ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಡಿಯಲ್ಲಿನ ಸೇನೆ ನಿಯಂತ್ರಣದಲ್ಲಿಡಿ’

ಗಡಿ ಒಪ್ಪಂದಗಳ ಸಮರ್ಪಕ ಅನುಷ್ಠಾನ: ಭಾರತಕ್ಕೆ ಚೀನಾ ಒತ್ತಾಯ
Last Updated 28 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೀಜಿಂಗ್‌: ಗಡಿಯಲ್ಲಿನ ಸೇನೆಯನ್ನು ನಿಯಂತ್ರಿಸಲು ಭಾರತ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಚೀನಾ ಸಲಹೆ ನೀಡಿದೆ.

‘ಭಾರತ ಗಡಿ ಒಪ್ಪಂದಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಜತೆಗೆ, ಉಭಯ ರಾಷ್ಟ್ರಗಳ ಸೇನಾ ಸಂಬಂಧಗಳನ್ನು ಸುಧಾರಿಸಲು ಭಾರತ ಕ್ರಮ ಕೈಗೊಳ್ಳುವ ಅಗತ್ಯವಿದೆ’ ಎಂದು ಚೀನಾದ ರಕ್ಷಣಾ ಇಲಾಖೆ ವಕ್ತಾರ ಕರ್ನಲ್‌ ಗ್ಯುಖಿಯಾಂಗ್‌ ತಿಳಿಸಿದ್ದಾರೆ.

‘ಅತ್ಯಂತ ಜಟಿಲವಾಗಿದ್ದ ದೋಕಲಾ ಬಿಕ್ಕಟ್ಟು ಬಗೆಹರಿಸಿರುವುದು ಈ ವರ್ಷದ ಮಹತ್ವದ ಯಶಸ್ಸು. ಇದು ಅಂತರರಾಷ್ಟ್ರೀಯ ಸೇನಾ ಸಹಕಾರಕ್ಕೆ ನೀಡಿದ ಮಹತ್ವ ಕೊಡುಗೆ’ ಎಂದಿದ್ದಾರೆ.

‘ಚೀನಾ ಸೇನೆ ದೇಶದ ಸಾರ್ವಭೌಮತೆ ಮತ್ತು ಭದ್ರತಾ ಹಿತಾಸಕ್ತಿಯನ್ನು ಸದಾ ಕಾಪಾಡಿಕೊಂಡು ಬಂದಿದೆ. ದೋಕಲಾ, ದಕ್ಷಿಣ ಚೀನಾ ಸಮುದ್ರ ವಿವಾದ ವಿಷಯದಲ್ಲೂ ಮಹತ್ವದ ಪಾತ್ರವಹಿಸಿತು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಡಿ. 22ರಂದು ಗಡಿ ವಿಷಯದ ಕುರಿತು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋಬಾಲ್‌ ಮತ್ತು ಚೀನಾದ ಸ್ಟೇಟ್ ಕೌನ್ಸಿಲರ್ ಯಾಂಗ್ ಜಿಯೆಚಿ ಮಾತುಕತೆ ನಡೆಸಿದ್ದರು. ಈ ಮಾತುಕತೆಯಲ್ಲಿ ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡುವ ಬಗ್ಗೆ ಒತ್ತು ನೀಡಲಾಗಿತ್ತು. ಉಭಯ ರಾಷ್ಟ್ರಗಳ ಹಿತಾಸಕ್ತಿ ದೃಷ್ಟಿಯಿಂದ ಗಡಿಯಲ್ಲಿ ಶಾಂತಿ ನೆಲೆಸಬೇಕಾಗಿದೆ. ಈ ವಿಷಯದಲ್ಲಿ ಚೀನಾದಂತೆಯೇ ಭಾರತವೂ ನಡೆದುಕೊಳ್ಳಬೇಕು ಎನ್ನುವುದು ನಮ್ಮ ಬಯಕೆ ಎಂದಿದ್ದಾರೆ.

ಚೀನಾ ನಾಗರಿಕರಿಗೆ ಎಚ್ಚರಿಕೆ: ಭಾರತ ಪ್ರವಾಸ ಕೈಗೊಳ್ಳುವ ಚೀನಾ ನಾಗರಿಕರು ಸ್ಥಳೀಯ ಕಾನೂನುಗಳನ್ನು ಉಲ್ಲಂಘಿಸಬಾರದು ಮತ್ತು ವಿದೇಶಿಯರಿಗೆ ನಿರ್ಬಂಧಿಸಿದ ಪ್ರದೇಶಗಳಿಗೆ ಭೇಟಿ ನೀಡಬಾರದು ಎಂದು ಸಲಹೆ ನೀಡಲಾಗಿದೆ.

ಕಾನೂನುಗಳನ್ನು ಉಲ್ಲಂಘಿಸಿದರೆ ನಾಗರಿಕರನ್ನು ಬಂಧಿಸಬಹುದು ಅಥವಾ ದಂಡ ಹಾಕಬಹುದು ಎಂದು ನವದೆಹಲಿಯಲ್ಲಿನ ಚೀನಾ ರಾಯಭಾರ ಕಚೇರಿ ತಿಳಿಸಿದೆ.

ಕಾನೂನು ಉಲ್ಲಂಘಿಸಿದ ಪ್ರಕರಣಗಳಿಗಾಗಿ ಹಲವು ಚೀನಾ ನಾಗರಿಕರನ್ನು ಬಂಧಿಸಲಾಗಿದೆ. ಇನ್ನು ಕೆಲವರ ವಿರುದ್ಧ ವಿವಿಧ ರೀತಿಯ ಪ್ರಕರಣಗಳನ್ನು ದಾಖಲಿಸಲಾಗಿದೆ. ಹೀಗಾಗಿ, ಈ ಎಚ್ಚರಿಕೆ ನೀಡಲಾಗಿದೆ ಎಂದು ರಾಯಭಾರ ಕಚೇರಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT