ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆದ ವರ್ಷದ ವಿನ್ಯಾಸ ವಿಶೇಷ

Last Updated 28 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಮನೆ ಮನಸ್ಸಿಗೆ ಮುದ ನೀಡುವಂತಿರಬೇಕು ಎಂಬುದು ಎಲ್ಲರ ಅಭಿಲಾಷೆ. ಅದಕ್ಕಾಗಿಯೇ ಅದರ ವಿನ್ಯಾಸಕ್ಕೂ ಪ್ರಾಶಸ್ತ್ಯ ನೀಡಲಾಗುತ್ತದೆ. ಒಂದು ರೀತಿಯಲ್ಲಿ ಮನೆಯ ಒಳಾಂಗಣ ವಿನ್ಯಾಸ ಪ್ರತಿಷ್ಠೆಯ ಸಂಕೇತ ಎನ್ನುವಂತಾಗಿದೆ. ಆದ್ಯತೆಗಳು ಹೆಚ್ಚಿದ್ದಂತೆ ಒಳಾಂಗಣ ವಿನ್ಯಾಸದಲ್ಲಿಯೂ ಹಲವು ಆವಿಷ್ಕಾರಗಳು ಆಗಿವೆ. 2017ರ ಇಸವಿಯಲ್ಲಿ ಹೆಚ್ಚು ಸದ್ದು ಮಾಡಿದ ಒಳಾಂಗಣ ವಿನ್ಯಾಸಗಳ ಪರಿಚಯ ಇಲ್ಲಿದೆ.

ಕರಕುಶಲ ವಸ್ತುಗಳಿಗೆ ಆದ್ಯತೆ: ಕಲಾತ್ಮಕ ಸ್ಮರ್ಶವಿರುವ ವಸ್ತುಗಳು ಈ ವರ್ಷ ಹೆಚ್ಚಿನವರ ಮನೆಯ ಒಳಾಂಗಣದಲ್ಲಿ ಸ್ಥಾನ ಪಡೆದುಕೊಂಡಿದೆ. ಕಲಾಕೃತಿಗಳು, ಅಪರೂಪದ ಶಿಲ್ಪಗಳು, ಆ್ಯಂಟಿಕ್‌ ಪೀಸ್‌ಗಳಿಗೆ ಬೇಡಿಕೆ ಹೆಚ್ಚಿದೆ. ಗ್ರಾಮೀಣ ಸೊಗಡಿನ ಜೊತೆಗೆ ಆಧುನಿಕತೆಯನ್ನು ಪ್ರತಿಬಿಂಬಿಸುವ ಈ ವಸ್ತುಗಳು ಮನೆಗೆ ಶ್ರೀಮಂತ ನೋಟ ನೀಡುತ್ತದೆ. ‘ಕಣ್ಸೆಳೆಯುವ ಕರಕುಶಲ ವಸ್ತುಗಳು ಬಹುಜನರನ್ನು ಆಕರ್ಷಿಸಿವೆ. ಕಲಾತ್ಮಕವಾಗಿ ಆಕರ್ಷಣೆಯುಳ್ಳ ಬಾಗಿಲಿನ ಹಿಡಿಕೆ, ಸೀಲಿಂಗ್‌ಗೆ ಹಾಕುವ ದೀಪದ ಗುಚ್ಛಗಳಿಗೆ ಈ ವರ್ಷ ಹೆಚ್ಚಿನ ಬೇಡಿಕೆ ಇತ್ತು’ ಎನ್ನುತ್ತಾರೆ ಪಿಎಸ್‌ ಡಿಸೈನ್‌ನ ವಾಸ್ತುಶಿಲ್ಪಿ ಪ್ರಿಯಾಂಕಾ ಮೆಹ್ರಾ.

ಮನಗೆದ್ದ ಜಿಯೊಮೆಟ್ರಿಕ್ ವಿನ್ಯಾಸ: ಇತ್ತೀಚಿನ ದಿನಗಳಲ್ಲಿ ವಾಸ್ತುಶೈಲಿಯ ವಿನ್ಯಾಸಗಳು ಮತ್ತು ಆಲಂಕಾರಿಕ ವಸ್ತುಗಳು ಜಿಯೊಮೆಟ್ರಿಕ್‌ ಆಧಾರದ ಮೇಲೆಯೇ ವಿನ್ಯಾಸ ಮಾಡಲಾಗುತ್ತಿದೆ. ಈ ವರ್ಷ ಇದರ ಬಳಕೆ ಬಹಳ ಹೆಚ್ಚಾಗಿದೆ. ‘ಚೌಕ, ವೃತ್ತಾಕಾರ, ತ್ರಿಕೋನ, ಕ್ಯೂಬಿಕ್‌ ವಿನ್ಯಾಸದಲ್ಲಿ ಆಕರ್ಷಕ ಒಳಾಂಗಣ ವಿನ್ಯಾಸ ಮೂಡುತ್ತಿದೆ. ಈ ಬಗೆಯ ವಿನ್ಯಾಸ ಆಧುನಿಕತೆ ನೋಟ ನೀಡುತ್ತದೆ’ ಎನ್ನುತ್ತಾರೆ ಡಿಸೈನ್ ಕೆಫೆಯ ವಾಸ್ತುಶಿಲ್ಪಿ ಮತ್ತು ಒಳಾಂಗಣ ವಿನ್ಯಾಸಕಿ ಗೀತಾ ರಾಮನನ್.

ಪ್ರಕೃತಿಯತ್ತ ಒಲವು: ಒಳಾಂಗಣ ವಿನ್ಯಾಸಕ್ಕೆ ಪ್ರಕೃತಿ ಸ್ಫೂರ್ತಿಯಾಗಿ ಹಲವು ವರ್ಷಗಳೇ ಸಂದಿವೆ. ಇದರಲ್ಲಿ ವರ್ಷದಿಂದ ವರ್ಷಕ್ಕೆ ಬದಲಾವಣೆಗಳೂ ಆಗುತ್ತಲೇ ಇರುತ್ತದೆ. ಮನೆಯ ಒಳಗೆ ಗಿಡ ಬೆಳೆಸುವುದು, ಮಡಿಕೆಗಳ ಬಳಕೆ, ಮರಗಳಿಂದ ಪೀಠೋಪಕರಣ ತಯಾರಿ... ಹೀಗೆ ಹಲವು ವಿನ್ಯಾಸಗಳು ಜನಪ್ರಿಯವಾಗಿವೆ. ‘ನೈಸರ್ಗಿಕ ಅಂಶವನ್ನು ಬಳಸಿ ಒಳಾಂಗಣ ವಿನ್ಯಾಸ ಮಾಡುವುದರಿಂದ ಮನಸ್ಸಿಗೆ ಮುದ ನೀಡುತ್ತದೆ. ತಾಜಾತನದ ಅನುಭವವಾಗುತ್ತದೆ’ ಎನ್ನುತ್ತಾರೆ ಜಂಪಿಂಗ್‌ಗೂಸ್‌ ಕಂಪೆನಿಯ ಸಹ ಸಂಸ್ಥಾಪಕ ಟೂಹಿನ್‌ ರಾಯ್‌.

‘ಪರಿಸರ ಸ್ನೇಹಿ’: ತಂತ್ರಜ್ಞಾನ ಎಷ್ಟು ವೇಗವಾಗಿ ಬೆಳೆಯುತ್ತಿದೆಯೋ ಅಷ್ಟೇ ವೇಗವಾಗಿ ಪರಿಸರವನ್ನು ಹಾಳು ಮಾಡುತ್ತಿರುವುದು ಸುಳ್ಳಲ್ಲ. ಪರಿಸರಕ್ಕೆ ಹೆಚ್ಚು ಹಾನಿಯಾಗದಂತಹ ಜೀವನ ಶೈಲಿಯನ್ನು ಅಳವಡಿಸಿಕೊಂಡರೆ ಮಾತ್ರ ಪರಿಸರ ಉಳಿಸಲು ಸಾಧ್ಯ ಎನ್ನುವ ಸತ್ಯ ಹಲವರು ಅರಿತಂತಿದೆ. ಈ ಕಾರಣಕ್ಕೆ ಪರಿಸರ ಸ್ನೇಹಿ ಮನೆಯತ್ತ ಬಹುಜನರು ಮುಖ ಮಾಡುತ್ತಿದ್ದಾರೆ. ನೈಸರ್ಗಿಕ ಗಾಳಿ ಹೆಚ್ಚು ಬರುವ ವ್ಯವಸ್ಥೆ, ಮನೆಯ ಒಳಾಂಗಣ ಅಲಂಕಾರಿಕ ಪರಿಕರಗಳಲ್ಲಿಯೂ ಪರಿಸರ ಸ್ನೇಹಿ ವಸ್ತುಗಳಿಗೆ ಆದ್ಯತೆ ನೀಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.

‘ಸರಳ, ಸಾದಾಸೀದ ವಿನ್ಯಾಸಕ್ಕೆ ಬೇಡಿಕೆ ಹೆಚ್ಚಿದ್ದು, ನೈಸರ್ಗಿಕ ನಾರಿನ ಉತ್ಪನ್ನ ಬಳಸಿ ತಯಾರಿಸುವ ಕುಷನ್‌, ಛಾವಣಿಗೆ ಮಣ್ಣಿನ ಹಂಚು ಬಳಸುವುದು, ಸುಂದರ ಪರಿಸರ ಮನಸ್ಸಿನ ನೋವನ್ನು ಹಗುರಗೊಳಿಸುವುದು. ಹಳೆ ವಸ್ತುಗಳ ಮರುಬಳಕೆಯ ಜೊತೆಗೆ ಹಲವರು ಪುಟ್ಟ ಸ್ಥಳದಲ್ಲಿಯೇ ಜಾಣ್ಮೆಯಿಂದ ಕೈತೋಟ ಮಾಡುತ್ತಿದ್ದಾರೆ. ಕಡಿಮೆ ನಿರ್ವಹಣೆ ಇರುವ ಗಿಡಗಳನ್ನು ಬೆಳೆಸುತ್ತಿದ್ದಾರೆ’ ಎನ್ನುತ್ತಾರೆ ಉಗಾವೊಂಕಾಮ್ ಕಂಪೆನಿ ಸಂಸ್ಥಾಪಕ ಸಿದ್ಧಾಂತ್ ಭಿಲಿಂಗ.

ಲೋಹಗಳ ಚೆಲುವು: ಈ ವರ್ಷ ತಾಮ್ರ ಮತ್ತು ಹಿತ್ತಾಳೆಯ ಒಳಾಂಗಣ ಪರಿಕರಗಳಿಗೆ ಬೇಡಿಕೆ ಹೆಚ್ಚಿದೆ. ಡೈನಿಂಗ್‌ ಟೇಬಲ್‌ ಮೇಲೆ ಈ ರೀತಿಯ ಪರಿಕರ ಇಟ್ಟಾಗ ಹೊಸ ನೋಟ ಸಿಗುತ್ತದೆ. ಅಲ್ಲದೇ ಮಂದ ಬೆಳಕಿರುವ ಕೋಣೆಯಲ್ಲಿ ಈ ವಸ್ತುಗಳು ಆಕರ್ಷಕವಾಗಿ ಕಾಣುತ್ತವೆ. ಅಲ್ಲದೇ ಕೋಣೆಯ ಲೋಪವನ್ನು ಮರೆಮಾಚುತ್ತದೆ.

ಜಾಗದ ಸದುಪಯೋಗ: ಕಡಿಮೆ ಸ್ಥಳದಲ್ಲಿಯೇ ಅಚ್ಚುಕಟ್ಟಾಗಿ ಕಾಣುವಂತೆ ಮನೆ ನಿರ್ಮಿಸುವವರ ಸಂಖ್ಯೆ ಹೆಚ್ಚುತ್ತಿದೆ. ಈ ಮನೆಗಳ ಒಳಾಂಗಣವೂ ಸುಂದರವಾಗಿ ಕಾಣುವಂತೆ ಮಾಡುವ ಅವಕಾಶವನ್ನು ಪೀಠೋಪಕರಣ ತಯಾರಕರು ಬಳಸಿಕೊಳ್ಳುತ್ತಿದ್ದಾರೆ. ಹಲವು ಬಗೆಗಳಲ್ಲಿ ಬಳಸಬಹುದಾದ ಪೀಠೋಪಕರಣಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT