ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಿತಾಂಶ ವೃದ್ಧಿಗೆ ‘ಪುನಶ್ಚೇತನ ತರಬೇತಿ’

Last Updated 27 ಡಿಸೆಂಬರ್ 2017, 6:58 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯ ದ್ವಿತೀಯ ಪಿಯುಸಿ ಫಲಿತಾಂಶ ಹೆಚ್ಚಳಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ ‘ಪುನಶ್ಚೇತನ ತರಬೇತಿ’ ಹಮ್ಮಿಕೊಂಡಿದೆ.

2017ರಲ್ಲಿ ಜಿಲ್ಲೆಯು 27ನೇ ಸ್ಥಾನ ಹಾಗೂ 2016ರಲ್ಲಿ 22ನೇ ಸ್ಥಾನ ಪಡೆದಿತ್ತು. ಕಡೇ ಪಕ್ಷ ಐದು ಸ್ಥಾನಗಳಲ್ಲಿ ಏರಿಕೆ ಕಾಣಲು ನಿರಂತರ ಒಂದು ತಿಂಗಳು ತರಬೇತಿ ನೀಡಲಾಗಿದೆ.

ಅಫಜಲಪುರ, ಆಳಂದ, ಸೇಡಂ, ಚಿಂಚೋಳಿ, ಕಲಬುರ್ಗಿ ಮತ್ತು ಜೇವರ್ಗಿ ತಾಲ್ಲೂಕುಗಳ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಸರ್ಕಾರಿ ಕಾಲೇಜುಗಳ ಉಪನ್ಯಾಸಕರಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಚಿತ್ತಾಪುರ ತಾಲ್ಲೂಕಿನಲ್ಲಿ ಇನ್ನಷ್ಟೇ ತರಬೇತಿ ನಡೆಯಲಿದೆ. ಹೆಚ್ಚುವರಿ ಬೋಧನೆ, ಪರಿಹಾರ ಬೋಧನೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಬೇತಿ ನೀಡುವಂತೆ ತರಬೇತಿಯಲ್ಲಿ ಸೂಚಿಸಲಾಗಿದೆ.

ಸಿ.ಸಿ ಟಿ.ವಿ ಕ್ಯಾಮೆರಾ ಕಡ್ಡಾಯ: ನಗರ ಪ್ರದೇಶದಲ್ಲಿ 25 ಹಾಗೂ ಗ್ರಾಮೀಣ ಪ್ರದೇಶದಲ್ಲಿ 23 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಎಲ್ಲ ಕೇಂದ್ರಗಳಲ್ಲೂ ಸಿ.ಸಿ ಟಿ.ವಿ ಕ್ಯಾಮೆರಾ ಕಡ್ಡಾಯಗೊಳಿಸಲಾಗಿದೆ.

ಪರೀಕ್ಷಾ ಕೊಠಡಿಗಳಲ್ಲಿ ಕ್ಯಾಮೆರಾ ಅಳವಡಿಸಲು ಸಾಧ್ಯವಾಗದಿದ್ದಲ್ಲಿ ಪ್ರಾಂಶುಪಾಲರ ಕೊಠಡಿ, ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳನ್ನು ಇಡುವ ಕೊಠಡಿ, ಕಾಲೇಜಿನ ಆವರಣದಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಇರಲೇಬೇಕು ಎಂದು ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ. ಕಳೆದ ವರ್ಷ ತಾಂತ್ರಿಕ ಕಾರಣಗಳಿಂದ ಸರ್ಕಾರಿ ಕಾಲೇಜಿನ ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಿರಲಿಲ್ಲ. ಆದರೆ ಈ ಬಾರಿ ಅಳವಡಿಸಲಾಗುತ್ತಿದೆ.

‘ಜಿಪಿಎಸ್’ ಅಳವಡಿಕೆ: ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಸಾಗಿಸುವ ವಾಹನಗಳಿಗೆ ಈ ಬಾರಿ ಜಿಪಿಎಸ್ (ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಂ) ಅಳವಡಿಸಲಾಗುತ್ತಿದೆ. ಅಲ್ಲದೆ ಪರೀಕ್ಷೆಯ ದಿನವೇ ಖಜಾನೆಯಿಂದ ಪ್ರಶ್ನೆಪತ್ರಿಕೆಗಳನ್ನು ಪೂರೈಕೆ ಮಾಡಲು ಪದವಿ ಪೂರ್ವ ಶಿಕ್ಷಣ ಇಲಾಖೆಯು ತೀರ್ಮಾನಿಸಿದೆ.

ಬೇರೆ ಕೇಂದ್ರಗಳಲ್ಲಿ ಪರೀಕ್ಷೆ: ಪರೀಕ್ಷೆಯಲ್ಲಿ ನಕಲು ಮತ್ತು ಅಕ್ರಮ ತಡೆಗಟ್ಟಲು ಈ ಬಾರಿಯೂ ರ್‍ಯಾಂಡಮೈಸೇಷನ್ ಮಾಡಲಾಗುತ್ತಿದೆ. ಪರೀಕ್ಷಾ ಕೇಂದ್ರಗಳಿರುವ ಕಾಲೇಜಿನ ವಿದ್ಯಾರ್ಥಿಗಳು ಅದೇ ಕಾಲೇಜಿನಲ್ಲಿ ಪರೀಕ್ಷೆ ಬರೆಯುವಂತಿಲ್ಲ. ಬದಲಿಗೆ ಸಮೀಪದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗುತ್ತಿದೆ. ಕ್ಲಸ್ಟರ್ ಮಟ್ಟದಲ್ಲಿ ಪರೀಕ್ಷೆ ನಡೆಸುವುದು ಕಷ್ಟ ಎಂಬ ಕಾರಣಕ್ಕೆ ಅದನ್ನು ಕೈಬಿಡಲಾಗಿದೆ.

‘ಫಲಿತಾಂಶ ವೃದ್ಧಿಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ 96 ಪದವಿ ಪೂರ್ವ ಕಾಲೇಜುಗಳಿಗೆ ಭೇಟಿ ನೀಡಿ ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ ಎಲ್ಲ ರೀತಿಯ ಮಾರ್ಗದರ್ಶನ ಮಾಡಲಾಗಿದೆ. ಅನುದಾನಿತ ಮತ್ತು ಅನುದಾನರಹಿತ ಕಾಲೇಜುಗಳಲ್ಲಿನ ಪರೀಕ್ಷಾ ಕೇಂದ್ರಗಳಿಗೆ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರನ್ನು ಕೇಂದ್ರ ಮುಖ್ಯಸ್ಥರಾಗಿ ನೇಮಕ ಮಾಡಲಾಗುತ್ತಿದೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಿ.ಡಿ.ಕಲಬುರಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ವರ್ಷ ರ‍್ಯಾಂಕ್ ಫಲಿತಾಂಶ

2014 29 ಶೇ 46.71

2015 23 ಶೇ 61.06

2016 22 ಶೇ 47.17

2017 27 ಶೇ 44.94

ಅಂಕಿ–ಅಂಶ

25 ನಗರದಲ್ಲಿರುವ ಪರೀಕ್ಷಾ ಕೇಂದ್ರಗಳು

23 ಗ್ರಾಮೀಣ ಪ್ರದೇಶದಲ್ಲಿರುವ ಪರೀಕ್ಷಾ ಕೇಂದ್ರಗಳು

48 ಒಟ್ಟು ಪರೀಕ್ಷಾ ಕೇಂದ್ರಗಳು

* * 

ದ್ವಿತೀಯ ಪಿಯುಸಿ ಫಲಿತಾಂಶ ಹೆಚ್ಚಿಸಲು ಟಿವಿ, ರೇಡಿಯೊ ಕಾರ್ಯಕ್ರಮ ಕೊಡಲಾಗುತ್ತಿದೆ. ಪುನಶ್ಚೇತನ ತರಬೇತಿ ಪಡೆದಿರುವ ಉಪನ್ಯಾಸಕರಿಂದ ಪ್ರತಿಕ್ರಿಯೆ ಪಡೆಯಲಾಗುತ್ತಿದೆ.
ಬಿ.ಡಿ.ಕಲಬುರ್ಗಿ
ಡಿಡಿಪಿಯು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT