ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ಆಮ್ಲಜನಕ ಸಾಧನ ತಯಾರಿಕೆ

Last Updated 26 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಆಮ್ಲಜನಕದ ಕೊರತೆಯಿಂದ ರಾತ್ರಿ ಬೆಳಗಾಗುವುದರೊಳಗೆ ನೂರಾರು ಮಕ್ಕಳು ಸಾವನ್ನಪ್ಪಿದ್ದು ನೆನಪಿದೆಯೆ? ಆಸ್ಪತ್ರೆಗಳಲ್ಲಿ ಮಾತ್ರ ಅಲ್ಲದೆ ದೇಶದ ಬಹುತೇಕ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಸಾಕಷ್ಟು ಜನ ಆಮ್ಲಜನಕದ ಕೊರತೆಯಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ನಗರ ಪ್ರದೇಶದಲ್ಲಿ ಮಾಲಿನ್ಯ ಮತ್ತು ಹೊಗೆಯ ಕಾರಣದಿಂದ ಶುದ್ಧ ಆಮ್ಲಜನಕ ಎಂಬುದು ಕನಸಿನ ಮಾತು. ಹೀಗಾಗಿ ದೇಶದಲ್ಲಿ ಅಪಾರ ಸಂಖ್ಯೆಯ ಜನರು ಶ್ವಾಸಕೋಶಗಳಿಗೆ ಸಂಬಂಧಿಸಿದ  Chronic Obstructive Pulmonary Disease (COPD) ಕಾಯಿಲೆಗಳಿಂದ ಬಳಲುತ್ತಿದ್ದಾರೆ.

ಆಸ್ಪತ್ರೆಗಳಲ್ಲಿ ಈಗಲೂ ಶುದ್ಧ ಆಮ್ಲಜನಕಕ್ಕಾಗಿ ಸಾಂಪ್ರದಾಯಿಕ ಸಿಲಿಂಡರ್‌ಗಳನ್ನೇ ನೆಚ್ಚಿಕೊಳ್ಳಲಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಮನೆ, ಕಚೇರಿ ಮತ್ತು ಆಸ್ಪತ್ರೆಗಳಲ್ಲಿಯೂ ಸುಲಭವಾಗಿ ಬಳಸಬಹುದಾದ ‘ಆಕ್ಸಿಜನ್‌ ಕಾನ್ಸಂಟ್ರೇಟರ್‌’ ಈಗ ದೇಶದೆಲ್ಲೆಡೆ ಜನಪ್ರಿಯವಾಗುತ್ತಿದೆ. ಫ್ರಿಜ್‌, ಎಸಿ, ಟಿ.ವಿಯನ್ನು ಇಟ್ಟುಕೊಳ್ಳುವಂತೆ ಇದನ್ನೂ ಇಟ್ಟುಕೊಂಡು ಜೀವಮಾನವಿಡಿ ಬಳಸಬಹುದಾದ ಈ ಸಾಧನ ಜನಪ್ರಿಯವಾಗುತ್ತಿದೆ. ಈ ಸಾಧನಗಳನ್ನು ಸದ್ಯಕ್ಕೆ ವಿದೇಶಗಳಿಂದಲೇ ಆಮದು ಮಾಡಿಕೊಂಡು ಮಾರಲಾಗುತ್ತಿದೆ. ಶ್ವಾಸಕೋಶದ ಸಮಸ್ಯೆ ಮತ್ತು ಆಮ್ಲಜನಕದ ಕೊರತೆಯಿಂದ ಬಳಲುತ್ತಿರುವವರ ಪ್ರಮಾಣ ಹೆಚ್ಚಿರುವುದರಿಂದ ಈ ಸಾಧನಕ್ಕೆ ದೇಶ ವ್ಯಾಪಿ ವಿಪರೀತ ಬೇಡಿಕೆ ಇದೆ.

ಆಮ್ಲಜನಕದ ಕೊರತೆಯಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ವಿವಿಧ ಕಾಯಿಲೆಗಳಿಗೆ ತುತ್ತಾಗಿ ನಿತ್ಯವೂ ನೂರಾರು ಮಕ್ಕಳು ಮತ್ತು ದೊಡ್ಡವರು ಸಾವನ್ನಪ್ಪುತ್ತಿದ್ದಾರೆ. ಪರಿಸರದಲ್ಲಿರುವ ಗಾಳಿ ಪಡೆದು ಶುದ್ಧ ಆಮ್ಲಜನಕ ಬಿಡುಗಡೆ ಮಾಡುವ ಸಾಧನ ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳು ಸದ್ಯಕ್ಕೆ ವಿದೇಶದಿಂದಲೇ ಆಮದು ಆಗುತ್ತಿದೆ. ಬೆಂಗಳೂರಿನ ಯುವಕರಾದ ಸುಹಾಸ್‌ ಶುಭಕರನ್‌ ಮತ್ತು ಅಂಕುರ್‌ ಗರ್ಗ್‌ ಅವರು ಜರ್ಮನ್‌ ತಂತ್ರಜ್ಞಾನ ನೆರವಿನಿಂದ ಇಂತಹ ಸಾಧನಗಳನ್ನು ಸ್ಥಳೀಯವಾಗಿಯೇ ತಯಾರಿಸಲು ಮುಂದಾಗಿದ್ದಾರೆ. 3 ಲೀಟರ್‌ ಸಾಧನದಿಂದ 20 ಲೀಟರ್‌ ಸಾಮರ್ಥ್ಯದ ಸಾಧನ ತಯಾರಿಸಲಿದ್ದಾರೆ. ದೇಶಿ ಮಾರುಕಟ್ಟೆ ಮಾತ್ರವಲ್ಲದೆ, ಮಧ್ಯ ಪ್ರಾಚ್ಯ, ರಷ್ಯಾ, ಯುರೋಪ್‌ ಮತ್ತು ಅಮೆರಿಕ ಮಾರುಕಟ್ಟೆಗೂ ಲಗ್ಗೆ ಇಡುವ ಯೋಜನೆ ಹಾಕಿಕೊಂಡಿದ್ದಾರೆ.

ಕಳೆದ ವರ್ಷ ವಿದೇಶಗಳಿಂದ ಸುಮಾರು 90,000 ಯುನಿಟ್‌ಗಳು ಆಮದು ಆಗಿದ್ದವು. ಜರ್ಮನಿಯಿಂದ ಆಕ್ಸಿಮೆಡ್‌ (owgels oxy med) ಕಂಪನಿಯಿಂದ ಬೆಂಗಳೂರಿನ ಮೆಡಿಕ್ವಿಪ್‌ ಕಂಪನಿ ಆಮದು ಮಾಡಿಕೊಳ್ಳುತ್ತಿದೆ. ಮೆಡಿಕ್ವಿಪ್‌ ಮುಂಬರುವ ದಿನಗಳಲ್ಲಿ ‘ಭಾರತದಲ್ಲಿಯೇ ತಯಾರಿಸಿ’ ಯೋಜನೆಯಡಿ ಬೆಂಗಳೂರಿನಲ್ಲೇ ಈ ಸಾಧನ ತಯಾರಿಸಲಿದೆ. ಇದರಿಂದ ಆಕ್ಸಿಜನ್‌ ಕಾನ್ಸಂಟ್ರೇಟರ್‌ ಕೈಗೆಟಕುವ ಬೆಲೆಯಲ್ಲಿ ಸಿಗಲಿದೆ ಎನ್ನುತ್ತಾರೆ ಮೆಡಿಕ್ವಿಪ್‌  ಕಂಪೆನಿಯ ಸಹ ಸಂಸ್ಥಾಪಕ ಸುಹಾಸ್‌ ಶುಭಕರನ್.

‘ಜರ್ಮನಿಯ (ಆಕ್ಸಿಮೆಡ್‌) ಕಂಪನಿ ಈಗ ಚೀನಾದಲ್ಲಿ ಆಕ್ಸಿಜನ್‌ ಕಾನ್ಸಂಟ್ರೇಟರ್‌ ಅನ್ನು ಜೋಡಣೆ ಮಾಡಿ ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಇದಕ್ಕೆ ಬೇಡಿಕೆ ಹೆಚ್ಚುತ್ತಿರುವುದರಿಂದ ಭಾರತದಲ್ಲೇ ತಯಾರಿಸಲು ನಿರ್ಧರಿಸಿದ್ದೇವೆ. ಇದಕ್ಕೆ ಜರ್ಮನಿ ಮತ್ತು ಚೀನಾ ಕಂಪನಿಗಳೂ ಒಪ್ಪಿಗೆ ನೀಡಿವೆ. ಸುಮಾರು ₹ 45 ಕೋಟಿ ವೆಚ್ಚದಲ್ಲಿ ಜಂಟಿ ಸಹಭಾಗಿತ್ವದಲ್ಲಿ ಈ ಯೋಜನೆ  ಕಾರ್ಯಗತಗೊಳಿಸಲು ಉದ್ದೇಶಿಸಿದ್ದೇವೆ. ಮೊದಲ ಹಂತದಲ್ಲಿ ದೇಶಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತೇವೆ. ನಂತರದ ಹಂತದಲ್ಲಿ ಮಧ್ಯ ಪ್ರಾಚ್ಯ, ರಷ್ಯಾ, ಯುರೋಪಿನ ಕೆಲವು ದೇಶಗಳು ಮತ್ತು ಅಮೆರಿಕೆಗೆ ರಫ್ತು ಮಾಡುತ್ತೇವೆ. ಇಲ್ಲಿ  ತಯಾರಿಕಾ ವೆಚ್ಚ ಕಡಿಮೆ ಆಗುತ್ತದೆ. ಇದರ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾವಣೆ ಮಾಡುತ್ತೇವೆ’ ಎಂದು ಅವರು ಹೇಳುತ್ತಾರೆ.

‘ಪೀಣ್ಯದಲ್ಲಿ ಈ ಘಟಕ ಸ್ಥಾಪಿಸಲಾಗುವುದು. 2018 ರಿಂದ ಉತ್ಪನ್ನವು ಮಾರುಕಟ್ಟೆಗೆ ಬರಲಿದೆ.  ಶೇ 98 ರಷ್ಟು ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಅವುಗಳಲ್ಲಿ ಎಲ್ಲವೂ ಚೀನಾದಲ್ಲೇ ತಯಾರು ಮಾಡಿ ‘ಮೇಡ್‌ ಇನ್‌ ಅಮೆರಿಕ’ ಇತ್ಯಾದಿ ಲೇಬಲ್‌ ಹಾಕಿ ಮಾರಲಾಗುತ್ತಿದೆ. ಆದರೆ, ನಾವು ಜರ್ಮನ್‌ ತಂತ್ರಜ್ಞಾನ ವರ್ಗಾವಣೆ ಮಾಡಿಸಿಕೊಂಡು ಇಲ್ಲೇ ತಯಾರು ಮಾಡುತ್ತೇವೆ. ಇದರಿಂದ ನಮ್ಮ ರಾಜ್ಯದ ಯುವಕರಿಗೆ ಉದ್ಯೋಗ ಸಿಗುತ್ತದೆ’ ಎಂದು ಹೇಳುತ್ತಾರೆ.

ಗಾಳಿ ಹೀರಿ ಆಮ್ಲಜನಕ ಬಿಡುಗಡೆ
ಉಸಿರಾಟಕ್ಕೆ ಸಂಬಂಧಿಸಿ ಕಾಯಿಲೆಗಳು ವ್ಯಾಪಕವಾಗುತ್ತಿವೆ. ಇದಕ್ಕೆ ಮುಖ್ಯ ಕಾರಣ, ಮನೆಗಳಲ್ಲಿ ಅಡುಗೆ ಮಾಡುವಾಗ ಹೊಗೆಯಿಂದ ಆಗುವ ವಾಯು ಮಾಲಿನ್ಯ, ಧೂಳು, ಹೊರಗಿನ ವಾತಾವರಣ ಮತ್ತು ಕಚೇರಿಗಳಲ್ಲಿರುವ ಧೂಳು ಮತ್ತು ರಾಸಾಯನಿಕ. ಬಾಲ್ಯದಲ್ಲಿ ಶ್ವಾಸಕೋಶಕ್ಕೆ ಸೋಂಕಿನಿಂದ ಉಸಿರಾಟದ ತೊಂದರೆ ಸಮಸ್ಯೆಗಳು ಆಗುತ್ತವೆ. ಈ ಸಮಸ್ಯೆ ಇದ್ದವರಿಗೆ ಔಷಧದ ಜತೆಗೆ ಶುದ್ಧ ಆಮ್ಲ ಜನಕ ಇದ್ದರೆ  ಹೆಚ್ಚು ವರ್ಷ ಬದುಕಲು ಸಾಧ್ಯ. ಹೀಗಾಗಿ ಸಾಮಾನ್ಯವಾಗಿ ಈ ಉಪಕರಣವನ್ನು ಮನೆಯಲ್ಲೇ ಇಟ್ಟುಕೊಳ್ಳಲು ಬಯಸುವವರೇ ಹೆಚ್ಚು’ ಎಂದು ಅವರು ಹೇಳುತ್ತಾರೆ.

‘ಈ ಸಾಧನವು ಗಾಳಿಯನ್ನು ಹೀರಿ ಅದರಲ್ಲಿರುವ ಆಮ್ಲಜನಕ ಮತ್ತು ನೈಟ್ರೋಜನ್‌ ಅನ್ನು ಪ್ರತ್ಯೇಕಿಸುತ್ತದೆ. ಶುದ್ಧ ಆಮ್ಲಜನಕ ಕೋಣೆಗೆ ಬಿಡುಗಡೆಯಾಗುತ್ತದೆ. ಇದರಿಂದ ರೋಗಿಯ ಆರೋಗ್ಯ ಸುಧಾರಣೆ ಆಗುತ್ತದೆ. ಮತ್ತೆ ಮತ್ತೆ ರೀಫಿಲ್‌ ಮಾಡುವ ಅಗತ್ಯವಿಲ್ಲ. ನಿರಂತರವಾಗಿ ವರ್ಷಾನುಗಟ್ಟಲೆ ಕಾರ್ಯ ನಿರ್ವಹಿಸುತ್ತಿರುತ್ತದೆ. ಫಿಲ್ಟರ್‌ ಅನ್ನು ಬದಲಿಸಿದರೆ ಸಾಕು. ನಮ್ಮ ಸಂಸ್ಥೆಯ ವಿಶೇಷತೆ ಎಂದರೆ ನಮ್ಮದೇ ತಂತ್ರಜ್ಞರು ಸರ್ವಿಸ್‌ ನೀಡುತ್ತಾರೆ. ಒಂದು ವೇಳೆ ಸಾಧನ ಕೆಟ್ಟು ಹೋದರೆ ಸರಿಪಡಿಸುವವರೆಗೆ ರೋಗಿಗೆ ತೊಂದರೆ ಆಗದಂತೆ ಪರ್ಯಾಯ ಸಾಧನವನ್ನು ಅವರಿಗೆ ನೀಡುತ್ತೇವೆ. ದೂರದ ಗ್ರಾಮೀಣ ಪ್ರದೇಶಗಳಿಗೂ ಇದನ್ನು ಒಯ್ಯಬಹುದಾಗಿದೆ. ಆಕ್ಸಿಜನ್‌ ಸಿಲಂಡರ್‌ಗಳನ್ನು ಈ ರೀತಿ ಒಯ್ಯಲು ಸಾಧ್ಯವಿಲ್ಲ. ಗೃಹ ಆರೋಗ್ಯ ಆರೈಕೆಯ ಸಾಧನವಾದರೂ, ಎಲ್ಲ ಬಗೆಯ ಆಸ್ಪತ್ರೆಗಳಲ್ಲಿ ಮತ್ತು ಆಮ್ಲಜನಕದ ಪ್ರಮಾಣದ ಕಡಿಮೆ ಇರುವ ಪರ್ವತ ಪ್ರದೇಶಗಳಲ್ಲಿರುವ ಹೊಟೇಲುಗಳಲ್ಲಿಯೂ ಬಳಸಬಹುದಾಗಿದೆ.

‘ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತದಂತಹ ನಗರಗಳಲ್ಲಿ ಮಾಲಿನ್ಯದಿಂದ ಗಾಳಿಯಲ್ಲಿರುವ ಆಮ್ಲಜನಕದ ಗುಣಮಟ್ಟ ತೀರಾ ಕಳಪೆ. ಗಾಳಿಯಲ್ಲಿ ವಿವಿಧ ರೀತಿಯ ಅಪಾಯಕಾರಿ ಕಣಗಳೇ ಹೆಚ್ಚು. ವಿದೇಶಗಳಲ್ಲಿ ಈ ಸಮಸ್ಯೆಯಿಂದ ಪಾರಾಗಲು ‘ಆಕ್ಸಿಜನ್‌ ಬಾರ್‌’ಗಳಿಗೆ ಹೋಗುತ್ತಾರೆ. ಹಣ ಕೊಟ್ಟು ಕೆಲವು ಗಂಟೆಗಳ ಕಾಲ ಶುದ್ಧ ಆಮ್ಲಜನಕವನ್ನು ಸೇವಿಸುತ್ತಾರೆ. ನಮ್ಮ ದೇಶದಲ್ಲಿ ಈ ಪರಿಕಲ್ಪನೆ ಇನ್ನೂ ಶೈಶವಾವಸ್ಥೆಯಲ್ಲೇ ಇದೆ’ ಎಂದು ಸುಹಾಸ್‌ ಹೇಳುತ್ತಾರೆ.

ಶ್ವಾಸಕೋಶ ಸಮಸ್ಯೆ ವ್ಯಾಪಕ
‘ಶಾಸಕೋಶಗಳ ಸಮಸ್ಯೆ ದೇಶದಲ್ಲಿ ವ್ಯಾಪಕವಾಗಿದೆ. ಸಿಗರೇಟ್‌ ಸೇವನೆ, ಬಯೋಗ್ಯಾಸ್‌, ಮಾಲಿನ್ಯವೇ ಇದಕ್ಕೆ ಕಾರಣ. ಶುದ್ಧ ಆಮ್ಲಜನಕ ಪಡೆಯಲು ‘ಆಕ್ಸಿಜನ್‌ ಕಾನ್ಸಂಟ್ರೇಟರ್‌’ ಅತ್ಯುತ್ತಮ ಸಾಧನ. ಯಾವುದೇ ವ್ಯಕ್ತಿ 6 ರಿಂದ 7 ಗಂಟೆಗಳ ಅವಧಿ ಶುದ್ಧ ಆಮ್ಲಜನಕವನ್ನು ಸೇವಿಸಿದರೆ, ಇಡೀ ದಿನ ಚೆನ್ನಾಗಿರುತ್ತದೆ’ ಎಂದು   ವಿಕ್ಟೋರಿಯಾ ಆಸ್ಪತ್ರೆಯ ಶ್ವಾಸಕೋಶ ರೋಗಗಳ ವೈದ್ಯ ಡಾ. ರಮೇಶ್‌ ಹೇಳುತ್ತಾರೆ.

‘ಇಂತಹ ಸಾಧನ ಎಲ್ಲ ಸಾರ್ವಜನಿಕ ಆರೋಗ್ಯ ಕೇಂದ್ರಗಳು, ದೊಡ್ಡ ಮಟ್ಟದ ಆಸ್ಪತ್ರೆಗಳಲ್ಲಿ ಇರಬೇಕು. ಸಾಂಪ್ರದಾಯಿಕ ಆಕ್ಸಿಜನ್ ಸಿಲಿಂಡರ್‌ ವ್ಯವಸ್ಥೆಗಿಂತಲೂ ಇದು ಉತ್ತಮ. ಇದರಿಂದ ತುರ್ತು ಚಿಕಿತ್ಸೆಗೆ ಅನುಕೂಲವಾಗುತ್ತದೆ. ವಿದ್ಯುತ್‌ ಇಲ್ಲದೆ ಇದ್ದರೂ ಬ್ಯಾಟರಿ ಮೂಲಕವೂ ಈ ಸಾಧನ ಕಾರ್ಯ ನಿರ್ವಹಿಸುತ್ತವೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುಲಭವಾಗಿ ಒಯ್ಯಬಹುದು. ಗ್ರಾಮಾಂತರ ಪ್ರದೇಶದಲ್ಲಿ ಇದರ ಉಪಯೋಗ ಹೆಚ್ಚು. ಹಲವರ ಜೀವ ರಕ್ಷಿಸಲು ಸಾಧ್ಯವಾಗುತ್ತದೆ’ ಎಂದೂ ರಮೇಶ್‌ ಅಭಿಪ್ರಾಯಪಡುತ್ತಾರೆ.
ಮಾಹಿತಿಗೆ: 95913 29444

***

ಆರ್‌ಒ ಪ್ಲಾಂಟ್‌ಗಳಲ್ಲಿ ಬಳಕೆ
ನೀರಿನಲ್ಲಿರುವ ಧೂಳಿನ ಕಣ ಮತ್ತು ಬ್ಯಾಕ್ಟೀರಿಯಾಗಳನ್ನು ತೆಗೆದು ಶುದ್ಧಗೊಳಿಸುವ ಆರ್‌ಒ ಪ್ಲಾಂಟ್‌ಗಳಲ್ಲೂ ಆಕ್ಸಿಜನ್‌ ಕಾನ್ಸಂಟ್ರೇಟರ್‌ ಬಳಸಲಾಗುತ್ತಿದೆ. ನೀರಿಗೆ ಆಮ್ಲಜನಕ ಸೇರಿಸಿ ಬಾಟ್ಲಿಂಗ್‌ ಮಾಡಲಾಗುತ್ತಿದೆ.

ಕೇರಳದಲ್ಲಿ ಎರಡು ಮತ್ತು ಬೆಂಗಳೂರಿನಲ್ಲಿ ಒಂದು ಘಟಕಗಳು ಶುದ್ಧ ಆಮ್ಲಜನಕ ಸೇರಿಸಿದ ನೀರಿನ ಬಾಟ್ಲಿಂಗ್‌ ಮಾಡುತ್ತಿವೆ.  ಆಕ್ಸಿಜನ್‌ ಬಾರ್‌, ಆಕ್ಸಿಜನ್‌ ಚೇಂಬರ್‌ಗಳಲ್ಲೂ ಇದನ್ನು ಬಳಸಲಾಗುತ್ತದೆ. ಕೆಲವು ಪಂಚತಾರಾ ಹೊಟೇಲ್‌ಗಳಲ್ಲಿ ಈಜು ಕೊಳಗಳಲ್ಲೂ ಬಳಸಲಾಗುತ್ತದೆ. ಪರ್ವತ ಪ್ರದೇಶಗಳಲ್ಲಿ ಆಮ್ಲಜನಕದ ಕೊರತೆ ಇರುತ್ತದೆ.

ಟಿಬೆಟ್‌ ಪರ್ವತ ಶ್ರೇಣಿಯಲ್ಲಿರುವ ಕೆಲವು ಹೊಟೇಲ್‌ಗಳಿಗೆ ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳನ್ನು ನಮ್ಮ ಕಂಪೆನಿಯೇ ಪೂರೈಕೆ ಮಾಡುತ್ತಿದೆ. ಅಲ್ಲಿ ಪ್ರತಿ ಅಂತಸ್ತಿನಲ್ಲೂ ತಲಾ 20 ಲೀಟರ್‌ಗಳ ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳನ್ನು ಸೆಂಟ್ರಲ್‌ ಎಸಿಗೆ ಸಂಪರ್ಕ ಕಲ್ಪಿಸಲಾಗಿದೆ.  ಎಲ್ಲ ಕೊಠಡಿಗಳಿಗೂ ಆಮ್ಲಜನಕ ಪೂರೈಸಲಾಗುತ್ತಿದೆ ಎಂದು ಸುಹಾಸ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT