ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜಪ್ಪ ಮಾಸ್ಟರ್ ಸಂಸ್ಮರಣೆ

Last Updated 27 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಹಾರ್ಮೋನಿಯಂ ಮಾಸ್ಟರ್ ನಂಜಪ್ಪ ಸ್ಮರಣೋತ್ಸವ. ಪುತ್ಥಳಿ ಅನಾವರಣ, ‘ನಂಜಪ್ಪ ಮಾಸ್ಟರ್ ಪ್ರಶಸ್ತಿ’ ಪ್ರದಾನ ಹಾಗೂ ಸಂಗೀತೋತ್ಸವ ಸಮಾರಂಭ ಇಂದು (ಡಿ.28) ಬೆಳಿಗ್ಗೆ 10.30ಕ್ಕೆ ಮಾಗಡಿ ರಸ್ತೆ ಸೀಗೆಹಳ್ಳಿ ಗೇಟ್‌ ಸಮೀಪದ ಎಸ್.ಜಿ. ಕನ್‌ವೆನ್ಷನ್ ಹಾಲ್‌ನಲ್ಲಿ ನಡೆಯಲಿದೆ.

ಮಾಗಡಿ ಮುಖ್ಯರಸ್ತೆ ಸಮೀಪದ ಕೊಡಿಗೆಹಳ್ಳಿಯಲ್ಲಿ ಜನಿಸಿದ ನಂಜಪ್ಪ (ಜನನ: ಜುಲೈ 5, 1929) ಅವರು ಅದೇ ಗ್ರಾಮದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಗಾಂಧೀಜಿ  ಆಶಯದಂತೆ ಗ್ರಾಮ ಸ್ವರಾಜ್ಯಕ್ಕಾಗಿ ಶ್ರಮಿಸಿದ್ದರು. ಮಕ್ಕಳಿಗೆ ಹೊಲ, ಗದ್ದೆ, ಕೆರೆ, ಬಾವಿ, ನದಿಗಳು, ಕಾಡು, ಪ್ರಾಣಿ-ಪಕ್ಷಿಗಳು, ವನ್ಯ ಸಂಪತ್ತು, ಸಮಾಜ, ನಾಡು-ನುಡಿಯ ಬಗ್ಗೆ ತಿಳಿಸಿಕೊಡುತ್ತಾ ಭವ್ಯ ಪ್ರಜೆಗಳನ್ನಾಗಿ ರೂಪಿಸಿದರು. ಸಮಾಜಮುಖಿ ಚಿಂತನೆಗಳನ್ನು ಮೈಗೂಡಿಸಿಕೊಂಡು ಬದ್ಧತೆಯಿಂದ ಕಾರ್ಯನಿರ್ವಹಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ನಂಜಪ್ಪ ಅವರ ತಂದೆ ನಂಜುಂಡಪ್ಪ ರೈತರು. ಹಳ್ಳಿಗಳಲ್ಲಿ ವಿದ್ಯಾಭ್ಯಾಸಕ್ಕೆ ಸೌಲಭ್ಯ ಇಲ್ಲದ್ದನ್ನು ಮನಗಂಡು ಕೂಲಿಮಠ ಸ್ಥಾಪಿಸಿದರು. ತಂದೆಯ ಪ್ರಭಾವಕ್ಕೆ ಒಳಗಾದ ನಂಜಪ್ಪ ಅವರು ರೈತರಾಗಿ, ಶಿಕ್ಷಕರಾಗಿ, ಕಲಾಪ್ರೇಮಿಯಾಗಿ, ಕಲಾವಿದರಾಗಿ, ಸಂಗೀತಜ್ಞರಾಗಿ, ಕಲಾಪೋಷಕರಾಗಿ, ಸಾಹಿತಿಯಾಗಿ ಎಲ್ಲ ವರ್ಗದ ಜನರ ಪ್ರೀತಿಗಳಿಸಿದ್ದರು.

ಬಾಲ್ಯದಲ್ಲಿಯೇ ಹಾರ್ಮೋನಿಯಂ ಕಲಿತಿದ್ದರು. ಹರಿಕಥೆಗಳಿಗೆ, ಪೌರಾಣಿಕ ನಾಟಕಗಳಿಗೆ ಹಾರ್ಮೋನಿಯಂ ನುಡಿಸುತ್ತಿದ್ದರು. ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಕೆಲ ಸಮಯ ಗುಬ್ಬಿವೀರಣ್ಣ ನಾಟಕ ಕಂಪನಿಯಲ್ಲಿಯೂ ಸೇವೆಸಲ್ಲಿಸಿದ್ದರು. ಹಳ್ಳಿಗಳಿಗೆ ತೆರಳಿ ಆಸಕ್ತರಿಗೆ ಭಜನೆ ಕಲಿಸುತ್ತಿದ್ದರು. ಸತತ 70 ವರ್ಷ ಈ ಕಾಯಕ ಮುಂದುವರಿಸಿದರು. ಪರಿಸರಪ್ರೇಮಿಯೂ ಆಗಿದ್ದ ನಂಜಪ್ಪ ಸಾವಿರಾರು ಸಸಿಗಳನ್ನು ಬೆಳೆಸಿ ಜನರಿಗೆ ವಿತರಿಸಿದ್ದರು. ನಂಜಪ್ಪ ಅವರು ಜನವರಿ 25, 2017ರಂದು ನಿಧನರಾದರು.

ನಂಜಪ್ಪ ಅವರ ಸ್ಮರಣಾರ್ಥ ಅಭಿಮಾನಿಗಳು ‘ಮಾಸ್ಟರ್ ನಂಜಪ್ಪ ಸಾಮಾಜಿಕ ಸಾಂಸ್ಕೃತಿಕ ಸೇವಾ ಟ್ರಸ್ಟ್‌’ ರಚಿಸಿಕೊಂಡಿದ್ದಾರೆ. ಟ್ರಸ್ಟ್‌ ಮೂಲಕ ಸಂಗೀತ ಶಾಲೆ ಆರಂಭಿಸುವ ಉದ್ದೇಶ ಅವರದು. ‘ನಂಜಪ್ಪ ಅವರ ಹೆಸರಿನಲ್ಲಿ ಮುಂದಿನ ದಿನಗಳಲ್ಲಿ ಪೌರಾಣಿಕ ನಾಟಕೋತ್ಸವ, ಸಂಗೀತ ಶಿಬಿರ, ನಾಟಕ ತರಬೇತಿ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು’ ಎಂದು ಟ್ರಸ್ಟ್‌ನ ಪದಾಧಿಕಾರಿಗಳು ಹೇಳುತ್ತಾರೆ.

ಪ್ರಥಮ ವರ್ಷದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಚಿತ್ರನಟ ರಾಮಕೃಷ್ಣ, ಹಿನ್ನಲೆ ಗಾಯಕಿ ಕಸ್ತೂರಿ ಶಂಕರ್, ಹರಿಕಥಾ ವಿದ್ವಾನ್‌ ಜ್ಞಾನಮೂರ್ತಿ, ಸಾಹಿತಿ ಮಲೆಯೂರು ಗುರುಸ್ವಾಮಿ, ಚಿತ್ರನಟ ಸಂಚಾರಿ ವಿಜಯ್, ಚಿತ್ರನಟ ಚಿಕ್ಕಹೆಜ್ಜಾಜಿ ಮಹದೇವ್, ಹಾಸ್ಯನಟರಾದ ಉಮೇಶ್ ಮತ್ತು ಶಿವಕುಮಾರ್ ಆರಾಧ್ಯ, ವೀರಗಾಸೆ ಕಲಾವಿದರಾದ ಮಹದೇವಪ್ಪ, ರೇಣುಕಪ್ಪ, ಗಾಯಕಿ ಮಂಜುಳಾ ಪರಮೇಶ್, ಅಶ್ವಿನಿ ಸ್ಟುಡಿಯೊ ಮಾಲೀಕರಾದ ರಾಮ್‍ಪ್ರಸಾದ್, ರಂಗಭೂಮಿ ಕಲಾವಿದ ಹಾಗೂ ನಿರ್ದೇಶಕ ಆಂಜನೇಯ, ಅಂಗವಿಕಲ ಸಾಧಕಿ ಅಶ್ವಿನಿ ಅಂಗಡಿ ಸೇರಿದಂತೆ ಹಲವು ಕಲಾವಿದರಿಗೆ ‘ಮಾಸ್ಟರ್ ನಂಜಪ್ಪ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.
–ಚಿಕ್ಕರಾಮು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT