ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ ಯಾವುದಾದರೇನು?

Last Updated 27 ಡಿಸೆಂಬರ್ 2017, 19:54 IST
ಅಕ್ಷರ ಗಾತ್ರ

ರೈತರ ಮೂಗಿಗೆ ತುಪ್ಪ ಸವರಿ, ಗೋಸುಂಬೆಗಳಂತೆ ಬಣ್ಣ ಬದಲಿಸಿ, ನಾಲಿಗೆಯನ್ನು ಬೇಕಾದಂತೆ ಹೊರಳಿಸಿ, ಅಸಾಂವಿಧಾನಿಕ ಬೈಗುಳದಲ್ಲಿ ನಿರತರಾಗಿರುವ ನಮ್ಮ ರಾಜಕಾರಣಿಗಳು ನಾಟಕವಾಡುವುದರಲ್ಲಿ ನಿಸ್ಸೀಮರು.

ಮಹದಾಯಿ ನೀರಿಗಾಗಿ ವರ್ಷಗಳಿಂದ ಹೋರಾಡುತ್ತಿರುವ ರೈತರು ಬೆಂಗಳೂರಿಗೆ ಬಂದು ಪ್ರತಿಭಟನೆ ನಡೆಸಿ, ಕೊರೆವ ಚಳಿಯಲ್ಲಿ ಗಡಗಡ ನಡುಗಿ, ಸೋತು ಸುಣ್ಣವಾಗಿ, ಬಂದ ದಾರಿಗೆ ಸುಂಕವಿಲ್ಲದೆ ಬರಿಗೈಯಲ್ಲಿ ಹಿಂದಿರುಗುತ್ತಿದ್ದಾರೆ. ಕೇಂದ್ರ ಸರ್ಕಾರವಾಗಲಿ ರಾಜ್ಯ ಸರ್ಕಾರವಾಗಲಿ ಅವರ ಬವಣೆ ನೀಗಿಸುವ ಭರವಸೆ ನೀಡದೆ, ಉರಿಯುವ ಮನೆಯಲ್ಲಿ ಚಳಿ ಕಾಯಿಸುತ್ತಿವೆ. ಪಕ್ಷಗಳು ಮುಂಬರುವ ಚುನಾವಣೆಯಲ್ಲಿ ತಮ್ಮ ಬಲಾಬಲ ಲೆಕ್ಕಾಚಾರದಲ್ಲಿ ತೊಡಗಿ, ಪರಿವರ್ತನಾ ಸಭೆ, ಜನಸಂಪರ್ಕ ಸಭೆ, ಗ್ರಾಮವಾಸ್ತವ್ಯ ಮುಂತಾದ ಗಿಮಿಕ್ ನಡೆಸುತ್ತಿವೆ.

19 ರಾಜ್ಯಗಳನ್ನು ಗೆದ್ದ ದೊಡ್ಡಸ್ತಿಕೆಯಲ್ಲಿ ಬಿಜೆಪಿ ಬೀಗುತ್ತಿದ್ದರೆ, ಕಾಂಗ್ರೆಸ್‌, ನಿಸ್ತೇಜಗೊಂಡು ದೇವಾಲಯಗಳಿಗೆ ಸುತ್ತು ಹೊಡೆಯುತ್ತಿದೆ. ಗೋವಾದ ಮುಖ್ಯಮಂತ್ರಿ ಪರಿಕ್ಕರ್ ‘ಕರ್ನಾಟಕದೊಂದಿಗೆ ಮಾತುಕತೆಗೆ ಸಿದ್ಧ’ ಎಂದರೆ, ಅಲ್ಲಿನ ವಿರೋಧ ಪಕ್ಷಗಳು ಅಡ್ಡಗಾಲು ಹಾಕುತ್ತಿವೆ. ಮಹಾರಾಷ್ಟ್ರದ
ಮುಖ್ಯಮಂತ್ರಿ ಮೌನ ಧರಿಸಿದ್ದಾರೆ. ‘ಮಹದಾಯಿ ಬಗ್ಗೆ ನೀವು ಮೂರೂ ರಾಜ್ಯಗಳವರು ಒಮ್ಮತಕ್ಕೆ ಬನ್ನಿ’ ಎಂದು ಪ್ರಧಾನಿ ಮೋದಿಯವರು ಜಾರಿಕೊಳ್ಳುತ್ತಿದ್ದಾರೆ. ಆದರೆ, ಅವರೇ ನರ್ಮದಾ ಅಣೆಕಟ್ಟೆಯನ್ನು ಎತ್ತರಿಸಿ, ಕಣಿವೆಯ ಬುಡಕಟ್ಟು ಜನರನ್ನು ಮುಳುಗಿಸಿ, ಗುಜರಾತ್‌ಗೆ ಸಾಕಷ್ಟು ನೀರು ಹರಿಸುತ್ತಿದ್ದಾರೆ.

ಆಳುವ ಪಕ್ಷವಾಗಿರಲಿ, ವಿರೋಧ ಪಕ್ಷವಾಗಿರಲಿ ಯಾರಿಗೂ ಮಹದಾಯಿ ವಿವಾದವನ್ನು ಬಗೆಹರಿಸಬೇಕೆಂಬ ಇಚ್ಛಾಶಕ್ತಿ ಇದ್ದಂತೆ ಕಾಣುವುದಿಲ್ಲ. ಎಲ್ಲಕ್ಕೂ ರಾಜಕೀಯ. ಪಕ್ಷ ಯಾವುದಾದರೇನು? ಎಲ್ಲರೂ ಜಿಗಣೆಗಳೇ ರೈತ ನೆತ್ತರಿಗೆ. ಸದ್ಯ ನಮ್ಮ ಜನತಂತ್ರದ ವೈಖರಿಗೆ ಕಾವೇರಿ- ಮಹದಾಯಿ ಮುಂತಾದ ನದಿಗಳೇ ನೀರಗನ್ನಡಿಗಳು.

–ಪ್ರೊ. ಶಿವರಾಮಯ್ಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT