ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಗೆಲುವಿನ ಹರ್ಷ, ಕಾಂಗ್ರೆಸ್‍ಗೆ ‘ಚೇತರಿಕೆ’ ವರ್ಷ

Last Updated 26 ಡಿಸೆಂಬರ್ 2017, 19:27 IST
ಅಕ್ಷರ ಗಾತ್ರ

ಇನ್ನೇನು ಇತಿಹಾಸವಾಗಲಿರುವ ‘2017’ ಭಾರತದ ರಾಜಕಾರಣದ ದಿಕ್ಕುದೆಸೆಯನ್ನು ಬದಲಾಯಿಸುವಂತಹ ಮಹತ್ವದ ಬೆಳವಣಿಗೆಗಳಿಗೆ ಕಾರಣವಾಗದಿದ್ದರೂ ಗಮನಾರ್ಹವಾದ ಹಲವು ವಿದ್ಯಮಾನಗಳನ್ನು ಕಂಡಿದೆ.

2014 ಲೋಕಸಭಾ ಚುನಾವಣೆಯಲ್ಲಿ ಆರಂಭವಾದ ಬಿಜೆಪಿಯ ಗೆಲುವಿನ ನಾಗಾಲೋಟ ಮುಂದುವರಿದಿದೆ. 2017ರ ಮೊದಲ ತ್ರೈಮಾಸಿಕದಲ್ಲಿಯೇ ದೇಶದ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್‍, ಮಣಿಪುರ ಮತ್ತು ಗೋವಾಗಳ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿಯೂ ನರೇಂದ್ರ ಮೋದಿ ಅವರ ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕುವುದು ಕಾಂಗ್ರೆಸ್‍ ಅಥವಾ ಇತರ ವಿರೋಧ ಪಕ್ಷಗಳಿಗೆ ಸಾಧ್ಯವಾಗಲಿಲ್ಲ.

ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಸಮಾಜವಾದಿ ಪಕ್ಷದ ಜತೆಗೆ ಕಾಂಗ್ರೆಸ್‍ ಮೈತ್ರಿ ಮಾಡಿಕೊಂಡರೂ ಈ ಮಿತ್ರಕೂಟಕ್ಕೆ ಸಿಕ್ಕಿದ್ದು 54 ಸ್ಥಾನಗಳು ಮಾತ್ರ. 403 ಕ್ಷೇತ್ರಗಳ ಪೈಕಿ 312 ಕ್ಷೇತ್ರಗಳಲ್ಲಿ ಗೆದ್ದು ಬಿಜೆಪಿ ಬೀಗಿತು. ಉತ್ತರಾಖಂಡದ 70 ಕ್ಷೇತ್ರಗಳ ಪೈಕಿ 57ರಲ್ಲಿ ಗೆದ್ದು ಅಲ್ಲಿಯೂ ಬಿಜೆಪಿ ಮೂರನೇ ಎರಡು ಬಹುಮತ ಪಡೆಯಿತು.

ಪಂಜಾಬ್‍ನಲ್ಲಿ ಮಾತ್ರ ಶಿರೋಮಣಿ ಅಕಾಲಿ ದಳ-ಬಿಜೆಪಿ ಮೈತ್ರಿಕೂಟವನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್‍ ಯಶಸ್ವಿಯಾಯಿತು. ಚುನಾವಣೆಗೆ ಮೊದಲು ಭಾರಿ ಸದ್ದು ಮಾಡಿದ್ದ, ಲೋಕಸಭಾ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳನ್ನು ಗೆದ್ದು ನಿರೀಕ್ಷೆ ಮೂಡಿಸಿದ್ದ ಆಮ್‍ ಆದ್ಮಿ ಪಕ್ಷ ದೊಡ್ಡ ಪರಿಣಾಮ ಬೀರಲಿಲ್ಲ.

ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‍ ಷಾ ಜೋಡಿಯ ರಾಜಕೀಯ ಚಾತುರ್ಯವನ್ನು ಸರಿಗಟ್ಟುವುದು ಸುಲಭವಲ್ಲ ಎಂಬುದು ಸಾಬೀತಾದದ್ದು ಗೋವಾ ಮತ್ತು ಮಣಿಪುರ ಸರ್ಕಾರ ರಚನೆಯಲ್ಲಿ. ಈ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್‍ ಅತಿ ದೊಡ್ಡ ಪಕ್ಷವಾಗಿ ಮೂಡಿ ಬಂದಿತ್ತು. ಸರಳ ಬಹುಮತದ ಸನಿಹದಲ್ಲಿತ್ತು. ಆದರೆ ಪಕ್ಷೇತರರು ಮತ್ತು ಸಣ್ಣ ಪಕ್ಷಗಳ ನೆರವು ಪಡೆದ ಬಿಜೆಪಿ ಈ ಎರಡೂ ರಾಜ್ಯಗಳಲ್ಲಿ ಸರ್ಕಾರ ರಚಿಸಿತು. ಈ ಮಿಂಚಿನ ಕಾರ್ಯಾಚರಣೆಯ ವೇಗ ಕಾಂಗ್ರೆಸ್‍ಗೆ ಅರ್ಥವೇ ಆಗಲಿಲ್ಲ.

ವರ್ಷದ ಕೊನೆಯ ಹೊತ್ತಿಗೆ ನವೆಂಬರ್‍-ಡಿಸೆಂಬರ್‍ನಲ್ಲಿ ಹಿಮಾಚಲ ಪ್ರದೇಶ ಮತ್ತು ಗುಜರಾತ್‍ ವಿಧಾನಸಭೆಗೆ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿಯೂ ಬಿಜೆಪಿ ಮೇಲುಗೈ ಸಾಧಿಸಿತು. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‍ ಆಡಳಿತವನ್ನು ಕಿತ್ತೊಗೆಯಿತು. ಗುಜರಾತಿನಲ್ಲಿ ಸತತ ಆರನೇ ಬಾರಿಗೆ ಗೆದ್ದು ಬಂತು. ಆದರೆ, ಗುಜರಾತಿನಲ್ಲಿ ಗೆಲ್ಲಲು ಬಿಜೆಪಿ ತಿಣುಕಾಡಬೇಕಾಯಿತು ಎಂಬುದು ಕಾಂಗ್ರೆಸ್‍ಗೆ ಭಾರಿ ಸಮಾಧಾನ ಕೊಟ್ಟಿದೆ.
182 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 99ರಲ್ಲಿ ಗೆಲ್ಲಲು ಮಾತ್ರ ಶಕ್ತವಾಯಿತು. ಕಾಂಗ್ರೆಸ್‍ 77ರಲ್ಲಿ ಗೆದ್ದಿತು. ಇದು ಈ ಪಕ್ಷ 1985ರ ಬಳಿಕ ಇಲ್ಲಿ ಪಡೆದ ಅತಿ ಹೆಚ್ಚು ಸ್ಥಾನಗಳು.

ಚುನಾವಣಾ ಪ್ರಚಾರವೂ ಬಿಜೆಪಿಗೆ ಆತಂಕ ಮೂಡಿಸಿದಂತೆ ಕಂಡಿತು. ಪ್ರಧಾನಿ ಮೋದಿ 34 ಸಮಾವೇಶಗಳಲ್ಲಿ ಭಾಗವಹಿಸಿದರು. ಗುಜರಾತ್‍ ಅಭಿವೃದ್ಧಿ ಮಾದರಿ ಮುಂದಿಟ್ಟು ದೇಶವನ್ನು ಗೆದ್ದಿದ್ದ ಮೋದಿ ಅವರಿಗೆ ಗುಜರಾತಿನಲ್ಲಿ ಅದೇ ವಿಕಾಸದ ಮಾದರಿಗೆ ಆತುಕೊಳ್ಳಲು ಸಾಧ್ಯವಾಗಲಿಲ್ಲ.

ಚುನಾವಣಾ ಪ್ರಚಾರವನ್ನು ವಿಕಾಸದ ಬದಲಿಗೆ ಕೋಮು ಧ್ರುವೀಕರಣದ ನೆಲೆಗೆ ಇಳಿಸಲು ಮೋದಿ ಯತ್ನಿಸಿದರು. ಕಾಂಗ್ರೆಸ್‍ನ ಅಹ್ಮದ್‍ ಪಟೇಲ್‍ ಅವರನ್ನು ಮುಖ್ಯಮಂತ್ರಿ ಮಾಡಲು ಪಾಕಿಸ್ತಾನದಲ್ಲಿ ಸಂಚು ನಡೆದಿದೆ ಎಂದು ಬಿಜೆಪಿ ಆರೋಪಿಸಿತು. ಮಾಜಿ ಪ್ರಧಾನಿ ಮನಮೋಹನ್‍ ಸಿಂಗ್‍ ಅವರು ಪಾಕಿಸ್ತಾನದ ಜತೆ ಸೇರಿ ಸಂಚು ಮಾಡಿದ್ದಾರೆ ಎಂದು ಪ್ರಧಾನಿ ಮೋದಿ ಆರೋಪಿಸಿದರು. ಚುನಾವಣೆಯಿಂದಾಗಿ ವಿಳಂಬವಾಗಿ ಆರಂಭವಾದ ಸಂಸತ್ತಿನ ಚಳಿಗಾಲದ ಅಧಿವೇಶನವೂ ಮೋದಿ ಅವರ ಹೇಳಿಕೆಗೆ ಬಲಿಯಾಯಿತು. ಪ್ರಧಾನಿ ಕ್ಷಮೆ ಕೇಳಬೇಕೆಂಬ ಪಟ್ಟನ್ನು ಕಾಂಗ್ರೆಸ್‍ ಸಡಿಲಿಸಲೇ ಇಲ್ಲ.

‘ಒಲ್ಲದ ರಾಜಕಾರಣಿ’ ಎಂದು ಬಿಜೆಪಿ ಬಿಂಬಿಸುತ್ತಿರುವ ಕಾಂಗ್ರೆಸ್‍ ಮುಖ್ಯಸ್ಥ ರಾಹುಲ್‍ ಗಾಂಧಿ ಗುಜರಾತ್‍ ಚುನಾವಣಾ ಪ್ರಚಾರದ ನೊಗವನ್ನು ತಮ್ಮ ಹೆಗಲ ಮೇಲೆ ಹೊತ್ತಿದ್ದರು. ಆ ರಾಜ್ಯದಲ್ಲಿ ಇನ್ನಿಲ್ಲದ ಪ್ರಚಾರ ನಡೆಸಿದರು. ಕಾರ್ಯತಂತ್ರ ರೂಪಿಸಿದರು. ಫಲಿತಾಂಶ ಬಂದಾಗ ಗೆಲುವು ಸಾಧ್ಯವಾಗದಿದ್ದರೂ ಪಕ್ಷದ ಬಲ ದೊಡ್ಡ ಮಟ್ಟದಲ್ಲಿಯೇ ಹೆಚ್ಚಿತ್ತು. ‘ನಮಗಿದು ನೈತಿಕ ಗೆಲುವು’ ಎಂದು ಕಾಂಗ್ರೆಸ್‍ ಹೇಳಿಕೊಂಡಿತು.
2017ರಲ್ಲಿ ಮೋದಿ-ಷಾ ಜೋಡಿ ಅಜೇಯವಾಗಿಯೇ ಉಳಿದರೆ, ಕಾಂಗ್ರೆಸ್‍ ಅಧ್ಯಕ್ಷರಾಗಿ ಆಯ್ಕೆಯಾದ ರಾಹುಲ್‍ ಮತ್ತು ಕಾಂಗ್ರೆಸ್‍ಗೆ ‘ಚೇತರಿಕೆ’ಯ ಭರವಸೆ ಹುಟ್ಟಿಸಿದೆ.

**

ರಾಷ್ಟ್ರಪತಿ ಚುನಾವಣೆ: ಬಿಹಾರ ಮಹಾಮೈತ್ರಿಗೆ ಬಿರುಕು

ಕೋವಿಂದ್‍ ರಾಷ್ಟ್ರಪತಿ

17 ಜುಲೈ: ರಾಷ್ಟ್ರಪತಿ ಆಯ್ಕೆಗೆ ಮತದಾನ

20 ಜುಲೈ: ಮತ ಎಣಿಕೆ

14ನೇ ರಾಷ್ಟ್ರಪತಿಯಾಗಿ ಎನ್‍ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್‍ ಆಯ್ಕೆ

ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‍ಡಿಎ ಅಭ್ಯರ್ಥಿಯ ವಿರುದ್ಧ ವಿರೋಧ ಪಕ್ಷಗಳೆಲ್ಲ ಒಗ್ಗೂಡಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು ಎಂಬ ಪ್ರಸ್ತಾಪವನ್ನು ಮುಂದಿಟ್ಟದ್ದು ಬಿಹಾರದ ಮಹಾಮೈತ್ರಿಕೂಟದ ಭಾಗವಾಗಿದ್ದ ಜೆಡಿಯುನ ಮುಖ್ಯಸ್ಥ ನಿತೀಶ್‍ ಕುಮಾರ್‍. ಬಿಹಾರದ ರಾಜ್ಯಪಾಲರಾಗಿದ್ದ, ದಲಿತ ಸಮುದಾಯಕ್ಕೆ ಸೇರಿದ ರಾಮನಾಥ ಕೋವಿಂದ್‍ ತಮ್ಮ ಅಭ್ಯರ್ಥಿ ಎಂದು ಜೂನ್‍ 19ರಂದು ಎನ್‍ಡಿಎ ಘೋಷಿಸಿತು. ಕೋವಿಂದ್‍ಗೆ ತಮ್ಮ ಬೆಂಬಲ ಎಂದು ನಿತೀಶ್‍ ಕುಮಾರ್‍ ಜೂನ್‍ 21ರಂದು ಪ್ರಕಟಿಸಿದರು.

ಇದು ವಿರೋಧ ಪಕ್ಷಗಳಿಗೆ ಅಷ್ಟೊಂದು ಇಷ್ಟವಾಗಲಿಲ್ಲ. ಲಾಲು ಪ್ರಸಾದ್‍ ಅವರ ಆರ್‍ಜೆಡಿ-ಜೆಡಿಯು-ಕಾಂಗ್ರೆಸ್‍ ನಡುವೆ ಬಿಹಾರದಲ್ಲಿ ಏರ್ಪಟ್ಟಿದ್ದ ಮಹಾಮೈತ್ರಿಕೂಟದಲ್ಲಿ ಮೂಡಿದ ಮೊದಲ ಬಿರುಕು ಇದು. ಲೋಕಸಭೆಯ ಮಾಜಿ ಸ್ಪೀಕರ್‍, ದಲಿತ ಸಮುದಾಯಕ್ಕೆ ಸೇರಿದ, ಬಿಹಾರದವರೇ ಆದ ಮೀರಾಕುಮಾರ್‍ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಕಾಂಗ್ರೆಸ್‍ ಘೋಷಿಸಿದರೂ ನಿತೀಶ್‍ ಮನಸು ಬದಲಿಸಲಿಲ್ಲ.

ಬಿರುಕು ಇನ್ನೂ ಆಳ: ಯುಪಿಎ ಸರ್ಕಾರದಲ್ಲಿ ಲಾಲು ಪ್ರಸಾದ್‍ ರೈಲ್ವೆ ಸಚಿವರಾಗಿದ್ದಾಗ ರೈಲ್ವೆಯ ಹೋಟೆಲುಗಳನ್ನು ಖಾಸಗಿಯವರಿಗೆ ಗುತ್ತಿಗೆಗೆ ನೀಡಿ ಪ್ರತಿಫಲವಾಗಿ ನಿವೇಶನ ಪಡೆದಿದ್ದಾರೆ ಎಂಬ ಪ್ರಕರಣದಲ್ಲಿ ಬಿಹಾರದ ಉಪಮುಖ್ಯಮಂತ್ರಿಯಾಗಿದ್ದ ತೇಜಸ್ವಿ ಯಾದವ್‍ ಹೆಸರು ಕೂಡ ಇತ್ತು. ತೇಜಸ್ವಿ ಆರೋಪಮುಕ್ತರಾಗಿ ಬರಬೇಕು ಎಂದು ನಿತೀಶ್‍ ಹೇಳಿದ್ದು ಮಹಾಮೈತ್ರಿಕೂಟದ ಬಿರುಕನ್ನು ಇನ್ನಷ್ಟು ಆಳವಾಗಿಸಿತು. ಆರ್‍ಜೆಡಿ ಮತ್ತು ಜೆಡಿಯು ಮುಖಂಡರ ಹೇಳಿಕೆ-ಪ್ರತಿ ಹೇಳಿಕೆಗಳು ಮೈತ್ರಿಕೂಟವನ್ನು ಮುರಿದು ಬೀಳುವ ಹಂತಕ್ಕೆ ತಂದು ನಿಲ್ಲಿಸಿದವು. ಜುಲೈ 26ರಂದು ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್‍ ರಾಜೀನಾಮೆ ನೀಡಿದರು. ಬಳಿಕ, ಬಿಜೆಪಿ ಜತೆ ಸೇರಿ ಹೊಸ ಸರ್ಕಾರ ರಚಿಸಿದರು.

ಬಿಜೆಪಿ ವಿರುದ್ಧ ಮುಂದಿನ ಚುನಾವಣೆಗಳಲ್ಲಿ ಅನುಸರಿಸಬಹುದಾದ ಅತ್ಯುತ್ತಮ ಮಾದರಿ ಎಂದು ವಿರೋಧ ಪಕ್ಷಗಳು ಭಾವಿಸಿದ್ದ ರಾಜಕೀಯ ಪ್ರಯೋಗಕ್ಕೆ ಹೀಗೆ ದೊಡ್ಡ ಹೊಡೆತ ಬಿತ್ತು ಮಾತ್ರವಲ್ಲ, ಆ ಪ್ರಯೋಗ ಬಿಜೆಪಿಗೆ ಅನುಕೂಲಕರವಾಗಿ ಪರಿಣಮಿಸಿತು.

ಉಪರಾಷ್ಟ್ರಪತಿ ಚುನಾವಣೆ

ಆಗಸ್ಟ್‌ ಐದರಂದು ನಡೆದ ಚುನಾವಣೆಯಲ್ಲಿ ಉಪರಾಷ್ಟ್ರಪತಿಯಾಗಿ ಎನ್‍ಡಿಎ ಅಭ್ಯರ್ಥಿ ವೆಂಕಯ್ಯ ನಾಯ್ಡು ಆಯ್ಕೆಯಾದರು. ನಾಯ್ಡು 516 ಮತ ಪಡೆದರೆ, ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿದ್ದ ಗೋಪಾಲಕೃಷ್ಣ ಗಾಂಧಿಗೆ 244 ಮತಗಳು ದೊರೆತವು.

ನಿರ್ಗಮನ: ಪ್ರಣವ್‍ ಮುಖರ್ಜಿ, ರಾಷ್ಟ್ರಪತಿ, ಹಮೀದ್‍ ಅನ್ಸಾರಿ, ಉಪರಾಷ್ಟ್ರಪತಿ

ಆಗಮನ: ರಾಮನಾಥ ಕೋವಿಂದ್‍ ರಾಷ್ಟ್ರಪತಿ, ವೆಂಕಯ್ಯನಾಯ್ಡು, ಉಪರಾಷ್ಟ್ರಪತಿ

**

ಮೇಲ್ಮನೆ ಇತಿಹಾಸದಲ್ಲೇ ಅತಿ ದೊಡ್ಡ ಹಣಾಹಣಿ

ಆಗಸ್ಟ್‌ನಲ್ಲಿ ಗುಜರಾತ್‍ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆ, ಮೇಲ್ಮನೆ ಇತಿಹಾಸದಲ್ಲಿಯೇ ಅತ್ಯಂತ ರೋಚಕ. ಮೂರು ಸ್ಥಾನಗಳಿಗೆ ನಾಲ್ವರು ಅಭ್ಯರ್ಥಿಗಳ ನಡುವೆ ಸ್ಪರ್ಧೆ ಇತ್ತು. ಬಿಜೆಪಿ ಅಧ್ಯಕ್ಷ ಅಮಿತ್ ಷಾ ಇದೇ ಮೊದಲ ಬಾರಿಗೆ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದರು. ಮತ್ತೊಂದು ಸ್ಥಾನ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪಾಲಾಯಿತು. ಉಳಿದ ಒಂದು ಸ‍್ಥಾನಕ್ಕೆ ಕಾಂಗ್ರೆಸ್‍ನಿಂದಲೇ ವಲಸೆ ಹೋದ ಬಿಜೆಪಿಯ ಬಲವಂತಸಿಂಹ ರಜಪೂತ್‍ ಮತ್ತು ಆಗ ಕಾಂಗ್ರೆಸ್‍ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಕಾರ್ಯದರ್ಶಿ ಅಹ್ಮದ್‍ ಪಟೇಲ್‍ ನಡುವೆ ಸ್ಪರ್ಧೆ ಇತ್ತು.

ಆಯ್ಕೆಗೆ 45 ಮತಗಳು ಬೇಕಿದ್ದವು. ಶಾಸಕರ ರಾಜೀನಾಮೆ, ಬಂಡಾಯ ಮತ್ತು ಪಕ್ಷಾಂತರದಿಂದಾಗಿ ಕಾಂಗ್ರೆಸ್‍ ಕೈಯಲ್ಲಿ ಇದ್ದ ಮತಗಳು 43 ಮಾತ್ರ. ಎನ್‍ಸಿಪಿಯ ಇಬ್ಬರು ಶಾಸಕರು ಮತ್ತು ಜೆಡಿಯುನ ಒಬ್ಬ ಶಾಸಕನ ಮತಗಳ ಮೇಲೆ ಕಾಂಗ್ರೆಸ್‍ ನಿರೀಕ್ಷೆ ನೆಲೆಯಾಗಿತ್ತು.

ಕಾಂಗ್ರೆಸ್‍ನ ಇಬ್ಬರು ಬಂಡಾಯ ಶಾಸಕರು ತಮ್ಮ ಮತಗಳನ್ನು ಬಿಜೆಪಿ ಅಭ್ಯರ್ಥಿ ಅಮಿತ್‍ ಷಾಗೆ ತೋರಿಸುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್‍ ನೀಡಿದ ದೂರನ್ನು ಮನ್ನಿಸಿದ ಚುನಾವಣಾ ಆಯೋಗ ಆ ಇಬ್ಬರನ್ನು ಅನರ್ಹಗೊಳಿಸಿತು. ಹೀಗಾಗಿ ಗೆಲುವಿಗೆ ಬೇಕಾದ ಮತಗಳ ಸಂಖ್ಯೆ 44ಕ್ಕೆ ಇಳಿಯಿತು. ಅಹ್ಮದ್‍ ಪಟೇಲ್‍ಗೆ 44 ಮತಗಳು ಸಿಕ್ಕಿ ಅವರು ಗೆದ್ದರು. ಎನ್‍ಸಿಪಿಯ ಇಬ್ಬರು ಮತ್ತು ಜೆಡಿಯುನ ಒಬ್ಬ ಶಾಸಕರ ಪೈಕಿ ಅಹ್ಮದ್‍ ಪಟೇಲ್‍ಗೆ ಮತ ಹಾಕಿದವರು ಯಾರು ಎಂಬುದು ಪ್ರಶ್ನೆಯಾಗಿಯೇ ಉಳಿಯಿತು.

ತಮಿಳುನಾಡು: ಹಲವು ಬಿಕ್ಕಟ್ಟುಗಳ ನಡುವೆಯೂ ಉಳಿದ ಸರ್ಕಾರ

ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಮುಖ್ಯಸ್ಥೆ ಮತ್ತು ಮುಖ್ಯಮಂತ್ರಿ ಜಯಲಲಿತಾ ಅವರು 2016ರ ಡಿಸೆಂಬರ್‍ 5ರಂದು ನಿಧನರಾಗುವುದರೊಂದಿಗೆ ತಮಿಳುನಾಡು ರಾಜಕೀಯ ಬಿಕ್ಕಟ್ಟಿನತ್ತ ಸಾಗತೊಡಗಿತು. ಜಯಲಲಿತಾ ಮರಣಾನಂತರ ಒ.ಪನ್ನೀರ್‍ಸೆಲ್ವಂ ಮುಖ್ಯಮಂತ್ರಿಯಾದರು. ಆದರೆ, ಎಐಎಡಿಎಂಕೆ ಮುಖ್ಯಸ್ಥೆಯಾಗಿ ಜಯಲಲಿತಾ ಆಪ್ತರಾಗಿದ್ದ ವಿ.ಕೆ. ಶಶಿಕಲಾ ಈ ಫೆಬ್ರುವರಿಯಲ್ಲಿ ನೇಮಕ ಆದ ಎರಡು ದಿನಗಳ ಬಳಿಕ ಪನ್ನೀರ್‍ಸೆಲ್ವಂ ರಾಜೀನಾಮೆ ನೀಡಿದರು. ನಂತರ, ಶಶಿಕಲಾ ಒತ್ತಡದಿಂದಾಗಿ ರಾಜೀನಾಮೆ ನೀಡಬೇಕಾಯಿತು ಎಂದು ಜಯಲಲಿತಾ ಸಮಾಧಿ ಮುಂದೆ ನಿಂತು ಹೇಳಿದ ಪನ್ನೀರ್‍ಸೆಲ್ವಂ, ಶಶಿಕಲಾ ವಿರುದ್ಧ ಬಂಡಾಯದ ಬಾವುಟ ಹಾರಿಸಿದರು.

ಹಂಗಾಮಿ ಮುಖ್ಯಮಂತ್ರಿಯಾದ ಪನ್ನೀರ್‍ಸೆಲ್ವಂಗೆ ಅವರ ಬಂಡಾಯದ ಬಳಿಕ ಸಂಪುಟದ ಸಹೋದ್ಯೋಗಿಗಳೇ ಸಹಕಾರ ನೀಡಲಿಲ್ಲ. ಎಐಎಡಿಎಂಕೆ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದ 135 ಶಾಸಕರ ಪೈಕಿ 131 ಮಂದಿ ಹಾಜರಾಗಿ ಬೆಂಬಲ ಘೋಷಿಸಿದ್ದಾರೆ ಎಂದು ಶಶಿಕಲಾ ಗುಂಪು ಹೇಳಿಕೊಂಡಿತು.

ಶಾಸಕರ ಬೆಂಬಲದ ಪತ್ರವನ್ನು ಕಳುಹಿಸಿದರೂ ರಾಜ್ಯಪಾಲ ವಿದ್ಯಾಸಾಗರ ರಾವ್‍ ತಮ್ಮನ್ನು ಸರ್ಕಾರ ರಚನೆಗೆ ಆಹ್ವಾನಿಸಿಲ್ಲ ಎಂದು ಶಶಿಕಲಾ ಅತೃಪ್ತಿ ವ್ಯಕ್ತಪಡಿಸಿದ ಪ್ರಸಂಗವೂ ನಡೆಯಿತು. ಕೇಂದ್ರದ ಆಣತಿಯಂತೆ ರಾಜ್ಯಪಾಲರು ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‍ ಪಕ್ಷ ಆರೋಪಿಸಿತು.

ಈ ಮಧ್ಯೆ, ಜಯಲಲಿತಾ ಮತ್ತು ಶಶಿಕಲಾ ಅವರು ಆರೋಪಿಗಳಾಗಿದ್ದ ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾಗೆ ಸುಪ್ರೀಂ ಕೋರ್ಟ್‍ ಫೆಬ್ರುವರಿ 14ರಂದು ನಾಲ್ಕು ವರ್ಷಗಳ ಶಿಕ್ಷೆ ವಿಧಿಸಿತು. ಶಶಿಕಲಾ ಈಗ ಬೆಂಗಳೂರಿನ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಶಿಕ್ಷೆಯ ಬಳಿಕ ಆರು ವರ್ಷ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ.

ಫೆಬ್ರುವರಿ 16ರಂದು ಎಡಪ್ಪಾಡಿ ಕೆ. ಪಳನಿಸ್ವಾಮಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಬಳಿಕ, ತಮ್ಮ ಅಣ್ಣನ ಮಗ ಟಿ.ಟಿ.ವಿ. ದಿನಕರನ್‍ ಅವರನ್ನು ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ಜೈಲಿನಿಂದಲೇ ನೇಮಕ ಮಾಡಿದರು. ಪಳನಿಸ್ವಾಮಿ ಮತ್ತು ಪನ್ನೀರ್‍ಸೆಲ್ವಂ ಬಣಗಳು ಒಂದಾದವು. ಪಕ್ಷದ 17 ಶಾಸಕರು ದಿನಕರನ್‍ಗೆ ಬೆಂಬಲ ಘೋಷಿಸಿದರು. ಪಳನಿಸ್ವಾಮಿ ಸರ್ಕಾರ ಅಲ್ಪಮತಕ್ಕೆ ಕುಸಿದರೂ ಈ 17 ಶಾಸಕರನ್ನು ಸ್ಪೀಕರ್‍ ಅನರ್ಹಗೊಳಿಸಿದ್ದರಿಂದ ಸರ್ಕಾರ ಉಳಿಯಿತು. ಈ ಪ್ರಕರಣ ಮದ್ರಾಸ್‍ ಹೈಕೋರ್ಟ್‍ನಲ್ಲಿ ಇನ್ನೂ ವಿಚಾರಣೆಗೆ ಬಾಕಿ ಇದೆ. ಈ ಮಧ್ಯೆ, ಶಶಿಕಲಾಗೆ ಸೇರಿದ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಶೋಧವೂ ನಡೆಯಿತು.

ಜಯಲಲಿತಾ ಸಾವಿನಿಂದ ತೆರವಾಗಿದ್ದ ಆರ್‍.ಕೆ. ನಗರ ವಿಧಾನಸಭಾ ಕ್ಷೇತ್ರಕ್ಕೆ ವರ್ಷದ ಕೊನೆಗೆ ನಡೆದ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಭಾರಿ ಅಂತರದಿಂದ ದಿನಕರನ್‍ ಗೆದ್ದರು. ಮೂರು ತಿಂಗಳಿನಲ್ಲಿ ಸರ್ಕಾರ ಉರುಳಿಸುವುದಾಗಿ ಗೆದ್ದ ಬಳಿಕ ಅವರು ಹೇಳಿದ್ದಾರೆ. ಹಾಗಾಗಿ ಇನ್ನೊಂದು ಸುತ್ತಿನ ಬಿಕ್ಕಟ್ಟಿಗೆ ತಮಿಳುನಾಡು ಸಜ್ಜಾಗುತ್ತಿದೆ.

ಕಾಂಗ್ರೆಸ್‍ ಅಧ್ಯಕ್ಷ ಸ್ಥಾನ

ಸೋನಿಯಾ ನಿರ್ಗಮನ: ರಾಹುಲ್‍ ಆಗಮನ

19 ವರ್ಷ ಕಾಂಗ್ರೆಸ್‍ ಪಕ್ಷದ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ, ಆ ಸ್ಥಾನವನ್ನು ತೆರವು ಮಾಡಿದರು. ಆ ಹುದ್ದೆಗೆ ಮಗ ರಾಹುಲ್‍ ಗಾಂಧಿ ಆಯ್ಕೆಯಾಗಿದ್ದಾರೆ. ಈ ಸ್ಥಾನಕ್ಕೆ ಏರಿದ ನೆಹರೂ-ಗಾಂಧಿ ಮನೆತನದ ಆರನೇ ವ್ಯಕ್ತಿ ರಾಹುಲ್‍.

**

ಸದ್ದು ಮಾಡಿದ ಜಯ್ ಷಾ ವಹಿವಾಟು, ರಫೇಲ್‌ ಒಪ್ಪಂದ

ಚುನಾವಣಾ ರಾಜಕೀಯದಲ್ಲಿ ಗೆಲುವಿನ ಓಟವನ್ನು ಮುಂದುವರೆಸಿರುವ ಬಿಜೆಪಿ 2017ರಲ್ಲಿ ಎರಡು ವಿಚಾರಗಳಲ್ಲಿ ರಾಜಕೀಯವಾಗಿ ತೀವ್ರ ಮುಜುಗರ ಅನುಭವಿಸಬೇಕಾಯಿತು. ಒಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಮಗ ಜಯ್‌ ಷಾ ಕಂಪೆನಿಯ ವಹಿವಾಟು ಹೆಚ್ಚಳದ ವಿಚಾರವಾಗಿ. ಇನ್ನೊಂದು ಫ್ರಾನ್ಸ್‌ ಜೊತೆಗಿನ ರಫೇಲ್‌ ಯುದ್ಧವಿಮಾನ ಖರೀದಿ ಒಪ್ಪಂದ.

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದ ನಂತರದ ಒಂದು ವರ್ಷದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಮಗ ಜಯ್‌ ಷಾ ಒಡೆತನದ ಕಂಪೆನಿ ‘ಟೆಂಪಲ್‌ ಎಂಟರ್‌ಪ್ರೈಸಸ್‌’ನ ವರಮಾನ ₹50 ಸಾವಿರದಿಂದ ₹80ಕೋಟಿಗೆ ಹೆಚ್ಚಿದೆ ಎಂದು ‘ದಿ ವೈರ್‌’ ಸುದ್ದಿತಾಣ ಅಕ್ಟೋಬರ್‌ನಲ್ಲಿ ಮಾಡಿದ ವರದಿ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸಿತು. ‘ಇದೆಲ್ಲ ಸುಳ್ಳು ಆರೋಪ’ ಎಂದು ಸ್ಪಷ್ಟೀಕರಣ ನೀಡಿದ ಜಯ್‌ ಷಾ, ‘ದಿ ವೈರ್‌’ ವಿರುದ್ಧ ₹100 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆಯನ್ನೂ ಹೂಡಿದ್ದಾರೆ.

‘ರಫೇಲ್‌ ಯುದ್ಧವಿಮಾನ ಖರೀದಿ ಸಂಬಂಧ ಫ್ರಾನ್ಸ್‌ನೊಂದಿಗೆ ಹಿಂದೆ ಯುಪಿಎ ಸರ್ಕಾರ ರೂಪಿಸಿದ್ದ ಒಪ್ಪಂದದ ಕರಡಿಗೂ ಎನ್‌ಡಿಎ ಮಾಡಿಕೊಂಡಿರುವ ಒಪ್ಪಂದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಯುದ್ಧವಿಮಾನಗಳಿಗೆ ಹೆಚ್ಚು ಹಣ ನಿಗದಿ ಪಡಿಸಲಾಗಿದೆ. ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಉದ್ಯಮಿ ಅನಿಲ್‌ ಧೀರೂಭಾಯಿ ಅಂಬಾನಿ ಇದ್ದರು. ವೈಮಾಂತರಿಕ್ಷ ಕ್ಷೇತ್ರದಲ್ಲಿ ಇನ್ನೂ ಅನುಭವ ಹೊಂದಿಲ್ಲದ ಅವರ ಕಂಪೆನಿಯು ರಫೇಲ್‌ ಯುದ್ಧವಿಮಾನವನ್ನು ತಯಾರಿಸುವ ಡಸಾಲ್ಟ್‌ ಏವಿಯೇಷನ್‌ ಸಂಸ್ಥೆಯೊಂದಿಗೆ ಜಂಟಿ ಸಹಭಾಗಿತ್ವಕ್ಕೆ ಸಹಿ ಹಾಕಿದೆ. ಅಂಬಾನಿ ಅವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಈ ರೀತಿ ಮಾಡಲಾಗಿದೆ’ ಎಂಬ ಕಾಂಗ್ರೆಸ್‌ ಆರೋಪವೂ ರಾಜಕೀಯವಾಗಿ ಭಾರಿ ಸದ್ದು ಮಾಡಿತು.

ಗುಜರಾತ್ ಚುನಾವಣೆಯಲ್ಲಿ ಈ ಎರಡೂ ವಿಚಾರಗಳನ್ನು ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಬಳಸಿಕೊಂಡರೆ, ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಮುಗಿಬಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT