ಬಳ್ಳಾರಿ

ಚಿರತೆ ಸೆರೆಗೆ ಗುಡ್ಡದಲ್ಲಿ ಮುಂದುವರಿದ ಶೋಧ

‘ಸಂಜೆ ಬಳಿಕ ಸಿಬ್ಬಂದಿ ಗುಡ್ಡದಲ್ಲಿ ಮತ್ತೆ ಸುತ್ತಾಟ ನಡೆಸಲಿದ್ದಾರೆ. ನಂತರದ ಪರಿಸ್ಥಿತಿಯನ್ನು ಅವಲೋಕಿಸಿ ಎರಡನೇ ಬೋನನ್ನು ಇಡುವ ಬಗ್ಗೆ ನಿರ್ಧರಿಸಲಾಗುವುದು’

ಬಳ್ಳಾರಿಯ ಗುಡ್ಡದ ಕೆಳಗೆ ಎಂ.ಕೆ.ನಗರದ ಮನೆ ಸಾಲು

ಬಳ್ಳಾರಿ: ನಗರದ 31ನೇ ವಾರ್ಡಿನ ಎಂ.ಕೆ.ನಗರದ ಮೇಲಿನ ಗುಡ್ಡದಲ್ಲಿ ಭಾನುವಾರ ಸಂಜೆ ಕಾಣಿಸಿಕೊಂಡ ಎರಡು ಚಿರತೆಗಳಿಗಾಗಿ ಅರಣ್ಯ ಇಲಾಖೆಯ ಶೋಧ ಕಾರ್ಯಾಚರಣೆ ಸೋಮವಾರವೂ ಮುಂದುವರಿಯಿತು. ನಗರದ ದಕ್ಷಿಣ ದಿಕ್ಕಿನ ಗುಡ್ಡದ ಬಂಡೆಯೊಂದರ ಮೇಲಿಂದ ಚಿರತೆಗಳು ಎಂ.ಕೆ.ನಗರದತ್ತ ಇಣುಕು ಹಾಕಿ ನಾಪತ್ತೆಯಾಗಿವೆ.

‘ಒಮ್ಮೆ ಬಂದ ಕಡೆ ಮತ್ತೆ ಅವು ಬರುವುದು ಅಪರೂಪ’ ಎಂಬ ಕಾರಣಕ್ಕೆ ಇಲಾಖೆಯ ಅಧಿಕಾರಿಗಳು ಎಂ.ಕೆ.ನಗರದ ವಿರುದ್ಧ ದಿಕ್ಕಿನಲ್ಲಿರುವ ಗಾಯತ್ರಿ ನಗರ, ಶಿಲ್ಪಿ ನಗರ ಪ್ರದೇಶದ ಕಡೆ ಒಂದು ಬೋನನ್ನು ಸೋಮವಾರ ಅಳವಡಿಸಿದ್ದರು.

ವಲಯ ಅರಣ್ಯಾಧಿಕಾರಿ ಡಿ.ಎಲ್‌.ಶ್ರೀಹರ್ಷ ನೇತೃತ್ವದಲ್ಲಿ ಸಂಜೆವರೆಗೂ ಅರಣ್ಯ ರಕ್ಷಕರು ಮತ್ತು ಅರಣ್ಯ ವೀಕ್ಷಕರು ಸೇರಿ ಇಪ್ಪತ್ತು ಸಿಬ್ಬಂದಿ ಗುಡ್ಡದ ವಿವಿಧ ಸ್ಥಳಗಳಲ್ಲಿ ಕಾವಲು ಕಾದರು. ಸಂಚಾರಕ್ಕಾಗಿ ಎರಡು ವಾಹನಗಳನ್ನೂ ಗುಡ್ಡಕ್ಕೆ ಕೊಂಡೊಯ್ಯಲಾಗಿದೆ. ಗುಡ್ಡದಲ್ಲಿರುವ ಬಂಡೆಗಳ ನಡುವಿನ ಗುಹೆಗಳು, ಪೊದೆಗಳು ಸೇರಿದಂತೆ ವಿವಿಧೆಡೆ ಸ್ಥಳೀಯ ಜನರೊಂದಿಗೆ ಸಂಚರಿಸಿದರು. ಆದರೆ ಎಲ್ಲಿಯೂ ಚಿರತೆಗಳು ಕಂಡುಬರಲಿಲ್ಲ.

‘ಸಂಜೆ ಬಳಿಕ ಸಿಬ್ಬಂದಿ ಗುಡ್ಡದಲ್ಲಿ ಮತ್ತೆ ಸುತ್ತಾಟ ನಡೆಸಲಿದ್ದಾರೆ. ನಂತರದ ಪರಿಸ್ಥಿತಿಯನ್ನು ಅವಲೋಕಿಸಿ ಎರಡನೇ ಬೋನನ್ನು ಇಡುವ ಬಗ್ಗೆ ನಿರ್ಧರಿಸಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ಡಿ.ಎಲ್‌.ಹರ್ಷ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದು ದಿನ ಒಂದೇ ಸ್ಥಳದಲ್ಲಿ ಎಂದಗೂ ನಿಲ್ಲದಿರುವುದು ಚಿರತೆಯ ಗುಣ. ಸಮೀಪದ ಕಾಲುವೆಯಲ್ಲಿ ನೀರು ಕಡಿಮೆಯಾಗಿರುವುದರಿಂದ ಚಿರತೆಗಳು ಗುಡ್ಡವನ್ನು ಹತ್ತಿರಬಹುದು. ಅವು ಕುರುಗೋಡು ಸಮೀಪದ ಕಲ್ಲಿನ ಗುಡ್ಡಗಳಲ್ಲಿ ವಾಸಿಸುವ ಚಿರತೆಗಳಿರಬಹುದು’ ಎಂದು ಶಂಕೆ ವ್ಯಕ್ತಪಡಿಸಿದರು.

‘ಬೆಳಿಗ್ಗೆ ಗುಡ್ಡದಲ್ಲಿ ಸುತ್ತಾಡಿದೆವು. ಕೆಲವು ಗುಹೆಗಳನ್ನೂ ಹೊಕ್ಕು ನೋಡಿದೆವು. ಎಲ್ಲೂ ಚಿರತೆಗಳು ಕಾಣಲಿಲ್ಲ. ಆದರೂ ಭಾನುವಾರ ಚಿರತೆಗಳು ಕಾಣಿಸಿದ ಸ್ಥಳದ ಸುತ್ತಮುತ್ತ ಕಣ್ಗಾವಲು ಇಡುವಂತೆ ಮೂವರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್‌,ಮಾಣಿಕ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯ  ಸ್ಥಳಕ್ಕೆ ಭೇಟಿ ನೀಡಿದ್ದರು.

ಬಳ್ಳಾರಿ: ‘ಕೆಲವು ವರ್ಷಗಳ ಹಿಂದೆ ಎಂ.ಕೆ.ನಗರ ಪಕ್ಕದ ರಾಜೇಶ್ವರಿ ನಗರದ ಈಶ್ವರಗುಡಿ ಸಮೀಪ ದಾಳಿ ಮಾಡಿದ್ದ ಕರಡಿಯು ಮನೆ ಮುಂದೆ ಮಲಗಿದ್ದ ಬಾಲಕಿಯೊಬ್ಬಳ ಕಾಲನ್ನು ಕಚ್ಚಿ ಗಾಯಗೊಳಿಸಿತ್ತು’ ಎಂದು ನಗರದ ಯುವಕ ಎಚ್‌.ಸಿ. ಮಲ್ಲೇಶ ನೆನಪಿಸಿಕೊಂಡರು.

‘ಗುಡ್ಡದ ಪಶ್ಚಿಮ ದಿಕ್ಕಿನಲ್ಲಿರುವ ಕರಿ ಮಾರಮ್ಮನ ಗುಡಿ ಬಳಿ ಒಮ್ಮೆ ಚಿರತೆ ಕಾಣಿಸಿತ್ತು. ಅದನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದಿದ್ದರು’ ಎಂದು ಸ್ಮರಿಸಿದರು. ‘ಗುಡ್ಡದಲ್ಲಿ ಕೆಲವರು ಎಮ್ಮೆಗಳನ್ನು ಮೇಯಿಸುತ್ತಾರೆ. ಅವುಗಳ ವಾಸನೆ ಹಿಡಿದು ಚಿರತೆಗಳು ಭಾನುವಾರ ಬಂದಿರಬಹುದು. ಅವು ಇಣುಕಿ ಹಾಕುತ್ತಿದ್ದುದನ್ನು ನೆನಪಿಸಿಕೊಂಡರೆ ಮೈ ಜುಮ್‌ ಎನ್ನುತ್ತದೆ’ ಎಂದು ಕಣ್ಣರಳಿಸಿದರು.

* * 

ಚಿರತೆ ಭಾನುವಾರ ಕಾಣಿಸಿದ್ದ ಸ್ಥಳದಲ್ಲಿ ಇರುವುದು ಅನುಮಾನ. ಇದ್ದರೂ ಆ ಬಗ್ಗೆ ಜನ ಎಚ್ಚರಿಕೆ ವಹಿಸುವುದು ಅತ್ಯವಶ್ಯ
ಡಿ.ಎಲ್‌.ಹರ್ಷ
ವಲಯ ಅರಣ್ಯ ಸಂರಕ್ಷಣಾಧಿಕಾರಿ

Comments
ಈ ವಿಭಾಗದಿಂದ ಇನ್ನಷ್ಟು
ಪತಿಗಿಂತ ಸತಿಯೇ ಶ್ರೀಮಂತೆ...!

ಬಳ್ಳಾರಿ
ಪತಿಗಿಂತ ಸತಿಯೇ ಶ್ರೀಮಂತೆ...!

20 Apr, 2018

ಹಗರಿಬೊಮ್ಮನಹಳ್ಳಿ
ಬಿಜೆಪಿ ಅಭ್ಯರ್ಥಿ ಕೆ.ನೇಮಿರಾಜನಾಯ್ಕ ನಾಮಪತ್ರ

ವಿಧಾನಸಭಾ ಚುನಾವಣೆಗೆ ಗುರುವಾರ ಬಿಜೆಪಿ ಅಭ್ಯರ್ಥಿ ಕೆ.ನೇಮಿರಾಜ ನಾಯ್ಕ ಮತ್ತು ಪಕ್ಷೇತರ ಅಭ್ಯರ್ಥಿ ಎಲ್‌.ಪರಮೇಶ್ವರ ನಾಮಪತ್ರ ಸಲ್ಲಿಸಿದರು.

20 Apr, 2018

‌ಹೊಸಪೇಟೆ
ಆನಂದ್‌ ಸಿಂಗ್‌ ₹125 ಕೋಟಿ, 18 ಐಷಾರಾಮಿ ಕಾರು ಒಡೆಯ

ವಿಜಯನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆನಂದ್‌ ಸಿಂಗ್‌ ₹125 ಕೋಟಿ ಆಸ್ತಿ ಹೊಂದಿದ್ದಾರೆ. ಅವರು 18 ಐಷಾರಾಮಿ ಕಾರುಗಳ ಒಡೆಯ.

20 Apr, 2018

‌ಕೂಡ್ಲಿಗಿ
ಜನರ ಅಭಿಪ್ರಾಯ ಪಡೆದು ಮುಂದಿನ ನಡೆ ನಿರ್ಧಾರ

ಕಾಂಗ್ರೆಸ್ ಪಕ್ಷದ ಟಿಕೆಟ್ ಕೈ ತಪ್ಪಿರುವುದು ಮನಸ್ಸಿಗೆ ನೋವಾಗಿದೆ. ಈ ಬಗ್ಗೆ ಸ್ಥಳೀಯರ ಅಭಿಪ್ರಾಯ ಪಡೆದು ಮುಂದಿನ ನಡೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್...

18 Apr, 2018
ಮರಳಿ ಪೋಷಕರ ಮಡಿಲು ಸೇರಿದ ಬಾಲಕ ವಿಕ್ರಂ

ಬಳ್ಳಾರಿ
ಮರಳಿ ಪೋಷಕರ ಮಡಿಲು ಸೇರಿದ ಬಾಲಕ ವಿಕ್ರಂ

18 Apr, 2018