ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಜಾನೆಯ ಮುತ್ತಿನ ಮಣಿಗಳು

Last Updated 27 ಡಿಸೆಂಬರ್ 2017, 9:03 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ಎಲ್ಲೆಡೆ ಮುಂಜಾನೆ ಮಂಜು ಆವರಿಸತೊಡಗಿದೆ. ಚಳಿಗಾಲದಲ್ಲಿ ಮಂಜು ಮುತ್ತಿನ ಮಣಿಗಳಾಗಿ, ಹಾರ ಸೃಷ್ಟಿಯಾಗುವುದು ಪ್ರಕೃತಿಯ ವೈಶಿಷ್ಟ್ಯ. ಆದರೆ ಇದು ನೀರ ಹನಿಯ ಮುತ್ತು.

ಜೇಡರ ಬಲೆ ಇಬ್ಬನಿಯಲ್ಲಿ ಮಿಂದು ಮುತ್ತಿನ ಹಾರವಾಗುತ್ತದೆ. ಬೆಳಗಿನ ಚುಮು ಚುಮು ಚಳಿಯಲ್ಲಿ ಸೂರ್ಯ ಉದಯಿಸುವ ಸಮಯದಲ್ಲಿ ಊರ ಹೊರಗೆ ಹೋದರೆ ಇವುಗಳನ್ನು ನೋಡಬಹುದು. ಬಿಸಿಲಿನ ಕಾವು ಏರುತ್ತಿದ್ದಂತೆಯೇ ಮಣಿಗಳು ಆವಿಯಾಗುತ್ತವೆ. ಅಷ್ಟರೊಳಗೆ ಕಣ್ತುಂಬಿಸಿಕೊಳ್ಳಬೇಕು.

ಭೂಮಿಯ ಉಷ್ಣ ರಕ್ಷಿಸುವ ಮೋಡಗಳ ಮುಸುಕು ಇಲ್ಲವಾದಾಗ ಹೊರಬಿದ್ದ ಶಾಖ ವಾತಾವರಣದಲ್ಲಿ ಸೇರಿ ಹೋಗುತ್ತದೆ. ಆಗ ಭೂಮಿ ಬೇಗ ತಂಪಾಗುತ್ತದೆ. ಅಲ್ಲದೆ ಹತ್ತಿರದ ಗಾಳಿಯನ್ನೂ ತಂಪು ಮಾಡುತ್ತದೆ. ಈ ಸಂದರ್ಭದಲ್ಲಿ ಗಾಳಿಯಲ್ಲಿನ ತೇವಾಂಶ ಮಂಜು ಆಗಿ ಪರಿವರ್ತನೆ ಆಗುವುದು.

ಮುತ್ತು ಅಷ್ಟು ಸುಲಭದ ತುತ್ತಲ್ಲ. ಇದರ ಸೃಷ್ಟಿಯಾಗುವುದೇ ಬಲು ವಿಶಿಷ್ಟ. ಒಣಹವೆಯ ರಾತ್ರಿಗಳಲ್ಲಿ ಮಣ್ಣು, ಬಂಡೆಗಳು ತಂಪಾಗುವಾಗ ನೆಲಕ್ಕೆ ಸಮೀಪದ ಗಾಳಿಯೂ ತಣ್ಣಗಾಗುತ್ತದೆ. ಅದರಲ್ಲಿನ ನೀರಾವಿ ನೆಲ ಬಂಡೆಗಳ ಸಂಪರ್ಕ ಹೊಂದಿ ಸಾಂದ್ರೀಕರಿಸಿ ಸಸ್ಯಗಳ, ಜೇಡರಬಲೆಯ ಮೇಲೆ ಸೂಕ್ಷ್ಮ ಹನಿಗಳಂತೆ ಕೂರುತ್ತದೆ. ನೀರಾವಿ ಹೀಗೆ ಹನಿಗಳಾಗುವ ಉಷ್ಣತೆಗೆ ತುಷಾರ ಬಿಂದು (ಡಿವ್ ಪಾಯಿಂಟ್) ಎಂದು ಹೆಸರು.

‘ಮುಂಜಾನೆಯ ಪ್ರಕೃತಿ ಆರಾಧಕರಿಗೆ, ವಾಯು ಸಂಚಾರಿಗರಿಗೆ ಮಂಜು ಆಹ್ಲಾದ ನೀಡಿದರೆ, ಕಾಯಕದಲ್ಲಿ ನಿರತರಾದ ಹಾಲು, ಪೇಪರ್ ಹಂಚುವರು, ಆದರೆ ಮಳೆಗಾಗಿ ಕಾದ ರೈತರಿಗೆ ಬೇಸರ ಮೂಡಿಸುತ್ತದೆ. ನಿಸರ್ಗದ ವಿವಿಧ ಹವಾಮಾನವನ್ನು ಅನುಭವಿಸುತ್ತಾ ಸಣ್ಣ ಪುಟ್ಟ ರಮಣೀಯಗಳನ್ನು ಆಸ್ವಾದಿಸುತ್ತಾ ಸಾಗಬೇಕು.

ಗೊತ್ತೇ ಆಗದಂತೆ ಪೊದೆ, ಗಿಡಗಳಲ್ಲಿ ಕಟ್ಟಿದ ಜೇಡರಬಲೆಗಳು ಜೀವಬಂದಂತೆ ಮುತ್ತಿನ ಮಣಿಗಳನ್ನು ಹೊದ್ದು ನಿಲ್ಲುವ ಸೋಜಿಗವನ್ನು ಚಳಿಗಾಲದಲ್ಲಿ ಮಾತ್ರ ನೋಡಲು ಸಾಧ್ಯ’ ಎನ್ನುತ್ತಾರೆ ವಕೀಲ, ಪರಿಸರ ಪ್ರೇಮಿ ಸತ್ಯನಾರಾಯಣಬಾಬು.

* * 

ಪರಿಸರದ ನೀರಾವಿ ಸಾಂದ್ರೀಕರಿಸಿದಾಗ ಮಂಜು ಸೃಷ್ಟಿ; ಇದು ಪ್ರಕೃತಿಯ ವೈಶಿಷ್ಟ್ಯ. ಇಂಥ ಸೂಕ್ಷ್ಮಗಳನ್ನು ಗಮನಿಸಿ ಸಂಭ್ರಮಿಸಲು ಪರಿಸರದ ಜೊತೆಗಿನ ಒಡನಾಟ ಬಲು ಮುಖ್ಯ
ಟಿ. ಸುಭಾಶ್ಚಂದ್ರ ಪರಿಸರ ಪ್ರಿಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT