ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಡಿ, ಸದ್ದು ಮಾಡಿದವರು ನಾವು...

Last Updated 27 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಮದುವೆಯಾದ ಜೋಡಿಗಳು
ವರ್ಷಾಂತ್ಯದಲ್ಲಿ ಎರಡು ತಾರಾ ಜೋಡಿಗಳ ಮದುವೆಗಳು ಗಮನ ಸೆಳೆದವು. ಅದರಲ್ಲಿ ಮೊದಲನೆಯದು ತೆಲುಗಿನ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಅವರ ಪುತ್ರ ನಾಗ ಚೈತನ್ಯ ಮತ್ತು ಸಮಂತಾ ರುತ್‌ ಪ್ರಭು (ಅಕ್ಟೋಬರ್‌ 6) ಅವರ ಮದುವೆ. ಮೊದಲು ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದ ಅವರು, ಬಳಿಕ ಗೋವಾದಲ್ಲಿ ಕ್ರಿಶ್ಚಿಯನ್‌ ಸಂಪ್ರದಾಯದಂತೆ ಉಂಗುರ ಬದಲಿಸಿಕೊಂಡರು.

ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಬೆಂಗಳೂರಿನಲ್ಲೇ ಓದಿದ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಅವರ ಮದುವೆ (ಡಿಸೆಂಬರ್‌ 11) ಸಹ ಭಾರಿ ಸದ್ದು ಮಾಡಿತು. ‘ವಿರುಷ್ಕಾ’ ಜೋಡಿಯಲ್ಲದೆ ಇನ್ನೂ ಹಲವು ಸೆಲೆಬ್ರಿಟಿಗಳು ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಜಹೀರ್‌ ಖಾನ್‌ ಹಾಗೂ ‘ಚಕ್‌ ದೇ ಇಂಡಿಯಾ’ ನಟಿ ಸಾಗರಿಕಾ ಘಾಟ್ಗೆ ಸಹ ಇದೇ ವರ್ಷ (ನವೆಂಬರ್‌ 23) ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಅಂತರಾಷ್ಟ್ರೀಯ ಖ್ಯಾತಿಯ ಬ್ಯಾಡ್ಮಿಂಟನ್ ಆಟಗಾರ್ತಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಅವರು, ಮಾಡೆಲ್ ಪೊನ್ನಚೆಟ್ಟಿರ ಕರಣ್‌ ಮೇದಪ್ಪ ಅವರನ್ನು ವಿವಾಹವಾದರು (ಡಿಸೆಂಬರ್ 24). ಕೊಡಗು ಜಿಲ್ಲೆ ವಿರಾಜಪೇಟೆ ಅಮ್ಮತ್ತಿ ಕೊಡವ ಸಮಾಜದಲ್ಲಿ ಕೊಡವರ ಸಂಪ್ರದಾಯದಂತೆ ಮದುವೆ ನೆರವೇರಿತು.

ಚಂದನವನದ ನಟಿ ಅಮೂಲ್ಯ ಮದುವೆಯಾಗಿದ್ದು ಮೇ 12ರಂದು. ಮಂಡ್ಯ ಜಿಲ್ಲೆಯ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಅಮೂಲ್ಯ, ಜಗದೀಶ್ ಸಪ್ತಪದಿ ತುಳಿದರು.

ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿ ಪ್ರಿಯಾಮಣಿ ಅವರು ದಾಂಪತ್ಯ ಬದುಕಿಗೆ ಮುನ್ನುಡಿ ಬರೆದಿದ್ದು ಆಗಸ್ಟ್‌ 23ರಂದು. ತಮ್ಮ ಬಹುಕಾಲದ ಗೆಳೆಯ ಮುಸ್ತಫಾ ರಾಜ್ ಅವರೊಂದಿಗೆ ಬೆಂಗಳೂರಿನಲ್ಲಿ ಮದುವೆಯ ಬಂಧನಕ್ಕೆ ಒಳಗಾದರು.

*


ಗಳಿಕೆಯಲ್ಲಿ ಯಾರು ಮುಂದು?
ಮನರಂಜನಾ ಕ್ಷೇತ್ರದ ವರ್ಷದ ಗಳಿಕೆಯಲ್ಲಿ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಉಳಿದೆಲ್ಲ ಸೆಲೆಬ್ರಿಟಿಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ಉಳಿಸಿಕೊಂಡ ವರ್ಷ ಇದು. 2016ರಲ್ಲೂ ಅವರು ಅಗ್ರಸ್ಥಾನ ಪಡೆದಿದ್ದರು. ಗಳಿಕೆಯಲ್ಲಿ ಶಾರುಖ್‌ ಖಾನ್‌ ಎರಡನೇ ಸ್ಥಾನದಲ್ಲಿದ್ದರೆ, ವಿರಾಟ್‌ ಕೊಹ್ಲಿ ನಂತರದ ಸ್ಥಾನದಲ್ಲಿದ್ದಾರೆ ಎನ್ನುತ್ತದೆ ಫೋರ್ಬ್ಸ್‌ ಪಟ್ಟಿ.

ಅಕ್ಷಯಕುಮಾರ್‌, ಸಚಿನ್‌ ತೆಂಡೂಲ್ಕರ್‌, ಅಮಿರ್‌ ಖಾನ್‌, ಪ್ರಿಯಾಂಕಾ ಚೋಪ್ರಾ, ಎಂ.ಎಸ್‌. ಧೋನಿ, ಹೃತಿಕ್‌ ರೋಷನ್‌, ರಣವೀರ್‌ ಸಿಂಗ್‌ ಮೊದಲ ಹತ್ತು ಸ್ಥಾನದಲ್ಲಿರುವ ಇತರ ಸೆಲೆಬ್ರಿಟಿಗಳಾಗಿದ್ದಾರೆ.

ನಟಿ ದೀಪಿಕಾ ಪಡುಕೋಣೆ ಹನ್ನೊಂದನೇ ಸ್ಥಾನದಲ್ಲಿದ್ದಾರೆ. ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್, ನಟ ರಣಬೀರ್ ಕಪೂರ್, ನಿರ್ದೇಶಕ ಎಸ್‌. ಎಸ್‌. ರಾಜಮೌಳಿ, ಅಜಯ್‌ ದೇವಗನ್ ನಂತರದ ಸಾಲಿನಲ್ಲಿರುವ ಸೆಲೆಬ್ರಿಟಿಗಳು.

ಒಲಿಂಪಿಕ್‌ ಕೂಟದಲ್ಲಿ ಬೆಳ್ಳಿ ಪದಕ ಜಯಿಸಿದ್ದ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧು ಅವರ ಗಳಿಕೆ ಸಹ ಜೋರಾಗಿತ್ತು ಎನ್ನುತ್ತದೆ ಫೋರ್ಬ್ಸ್‌ನ ವರದಿ.

*


ರಾಜಕೀಯದಲ್ಲಿ ಯುವಧ್ವನಿ
ದಲಿತ ಹಾಗೂ ಹಿಂದುಳಿದ ವರ್ಗಗಳ ಧ್ವನಿಯಾಗಿರುವ ಜಿಗ್ನೇಶ್‌ ಮೇವಾನಿ ಹಾಗೂ ಅಲ್ಪೇಶ್‌ ಠಾಕೂರ್‌ ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ (ಡಿಸೆಂಬರ್‌ 18) ಜಯ ಗಳಿಸಿದರು.

137 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿ ರಾಹುಲ್‌ ಗಾಂಧಿ ಅಧಿಕಾರ (ಡಿಸೆಂಬರ್‌ 16) ಸ್ವೀಕರಿಸಿದರು.

ರಾಜ್ಯದ ರಾಜಕೀಯ ಕ್ಷೇತ್ರದಲ್ಲಿ ನಟ ಉಪೇಂದ್ರ ಹಾಗೂ ಪೊಲೀಸ್‌ ಹುದ್ದೆಗೆ ರಾಜೀನಾಮೆ ನೀಡಿ ಹೊರಬಂದ ಅನುಪಮಾ ಶೆಣೈ ಹೊಸಪಕ್ಷ ಕಟ್ಟಿದರು. ಜೆಡಿಎಸ್‌ನ ನೇತಾರ ಎಚ್‌.ಡಿ. ದೇವೇಗೌಡ ಅವರ ಕುಟುಂಬದ ಮೂರನೇ ತಲೆಮಾರು ಸದ್ದು ಮಾಡಿದ ವರ್ಷವೂ ಇದಾಗಿದೆ. ಶಾಸಕ ಎಚ್‌.ಡಿ. ರೇವಣ್ಣ ಅವರ ಪುತ್ರ ಪ್ರಜ್ವಲ್‌ ರೇವಣ್ಣ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಗಮನಸೆಳೆದರು.

*


ಹೆಮ್ಮೆ ತಂದ ಸಾಧಕಿಯರು
ದೇಶದ ನೌಕಾದಳದಲ್ಲಿನ ಕರಾವಳಿ ವಿಚಕ್ಷಣಾ ದಳಕ್ಕೆ ಮೊದಲ ಪೈಲಟ್‌ ಆಗಿ ಶುಭಾಂಗಿ ಸ್ವರೂಪ್‌ (24 ನವೆಂಬರ್‌) ನೇಮಕಗೊಂಡರು. ಉತ್ತರ ಪ್ರದೇಶದವರಾದ ಇವರು ಸದ್ಯ ಕೊಚ್ಚಿಯಲ್ಲಿನ ಐಎನ್‌ಎಸ್‌ ಗರುಡ ರಕ್ಷಣಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಭಾರತದ ಮಾನುಷಿ ಛಿಲ್ಲರ್‌ 2017ನೇ ಸಾಲಿನ ವಿಶ್ವ ಸುಂದರಿ ಪಟ್ಟಕ್ಕೇರಿದರು (18 ನವೆಂಬರ್‌). ಈ ಹಿಂದೆ ಪ್ರಿಯಾಂಕಾ ಚೋಪ್ರಾ (2000) ಈ ಗೌರವಕ್ಕೆ ಪಾತ್ರರಾಗಿದ್ದರು. 20ರ ಹರಯದ ತರುಣಿ ಛಿಲ್ಲರ್‌ ಅಂತಿಮ ಸುತ್ತಿನಲ್ಲಿ ಇಂಗ್ಲೆಂಡ್‌, ಫ್ರಾನ್ಸ್‌, ಕೀನ್ಯಾ ಮತ್ತು ಮೆಕ್ಸಿಕೊದ ಸುಂದರಿಯರು ಒಡ್ಡಿದ ತೀವ್ರ ಪೈಪೋಟಿ ಎದುರಿಸಿ ಕಿರೀಟ ಮುಡಿಗೇರಿಸಿಕೊಂಡರು.

ಕನ್ನಡದ ಕತೆಗಾರ್ತಿ ಶಾಂತಿ ಕೆ.ಅಪ್ಪಣ್ಣ ಅವರ ‘ಮನಸು ಅಭಿಸಾರಿಕೆ’ ಸಣ್ಣ ಕತೆಗಳ ಸಂಕಲನ 2017ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಗಳಿಸಿತು (22 ಜೂನ್‌). ಶಾಂತಿ ಅವರು ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬಾಡಗಕೇರಿ ಗ್ರಾಮದವರಾಗಿದ್ದು, ರೈಲ್ವೆ ಇಲಾಖೆಯ ಚೆನ್ನೈನಲ್ಲಿರುವ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೋಲಾರದ ಕೆ.ಆರ್‌.ನಂದಿನಿ ಅವರು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ(ಯುಪಿಎಸ್‌ಸಿ) ಮೊದಲ ರ್‍ಯಾಂಕ್ (31 ಮೇ) ಗಳಿಸಿದರು. ಇವರು ಮುಖ್ಯ ಪರೀಕ್ಷೆಯಲ್ಲಿ ಶೇ 55.3 ಅಂಕಗಳನ್ನು ಗಳಿಸಿ ಈ ಸಾಧನೆ ಮಾಡಿದರು!

*


ಬೆಳಕಿಗೆ ಬಂದರು ಇವರೆಲ್ಲ...
30 ವರ್ಷದ ಗಡಿಯನ್ನು ದಾಟದ ಹಲವು ಯುವಕ–ಯುವತಿಯರು ತಮ್ಮ ಸಾಧನೆಯ ಮೂಲಕ ದೇಶದ ಗಮನವನ್ನು ಸೆಳೆದರು. ‘ಪಿಂಕ್‌’ ಚಿತ್ರದಲ್ಲಿನ ವಿಶಿಷ್ಟ ಅಭಿನಯದಿಂದ ತಾಪ್ಸಿ ಪನ್ನು (29) ಚಿತ್ರಪ್ರಿಯರ ಮನಕ್ಕೆ ಲಗ್ಗೆ ಇಟ್ಟರು. ಸಮಾಜದ ಪ್ರಚಲಿತ ವಸ್ತುಗಳನ್ನು ಎತ್ತಿಕೊಂಡು ವಿಶಿಷ್ಟ ನಾಟಕಗಳನ್ನು ನಿರ್ದೇಶಿಸಿದ ಮಹಾರಾಷ್ಟ್ರದ ಅಲೋಕ ರಾಜವಾಡೆ (27), ಅಗ್ಗದ ದರದ ಇನ್‌ಕ್ಯುಬೇಟರ್‌ಗಳನ್ನು ಪರಿಚಯಿಸಿದ ಮಾಲವ್‌ ಸಂಘವಿ (27), ಟ್ರಕ್‌ಗಳ ಮಾಲೀಕರು ಹಾಗೂ ಸರಕು ಸಾಗಾಣಿಕೆದಾರರ ನಡುವಿನ ಸೇತುವೆ ಯಾಗಲು ಬ್ಲ್ಯಾಕ್‌ಬಕ್‌ ಎಂಬ ಕಂಪನಿಯನ್ನು ಹುಟ್ಟುಹಾಕಿದ ಚಾಣಾಕ್ಯ ಹೃದಯ (27) ಮತ್ತು ರಾಜೇಶ ಯಬಜಿ (28), ಫ್ಯಾಷನ್‌ ಕ್ಷೇತ್ರದ ಮಸಬಾ ಗುಪ್ತ (28), ಪರಿಸರಸ್ನೇಹಿ ಬ್ಯಾಗ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಎನ್ವಿಗ್ರೀನ್‌ ಬಯೊಟೆಕ್‌ ಕಂಪನಿ ಸ್ಥಾಪಿಸಿದ ಅಶ್ವತ್ಥ ಹೆಗಡೆ ವರ್ಷದಲ್ಲಿ ಮಿಂಚಿದ ಸಾಧಕರೆನಿಸಿದರು.

ಮಾಹಿತಿ: ‍ಪಿನಾಕ, ಪೀರ್‌ಪಾಶಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT