ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಬರಿಗೆ ಕಡಿಮೆ ಸಂಬಳ: ಪೈ ಟೀಕೆ

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಸಂಸ್ಥೆಗಳಿಂದ ಕೂಟ ರಚನೆ
Last Updated 27 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಹೈದರಾಬಾದ್‌: ‘ದೇಶದ ಐ.ಟಿ ದೈತ್ಯ ಸಂಸ್ಥೆಗಳು  ಹೊಸದಾಗಿ ಕೆಲಸಕ್ಕೆ ಸೇರುವವರಿಗೆ ಕಡಿಮೆ ವೇತನ ನೀಡಲು ಕೂಟ ರಚಿಸಿಕೊಂಡಿವೆ’ ಎಂದು ಇನ್ಫೊಸಿಸ್‌ನ ಮಾಜಿ ಸಿಎಫ್‌ಒ ಟಿ. ವಿ. ಮೋಹನ್‌ದಾಸ್‌ ಪೈ ಅವರು ಆರೋಪಿಸಿದ್ದಾರೆ.

‘ಏಳು ವರ್ಷಗಳಿಂದೀಚೆಗೆ ಹೊಸದಾಗಿ ಕೆಲಸಕ್ಕೆ ಸೇರುವವರ ಸಂಬಳವು ಹೆಚ್ಚಳ ಕಾಣುತ್ತಿಲ್ಲ. ಆದರೆ, ಅದೇ ಹೊತ್ತಿಗೆ ಹಿರಿಯ  ಮತ್ತು ಉನ್ನತ ಹಂತದ ಸಿಬ್ಬಂದಿ ಸಂಬಳವು ಹಲವು ಪಟ್ಟು ಹೆಚ್ಚಾಗಿದೆ’ ಎಂದು ಹೇಳಿರುವ ಇನ್ಫೊಸಿಸ್‌ನ ಸಹ ಸ್ಥಾಪಕ ಎನ್‌. ಆರ್‌. ನಾರಾಯಣಮೂರ್ತಿ ಅವರ ಅನಿಸಿಕೆಯನ್ನು ಮೋಹನದಾಸ್ ಪೈ ಅನುಮೋದಿಸಿದ್ದಾರೆ.

‘ಪ್ರತಿ ವರ್ಷ ಕಾಲೇಜ್‌ಗಳಿಂದ ಹೊರಬರುವ ಎಂಜಿನಿಯರುಗಳ ಅತಿಯಾದ ಪೂರೈಕೆಯನ್ನು ಐ.ಟಿ ಸಂಸ್ಥೆಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಕಡಿಮೆ ಸಂಬಳ ನೀಡುತ್ತ ಉದ್ಯೋಗ ಮಾರುಕಟ್ಟೆ ಮೇಲೆ ನಿಯಂತ್ರಣ ಸಾಧಿಸುತ್ತಿವೆ. ಇದೊಂದು ಕೆಟ್ಟ ಪ್ರವೃತ್ತಿ ಮತ್ತು ನಿರುತ್ಸಾಹಗೊಳಿಸುವ ವಿದ್ಯಮಾನವಾಗಿದೆ.

‘ದೈತ್ಯ ಐ.ಟಿ ಸಂಸ್ಥೆಗಳು ಈ ವಿಷಯದಲ್ಲಿ ಖಂಡಿತವಾಗಿಯೂ ಕೂಟ ರಚಿಸಿಕೊಂಡಿವೆ. ಅದರಲ್ಲಿ ಅನುಮಾನವೇ ಇಲ್ಲ. ಈ ಬಗ್ಗೆ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳುವ ಸಂಸ್ಥೆಗಳ ಇಂತಹ ಧೋರಣೆ ಬಹಳ ವರ್ಷಗಳಿಂದ ಮುಂದುವರೆದುಕೊಂಡು ಬಂದಿದೆ’ ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಹಣದುಬ್ಬರ ಲೆಕ್ಕಕ್ಕೆ ತೆಗೆದುಕೊಂಡರೆ, ಹೊಸಬರ ವೇತನ ಮತ್ತು ಭತ್ಯೆಗಳು ಶೇ 50ರಷ್ಟು ಕಡಿಮೆಯಾಗಿವೆ. ಇದೇ ಕಾರಣಕ್ಕೆ ಆರಂಭಿಕ ಹಂತದಲ್ಲಿ ಕೆಲಸ ಬಿಟ್ಟು ಹೋಗುವವರ ಸಂಖ್ಯೆ ಹೆಚ್ಚಿಗೆ ಇದೆ. ಬದಲಾಗದ ವೇತನದಿಂದಾಗಿ ಪ್ರತಿಭಾನ್ವಿತರು ಐ.ಟಿ ಕ್ಷೇತ್ರಕ್ಕೆ ಬರುತ್ತಿಲ್ಲ. ಹೊಸಬರಿಗೆ ಉತ್ತಮ ಸಂಬಳ ಕೊಡಲು ಐ.ಟಿ ಸಂಸ್ಥೆಗಳ ಹಣಕಾಸು ಪರಿಸ್ಥಿತಿ ಸದೃಢವಾಗಿದೆ. ಮೇಲಿನವರ ಬದಲಿಗೆ, ಕೆಳಹಂತದವರಿಗೆ ವೇತನ ಹೆಚ್ಚಿಸುವ ಅಗತ್ಯ ಹೆಚ್ಚಿದೆ.

‘ನನ್ನ ಪ್ರಕಾರ, ಹೊಸಬರಿಗೆ ವೇತನ ಹೆಚ್ಚಿಸದಿರುವುದು ನೈತಿಕವಾಗಿ ತಪ್ಪು. ಹೊಸದಾಗಿ ಕೆಲಸಕ್ಕೆ ಸೇರುವವರಿಗೆ ಉತ್ತಮ ವೇತನ ಸೌಲಭ್ಯ ಕಲ್ಪಿಸಲು ಟಿಸಿಎಸ್‌ ಮತ್ತು ಇನ್ಫೊಸಿಸ್‌ ಮೇಲ್ಪಂಕ್ತಿ ಹಾಕಬೇಕು. ಹೊಸಬರಿಗೆ ತರಬೇತಿ ನೀಡಲು ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದೆ ಎಂದು ಐ.ಟಿ ಕಂಪೆನಿಗಳು ಹೇಳುವುದರಲ್ಲಿಯೂ ಹುರುಳಿದೆ. ಅದೇನೂ ಹೊಸದಲ್ಲ. 20 ವರ್ಷಗಳಿಂದ ಅದನ್ನು ಮುಂದುವರೆಸಿಕೊಂಡು ಬರಲಾಗಿದೆ.

‘ಹೊಸದಾಗಿ ಕೆಲಸಕ್ಕೆ ಸೇರುವವರ ವೇತನ ಹೆಚ್ಚಿಸದಿದ್ದರೆ ದೊಡ್ಡ, ದೊಡ್ಡ ಐ.ಟಿ ಸಂಸ್ಥೆಗಳು ಇತರ ಕಂಪೆನಿಗಳ ತರಬೇತಿ ಕೇಂದ್ರಗಳಾಗುವ ಅಪಾಯ ಇದೆ. ಉಳಿದವರು ಹೊಸಬರನ್ನು ನೇಮಿಸಿಕೊಳ್ಳದೆ ಇತರ ಸಂಸ್ಥೆಗಳಲ್ಲಿ ತರಬೇತಿ ಪಡೆದವರನ್ನೇ ನೇಮಿಸಿಕೊಳ್ಳಲು ಆದ್ಯತೆ ನೀಡಬಹುದು. ಈ ಮೂಲಕ ಅವರು ತರಬೇತಿ ವೆಚ್ಚವನ್ನೂ ಉಳಿಸಿಕೊಳ್ಳಬಹುದು. ಅಂತಹ ವಿದ್ಯಮಾನವು ಈ ಕ್ಷೇತ್ರದ ದೊಡ್ಡ ಸಂಸ್ಥೆಗಳಿಗೇ ಮುಳುವಾಗಬಹುದು’ ಎಂದೂ ಪೈ ಎಚ್ಚರಿಸಿದ್ದಾರೆ.

ಏಳು ವರ್ಷಗಳಿಂದೀಚೆಗೆ ಹೊಸಬರ ಸಂಬಳ ಹೆಚ್ಚಳ ಕಾಣುತ್ತಿಲ್ಲ

ಹಿರಿಯ, ಉನ್ನತ ಸಿಬ್ಬಂದಿ ಸಂಬಳ ದುಪ್ಪಟ್ಟು

ಕಡಿಮೆ ಸಂಬಳ ನೀಡುತ್ತ ಉದ್ಯೋಗ ಮಾರುಕಟ್ಟೆ ಮೇಲೆ ನಿಯಂತ್ರಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT