ಮಾಡಿಕೊಂಡರು.

ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ಪೂರ್ಣಗೊಂಡ ಬಳಿಕ ತಮ್ಮ ಮನೆಗಳಿಗೆ ತೆರಳಿದ ಕ್ರಿಶ್ಚಿಯನ್ ಸಮೂಹ ಆತ್ಮೀಯ ಒಡನಾಡಿಗಳನ್ನು ಹಬ್ಬದೂಟಕ್ಕೆ ಆಹ್ವಾನಿಸಿತು. ವಿಶೇಷ ಕ್ರಿಸ್‌ಮಸ್‌ ಕೇಕ್‌ ಕತ್ತರಿಸಿ ಎಲ್ಲರಿಗೂ ಹಂಚಿತು. ಚಿಕ್ಕ ಮಕ್ಕಳಿಗೆ ಚಾಕೋಲೇಟ್‌, ವಿಶೇಷ ಉಡುಗೊರೆಯನ್ನು ನೀಡಿದರು.

ಕ್ರಿಸ್‌ಮಸ್‌ನಲ್ಲಿ ಸಾಂತಾಕ್ಲಾಸ್‌ ವೇಷಧಾರಿ ಎಂದರೇ ಮಕ್ಕಳಿಗೆ ಪಂಚಪ್ರಾಣ. ವೇಷಧಾರಿ ಬಳಿ ಧಾವಿಸಿ ಉಡುಗೊರೆ ಪಡೆದು ಸಂಭ್ರಮಿಸಿದರು. ಸಿಎಸ್‌ಐ ಚರ್ಚ್‌ನಲ್ಲಿ ವಾದ್ಯ ನುಡಿಸುವ ಸಾಂತಾಕ್ಲಾಸ್‌ ಪ್ರತಿಕೃತಿ ಬಳಿ ಜಮಾಯಿಸಿ ಕುಣಿದು ಕುಪ್ಪಳಿಸಿದರು. ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಜಲ ವೈಭವ ದರ್ಶನ...

ಸಂತ ಅನ್ನಮ್ಮ ಚರ್ಚ್‌ನಲ್ಲಿ ಕ್ರಿಸ್‌ಮಸ್ ಜತೆಗೆ ಜಲ ವೈಭವ ದರ್ಶನವೂ ಅನಾವರಣಗೊಂಡಿದೆ. ಜಲ ಬಿರಾದಾರಿ ಪೀಟರ್ ಅಲೆಕ್ಸಾಂಡರ್ ಜಲ ಜಾಗೃತಿ ಮೂಡಿಸಲಿಕ್ಕಾಗಿ ಚರ್ಚ್‌ನ ಆವರಣದಲ್ಲಿಯೇ ವಿಶೇಷ ಪ್ರಾತ್ಯಕ್ಷಿಕೆ ರೂಪಿಸಿದ್ದಾರೆ.

ಆದಿಲ್‌ಶಾಹಿ ಅರಸರ ಕಾಲದಲ್ಲಿ ವಿಜಯಪುರದಲ್ಲಿನ ಜಲ ಚಿತ್ರಣ ಬಿಂಬಿಸುವ ಪ್ರಾತ್ಯಕ್ಷಿಕೆ ಇದಾಗಿದೆ. ಚರ್ಚ್‌ಗೆ ಭೇಟಿ ನೀಡಿದ ಎಲ್ಲರೂ ಇದನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT