ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 50 ಸಾವಿರ ಕೋಟಿ ಹೆಚ್ಚುವರಿ ಸಾಲ: ಕೇಂದ್ರ ಸರ್ಕಾರ ನಿರ್ಧಾರ

ಕೇಂದ್ರದ ವಿತ್ತೀಯ ಕೊರತೆ ಮೇಲೆ ವ್ಯತಿರಿಕ್ತ ಪರಿಣಾಮ ನಿರೀಕ್ಷೆ
Last Updated 27 ಡಿಸೆಂಬರ್ 2017, 19:35 IST
ಅಕ್ಷರ ಗಾತ್ರ

ನವದೆಹಲಿ : ಪ್ರಸಕ್ತ ಹಣಕಾಸು ವರ್ಷದಲ್ಲಿ ದೀರ್ಘಾವಧಿ ಸಾಲಪತ್ರಗಳ ಮೂಲಕ ₹ 50 ಸಾವಿರ ಕೋಟಿಗಳನ್ನು ಹೆಚ್ಚುವರಿಯಾಗಿ ಸಂಗ್ರಹಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.

ವಿತ್ತೀಯ ಕೊರತೆಯನ್ನು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 3.2ಕ್ಕೆ ಇಳಿಸುವ ಸರ್ಕಾರದ ಗುರಿ ಮೇಲೆ ಈ ನಿರ್ಧಾರವು ವ್ಯತಿರಿಕ್ತ ಪರಿಣಾಮ ಬೀರಲಿದೆ. ಸಾಲ ಪರಿಸ್ಥಿತಿ ಕುರಿತು ಭಾರತೀಯ ರಿಸರ್ವ್‌ ಬ್ಯಾಂಕ್‌ ಜತೆಗಿನ ಪರಾಮರ್ಶೆ ಸಭೆಯ ನಂತರ 2017–18ನೇ ಹಣಕಾಸು ವರ್ಷಕ್ಕೆ ಮಾರುಕಟ್ಟೆಯಿಂದ ಈ ಹೆಚ್ಚುವರಿ ಸಾಲ ಸಂಗ್ರಹಿಸಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಸಾಲಪತ್ರಗಳ (ಟ್ರೆಸರಿ ಬಿಲ್‌) ಪ್ರಮಾಣವನ್ನು ಸದ್ಯದ ₹ 86,203 ಕೋಟಿಗಳಿಂದ ₹ 25,006 ಕೋಟಿಗಳಿಗೆ ಇಳಿಸಲೂ ಸರ್ಕಾರ ಮುಂದಾಗಿದೆ. ದೀರ್ಘಾವಧಿ ಸಾಲಪತ್ರಗಳ ಅವಧಿ 5 ವರ್ಷಗಳದ್ದು ಆಗಿರುತ್ತದೆ.

2017–18ನೇ ಸಾಲಿನ ಬಜೆಟ್‌ನಲ್ಲಿ  ಒಟ್ಟು ಸಾಲ (₹ 5.80 ಲಕ್ಷ ಕೋಟಿ) ಮತ್ತು ನಿವ್ವಳ ಸಾಲವನ್ನು (₹ 3.28 ಲಕ್ಷ ಕೋಟಿ) ದೀರ್ಘಾವಧಿ ಸಾಲಪತ್ರಗಳ ಮೂಲಕ ಸಂಗ್ರಹಿಸಲು ಗುರಿ ನಿಗದಿ ಮಾಡಲಾಗಿತ್ತು.

ಪ್ರಸಕ್ತ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 3.2ಕ್ಕೆ ನಿಗದಿಪಡಿಸಲು ಸರ್ಕಾರ ಮಿತಿ ವಿಧಿಸಿದೆ. ಹೆಚ್ಚುವರಿ ಸಾಲ ಸಂಗ್ರಹವು ಈ ವಿತ್ತೀಯ ಲೆಕ್ಕಾಚಾರ ತಲೆಕೆಳಗು ಮಾಡಲಿದೆ. ಎರಡು ತಿಂಗಳಲ್ಲಿ ಜಿಎಸ್‌ಟಿ ವರಮಾನ ಸಂಗ್ರಹವೂ ನಿರೀಕ್ಷೆಗಿಂತ ಕಡಿಮೆಯಾಗಿದೆ. ಈ ಹೆಚ್ಚುವರಿ ಸಾಲವು ಈ ಕೊರತೆಯನ್ನು ಭರ್ತಿ ಮಾಡಲು ನೆರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT