ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣಗಳ ಪಯಣ

Last Updated 27 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಅದು ‘ಒಂಥರ ಬಣ್ಣಗಳು’ ಚಿತ್ರದ ಸುದ್ದಿಗೋಷ್ಠಿ. ಕೈಯಲ್ಲಿ ಮೈಕ್‌ ಹಿಡಿದ ನಿರ್ದೇಶಕ ಸುನೀಲ್‌ ಭೀಮರಾವ್ ಭಾವನೆಗಳ ಪಯಣ ಆರಂಭಿಸಿದರು. ಅವರ ಈ ಪಯಣಕ್ಕೆ ಪೂರ್ಣ ವಿರಾಮ ಬೀಳುವ ಲಕ್ಷಣ ಕಾಣುತ್ತಿರಲಿಲ್ಲ. ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿರುವ ಅವರು ಬಣ್ಣದ ಮಾತಿನಲ್ಲಿ ಮಿಂದೆದ್ದರು. ಬಣ್ಣದ ಪಯಣಕ್ಕೆ ಭಾವುಕತೆಯ ಸ್ಪರ್ಶ ನೀಡಿರುವುದಾಗಿ ಗುಟ್ಟು ಬಿಟ್ಟುಕೊಟ್ಟರು.

‘ಇದೊಂದು ಪಯಣ ಕುರಿತ ಸಿನಿಮಾ. ಇಬ್ಬರು ಯುವತಿಯರು ಮತ್ತು ಮೂವರು ಯುವಕರ ಮೂಲಕ ಬಣ್ಣದ ಕಥೆ ಹೇಳಲು ಹೊರಟಿದ್ದೇನೆ. ದೀರ್ಘ ಪಯಣದಲ್ಲಿ ಸುಖದ ಜೊತೆಗೆ ದುಃಖವೂ ಇದೆ’ ಎಂದರು ಸುನೀಲ್ ಭೀಮರಾವ್.

ಇದು ಹೊಸಬರ ತಂಡ. ಕಥೆ, ಚಿತ್ರತಂಡ ಸಿದ್ಧವಾದಾಗ ನಿರ್ದೇಶಕರು ಮತ್ತು ನಿರ್ಮಾಪಕರ ಹುಡುಕಾಟಕ್ಕೆ ಮುಂದಾದರಂತೆ. ಆದರೆ, ಚಿತ್ರಕ್ಕೆ ಬಂಡವಾಳ ಹೂಡುವುದಾಗಿ ಹೇಳಿದ್ದ ನಿರ್ಮಾಪಕರು ಕೊನೆಗಳಿಗೆಯಲ್ಲಿ ಕೈಕೊಟ್ಟರಂತೆ. ಹಾಗಾಗಿ, ಇಪ್ಪತೈದಕ್ಕೂ ಹೆಚ್ಚು ಸ್ನೇಹಿತರು ಸೇರಿಕೊಂಡು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರಂತೆ. ಬೆಂಗಳೂರು, ಬಾದಾಮಿ, ಬಾಗಲಕೋಟೆ, ಮಂಗಳೂರು, ಸಾಗರದ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.

ನಾಯಕ ಕಿರಣ್‌ ಶ್ರೀನಿವಾಸ್‌, ‘ಚಿತ್ರ ನನಗೆ ಒಳ್ಳೆಯ ಅನುಭವ ಕೊಟ್ಟಿದೆ. ನನ್ನ ಉಳಿದ ಚಿತ್ರಗಳಿಗಿಂತಲೂ ಇದು ಭಿನ್ನವಾದುದು. ಪ್ರತಿಯೊಬ್ಬರಿಗೂ ಚಿತ್ರ ಕನೆಕ್ಟ್‌ ಆಗಲಿದೆ’ ಎಂದರು.

ನಾಯಕಿ ಸೋನು ಗೌಡ, ‘ಚಿತ್ರದಲ್ಲಿ ನನ್ನದು ಜಾನಕಿ ಹೆಸರಿನ ಪಾತ್ರ. ಉತ್ತರ ಕರ್ನಾಟಕದ ಹುಡುಗಿಯ ಪಾತ್ರ. ಜಾಲಿ ಗರ್ಲ್ ಆಗಿ ನಟಿಸಿದ್ದೇನೆ’ ಎಂದಷ್ಟೇ ಹೇಳಿದರು.

ಹಿತಾ ಚಂದ್ರಶೇಖರ್, ಪ್ರವೀಣ್‌, ಪ್ರತಾಪ್‌ ನಾರಾಯಣ್ ಚುಟುಕಾಗಿ ಮಾತನಾಡಿದರು. ಮನೋಹರ್‌ ಜೋಶಿ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಬಿ.ಜೆ. ಭರತ್‌ ಸಂಗೀತ ಸಂಯೋಜಿಸಿದ್ದಾರೆ. ಸಾಧುಕೋಕಿಲ, ಟೆನಿಸ್‌ ಕೃಷ್ಣ, ಸುಚೇಂದ್ರಪ್ರಸಾದ್‌ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT