ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌: ಕಿರುಕುಳ ತಡೆಯುವ ಹೊಸ ಸೌಲಭ್ಯ

Last Updated 26 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಅನಗತ್ಯ ಸಂದೇಶ, ಪರಿಚಿತರು / ಅಪರಿಚಿತರ ಮನವಿ ಹಾಗೂ ಕಿರುಕುಳ ತಡೆಯುವಂತಹ ನೂತನ ಸೌಲಭ್ಯ (ಫೀಚರ್) ಪರಿಚಯಿಸಿದೆ. ವಿಶೇಷವಾಗಿ ಈ ಫೀಚರ್ ಮಹಿಳಾ ಬಳಕೆದಾರರಿಗೆ ಹೆಚ್ಚು ಅನುಕೂಲವಾಗಲಿದೆ.

ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ದೆಹಲಿ ಕಂಪೆನಿಯೊಂದು ಫೇಸ್‌ಬುಕ್‌ನ ತಂತ್ರಜ್ಞಾನದ ತಂಡದೊಂದಿಗೆ ಸೇರಿ ಈ  ಸೌಲಭ್ಯ ಅಭಿವೃದ್ಧಿಪಡಿಸಿರುವುದು ವಿಶೇಷ. ಇದು ಕಿರುತಂತ್ರಾಂಶದ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ.  ಪ್ರತಿ ನಿತ್ಯ ನಕಲಿ ಖಾತೆಗಳನ್ನು ಪತ್ತೆ ಹಚ್ಚಿ ಅವುಗಳನ್ನು ಅಳಿಸಿ ಹಾಕುವ ಕೆಲಸ ಮಾಡುತ್ತದೆ. ಅಪರಿಚಿತರು ಕಳುಹಿಸುವ ಸಂದೇಶಗಳು ಮತ್ತು ಅಪರಿಚಿತ ಗೆಳೆಯರ ಮನವಿಯನ್ನು ಯಶಸ್ವಿಯಾಗಿ ತಡೆಯಲು ನೆರವಾಗಲಿದೆ.

ಐಪಿ ವಿಳಾಸ ಮತ್ತು ಗೋಪ್ಯ ಸಂಕೇತಗಳ ಮೂಲಕ ಈ ಕಿರುತಂತ್ರಾಂಶ ನಕಲಿ ಖಾತೆಗಳನ್ನು ಪತ್ತೆ ಹಚ್ಚುತ್ತದೆ. ಇನ್ನು ಮುಂದೆ ಸಂದೇಶಗಳು ಮತ್ತು ಮನವಿಯ ಕಿರಿಕಿರಿ ಅನುಭವಿಸುವ ತಾಪತ್ರಯ ಬಳಕೆದಾರರಿಗೆ ಇರುವುದಿಲ್ಲ. ಬಳಕೆದಾರರು ಫೇಸ್‌ಬುಕ್‌ ಸೆಟ್ಟಿಂಗ್‌ನಲ್ಲಿರುವ ’ಕಿರುಕುಳ ತಡೆ’ ಬಟನ್‌ ಸೇವ್‌ ಮಾಡುವ ಮೂಲಕ ಈ ಸೌಲಭ್ಯ ಬಳಸಿಕೊಳ್ಳಬಹುದು.

ಜಾಗತಿಕ ಸುದ್ದಿಗೆ ಟಿಕ್‌ ಟಾಕ್‌

ಸಾಮಾಜಿಕ ಜಾಲತಾಣ ಟ್ವೀಟರ್‌ ಮತ್ತು ಬ್ಲೂಮ್‌ಬರ್ಗ್‌ ಕಂಪೆನಿಗಳು ಜತೆಗೂಡಿ ಹೊಸ ಜಾಗತಿಕ ಸುದ್ದಿ ತಾಣವನ್ನು ವಿನ್ಯಾಸ ಮಾಡಿದ್ದು ಇದಕ್ಕೆ ‘ಟಿಕ್‌ ಟಾಕ್‌‘ ಎಂದು ಹೆಸರಿಡಲಾಗಿದೆ.

ಆರಂಭದಲ್ಲಿ ಹಣಕಾಸು ಮತ್ತು ವ್ಯವಹಾರದ ಸುದ್ದಿಗಳನ್ನು ಮಾತ್ರ ಬಿತ್ತರಿಸಲಾಗುವುದು ಎಂದು ತಿಳಿಸಲಾಗಿತ್ತು. ಆದರೆ, ಬಳಕೆದಾರರ ಅಗತ್ಯಗಳನ್ನು ಅರಿತು ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ತಂತ್ರಜ್ಞಾನದ ಸುದ್ದಿಗಳನ್ನು ಪ್ರಕಟಿಸಲು ನಿರ್ಧರಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಆ್ಯಂಟೋನಿ ನಾಟ್‌ ತಿಳಿಸಿದ್ದಾರೆ.

ವಿವಿಧ ಮಾಧ್ಯಮ ಸೇವಾ ಕಂಪೆನಿಗಳ ಆಯ್ದ ಸುದ್ದಿಯನ್ನು ಟಿಕ್ ಟಾಕ್‌ ವೇದಿಕೆಯಲ್ಲಿ ಪ್ರಕಟಿಸಲಾಗುವುದು. ಇದರ ಜತೆಗೆ ಷೇರು ಪೇಟೆ, ವಿಶ್ಲೇಷಣೆ, ಹಣಕಾಸು ಮತ್ತು ವಾಣಿಜ್ಯ ವಹಿವಾಟಿನ ಸುದ್ದಿಗಳ ಬರವಣಿಗೆಗೆ ಸಂಪಾದಕೀಯ ಮಂಡಳಿ ರಚಿಸಲಾಗಿದೆ ಎಂದು ಬ್ಲೂಮ್‌ಬರ್ಗ್‌ ಕಂಪೆನಿಯ ಮಾಧ್ಯಮ ವಿಭಾಗದ ಮುಖ್ಯಸ್ಥರಾದ ಜಸ್ಟೀನ್‌ ಸ್ಮಿತ್‌ ತಿಳಿಸಿದ್ದಾರೆ. ಇದರಲ್ಲಿ ಜಾಹೀರಾತುಗಳಿಗೂ ಅವಕಾಶ ಕಲ್ಪಿಸಲಾಗಿದೆ. ವಿಶೇಷ ಚಿತ್ರಗಳು ಮತ್ತು ಲೈವ್‌ ವಿಡಿಯೊವನ್ನು ಟಿಕ್‌ ಟಾಕ್f ಸುದ್ದಿ ತಾಣದಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ದೇಶಿವಾಕ್‌ನ ‘ಹಾಪ್‌ಆನ್‌‘ ಆ್ಯಪ್‌

ಮುಂಬೈ ಮೂಲದ ದೇಶಿವಾಕ್‌ ಪ್ರವಾಸಿ ಸಂಸ್ಥೆ ಪ್ರವಾಸಿ ತಾಣಗಳ ಮಾಹಿತಿಯ ’ಹಾಪ್‌ಆನ್‌’ (HopOn) ಎಂಬ ನೂತನ ಆ್ಯಪ್‌ ಅಭಿವೃದ್ಧಿಪಡಿಸಿದೆ.

ದೇಶ ಸುತ್ತುವ ಪ್ರವಾಸಿಗರಿಗೆ ಈ ಆ್ಯಪ್‌ ಹೆಚ್ಚು ಉಪಯುಕ್ತವಾಗಲಿದೆ. ಪ್ರವಾಸಿ ತಾಣಗಳ ಮಾಹಿತಿ, ಅವುಗಳ ಇತಿಹಾಸ,  ವಸತಿಗೃಹಗಳ ಮಾಹಿತಿ, ಗೈಡ್‌ಗಳ ಸಂಪರ್ಕ, ಆಹಾರ, ಸಂಸ್ಕೃತಿಯ ಮಾಹಿತಿ ಈ ಆ್ಯಪ್‌ನಲ್ಲಿ ಲಭ್ಯ. ಆಡಿಯೊ ಮತ್ತು ವಿಡಿಯೊದಲ್ಲೂ ಪ್ರವಾಸಿ ಸ್ಥಳಗಳ ಮಾಹಿತಿ ಪಡೆಯಬಹುದು.

ಆಂಡ್ರಾಯ್ಡ್‌ ಮತ್ತು ಐಒಎಸ್ ಮಾದರಿಯಲ್ಲಿ ಆ್ಯಪ್‌ ದೊರೆಯಲಿದೆ. ಹಿಂದಿ ಮತ್ತು ಇಂಗ್ಲಿಷ್‌ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳಲ್ಲಿ ಈ ಆ್ಯಪ್‌ ವಿನ್ಯಾಸ ಮಾಡಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT