ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡದಿ: ಜಾನುವಾರು ಜಾತ್ರೆ ಆರಂಭ

Last Updated 27 ಡಿಸೆಂಬರ್ 2017, 6:08 IST
ಅಕ್ಷರ ಗಾತ್ರ

ಬಿಡದಿ: ಇಲ್ಲಿನ ಮಂಚನಾಯನ ಹಳ್ಳಿಯಲ್ಲಿರುವ ಕೋತಿ ಆಂಜನೇ ಯಸ್ವಾಮಿ ದೇಗುಲದ ಆಶ್ರಯದಲ್ಲಿ ಜಾನುವಾರು ಜಾತ್ರೆಗೆ ಮಂಗಳವಾರ ಚಾಲನೆ ದೊರೆಯಿತು. ದೇಗುಲದ ಸಮೀಪದ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ನೀಲಗಿರಿ ತೋಪು ಹಾಗೂ ಎದುರಿನ ಮೈದಾನದಲ್ಲಿ ರೈತರು ತಮ್ಮ ಜಾನುವಾ ರುಗಳೊಂದಿಗೆ ಬೀಡು ಬಿಟ್ಟಿದ್ದಾರೆ. ಮೊದಲ ದಿನ ದಂದು ಬೆಳಿಗ್ಗೆಯಿಂದಲೇ ಕೃಷಿಕರು ಜಾನು ವಾರುಗಳೊಂದಿಗೆ ಧಾವಿಸಿದರು.

ಮಧ್ಯಾಹ್ನದ ನಂತರದ ದನಗಳ ಸಂಖ್ಯೆಯಲ್ಲಿ ಕೊಂಚ ಹೆಚ್ಚಳ ಕಂಡು ಬಂತು. ಬುಧವಾರದಿಂದ ಜಾನುವಾರು ಜಾತ್ರೆ ಚುರುಕುಗೊಳ್ಳುವ ನಿರೀಕ್ಷೆ ಇದೆ. ಬಿಡದಿ ಹಾಗೂ ಸುತ್ತಲಿನ ಗ್ರಾಮಗಳ ಜೊತೆಗೆ ಜಿಲ್ಲೆಯ ವಿವಿಧ ಭಾಗಗಳಿಂದ ರೈತರು ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ.

ಜನವರಿ 1ರವರೆಗೆ ಈ ಜಾತ್ರೆ ಮುಂದುವರಿಯಲಿದೆ. ನಾಟಿ ತಳಿಗಳ ದನಗಳಿಂದ ಹಿಡಿದು ಜರ್ಸಿ ಮೊದಲಾದ ಹೈಬ್ರೀಡ್‌ ತಳಿಗಳವರೆಗೆ ಬಗೆಬಗೆಯ ತಳಿಯ ಜಾನುವಾರುಗಳು ಮೇಳದಲ್ಲಿ ಭಾಗಿಯಾಗಿ ಕೊಳ್ಳುವವರನ್ನು ಆಕರ್ಷಿಸುವ ಪ್ರಯತ್ನ ಮಾಡಲಿವೆ. ಮೊದಲ ದಿನದಂದು ₹1.5 ಲಕ್ಷದಿಂದ 2 ಲಕ್ಷದ ಮೌಲ್ಯದ ವರೆಗಿನ ಎತ್ತುಗಳೂ ಬಂದಿದ್ದವು.

ಮಂಗಳವಾರ ಬಿಡದಿ ಹಾಗೂ ಸುತ್ತಲಿನ ರೈತರೇ ಹೆಚ್ಚಿನ ಸಂಖ್ಯೆಯಲ್ಲಿ ದನಗಳನ್ನು ಜಾತ್ರೆಗೆ ಕರೆ ತಂದಿದ್ದರು. ಎಳೆಯ ವಯಸ್ಸಿನ, ದೃಢ ಕಾಯದ ಎತ್ತುಗಳು ಎಲ್ಲರ ಗಮನ ಸೆಳೆದವು. ಏನಿದ್ದರೂ ಲಕ್ಷ ರೂಪಾಯಿ ಮೇಲೆಯೇ ಇವುಗಳ ವ್ಯಾಪಾರ ಎನ್ನುತ್ತಾ ರೈತರು ತಮ್ಮ ಎತ್ತುಗಳ ಗುಣಗಾನದಲ್ಲಿ ತೊಡಗಿದ್ದರು.

ಈ ವರ್ಷ ಉತ್ತಮ ಮಳೆ–ಬೆಳೆ ಆಗಿರುವುದರಿಂದ ಜಾನುವಾರುಗಳಿಗೂ ಬೇಡಿಕೆ ಹೆಚ್ಚಿದೆ. ಜಿಲ್ಲೆಯಾದ್ಯಂತ ರಾಗಿ ಕಟಾವಿನ ಸಿದ್ಧತೆ ನಡೆಸಿರುವ ಅನ್ನದಾತರು ಅದರ ಜೊತೆಗೆ ದನಗಳ ಈ ಕೊಡು–ಕೊಳ್ಳುವಿಕೆಯ ವ್ಯಾಪಾರದಲ್ಲಿ ಭಾಗಿ ಆಗಿದ್ದಾರೆ. ಸಹಜವಾಗಿಯೇ ದನಗಳ ಮೌಲ್ಯ ಹೆಚ್ಚಾಗಿದೆ. ಹೀಗಾಗಿ ತಾವು ತಂದಿರುವ ಎತ್ತುಗಳಿಗೆ ಉತ್ತಮ ಬೆಲೆ ಸಿಗಬಹುದು ಎನ್ನುವ ನಿರೀಕ್ಷೆ ಕೆಲವು ರೈತರದ್ದಾಗಿದೆ. ಮತ್ತೆ ಕೆಲವರು ಕಡಿಮೆ ಖರ್ಚಿನಲ್ಲಿ ಉತ್ತಮ ಎತ್ತಿನ ಜೋಡಿ ಹುಡುಕಿಕೊಳ್ಳುವ ಆಶಾಭಾವದೊಂದಿಗೆ ಇಲ್ಲಿಗೆ ಬರುತ್ತಿದ್ದಾರೆ.

‘ದನಗಳ ಜಾತ್ರೆ ಈಗಷ್ಟೇ ಆರಂಭಗೊಳ್ಳುತ್ತಿದ್ದು, ಒಂದೊಂದೇ ಜೋಡಿ ಹೊರಗೆ ಬರುತ್ತಿವೆ. ಇನ್ನೇನಿದ್ದರೂ ನಾಳೆ ಮೇಲೆ ವ್ಯಾಪಾರ ಜೋರು’ ಎಂದು ವಾಜರಹಳ್ಳಿಯಿಂದ ಬಂದಿದ್ದ ರೈತ ಬ್ಯಾಟಪ್ಪ ಹೇಳಿದರು. ‘ಕಳೆದ ನಾಲ್ಕು ವರ್ಷ ಕಾಲ ಸತತ ಬರಗಾಲದಿಂದ ಜನ ಕಂಗೆಟ್ಟಿದ್ದು, ಜಾನುವಾರುಗಳನ್ನು ಮಾರುವ ಪರಿಸ್ಥಿತಿ ಬಂದಿತ್ತು. ಈ ವರ್ಷ ಅಂತಹ ಪರಿಸ್ಥಿತಿ ಇಲ್ಲ. ದನಗಳಿಗೆ ನೀರು–ಮೇವಿಗೆ ತೊಂದರೆ ಆಗುತ್ತಿಲ್ಲ. ಹೀಗಾಗಿ ಉತ್ತಮ ವ್ಯಾಪಾರ ನಡೆಯಬಹುದು’ ಎಂದು ಅವರು ಆಶಯ ವ್ಯಕ್ತಪಡಿಸಿದರು.

‘ಜಾತ್ರೆ ಇಂದು ಆರಂಭಗೊಂಡಿದ್ದು, ಇನ್ನೂ ಸಾಕಷ್ಟು ಸಂಖ್ಯೆಯಲ್ಲಿ ಜನ–ಜಾನುವಾರುಗಳು ಬರಬೇಕಿದೆ. ದಲ್ಲಾಳಿಗಳು ಬಂದ ಮೇಲೆ ವ್ಯಾಪಾರ ಕಳೆಗಟ್ಟುತ್ತದೆ. ಬುಧವಾರ ಎತ್ತುಗಳ ಮೆರವಣಿಗೆ ಮೂಲಕ ಇನ್ನಷ್ಟು ರೈತರು ಬರಲಿದ್ದಾರೆ. ಭಾರಿ ಎತ್ತುಗಳು ಗಮನ ಸೆಳೆಯಲಿವೆ’ ಎಂದು ರೈತ ಮಲ್ಲೇಶ್‌ ಹೇಳಿದರು.

ಜಾತ್ರೆಗೆಂದು ಬರುವ ಜಾನುವಾರುಗಳಿಗೆ ನೀರು–ಮೇವಿನ ವ್ಯವಸ್ಥೆ ಮಾಡುತ್ತಿದ್ದು, ರೈತರಿಗೆ ಅನುಕೂಲವಾದ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸುವುದಾಗಿ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ತಿಳಿಸಿದರು.

* * 

ಈ ವರ್ಷ ಮಳೆ–ಬೆಳೆ ಉತ್ತಮವಾಗಿರುವ ಕಾರಣ ಜಾನುವಾರು ಜಾತ್ರೆ ಕಳೆಗಟ್ಟಿದೆ. ವ್ಯಾಪಾರ ಜೋರಾಗಿ ನಡೆಯುವ ನಿರೀಕ್ಷೆ ಇದೆ
ಬ್ಯಾಟಪ್ಪ
ರೈತ, ವಾಜರಹಳ್ಳಿ
(ಚಿತ್ರ: 26ಆರ್ಎಂಜಿ4)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT