ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿಯಿಂದ 43 ತೊಗರಿ ಖರೀದಿ ಕೇಂದ್ರ ಆರಂಭ ?

Last Updated 27 ಡಿಸೆಂಬರ್ 2017, 6:30 IST
ಅಕ್ಷರ ಗಾತ್ರ

ವಿಜಯಪುರ: ಮುಕ್ತ ಮಾರುಕಟ್ಟೆಯಲ್ಲಿ ತೊಗರಿ ಧಾರಣೆ ಪಾತಾಳಕ್ಕೆ ಕುಸಿದಿದ್ದು, ಬೆಂಬಲ ಬೆಲೆಯಡಿ ಖರೀದಿ ಕೇಂದ್ರಗಳನ್ನು ಆರಂಭಿಸಲು ಜಿಲ್ಲಾಡಳಿತ ಪೂರ್ವ ತಯಾರಿಯನ್ನು ಬಿರುಸುಗೊಳಿಸಿದೆ. ಜಿಲ್ಲೆಯ ಎಂಟು ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ, 35 ಕೃಷಿ ಪತ್ತಿನ ಪ್ರಾಥಮಿಕ ಸಹಕಾರಿ ಸಂಘದ ಮೂಲಕ ಖರೀದಿಗೆ ಸಿದ್ಧತೆ ನಡೆಸಿದೆ.

ಖರೀದಿ ಕೇಂದ್ರಗಳನ್ನು ಎಲ್ಲೆಲ್ಲಿ ಆರಂಭಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಸ್ಥಳ ಗುರುತಿಸುವ ಪ್ರಕ್ರಿಯೆ ನಡೆಸಿದ್ದು, ಖರೀದಿ ಆರಂಭಗೊಳ್ಳುವ ಸಹಕಾರಿ ಸಂಘಗಳ ಸಿಬ್ಬಂದಿಗೆ ರಾಷ್ಟ್ರೀಯ ಕೃಷಿ ಸಹಕಾರ ಮಾರಾಟ ಮಹಾಮಂಡಳದ (ನಾಫೆಡ್‌) ನಿರ್ದೇಶನದಂತೆ ರಾಷ್ಟ್ರೀಯ ಇ– ಮಾರುಕಟ್ಟೆ ನಿಗಮ ನೂತನವಾಗಿ ಅಭಿವೃದ್ಧಿಪಡಿಸಿರುವ ಸಾಫ್ಟ್‌ವೇರ್‌ನ ತರಬೇತಿ ನೀಡಲಿದೆ.

ಆಧಾರ್‌ ಕಡ್ಡಾಯ: ‘ಈ ತರಬೇತಿಯಲ್ಲಿ ಖರೀದಿ ಕೇಂದ್ರದ ಸಿಬ್ಬಂದಿಗೆ ರೈತರ ನೋಂದಣಿ ಪ್ರಕ್ರಿಯೆಯನ್ನು ಯಾವ ರೀತಿ ನಡೆಸಬೇಕು ಎಂಬುದನ್ನು ತಿಳಿಸಿಕೊಡಲಾಗುತ್ತದೆ. ಅದರಂತೆ ನೋಂದಣಿ ನಡೆಯಬೇಕು. ಆಯಾ ವ್ಯಾಪ್ತಿಯ ಪ್ರದೇಶಗಳಲ್ಲೇ ರೈತರು ನೋಂದಾಯಿಸಿಕೊಳ್ಳಬೇಕು. ಆಧಾರ್‌, ಕಂಪ್ಯೂಟರೀಕೃತ ಉತಾರ, ಬೆಳೆ ದೃಢೀಕರಣ ಪತ್ರ, ರೈತನ ಬ್ಯಾಂಕ್‌ ಖಾತೆಯ ಪಾಸ್‌ಬುಕ್‌ ಝೆರಾಕ್ಸ್‌ ಪಡೆಯುವುದು ಅತ್ಯಗತ್ಯ’ ಎಂದು ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ಡಿ.ಚಬನೂರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಈ ಹಿಂದೆ ನಡೆದ ಖರೀದಿ ಸಂದರ್ಭ ರೈತರು ತಮ್ಮ ಮನಸ್ಸಿಗೆ ತೋಚಿದ ಕಡೆ ಹೆಸರು ನೋಂದಾಯಿಸಿದ್ದರು. ಒಬ್ಬೊಬ್ಬರು ಎರಡ್ಮೂರು ಕಡೆ ಹೆಸರು ನೋಂದಾಯಿಸಿದ್ದರಿಂದ ಸಾಕಷ್ಟು ಗೊಂದಲ ಸೃಷ್ಟಿಯಾಗಿತ್ತು. ಖರೀದಿ ಸಂದರ್ಭ ಕಿರಿಕಿರಿಯೂ ಕಾಡಿತ್ತು.

ಮತ್ತೊಮ್ಮೆ ಅಂತಹ ಗೊಂದಲ ಕಾಡಬಾರದು ಎಂದೇ ಈ ಬಾರಿ ಆಧಾರ್‌ ಕಡ್ಡಾಯಗೊಳಿಸಲಾಗಿದೆ. ಇದರ ಜತೆಗೆ ಆ ರೈತನ ಹೆಸರಿನಲ್ಲಿ ಕಂಪ್ಯೂಟರೀಕೃತ ಉತಾರ ಇರಲೇಬೇಕು. ಇಲ್ಲದಿದ್ದರೆ ನೋಂದಣಿ ಮಾಡಿಕೊಳ್ಳಲಾಗುವುದಿಲ್ಲ. ಇದರ ಜತೆಗೆ ನಾಫೆಡ್‌ ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುತ್ತೇವೆ’ ಎಂದು ಅವರು ಹೇಳಿದರು.

‘ಖರೀದಿ ಕೇಂದ್ರದ ಸಿಬ್ಬಂದಿಗೆ ಡಿ. 27ರ ಬುಧವಾರವೇ ತರಬೇತಿ ನೀಡಲು ನಿರ್ಧರಿಸಿದ್ದೇವೆ. ತೊಗರಿ ತುಂಬಿಕೊಳ್ಳಲು ಬೇಕಿರುವ ಗೋಣಿಚೀಲದ ವ್ಯವಸ್ಥೆ ಮಾಡಿಕೊಳ್ಳಲಾರಂಭಿಸಿದ್ದೇವೆ. ಎಲ್ಲೆಲ್ಲಿ ಖರೀದಿ ಕೇಂದ್ರ ತೆರೆಯಬೇಕು ಎಂಬುದನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ.

ಜಿಲ್ಲಾಧಿಕಾರಿ ಈ ಪ್ರಕ್ರಿಯೆಗಳಿಗೆ ಅನುಮತಿಯ ಮುದ್ರೆಯೊತ್ತುತ್ತಿದ್ದಂತೆ ನೋಂದಣಿ (ಡಿ. 28ರ ಗುರುವಾರ) ಆರಂಭಗೊಳ್ಳಲಿದೆ. ಇನ್ನುಳಿದ ಪ್ರಕ್ರಿಯೆ ನಡೆಯಲು ಮೂರ್ನಾಲ್ಕು ದಿನ ಬೇಕಾಗಬಹುದು. ಜನವರಿಯಿಂದ ಖರೀದಿ ಪ್ರಕ್ರಿಯೆ ಆರಂಭಗೊಳ್ಳಲಿದೆ’ ಎಂದು ಚಬನೂರ ತಿಳಿಸಿದರು.

ರೈತರ ಪಾಳಿ

ಬಂದ್, ಸರಣಿ ರಜೆ ಮುಗಿಯುತ್ತಿದ್ದಂತೆ ಮಂಗಳವಾರ ಮುಂಜಾನೆಯಿಂದಲೇ ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿರುವ ಕೃಷಿ ಮಾರಾಟ ಇಲಾಖೆಯ ಕಚೇರಿ, ಟಿಎಪಿಸಿಎಂಎಸ್‌ ಮುಂಭಾಗ ರೈತರು ತಮ್ಮ ಹೆಸರಿನ ನೋಂದಣಿಗಾಗಿ ಪಾಳಿ ಹಚ್ಚಿದ್ದ ದೃಶ್ಯ ಗೋಚರಿಸಿತು.

ವಿಜಯಪುರ ತಾಲ್ಲೂಕಿನ ನಾಗಠಾಣ, ತಿಕೋಟಾ, ಬಬಲೇಶ್ವರ, ಇಟ್ಟಂಗಿಹಾಳ, ಜಾಲಗೇರಿ, ಉತ್ನಾಳ, ಕತ್ನಳ್ಳಿ, ಲೋಗಾವಿ, ದಂಧರಗಿ ಸೇರಿದಂತೆ ಇಂಡಿ ತಾಲ್ಲೂಕಿನ ಅಥರ್ಗಾ ಗ್ರಾಮದ ರೈತರು ತೊಗರಿ ಮಾರಾಟ ಮಾಡಲಿಕ್ಕಾಗಿ ತಮ್ಮ ಹೆಸರು ನೋಂದಾಯಿಸಲು ಮಧ್ಯಾಹ್ನದವರೆಗೂ ಪಾಳಿ ಹಚ್ಚಿದ್ದರು.

* * 

ರೈತರಿಂದ ಬೆಂಬಲ ಬೆಲೆಯಡಿ ತೊಗರಿ ಖರೀದಿಸುವ ಎಲ್ಲ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ. ಶೀಘ್ರದಲ್ಲೇ ನೋಂದಣಿ ಆರಂಭಿಸುತ್ತೇವೆ
ಎಂ.ಡಿ.ಚಬನೂರ
ಸಹಾಯಕ ನಿರ್ದೇಶಕಕೃಷಿ ಮಾರಾಟ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT