ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್‌ಮಸ್‌: ಚರ್ಚ್‌ನಲ್ಲಿ ಮಕ್ಕಳ ಕಲರವ

Last Updated 26 ಡಿಸೆಂಬರ್ 2017, 6:39 IST
ಅಕ್ಷರ ಗಾತ್ರ

ಕೆರೂರ: ವರ್ಣರಂಜಿತ ವೇಷಭೂಷಣ ತೊಟ್ಟ ನೂರಾರು ಚಿಣ್ಣರ ಸಡಗರ, ಆಕರ್ಷಕ ಉಡುಗೆಯಲ್ಲಿ ರಂಜಿಸಿದ ಸಾಂಟಾಕ್ಲಾಸ್ ವೇಷಧಾರಿ, ಹಬ್ಬದ ಉಡುಗೆಯಲ್ಲಿ ಮಹಿಳೆಯರ ಸಂಭ್ರಮ, ನೃತ್ಯ, ನಾಟಕ, ಹಾಡು, ಸಂಗೀತ ಹಾಗೂ ಆರಾಧನೆ, ಪ್ರಾರ್ಥನೆ ಮುಂತಾದ ವೈವಿಧ್ಯಮಯ ಆಚರಣೆಗಳು, ಬಣ್ಣ ಬಣ್ಣದ ವಿದ್ದುದ್ದೀಪಗಳಿಂದ ಕಂಗೊಳಿಸುತ್ತಿದ್ದ ಪುರಾತನ ಚರ್ಚ್‌ ನೋಡುಗರ ಗಮನ ಸೆಳೆದವು.

ಸಮೀಪದ ಮುಷ್ಟಿಗೇರಿಯಲ್ಲಿ ಸಿಎಸ್ಐ ಗ್ರೋಸ್ಮನ್ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ನಿಮಿತ್ತ ಸೋಮವಾರ ಮಾಡಿದ್ದ ವಿಶೇಷ ಅಲಂಕಾರಗಳು ಕಣ್ಮನ ಸೆಳೆದವು. ಬೆಳಿಗ್ಗೆ 9.30 ಕ್ಕೆ ಏಸುವಿನ ಆರಾಧನೆಯ ನಂತರ ಚಿಣ್ಣರು, ವಿದ್ಯಾರ್ಥಿಗಳಿಂದ ಹಬ್ಬದ ಭಕ್ತಿಯ ಹಾಡು, ಸಂಗೀತ, ಪ್ರಾತ್ಯಕ್ಷಿಕೆಗಳು ಜರುಗಿದವು. ಸಭಾಪಾಲಕ ಫಾದರ್ ಯಶವಂತ ಎನ್.ಕೆ. ಅವರು ಕ್ರೈಸ್ತರಿಗೆ ಬೈಬಲ್‌ನ ಉಪದೇಶ, ಪ್ರವಚನದ ಬಳಿಕ ನಡೆದ ಕ್ರಿಸ್‌ಮಸ್‌ ಕಾರ್ಯಕ್ರಮದಲ್ಲಿ ಫಾದರ್ ಜೊತೆಗೆ ಕೇಕ್ ಕತ್ತರಿಸಿದ ಕಾಂಗ್ರೆಸ್ ಮುಖಂಡ ಭೀಮಸೇನ ಚಿಮ್ಮನಕಟ್ಟಿ ಅವರು ಸಿಹಿ ತಿನ್ನಿಸಿ ಶುಭಾಶಯ ಕೋರಿದರು.

ನಂತರ ಮಾತನಾಡಿದ ಭೀಮಸೇನ್, ‘ವಿಶ್ವ ಶಾಂತಿ, ಮಾನವೀಯತೆ, ಸೇವೆ ಬೈಬಲ್‌ನ ಉಪಯುಕ್ತ ಸಂದೇಶಗಳಾಗಿವೆ. ಏಸುಕ್ರಿಸ್ತನ ಧಾರ್ಮಿಕ ಸಂದೇಶ ಹಾಗೂ ಆದರ್ಶಗಳು ಮನುಕುಲಕ್ಕೆ ಅನುಕರಣೀಯವಾಗಿವೆ. ಶಾಂತಿಪ್ರಿಯ ಕ್ರೈಸ್ತರು ಸಮಾಜದಲ್ಲಿ ಸೌಹಾರ್ದ, ಭಾವೈಕ್ಯದ ಪ್ರತೀಕವಾಗಿದ್ದಾರೆ’ ಎಂದು ಶ್ಲಾಘಿಸಿದರು.

ಫಾದರ್ ಯಶವಂತ ಅವರು, ಗ್ರಾಮದ ಬಡವರು, ದೀನರು ಮತ್ತು ವಿಧವೆಯರಿಗೆ ಬಟ್ಟೆ, ಸೀರೆಗಳನ್ನು ವಿತರಿಸಿದರು.
ಕ್ರಿಸ್ಮಸ್ ಸಂಭ್ರಮದಲ್ಲಿ ನಾಡಿನ ವಿವಿಧೆಡೆಯ ಹಾಗೂ ಸುತ್ತಮುತ್ತಲಿನ ಕ್ರೈಸ್ತ ಧರ್ಮೀಯರು ಪಾಲ್ಗೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಮಹಿಳಾ ಕ್ರಿಸ್‌ಮಸ್: ಇದಕ್ಕೂ ಮುನ್ನ ಬುಧವಾರ ಮಹಿಳೆಯರಿಂದ ಆಕರ್ಷಕ ಮಹಿಳಾ ಕ್ರಿಸ್‌ಮಸ್‌ ನೃತ್ಯ, ನಾಟಕ, ಏಸುವಿನ ಜನ್ಮ ವೃತ್ತಾಂತದ ಪ್ರಾತ್ಯಕ್ಷಿಕೆಗಳು ರಂಜಿಸಿದರೆ, ಮಕ್ಕಳು ವಿಶೇಷ ಉಡುಗೆ ತೊಟ್ಟು ಆಚರಿಸಿದ ಡ್ರಾಮಾ, ಡಾನ್ಸ್, ಸಾಂಟಾಕ್ಲಾಸ್ ವೇಷಧಾರಿಯ ರೂಪಕಗಳು ಕ್ರಿಸ್‌ಮಸ್‌ ಪ್ರಿಯರನ್ನು ಆಕರ್ಷಿಸಿದವು. ನಂತರ ಬೈಬಲ್‌ನ ವಚನ ಪಠಿಸಲಾಯಿತು.

ಫಾದರ್ ಯಶವಂತ, ಸುವಾರ್ತಿಕ ಚಂದ್ರಕಾಂತ ಪೂಜಾರ, ಸಮಾಜದ ಧುರೀಣ ಗ್ಯಾನಪ್ಪ ಆಡಿನ, ಶ್ಯಾಮುವೇಲ ಕುರಿ, ನಿಧಾನಪ್ಪ ನಾಯ್ಕರ, ರಾಬರ್ಟ್‌ ತಳವಾರ, ಮಾಲಾ ಪೂಜಾ ರ, ಎನ್.ಎಸ್. ನಾಯ್ಕರ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT