ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷಕ್ಕೆ ಸ್ವಾಗತ

Last Updated 27 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಈಗ ಎಲ್ಲೆಲ್ಲೂ ಹೊಸ ವರ್ಷದ ಸಂಭ್ರಮ. ಹೊಸ ವರ್ಷದ ಸಂಭ್ರಮಾಚರಣೆಗೆ ಸಿದ್ಧತೆಗಳಾಗುತ್ತಿವೆ. ಆಪ್ತರೊಂದಿಗೆ ಶುಭಾಶಯಗಳ ವಿನಿಮಯ ಆರಂಭವಾಗಿದೆ. ಹೊಸ ವರ್ಷದಲ್ಲಿ ಏನೆಲ್ಲ ಮಾಡಬೇಕು ಎಂಬ ಸಂಕಲ್ಪಗಳ ಎಣಿಕೆಯೂ ಜೊತೆಯಾಗಿದೆ. ಹೊಸ ವರ್ಷದ ಹೊಸ್ತಿಲಿನಲ್ಲಿ ಇಂಥ ಸಂಭ್ರಮಕ್ಕೆ ಕಾರಣವಾದರೂ ಏನು?

ಹೊಸತನ ಎಂದರೆ ಯಾರಿಗೆ ತಾನೆ ಇಷ್ಟವಾಗದು? ಅದು ಸರಿ, ಇಷ್ಟಕ್ಕೂ ‘ಹೊಸತನ’ ಎಂದರೇನು? ಹೊಸ ವರ್ಷವನ್ನು ನಾವು ಸಂಖ್ಯೆಯ ಮೂಲಕ ಗುರುತಿಸುತ್ತಿದ್ದೇವೆ; 2017ರಿಂದ 2018ಕ್ಕೆ ಪ್ರವೇಶಿಸುತ್ತಿದ್ದೇವೆ– ಇದನ್ನೇ ಅಲ್ಲವೆ ನಾವು ಹೊಸ ವರ್ಷ ಎಂದು ಗುರುತಿಸುತ್ತಿರುವುದು? ಎಂದರೆ ಒಂದು ಗೊತ್ತಾದ ಕ್ರಮದ ಸುತ್ತಾಟವನ್ನು ಹೊಸತನಕ್ಕೆ ಜೋಡಿಸುತ್ತಿದ್ದೇವೆ. ಇದು ನಾವೇ ಮಾಡಿಕೊಂಡ ವ್ಯವಸ್ಥೆ. ಆದರೆ ಈ ವ್ಯವಸ್ಥೆಗೆ ಪ್ರೇರಣೆ ಎಂದರೆ ಪ್ರಕೃತಿಯೇ ಹೌದು.

ದಿನನಿತ್ಯವೂ ನಾವು ನೋಡುವ, ಅನುಭವಿಸುವ ಹಗಲು–ರಾತ್ರಿಗಳಿಂದ ಮೊದಲುಗೊಂಡು ಸಂವತ್ಸರದಲ್ಲಿ ಬದಲಾವಣೆಯಾಗುವ ಋತುಗಳವರೆಗೆ ಈ ಪರಿಭ್ರಮಣವನ್ನು ಕಾಣಬಹುದು. ಹಗಲು–ರಾತ್ರಿ ನಿರಂತರವಾಗಿ ಸುತ್ತುತ್ತಲೇ ಇರುತ್ತದೆ; ಬೇಸಿಗೆ–ಮಳೆಗಾಲ, ಚಳಿಗಾಲ – ಹೀಗೆ ಋತುಗಳು ಕೂಡ ಸುತ್ತುತ್ತಲೇ ಇರುತ್ತವೆ. ಇಂಥದೇ ಒಂದು ವ್ಯವಸ್ಥೆಯನ್ನು ಮಾಡಿಕೊಂಡ ಮನುಷ್ಯ ರೂಪಿಸಿಕೊಂಡ ವ್ಯವಸ್ಥೆಯೇ ವರ್ಷಗಳ ಎಣಿಕೆ. ಅದಕ್ಕೆ ದಿನ, ವಾರ, ತಿಂಗಳು – ಇವುಗಳ ಸರಮಾಲೆ.

ಒಂದು ಸುತ್ತಾಟದ ಆರಂಭದ ಕ್ಷಣವನ್ನು ‘ಹೊಸತನ’ ಎಂದು ಗುರುತಿ ಸುವ ಕ್ರಮ ಎಂದಿನಿಂದ ಆರಂಭವಾಯಿತೋ, ಗೊತ್ತಿಲ್ಲವೆನ್ನಿ! ಆದರೆ ಇತ್ತೀಚಿನ ವರ್ಷಗಳಲ್ಲಿ ಹೊಸವರ್ಷದ ಆಚರಣೆ ತುಂಬ ಸುದ್ದಿಯಾಗುತ್ತಿದೆ. ಆದರೆ ಈ ಹೊಸತನ ಎನ್ನುವುದು 365 ದಿನಗಳಿಗೆ ಒಮ್ಮೆ ಮಾತ್ರ ಬರುವಂಥದ್ದೇ – ಎನ್ನುವುದನ್ನು ನಾವು ಮನನ ಮಾಡಬೇಕಿದೆ.

ಒಂದು ಪರಿಭ್ರಮಣದ ಮೊದಲ ಬಿಂದುವನ್ನೇ ನಾವು ಹೊಸತು ಎಂದು ಹೇಳುತ್ತಿರುವುದು, ಅಲ್ಲವೆ? ಇಂಥ ಪರಿಭ್ರಮಣಗಳು ನಮ್ಮ ಜೀವನದಲ್ಲಿ ಎಷ್ಟೆಲ್ಲ ನಡೆಯುತ್ತಿರುತ್ತವೆ? ಹೊರಗೆ ನಿಸರ್ಗದಲ್ಲಿ ಈ ಪರಿಭ್ರಮಣವನ್ನು ಹಲವು ರೂಪಗಳಲ್ಲಿ ಕಾಣುತ್ತಿರುತ್ತೇವೆ; ನಮ್ಮ ದೇಹದೊಳಗೆ ನಿರಂತರವಾಗಿ ಹಲವು ಸ್ತರಗಳಲ್ಲಿ ಇದನ್ನು ನೋಡಬಹುದು; ಇನ್ನು ನಾವೇ ಮಾಡಿಕೊಂಡ ಏರ್ಪಾಟುಗಳಲ್ಲೂ ಇದನ್ನು ಹಲವು ಬಗೆಗಳಲ್ಲಿ ಎಣಿಸಬಹುದು. ಹೀಗಿದ್ದರೂ ನಾವು ಮಾತ್ರ ಹೊಸ ವರ್ಷದ ಆರಂಭದ ದಿನಕ್ಕಷ್ಟೆ ಹೊಸತನವನ್ನು ಸೀಮಿತ ಮಾಡಿಕೊಂಡಿದ್ದೇವೆ.

ನಮ್ಮ ಶರೀರ ಕ್ಷಣ ಕ್ಷಣವೂ ಬದಲಾಗುತ್ತಿರುತ್ತದೆ; ಹೊರಗೆ ಪ್ರಪಂಚವೂ ಹೀಗೆ ಬದಲಾಗುತ್ತಲೇ ಇರುತ್ತದೆ. ನಾವು ಈ ಬದಲಾವಣೆಗಳನ್ನು ಹೊಸತನ ಎಂದು ಸಂಭ್ರಮಿಸುವುದಿಲ್ಲ, ಏಕೆ? ಕ್ಯಾಲೆಂಡರ್‌ನಲ್ಲಿ ಅಂಕೆಗಳು ಹೊಸ ವರ್ಷವನ್ನು ಸೂಚಿಸಿದರೆ ಮಾತ್ರ ನಾವು ಹೊಸತನದ ಸಂಭ್ರಮಾಚರಣೆಗೆ ಸಿದ್ಧವಾಗುವುದು; ಜೀವನದ ಒಂದೊಂದು ಕ್ಷಣವೂ – ನಮ್ಮಲ್ಲೂ ಹೊರಗೂ – ಬದಲಾವಣೆಗಳು ಆಗುತ್ತಿದ್ದರೂ ಅವು ನಮ್ಮ ಸಂಭ್ರಮಕ್ಕೆ ಕಾರಣವಾಗುತ್ತಿಲ್ಲ; ಏಕೆಂದರೆ ನಾವು ಅವನ್ನು ‘ನೋಡುತ್ತಿಲ್ಲ’, ಅಷ್ಟೆ! ಹೊಸತನವನ್ನು ಗುರುತಿಸುವುದಕ್ಕೆ ನಮಗೆ ಬೇರೆಯದೇ ಆದ ‘ದೃಷ್ಟಿ’ ಬೇಕು. ಹಾಗಾದರೆ ಈ ದೃಷ್ಟಿಯ ವಿಶೇಷ ಏನು?

ಬದಲಾವಣೆಯನ್ನು ಗುರುತಿಸಬಲ್ಲ ನೋಟವೇ ಈ ದೃಷ್ಟಿ; ಅದನ್ನು ಸಹಜ ಬದಲಾವಣೆಯನ್ನಾಗಿ ಸ್ವೀಕರಿಸುವ ಮನೋಧರ್ಮವೇ ಈ ದೃಷ್ಟಿ; ಆ ಬದಲಾವಣೆಗೆ ಒಗ್ಗಿಕೊಳ್ಳುವ ನಮ್ಮ ಭಾವ–ಬುದ್ಧಿಗಳ ಕ್ರಿಯಾಶೀಲತೆಯೇ ಈ ದೃಷ್ಟಿ; ಬದಲಾವಣೆ ಎಂದರೆ ಹಳೆಯದ್ದಾದುದರ ನಾಶ, ಹೊಸದಾದುದ್ದರ ಹುಟ್ಟು – ಎಂದು ಗ್ರಹಿಸದೆ, ಹಳತು–ಹೊಸತುಗಳ ಸಾಮರಸ್ಯವೇ ನೂತನಾಭಿವ್ಯಕ್ತಿ ಎಂದು ಸ್ವೀಕರಿಸಿ ಜೀವನವನ್ನು ಕಟ್ಟಿಕೊಳ್ಳುವ ವಿವೇಕವೇ ಈ ದೃಷ್ಟಿ. ಆದರೆ ಈ ದೃಷ್ಟಿ ವರ್ಷದ ಯಾವುದೋ ಒಂದು ದಿನ ಮಾತ್ರವೇ ಇದ್ದರೆ ಪ್ರಯೋಜನವಿರದು; ಅದು ನಮ್ಮ ಜೀವನದುದ್ದಕ್ಕೂ ಜೊತೆಯಾಗಿರಬೇಕು.

ಹೊಸತನದ ಸಂಭ್ರಮಾಚರಣೆ ಎನ್ನುವುದಕ್ಕೆ ದಿಟವಾದ ಸಾರ್ಥಕತೆ ಇರುವುದು ಇಂಥ ಮಾನಸಿಕತೆಯಲ್ಲಿಯೇ ಹೌದು. ಜೀವನದ ಒಂದೊಂದು ಕ್ಷಣವನ್ನೂ ಸಂಭ್ರಮದಿಂದಲೂ ಸಂತೋಷದಿಂದಲೂ ಆಸ್ವಾದಿಸುವ ಗುಣ ನಮ್ಮದಾಗಬೇಕು. ಇಂಥ ಸಂಕಲ್ಪಕ್ಕೆ ಈ ಸಲದ ಹೊಸ ವರ್ಷದ ಸಂಭ್ರಮಾಚರಣೆ ಸ್ಫೂರ್ತಿಯನ್ನು ಒದಗಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT