ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಕೆದಾರರನ್ನು ಸಬಲೀಕರಿಸುವ ಮಸೂದೆ

Last Updated 26 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಮೂವತ್ತು ವರ್ಷಗಳ ಹಿಂದೆ ಅನುಷ್ಠಾನಕ್ಕೆ ಬಂದಿದ್ದ ಗ್ರಾಹಕ ಸಂರಕ್ಷಣಾ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಉದ್ದೇಶದ ಹೊಸ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಮಸೂದೆಯ ಸಂರಚನೆಯನ್ನು ಗಮನಿಸಿದಾಗ ಸಮಕಾಲೀನ ಅಗತ್ಯಗಳಿಗೆ ಅದು ಸ್ಪಂದಿಸುತ್ತದೆ, ಅದರಲ್ಲಿ ಗ್ರಾಹಕರ ಧ್ವನಿ ಮತ್ತಷ್ಟು ಬಲಗೊಳ್ಳುವ ಸೂಚನೆ ಕಂಡುಬರುತ್ತದೆ.

ಈ ಮೂರು ದಶಕಗಳಲ್ಲಿ ಗ್ರಾಹಕರ ಅಗತ್ಯಗಳು ಮತ್ತು ಆದ್ಯತೆಗಳು ಗುರುತಿಸಲಾಗದಷ್ಟು ಬದಲಾಗಿವೆ. ಜಾಗತೀಕರಣದ ಫಲವಾಗಿ ಸರಕು ಮತ್ತು ಸೇವೆಗಳಲ್ಲಿನ ವೈವಿಧ್ಯ ಹೆಚ್ಚಾಗಿದೆ. ಖರೀದಿ ವಿಧಾನ ಸಹ ಬದಲಾಗಿದೆ. ಗ್ರಾಹಕರು ಅಂಗಡಿ ಮತ್ತು ಮಾಲ್‍ಗಳಿಗೆ ಭೇಟಿ ಇತ್ತರೂ, ಸರಕು ಖರೀದಿಸುವುದಕ್ಕಿಂತ ನೋಡುವುದೇ ಹೆಚ್ಚಾಗಿದೆ.

ಮಾಲ್‍ನಲ್ಲಿ ಕಂಡಿದ್ದನ್ನು ಆನ್‍ಲೈನ್ ಮೂಲಕ ಖರೀದಿಸುವ ಪ್ರವೃತ್ತಿ ಬೆಳೆದಿದೆ. ಅದೇ ರೀತಿ ಗ್ರಾಹಕರ ಸಮಸ್ಯೆಗಳೂ ಹೆಚ್ಚಾಗಿದ್ದು, ಕುಂದುಕೊರತೆಗಳ ನಮೂನೆಯೂ ಬದಲಾಗಿದೆ. ಇವೆಲ್ಲಕ್ಕೂ ಸೂಕ್ತ ಪರಿಹಾರ ಒದಗಿಸಲು ಮತ್ತು ಗ್ರಾಹಕರಿಗೆ ರಕ್ಷಣೆ ಕಲ್ಪಿಸಲು ಹೊಸ ಕಾಯ್ದೆಯ ಅಗತ್ಯವಿತ್ತು. ಇದೆಲ್ಲವನ್ನೂ ಗಮನಿಸಿದ್ದ ಸರ್ಕಾರ 2015ರಲ್ಲಿ ಹೊಸ ಮಸೂದೆಯನ್ನು ಸಿದ್ಧಪಡಿಸಿತ್ತು. ಕೆಲವೊಂದು ಅಂಶಗಳ ಕುರಿತು ಅದರಲ್ಲೂ ವಿಶೇಷವಾಗಿ ಜಾಹೀರಾತು ಕುರಿತು ಮತ್ತಷ್ಟು ಅಧ್ಯಯನ ನಡೆಸಲು ಅದನ್ನು ಸಂಸತ್ತಿನ ಸ್ಥಾಯಿ ಸಮಿತಿಗೆ ಒಪ್ಪಿಸಲಾಗಿತ್ತು. ಸಮಿತಿಯ ಸಲಹೆ ಮತ್ತು ಸೂಚನೆಗಳ ಹಿನ್ನೆಲೆಯಲ್ಲಿ ಹೊಸ ರೂಪದ ಮಸೂದೆ ಈಗ ಲೋಕಸಭೆಯ ಮುಂದೆ ಬರಲಿದೆ.

ಇದು ಸಂಸತ್ತಿನಲ್ಲಿ ಅಂಗೀಕಾರವಾದರೆ 1986ರ ಗ್ರಾಹಕ ಸಂರಕ್ಷಣಾ ಕಾಯ್ದೆ ರದ್ದಾಗಿ, ಹೊಸ ಕಾಯ್ದೆ ಅನುಷ್ಠಾನಕ್ಕೆ ಬರಲಿದೆ. ಮಸೂದೆಯು ಅನೇಕ ಹೊಸ ಅಂಶಗಳಿಂದ ಕೂಡಿದೆ. ಗ್ರಾಹಕರನ್ನು ಸಬಲೀಕರಿಸುವ ಪ್ರಯತ್ನ ಇದರಲ್ಲಿ ಅಡಗಿದೆ. ಬಳಕೆದಾರ ಅಥವಾ ಗ್ರಾಹಕ ಎನ್ನುವ ಪದದ ಅರ್ಥವನ್ನು ಮತ್ತಷ್ಟು ವಿಸ್ತರಿಸಲಾಗಿದೆ. ಯಾವುದೇ ವಿದುನ್ಮಾನದ ಮಾದರಿಯ (ಆನ್‍ಲೈನ್, ಟೆಲಿಶಾಪಿಂಗ್ ಮತ್ತು ಮಲ್ಟಿಲೆವೆಲ್ ಮಾರಾಟ) ಮೂಲಕ ಖರೀದಿಸುವವರನ್ನು ಸಹ ಗ್ರಾಹಕ ಎಂದು ಪರಿಗಣಿಸಲಾಗುವುದು.

ಜಾಹೀರಾತು, ಅಪಾಯಕಾರಿ ಸರಕು ಮತ್ತು ಸೇವೆಗಳಿಗೆ ಹೊಸ ವ್ಯಾಖ್ಯಾನವನ್ನು ಸೇರಿಸಲಾಗಿದೆ. ಅನುಚಿತ ವ್ಯಾಪಾರ ಪದ್ಧತಿಗೆ ಮತ್ತಷ್ಟು ಲಗಾಮು ಹಾಕುವ ಕಲಂಗಳು ಇದರಲ್ಲಿ ಇವೆ. ಅಪಾಯಕಾರಿ ಸರಕುಗಳನ್ನು ತಯಾರಿಸುವುದು, ಬಿಲ್ ನೀಡಲು ನಿರಾಕರಿಸುವುದು ಹಾಗೂ ಅವಧಿ ಮೀರಿದ ಅಥವಾ ನಿಗದಿತ ಮಾನದಂಡಗಳಿಗೆ ಅನುಗುಣವಾಗಿಲ್ಲದ ಸರಕುಗಳನ್ನು ಹಿಂದಕ್ಕೆ ಪಡೆಯದೇ ಇರುವುದನ್ನು ಅನುಚಿತ ವ್ಯಾಪಾರ ಪದ್ಧತಿ ಎಂದು ಪರಿಗಣಿಸಲಾಗುವುದು.

ಮಾರಾಟಗಾರರು ಗ್ರಾಹಕರೊಂದಿಗೆ ಮಾಡಿಕೊಳ್ಳುವ ಕರಾರುಗಳಲ್ಲಿ ಸೇರಿಸುವ ಏಕಪಕ್ಷೀಯ ನಿಬಂಧನೆ ಹಾಗೂ ಷರತ್ತುಗಳಿಗೆ ಕಡಿವಾಣ ಹಾಕಲು ಮಸೂದೆ ಅವಕಾಶ ಕಲ್ಪಿಸುತ್ತದೆ. ಕರಾರು ಪತ್ರದಲ್ಲಿ ಬಳಸುವ ಪದಗಳ ಬಗ್ಗೆಯೂ ಉಲ್ಲೇಖವಿದೆ. ಒಮ್ಮೆ ಖರೀದಿಸಿದ ಸರಕುಗಳನ್ನು ಹಿಂದಕ್ಕೆ ಪಡೆಯಲಾಗುವುದಿಲ್ಲ ಅಥವಾ ಬದಲಿಸುವುದಿಲ್ಲ ಎಂಬ ವ್ಯಾಖ್ಯೆಗೆ ನಿಯಂತ್ರಣ ಹೇರಲಾಗಿದೆ. ‘ಗ್ರಾಹಕರು ಹಣ ಪಾವತಿಸುವುದಕ್ಕೆ ವಿಳಂಬ ಮಾಡಿದರೆ ಅದಕ್ಕೆ ಅಧಿಕ ಬಡ್ಡಿ ವಿಧಿಸಲಾಗುವುದು. ಆದರೆ ಮಾರಾಟಗಾರರು ಸರಕುಗಳನ್ನು ಅಥವಾ ಸೇವೆಯನ್ನು ನೀಡುವಲ್ಲಿ ವಿಳಂಬ ಮಾಡಿದರೆ ಅದಕ್ಕೆ ಗ್ರಾಹಕರಿಗೆ ಯಾವುದೇ ಪರಿಹಾರ ನೀಡಲಾಗುವುದಿಲ್ಲ’ ಎಂಬ ನಿಬಂಧನೆಗಳಿಂದ ಅನೇಕ ಗ್ರಾಹಕರು ವಂಚನೆಗೆ ಒಳಗಾಗುತ್ತಿದ್ದಾರೆ. ಇಂತಹ ವಾಕ್ಯಗಳಿಂದ ಕೂಡಿದ ಒಪ್ಪಂದಗಳನ್ನು ‘ಅನುಚಿತ ಕರಾರು’ ಎಂದು ಪರಿಗಣಿಸಲಾಗುವುದು. ಅದರ ವಿರುದ್ಧ ಗ್ರಾಹಕರು ವೇದಿಕೆಯಲ್ಲಿ ದೂರು ಸಲ್ಲಿಸಬಹುದು.

ದೇಶದಲ್ಲಿ ಇದೇ ಮೊದಲು ಎನ್ನಲಾದ ಸರಕು ಹೊಣೆಗಾರಿಕೆ (ಪ್ರಾಡಕ್ಟ್ ಲಯಬಿಲಿಟಿ) ಎಂಬ ಅಂಶವನ್ನು ಮಸೂದೆಯಲ್ಲಿ ಸೇರಿಸಲಾಗಿದೆ. ಅನೇಕ ರಾಷ್ಟ್ರಗಳಲ್ಲಿ ಇದಕ್ಕೆ ಪ್ರತ್ಯೇಕ ಕಾನೂನುಗಳಿವೆ. ಅದರಿಂದ ಗ್ರಾಹಕರಿಗೆ ಅನುಕೂಲವಾಗಿದೆ. ಯಾವುದಾದರೂ ಪದಾರ್ಥ ಅಥವಾ ಸರಕು ಅಪಾಯಕಾರಿಯಾಗಿದ್ದು, ಅದು ಬಳಕೆದಾರರ ಮೇಲೆ ದುಷ್ಪರಿಣಾಮ ಉಂಟುಮಾಡುವುದಾದರೆ, ಅದರ ವಿರುದ್ಧವೂ ಗ್ರಾಹಕರು ದೂರು ಸಲ್ಲಿಸಿ ಪರಿಹಾರ ಪಡೆಯಬಹುದಾಗಿದೆ. ಇದಕ್ಕೆ ಆರು ರೀತಿಯ ಷರತ್ತುಗಳಿವೆ. ‘ಸರಕು ತಯಾರಿಸುವ ಹಂತದಲ್ಲೇ ದೋಷವಿತ್ತು, ಅದರ ವಿನ್ಯಾಸ ಸರಿಯಿಲ್ಲ, ಸರಕನ್ನು ಉಪಯೋಗಿಸುವ ವಿಧಾನದ ಬಗ್ಗೆ ಸೂಚನೆ ಮತ್ತು ಎಚ್ಚರಿಕೆ ಇರಲಿಲ್ಲ, ಸರಕನ್ನು ಉಪಯೋಗಿಸಿದ್ದರಿಂದಲೇ ಅಪಾಯ ಸಂಭವಿಸಿತು’ ಇತ್ಯಾದಿಯನ್ನು ಗ್ರಾಹಕರು ಸಾಬೀತುಪಡಿಸಬೇಕು. ಮುಖ್ಯವಾಗಿ, ‘ಸರಕು ಅಪಾಯಕಾರಿ ಎಂಬ ಅಂಶ ತಯಾರಕರಿಗೆ ತಿಳಿದಿತ್ತು’ ಎಂಬುದನ್ನು ಸಾಬೀತುಪಡಿಸುವುದು ಗ್ರಾಹಕರ ಹೊಣೆ. ಆದರೆ ಇದು ಸಾಧ್ಯವೇ? ಅಲ್ಲದೆ ಪ್ರಾಡಕ್ಟ್ ಲಯಬಿಲಿಟಿ ಎನ್ನುವುದು ಸರಕುಗಳಿಗೆ ಮಾತ್ರ ಅನ್ವಯವಾಗುತ್ತದೆ. ಇದರಲ್ಲಿ ಅಪಾಯಕಾರಿ ಸೇವೆಗಳನ್ನೂ ಸೇರಿಸುವಂತೆ ಸ್ಥಾಯಿ ಸಮಿತಿ ಸೂಚಿಸಿದೆ. ಒಂದು ವೇಳೆ ಅಪಾಯಕಾರಿ ಸರಕನ್ನು ತಯಾರಿಸಿದವರನ್ನು ಪತ್ತೆ ಹಚ್ಚಲು ಆಗದಿದ್ದಲ್ಲಿ, ಅದರ ಹೊಣೆಯನ್ನು ಮಾರಾಟಗಾರರಿಗೆ ವರ್ಗಾಯಿಸಲಾಗುವುದು.

ಆನ್‍ಲೈನ್ ಮೂಲಕ (ಇ-ಕಾಮರ್ಸ್‌) ವಹಿವಾಟು ಹೆಚ್ಚಾಗುತ್ತಿರುವುದರಿಂದ ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗಳೂ ಹೆಚ್ಚಾಗಿವೆ. ಸರಕು ಖರೀದಿ ಮಾತ್ರವಲ್ಲದೆ ಬ್ಯಾಂಕ್‌, ಕ್ರೆಡಿಟ್ ಕಾರ್ಡ್ ವ್ಯವಹಾರದಲ್ಲೂ ಗ್ರಾಹಕರು ಹಣ ಕಳೆದುಕೊಳ್ಳುತ್ತಿದ್ದಾರೆ. ತಯಾರಕ, ಮಾರಾಟಗಾರ, ವಿತರಕ ಮತ್ತು ಗ್ರಾಹಕರು ಮುಖಾಮುಖಿಯಾಗುವ ಸಂಭವವಿಲ್ಲದ ಕಾರಣ ಈ ರೀತಿಯ ವಂಚನೆ ಕಂಡುಬರುತ್ತಿದೆ.

ಅನ್‍ಲೈನ್ ಸೇವೆಗಳು ಗ್ರಾಹಕ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಗೆ ಒಳಪಡುತ್ತವೆಯೇ ಅಥವಾ ಇಲ್ಲವೇ ಎಂಬ ಅನುಮಾನವಿತ್ತು. ಮಸೂದೆ ಅದಕ್ಕೆ ಸ್ಪಷ್ಟ ಉತ್ತರವನ್ನು ನೀಡಿದೆ. ಹಾದಿ ತಪ್ಪಿಸುವ ಜಾಹೀರಾತುಗಳಿಂದ ಗ್ರಾಹಕರಿಗೆ ಆಗುತ್ತಿರುವ ಮೋಸ, ವಂಚನೆ ಮತ್ತು ನಷ್ಟವನ್ನು ಸರಿಪಡಿಸಲು ಮಸೂದೆಯಲ್ಲಿ ಕೆಲವೊಂದು ಅಂಶಗಳನ್ನು ಸೇರಿಸಲಾಗಿದೆ. ಗ್ರಾಹಕರನ್ನು ಹಾದಿ ತಪ್ಪಿಸುವ ಜಾಹೀರಾತುಗಳನ್ನು ಅನುಚಿತ ವ್ಯಾಪಾರ ಪದ್ಧತಿಯಲ್ಲಿ ಸೇರಿಸಲಾಗಿದೆ. ಆ ರೀತಿಯ ಜಾಹೀರಾತು ನೀಡುವವರ ವಿರುದ್ಧ ದಂಡ ವಿಧಿಸಬಹುದಾಗಿದೆ. ಜಾಹೀರಾತುಗಳ ಮೂಲಕ ಸರಕು ಖರೀದಿಸುವಂತೆ ಪ್ರೇರೇಪಿಸುವ ಬ್ರ್ಯಾಂಡ್ ರಾಯಭಾರಿಗಳನ್ನು ಶಿಕ್ಷೆಗೆ ಗುರಿಪಡಿಸುವ ಪ್ರಸ್ತಾವವನ್ನು ಕೈಬಿಟ್ಟಂತೆ ತೋರುತ್ತಿದೆ. ಆದರೆ ಆಹಾರದ ವಿಷಯದಲ್ಲಿ ಸುಳ್ಳು ಜಾಹೀರಾತು ನೀಡಿದವರು ಗರಿಷ್ಠ ₹ 10 ಲಕ್ಷ ದಂಡ ತೆರಬೇಕಾಗುತ್ತದೆ.

ಅಮೆರಿಕದಲ್ಲಿರುವ ಫೆಡರಲ್ ಟ್ರೇಡ್ ಕಮಿಷನ್ ಮಾದರಿಯಲ್ಲಿ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವನ್ನು ಸ್ಥಾಪಿಸಲಾಗುವುದು. ಕೇಂದ್ರ ಮತ್ತು ವಲಯ ಮಟ್ಟದಲ್ಲಿ ಇದು ಕಾರ್ಯನಿರ್ವಹಿಸಲಿದೆ. ಈಗಿರುವ ರಾಜ್ಯ ಮತ್ತು ಜಿಲ್ಲಾ ವೇದಿಕೆಗಳಿಗೆ ಹೆಚ್ಚುವರಿಯಾಗಿ ಈ ಪ್ರಾಧಿಕಾರ ಇರುತ್ತದೆ. ಆದರೆ ಪ್ರಾಧಿಕಾರದ ಅಧಿಕಾರ, ಕರ್ತವ್ಯ ಮತ್ತು ಚಟುವಟಿಕೆ ವಿಭಿನ್ನವಾಗಿದ್ದು, ಗ್ರಾಹಕರ ಸಂರಕ್ಷಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವ ಉದ್ದೇಶ ಹೊಂದಿದೆ. ಪ್ರಾಧಿಕಾರವು ಒಬ್ಬ ಆಯುಕ್ತ ಮತ್ತು ಐದು ಮಂದಿ ಉಪ ಆಯುಕ್ತರನ್ನು ಹೊಂದಿರುತ್ತದೆ. ಗ್ರಾಹಕರ ಐದು ಹಕ್ಕುಗಳಿಗೆ ಒಬ್ಬೊಬ್ಬ ಉಪ ಆಯುಕ್ತರನ್ನು ನೇಮಕ ಮಾಡಲಾಗುವುದು.

ದೂರಸಂಪರ್ಕ ಮತ್ತು ವಿದ್ಯುತ್‌ ಕ್ಷೇತ್ರದಲ್ಲಿರುವ ನಿಯಂತ್ರಣ ಆಯೋಗದ ಮಾದರಿಯಲ್ಲಿ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಇರುತ್ತದೆ. ಇದು, ಗ್ರಾಹಕರ ಸಂರಕ್ಷಣೆಗೆ ಅಗತ್ಯವಾದ ನೀತಿ ರೂಪಿಸುತ್ತದೆ. ಗ್ರಾಹಕರಿಗೆ ಅನ್ಯಾಯವಾಗುತ್ತಿದ್ದರೆ, ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುತ್ತದೆ.

ಗ್ರಾಹಕರ ಸಮಸ್ಯೆಗಳನ್ನು ಮಧ್ಯಸ್ಥಿಕೆಯ ಮೂಲಕ ಪರಿಹರಿಸಲು ಒಂದು ವ್ಯವಸ್ಥೆಯನ್ನು ರೂಪಿಸಲಾಗುವುದು. ವೇದಿಕೆಗೆ ಗ್ರಾಹಕರು ಸಲ್ಲಿಸುವ ದೂರುಗಳಿಗೆ ಮಧ್ಯಸ್ಥಿಕೆಯ ಮೂಲಕ ಪರಿಹಾರ ಕಂಡುಕೊಳ್ಳುವ ಅವಕಾಶ ಇದ್ದರೆ, ಅದನ್ನು ಕೈಗೆತ್ತಿಕೊಳ್ಳಲು ಮಧ್ಯಸ್ಥಿಕೆ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

‘ಭಾರತದಲ್ಲಿ ಕಕ್ಷಿದಾರರ ಸಮಸ್ಯೆಗಳು ನಿಜವಾಗಿ ಉದ್ಭವಿಸುವುದೇ ನ್ಯಾಯಾಲಯ ಆದೇಶ ನೀಡಿದ ನಂತರ’ ಎಂಬ ಮಾತು ಇದೆ. ಇದು ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆಗಳ ಮಟ್ಟಿಗಂತೂ ನಿಜ. ವೇದಿಕೆ ಮತ್ತು ಆಯೋಗ ನೀಡುವ ಆದೇಶಗಳನ್ನು ಆಚರಣೆಗೆ ತರದಿದ್ದಲ್ಲಿ, ಗ್ರಾಹಕರು ಏನನ್ನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಆದರೆ ಉದ್ದೇಶಿತ ಮಸೂದೆಯ ಪ್ರಕಾರ, ಗ್ರಾಹಕ ವೇದಿಕೆಯ ಆದೇಶವನ್ನು ಅನುಷ್ಠಾನಗೊಳಿಸದಿದ್ದಲ್ಲಿ ತಪ್ಪಿತಸ್ಥರ ಮೇಲೆ ದಂಡ ವಿಧಿಸುವುದು ಮಾತ್ರವಲ್ಲ ಅವರನ್ನು ಜೈಲಿಗೆ ಕಳುಹಿಸುವ ಅಂಶವೂ ಇದೆ. ಕನಿಷ್ಠ ಒಂದು ತಿಂಗಳು ಮತ್ತು ಗರಿಷ್ಠ ಮೂರು ವರ್ಷ ಜೈಲು ಶಿಕ್ಷೆಗೆ ಗುರಿಪಡಿಸಬಹುದಾಗಿದೆ. ಜಿಲ್ಲಾ ವೇದಿಕೆ, ರಾಜ್ಯ ಮತ್ತು ರಾಷ್ಟ್ರೀಯ ಆಯೋಗದ ಆದೇಶದಂತೆ ನಡೆದುಕೊಳ್ಳದೇ ಇದ್ದರೆ ಗರಿಷ್ಠ ₹ 50 ಸಾವಿರ ದಂಡ ವಿಧಿಸಬಹುದಾಗಿದೆ. ಗ್ರಾಹಕ ಸಂರಕ್ಷಣಾ ಪ್ರಾಧಿಕಾರದ ಆದೇಶದಂತೆ ನಡೆದುಕೊಳ್ಳದಿದ್ದಲ್ಲಿ ಆರು ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಬೇಕಾದೀತು ಹಾಗೂ ಅಥವಾ ಗರಿಷ್ಠ ₹ 20 ಲಕ್ಷ ದಂಡ ತೆರಬೇಕಾಗಬಹುದು.

ಜಿಲ್ಲಾ ವೇದಿಕೆ, ರಾಜ್ಯ ಮತ್ತು ರಾಷ್ಟ್ರೀಯ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಸೇವಾ ನಿಯಮದ ಬಗ್ಗೆಯೂ ಕೆಲವೊಂದು ಬದಲಾವಣೆ ತರುವ ಪ್ರಯತ್ನ ಮಸೂದೆಯಲ್ಲಿದೆ. ಒಟ್ಟಾರೆ ಮುಂಬರುವ ವರ್ಷಗಳಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಗ್ರಾಹಕರಿಗೆ ಮತ್ತಷ್ಟು ಬಲಶಾಲಿ ಅಸ್ತ್ರ ದೊರೆಯಲಿದೆ.

(ಲೇಖಕ ಕೇಂದ್ರ ಗ್ರಾಹಕ ಸಂರಕ್ಷಣಾ ಪರಿಷತ್ತಿನ ಸದಸ್ಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT