ವೇಲ್ಸ್ ರಾಜಕುಮಾರನಿಗೆ ಸಿಕ್ಕಳಲ್ಲ ಸಿಂಡ್ರೆಲಾ!

ಬಿಳಿಯ ದೊರೆಮಗ ಹ್ಯಾರಿ ಕಂದು ಬಣ್ಣದ, ವಿಚ್ಛೇದಿತೆ ಮೇಘನ್ ಅವರನ್ನು ವಿವಾಹ ಆಗುತ್ತಿರುವುದು ಆಶಾದಾಯಕ ಬೆಳವಣಿಗೆ

ವೇಲ್ಸ್ ರಾಜಕುಮಾರನಿಗೆ ಸಿಕ್ಕಳಲ್ಲ ಸಿಂಡ್ರೆಲಾ!

ಒಂದಾನೊಂದು ಕಾಲದಲ್ಲಿ, ಒಂದಾನೊಂದು ಊರಿನಲ್ಲಿದ್ದ ಪುಟ್ಟ ಹುಡುಗಿ ಸಿಂಡ್ರೆಲಾ ಕಥೆ ನಿಮಗೆ ಗೊತ್ತಿರಬಹುದು. ಆಕೆ ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಳ್ಳುತ್ತಾಳೆ. ತಂದೆ ಮರುಮದುವೆಯಾದಾಗ ಚಿಕ್ಕಮ್ಮನ ಆರೈಕೆಯಲ್ಲಿ ಬೆಳೆಯಬೇಕಾದ ಸಂದರ್ಭ ಎದುರಾಗುತ್ತದೆ. ಪೋಷಣೆಗಿಂತ ಶೋಷಣೆಯೇ ಹೆಚ್ಚು ನಡೆಯುತ್ತದೆ. ದಿನಕಳೆದಂತೆ ಮನೆಯ ಚಾಕರಿ ಹೆಚ್ಚಾಗಿ, ಪುಟ್ಟ ಹುಡುಗಿಯ ಆಸೆಗಳು ಕಮರುತ್ತವೆ. ಆ ಸಂದರ್ಭದಲ್ಲೇ ರಾಜ್ಯದ ರಾಜಕುಮಾರನಿಗೆ ಸಂಗಾತಿಯ ಶೋಧ ನಡೆಯುತ್ತದೆ. ಅರಮನೆಯ ನೃತ್ಯ ಸಭೆ, ಔತಣ ಕೂಟದ ಆಹ್ವಾನ ಊರಿನ ಸಮಸ್ತರಿಗೂ ತಲುಪುತ್ತದೆ. ಚಿಕ್ಕಮ್ಮ ಮತ್ತು ತಂಗಿ ಸಿಂಗಾರಗೊಂಡು ಅರಮನೆಗೆ ತೆರಳಿದಾಗ, ಸಿಂಡ್ರೆಲಾ ತನ್ನ ಭಾಗ್ಯವನ್ನು ನೆನೆದು ಬಿಕ್ಕುತ್ತಾಳೆ.

ಮುಗ್ಧ ಹೃದಯದ ಅಳಲಿಗೆ ಸೋತು, ಯಕ್ಷಿಣಿ ಪ್ರತ್ಯಕ್ಷವಾಗುತ್ತಾಳೆ. ಸಿಂಡ್ರೆಲಾ ಉಡುಪು ಬದಲಾಗುತ್ತದೆ. ಬಿಳಿ ಕುದುರೆಯ ರಥ ಸಿದ್ಧಗೊಳ್ಳುತ್ತದೆ. ‘ರಾತ್ರಿ 12ರ ಬಳಿಕ ಈ ಜಾದು ನಡೆಯದು’ ಎಂಬ ಎಚ್ಚರಿಕೆ ನೀಡಿಯೇ ಯಕ್ಷಿಣಿ ಸಿಂಡ್ರೆಲಾಳನ್ನು ಅರಮನೆಗೆ ಕಳುಹಿಸುತ್ತಾಳೆ. ಸಿಂಡ್ರೆಲಾ ಚೆಲುವು ಕಂಡು ರಾಜಕುಮಾರ ಮರುಳಾಗುತ್ತಾನೆ. ಕೈಹಿಡಿದು ನೃತ್ಯ ಮಾಡುತ್ತಾನೆ. ಗಡಿಯಾರ 12 ಬಾರಿಸಿದಾಗ ಸಿಂಡ್ರೆಲಾ ಗಾಬರಿಗೊಂಡು ಅಲ್ಲಿಂದ ಓಡಿಬರುತ್ತಾಳೆ. ಪಾದರಕ್ಷೆಯೊಂದು ಮಾರ್ಗಮಧ್ಯೆ ಕಳಚಿ ಬೀಳುತ್ತದೆ. ಮರುದಿನ ಆ ಪಾದವನ್ನು ಹುಡುಕಿ ಬಂದ ರಾಜಕುಮಾರನಿಗೆ ಸಿಂಡ್ರೆಲಾ ಸಿಗುತ್ತಾಳೆ. ರಾಜಕುಮಾರ ಮಂಡಿಯೂರಿ ಪ್ರೇಮಪ್ರಸ್ತಾಪ ಮಾಡುತ್ತಾನೆ. ಸಿಂಡ್ರೆಲಾ ಪಟ್ಟದ ಅರಸಿಯಾಗಿ ಸುಖದ ಕೋಟೆ ಆಳುತ್ತಾಳೆ. ಅಲ್ಲಿಗೆ ಕತೆ ಮುಗಿಯುತ್ತದೆ.

ಆ ಕಿನ್ನರಿ ಕತೆಯನ್ನು ಸದ್ಯಕ್ಕೆ ಪಕ್ಕಕ್ಕಿರಿಸಿ, ಇಲ್ಲಿ ಹೇಳ ಹೊರಟಿರುವುದು ಇಂಗ್ಲೆಂಡಿನ ರಾಜಕುಮಾರ ಹ್ಯಾರಿ ಮತ್ತು ಅಮೆರಿಕದ ಮೇಘನ್ ಮರ್ಕೆಲ್ ಎಂಬ ಸಿಂಡ್ರೆಲಾ ಪ್ರೇಮ ಕತೆಯ ಬಗ್ಗೆ. ಈ ಕತೆಯಲ್ಲಿ ಯಕ್ಷಿಣಿ, ಬಿಳಿ ಕುದುರೆಯ ರಥ, ಪಾದರಕ್ಷೆಯ ಉಲ್ಲೇಖ ಬರುವುದಿಲ್ಲ, ಆದರೆ ಥೇಟ್ ಆ ಕಾಲ್ಪನಿಕ ಕತೆಯ ರಾಜಕುಮಾರನಂತೆಯೇ ಪ್ರಿನ್ಸ್ ಹ್ಯಾರಿ ಕೂಡ ‘ನನ್ನನ್ನು ಮದುವೆಯಾಗುತ್ತೀಯ?’ ಎಂದು ಮೇಘನ್ ಮರ್ಕೆಲ್ ಮುಂದೆ ಮಂಡಿಯೂರಿ ಕುಳಿತು, ಆಕೆ ಅರೆಕ್ಷಣದಲ್ಲೇ ಒಪ್ಪಿ, ಅಧಿಕೃತವಾಗಿ ಮದುವೆ ನಿಶ್ಚಿತಾರ್ಥದ ಸುದ್ದಿಯಂತೂ ಇದೀಗ ಇಂಗ್ಲೆಂಡಿನ ಅರಮನೆಯಿಂದ ಬಂದಿದೆ. ಸಂತಸ, ಸಂಭ್ರಮಕ್ಕೆ ಕಾರಣವಾಗಿದೆ.

ಹಾಗೆ ನೋಡಿದರೆ, ಇಂಗ್ಲೆಂಡಿನ ಆಡಳಿತಾತ್ಮಕ ವ್ಯವಸ್ಥೆ ಸಂಪೂರ್ಣವಾಗಿ ರಾಜ ಮನೆತನದ ಹಿಡಿತದಲ್ಲಿಲ್ಲ. ಆದರೆ ರಾಷ್ಟ್ರದ ಅಗ್ರನಾಯಕಿಯ ಸ್ಥಾನದಲ್ಲಿ ರಾಣಿ ಎಲಿಜಬೆತ್ ಇದ್ದಾರೆ. ಅವರ ಮಕ್ಕಳು, ಮೊಮ್ಮಕ್ಕಳು ಮತ್ತು ಇತರ ಪರಿವಾರ ಸದಸ್ಯರಿಗೆ ಇಂದಿಗೂ ವಿಶೇಷ ಸ್ಥಾನಮಾನ ಮತ್ತು ಜವಾಬ್ದಾರಿಗಳು ಇವೆ. ಈ ಕುಟುಂಬದ ಮಟ್ಟಿಗೆ ನಡೆಯುವ ಯಾವುದೇ ವಿದ್ಯಮಾನ ಜಗತ್ತಿನ ಗಮನ ಸೆಳೆಯುತ್ತದೆ. ಆ ಕಾರಣದಿಂದಲೇ ‘ಹ್ಯಾರಿ ಪ್ರೇಮ ಪ್ರಸಂಗ’ ಇದೀಗ ಸದ್ದು ಮಾಡುತ್ತಿದೆ. ಮೇಘನ್ ಮರ್ಕೆಲ್ ಕಾರಣದಿಂದ ಟೀಕೆ, ಅಚ್ಚರಿಗೂ ಕಾರಣವಾಗಿ ಚರ್ಚೆಯ ವಿಷಯವಾಗಿದೆ.

36 ವರ್ಷದ ಕಂದು ಬಣ್ಣದ ಅಮೆರಿಕದ ನಟಿ ಮೇಘನ್ ಓರ್ವ ವಿಚ್ಛೇದಿತೆ. ರಾಜಕುಮಾರ ಹ್ಯಾರಿಗಿಂತ 3 ವರ್ಷ ದೊಡ್ಡವಳು. ಮೇಲಾಗಿ ಮರ್ಕೆಲ್ ತಾಯಿ ಆಫ್ರಿಕನ್ ಅಮೆರಿಕನ್ ಸಮುದಾಯಕ್ಕೆ ಸೇರಿದವರು. ತಂದೆ ಶ್ವೇತವರ್ಣೀಯ ಕ್ರಿಶ್ಚಿಯನ್. ಒಮ್ಮೆ ಮೇಘನ್ ಹೇಳಿದ್ದಳು ‘I am half black and half white’. ಈ ಹಿನ್ನೆಲೆಯ ಸಾಮಾನ್ಯ ಹೆಣ್ಣು, ಇಂಗ್ಲೆಂಡಿನ ರಾಜಮನೆತನಕ್ಕೆ ಸೊಸೆಯಾಗುತ್ತಿರುವುದು ನಿಜವೇ? ಎಂಬ
ಪ್ರಶ್ನೆ ವಿಸ್ಮಯವಾಗಿ ನಿಂತಿದೆ. ಹೀಗೆ ಆಶ್ಚರ್ಯಕ್ಕೆ ಕಾರಣವಾಗಿರುವ ಈ ಆಶಾದಾಯಕ ಬೆಳವಣಿಗೆಯನ್ನು ವಿಶ್ಲೇಷಿಸುವಾಗ ಇಂಗ್ಲೆಂಡಿನ ರಾಜಮನೆತನದಲ್ಲಿ ಈ ಹಿಂದೆ ನಡೆದ ಘಟನಾವಳಿಗಳು, ‘ಚರ್ಚ್ ಆಫ್ ಇಂಗ್ಲೆಂಡ್’ ಧೋರಣೆ, ಇಂಗ್ಲೆಂಡಿನ ಅರಸೊತ್ತಿಗೆ ಪ್ರತಿಪಾದಿಸಿದ ಸಾಮಾಜಿಕ ನೀತಿ ನಿಯಮಗಳು ಎಲ್ಲವನ್ನೂ ಸ್ಮೃತಿಗೆ ತಂದುಕೊಳ್ಳಬೇಕು. ಆಗ ಮಾತ್ರ ರಾಜಮನೆತನ ಮತ್ತು ಚರ್ಚ್ ಆಫ್ ಇಂಗ್ಲೆಂಡ್ ಧೋರಣೆಯಲ್ಲಿ ಆಗಿರುವ ಬದಲಾವಣೆ ಹಾಗೂ ಹ್ಯಾರಿ ಮತ್ತು ಮೇಘನ್ ಮದುವೆಯ ಮಹತ್ವ ಅರಿವಾಗುತ್ತದೆ.

1772ರಲ್ಲಿ ಅಂದಿನ ಆಂಗ್ಲ ಪ್ರಭುತ್ವ ವಿವಾಹ ಕಾಯಿದೆಯನ್ನು ಜಾರಿಗೊಳಿಸಿ ರಾಜಕುಟುಂಬದ ಸದಸ್ಯರಿಗೆ ವಿವಾಹ ಕುರಿತಾಗಿ ಕೆಲವು ನಿಬಂಧನೆ ವಿಧಿಸಿತ್ತು. ರಾಜಕುಟುಂಬದ ಹಿನ್ನೆಲೆಯಿಂದ ಬಂದವರನ್ನೇ ವರಿಸಬೇಕು. ಕ್ಯಾಥೊಲಿಕ್ ಪಂಗಡಕ್ಕೆ ಸೇರಿದವರಾಗಿರಬಾರದು ಮತ್ತು ವಿಚ್ಛೇದಿತರನ್ನು ಮದುವೆಯಾಗುವಂತಿಲ್ಲ ಎಂಬ ನಿಯಮಗಳಿದ್ದವು. ಅದು ‘ಚರ್ಚ್ ಆಫ್ ಇಂಗ್ಲೆಂಡ್’ ಮಾನ್ಯ ಮಾಡಿದ್ದ ನಿಯಮವೂ ಆಗಿತ್ತು. ನಿಮಗೆ ಗೊತ್ತಿರಲಿ, ‘ಚರ್ಚ್ ಆಫ್ ಇಂಗ್ಲೆಂಡ್’ ಎಂಬುದು ಕಾಮನ್ ವೆಲ್ತ್ ಕೂಟದಡಿ ಬರುವ ಪ್ರಾಟೆಸ್ಟೆಂಟ್ ಕ್ರಿಶ್ಚಿಯನ್ನರ ಮುಖ್ಯ ಧಾರ್ಮಿಕ ಕೇಂದ್ರ. ಅಂದರೆ ಮದರ್ ಚರ್ಚ್. ಇಂಗ್ಲೆಂಡಿನ ಅರಸೊತ್ತಿಗೆಯಲ್ಲಿ ಕುಳಿತವರು ಈ ಇಗರ್ಜಿಯ ಮುಖ್ಯಾಧಿಕಾರಿಯಾಗಿರುತ್ತಾರೆ. ಸದ್ಯಕ್ಕೆ ಎರಡನೇ ಎಲಿಜಬೆತ್ ಆ ಸ್ಥಾನದಲ್ಲಿದ್ದಾರೆ. ಚರ್ಚಿನ ನೀತಿ ನಿಯಮಗಳನ್ನು ಎತ್ತಿ ಹಿಡಿಯುವ ಹೊಣೆಯೂ ಅರಸೊತ್ತಿಗೆಯಲ್ಲಿ ಕುಳಿತವರದ್ದೇ ಆಗಿರುತ್ತದೆ.

ಈ ಹಿರಿತನ, ಜವಾಬ್ದಾರಿ ಮತ್ತು ಚರ್ಚ್ ಧೋರಣೆಗಳು ಹಲವು ವೇಳೆ ರಾಜಕುಟುಂಬಕ್ಕೆ ತೊಡಕಾಗಿ ಪರಿಣಮಿಸಿದೆ. ಕಳೆದ ಏಳೆಂಟು ದಶಕಗಳಲ್ಲಿ ನಡೆದ ವಿದ್ಯಮಾನವನ್ನೇ ನೋಡುವುದಾದರೆ. 1936ರಲ್ಲಿ ವಿವಾಹ ಪ್ರಸ್ತಾಪವೊಂದು, ರಾಜ ತನ್ನ ಸಿಂಹಾಸನವನ್ನೇ ತ್ಯಾಗ ಮಾಡುವ ಮಟ್ಟಕ್ಕೆ ಬೆಳೆದು, ಇಂಗ್ಲೆಂಡಿನಲ್ಲಿ ಅರಾಜಕ ವಾತಾವರಣ ಸೃಷ್ಟಿಯಾಗುವಂತೆ ಮಾಡಿತ್ತು. ಆಗಿದ್ದಾದರೂ ಇಷ್ಟೇ. ಅದಾಗ ರಾಜಕುಮಾರನಾಗಿದ್ದ ಎಂಟನೇ ಎಡ್ವರ್ಡ್ ಮತ್ತು ಅಮೆರಿಕದ ವಾಲಿ ಸಿಮ್ಸನ್ ಎಂಬಾಕೆಯ ನಡುವೆ ಸ್ನೇಹ ಬೆಳೆದಿತ್ತು. ಸಿಮ್ಸನ್ ಸೌಂದರ್ಯ ಮತ್ತು ಆಕೆಯ ಅಮೆರಿಕನ್ ಮಾತಿನ ಶೈಲಿ (ಆಕ್ಸೆಂಟ್) ಎಡ್ವರ್ಡ್ ಮನಸೂರೆಮಾಡಿತ್ತು. ದೊರೆ ಎಡ್ವರ್ಡ್ ಸಿಮ್ಸನ್ ಅವರನ್ನು ವಿವಾಹವಾಗುವುದಾಗಿ ಘೋಷಿಸಿದ. ಆದರೆ ಸಿಮ್ಸನ್ ಅದಾಗಲೇ ಎರಡು ಬಾರಿ ವಿಚ್ಛೇದನ ಪಡೆದಿದ್ದರು. ಈ ಸುದ್ದಿ ಅರಮನೆಯಲ್ಲಿ ಚಕಮಕಿಗೆ ಕಾರಣವಾಯಿತು. ಸಿಮ್ಸನ್ ಅವರನ್ನು ರಾಣಿಯನ್ನಾಗಿ ನೋಡಲು ರಾಜ ಕುಟುಂಬ, ಮಂತ್ರಿ ಪರಿಷತ್ತು ಸಿದ್ಧವಿರಲಿಲ್ಲ.

ಜೊತೆಗೆ ಚರ್ಚ್ ಆಫ್ ಇಂಗ್ಲೆಂಡ್ ‘ಒಂದೊಮ್ಮೆ ಮೊದಲ ಸಂಗಾತಿ ಬದುಕಿದ್ದರೆ, ಆ ಸಂಗಾತಿಯಿಂದ ವಿಚ್ಛೇದನ ಪಡೆದಿದ್ದರೂ ಮರುಮದುವೆ ನಿಷೇಧ’ ಎಂದಿದ್ದರಿಂದ, ಮುಖ್ಯಾಧಿಕಾರಿಯೇ ಚರ್ಚ್ ನಿಯಮವನ್ನು ಉಲ್ಲಂಘಿಸುವುದು ತರವೇ ಎಂಬ ಪ್ರಶ್ನೆ ಉದ್ಭವವಾಯಿತು. ಈ ಚಕಮಕಿ, ಒತ್ತಡಗಳು ಎಡ್ವರ್ಡ್ ಮುಂದೆ ಎರಡು ಆಯ್ಕೆಯನ್ನಷ್ಟೇ ಒದಗಿಸಿತ್ತು. ಸಿಮ್ಸನ್ ಅಥವಾ ಸಿಂಹಾಸನ? ಎಡ್ವರ್ಡ್ ದೊರೆ ಸಿಂಹಾಸನ ತೊರೆದು ಸಿಮ್ಸನ್ ಕೈ ಹಿಡಿದ.

ಆಗ ಸಿಂಹಾಸನ ವಿಕ್ಟೋರಿಯಾ ರಾಣಿಯ ಮರಿಮೊಮ್ಮಗ ಆರನೇ ಜಾರ್ಜ್ ಪಾಲಿಗೆ ಬಂತು. ಜಾರ್ಜ್, ‘ಮದರ್ ಚರ್ಚ್’ನ ಆಶಯ– ನಿಯಮಗಳಿಗೆ ಧಕ್ಕೆ ಬಾರದಂತೆ ನಡೆದುಕೊಂಡ. ಜಾರ್ಜ್ ತರುವಾಯ 1953ರಲ್ಲಿ ಅರಸೊತ್ತಿಗೆ ಆತನ ಮೊದಲ ಮಗಳಾದ ಎಲಿಜಬೆತ್ ಪಾಲಾಯಿತು. ಇಂದಿಗೂ ಅವರೇ ರಾಣಿಯ ಸ್ಥಾನದಲ್ಲಿದ್ದಾರೆ.

ರಾಣಿ ಎಲಿಜಬೆತ್ ಕೂಡ ಚರ್ಚ್ ಅಣತಿಯಂತೆಯೇ ನಡೆದುಕೊಂಡವರು. ಸ್ವತಃ ತಂಗಿಯ ವಿಷಯದಲ್ಲಿ ಅವರು ಕಾಠಿಣ್ಯ ತೋರಬೇಕಾದ ಪರಿಸ್ಥಿತಿ ಎದುರಾಯಿತು. ತಂಗಿ ಮಾರ್ಗರೆಟ್ ಪ್ರೀತಿಸಿದ ಕ್ಯಾಪ್ಟನ್ ಪೀಟರ್ ಕೂಡ ಒಬ್ಬ ವಿಚ್ಛೇದಿತನೇ ಆಗಿದ್ದ. ಆಗಲೂ ಅರಮನೆ ಮತ್ತು ಪರಿವಾರ
ದಲ್ಲಿ ವಾಕ್ಸಮರ ನಡೆದಿತ್ತು. ಕೊನೆಗೆ ಮಾರ್ಗರೆಟ್ ಮುಂದೆ ಎರಡು ಆಯ್ಕೆ ಇಡಲಾಯಿತು. ಪೀಟರ್ ಮದುವೆಯಾಗಿ ರಾಜಕುಟುಂಬದ ಎಲ್ಲ ಸವಲತ್ತು ತೊರೆದು ದೇಶದಿಂದ ಹೊರಹೋಗಿ ಕೆಲವು ವರ್ಷ ನೆಲೆಸುವುದು ಇಲ್ಲವೇ ಬೇರೆಯ ಮದುವೆಯಾಗಿ ಯಥಾಸ್ಥಿತಿಯಲ್ಲಿ
ಮುಂದುವರೆಯುವುದು. ಮಾರ್ಗರೆಟ್ ಎರಡನೆಯ ಪ್ರಸ್ತಾಪ ಆಯ್ದುಕೊಂಡು ಮತ್ತೊಬ್ಬನನ್ನು ವಿವಾಹವಾದರು.

ಇನ್ನು ಈಗಿನ ಯುವರಾಜ, ಎಲಿಜಬೆತ್ ಹಿರಿಮಗ ಚಾರ್ಲ್ಸ್ ಅವರದ್ದೂ ಒಂದು ಗೋಜಲು ವಿವಾಹ ಕತೆ. ಚಾರ್ಲ್ಸ್, ಕ್ಯಾಮಿಲಾ ಪಾರ್ಕರ್ ಜೊತೆ ನಿಕಟ ಸ್ನೇಹ ಹೊಂದಿದ್ದರು. ಆದರೆ ಮುಂದೆ ಅರಸೊತ್ತಿಗೆ ಏರುವ ಚಾರ್ಲ್ಸ್‌ಗೆ ಕ್ಯಾಮಿಲಾ ಜೋಡಿಯಲ್ಲ ಎಂದು ಆ ಮದುವೆಯ ಪ್ರಸ್ತಾಪವನ್ನು ಬದಿಗೆ ತಳ್ಳಲಾಗಿತ್ತು. 20ರ ಸ್ಫುರದ್ರೂಪಿ ತರುಣಿ ಡಯಾನಾರನ್ನು ಚಾರ್ಲ್ಸ್ ವಿವಾಹವಾದರು.

ಡಯಾನಾ ಅವರು ಎಲಿಜಬೆತ್ ಸೊಸೆಯಾಗಿ ಬಂದ ಮೇಲೆ, ಇಂಗ್ಲೆಂಡ್ ರಾಜಕುಟುಂಬದ ಮಟ್ಟಿಗೆ ಹೊಸ ಅಧ್ಯಾಯವೊಂದು ಆರಂಭವಾಯಿತು. ಅರಮನೆಯ ಅಂಗಳದಲ್ಲಿ ಉದಾರವಾದಿ ಚಿಂತನೆಗಳು ಮೊಳಕೆಯೊಡೆದವು. ಡಯಾನಾ ಕೆಲ ದಿನಗಳಲ್ಲೇ ಸ್ನೇಹಪರ, ಮಾನವತಾವಾದಿ, ಜನರ ನಡುವಿನ ಯುವರಾಣಿ ಎನಿಸಿಕೊಂಡರು. ಹಿಂದೆಂದೂ ರಾಜವಂಶಸ್ಥರು ಮಾತನಾಡದ ವಿಷಯಗಳನ್ನು ಡಯಾನಾ ಮಾತನಾಡಲು ಆರಂಭಿಸಿ
ದರು. ಏಡ್ಸ್ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಅದುವರೆಗೂ ರಾಜಮನೆತನದವರು ಜನರಿಂದ ಅಂತರ ಕಾಯ್ದುಕೊಂಡು ದೂರದಿಂದಲೇ ಕೈಬೀಸಿ ನಡೆದು ಹೋಗುವ ರೂಢಿ ಇತ್ತು. ಡಯಾನಾ ಜನರ ಕೈಕುಲುಕುವ, ಆಪ್ತವಾಗಿ ಅಪ್ಪಿಕೊಳ್ಳುವ, ಮಕ್ಕಳ ಜೊತೆ ಸಂವಹನ ನಡೆಸಲು ನೆಲದ ಮೇಲೆ ಕುಳಿತುಕೊಳ್ಳುವ ಸರಳತೆ ಪ್ರದರ್ಶಿಸಿದರು.

ಬಿಡಿ, ಡಯಾನಾ ರಾಜಗೃಹದಲ್ಲಿ ತಂದ ಬದಲಾವಣೆಗಳು ಹಲವು. ಅರಮನೆಯಲ್ಲೇ ಹೆರಿಗೆ ಆಗಬೇಕು ಎಂಬ ಕಟ್ಟಳೆಯನ್ನು ಮುರಿದು ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮವಿತ್ತರು. ರಾಜಪರಿವಾರದವರು ಪ್ರವಾಸ ಹೋಗುವಾಗ ಮಕ್ಕಳನ್ನು ಕರೆದೊಯ್ಯುತ್ತಿರಲಿಲ್ಲ. ಪತಿಯೊಂದಿಗೆ ಡಯಾನಾ ವಿದೇಶಗಳಿಗೆ ಭೇಟಿಯಿತ್ತರೆ, ಕಂಕುಳಲ್ಲಿ ವಿಲಿಯಂ ಅಥವಾ ಹ್ಯಾರಿ ಇರುತ್ತಿದ್ದರು. ರಾಜವಂಶದ ಕುಡಿಗಳ ಶಿಕ್ಷಣ ಅರಮನೆಯ ಪೌಳಿಯೊಳಗೇ ನಡೆಯಬೇಕೆಂಬ ಪದ್ಧತಿಯನ್ನೂ ಮೀರಿ ಮಕ್ಕಳನ್ನು ಶಾಲೆಗೆ ಕಳುಹಿಸಿದರು. ಅರಮನೆಯ ಸಿಬ್ಬಂದಿಯೊಂದಿಗೆ ರಾಜವಂಶಸ್ಥರು ಸಲಿಗೆಯಿಂದ ಬೆರೆತ ನಿದರ್ಶನಗಳು ಆ ಮುಂಚೆ ಇರಲಿಲ್ಲ. ಡಯಾನಾ ತನ್ನ ಮಕ್ಕಳನ್ನು ಅರಮನೆಯ ಸಿಬ್ಬಂದಿಯ ಮಕ್ಕಳೊಂದಿಗೆ ಆಡಲು ಬಿಟ್ಟರು. ಎಲ್ಲ ಬಿಗುಮಾನ ತೊರೆದು ಸಾರ್ವಜನಿಕವಾಗಿ ನಕ್ಕರು, ಅತ್ತರು, ಮರುಗಿದರು. ಭಾವನೆಗಳನ್ನು ಅದುಮಿ ದೊಡ್ಡಸ್ತಿಕೆ ತೋರಬೇಕಿಲ್ಲ ಎಂಬಂತೆ ಬಾಳಿದರು.

ಆದರೆ ಡಯಾನಾ ವೈವಾಹಿಕ ಬದುಕು ವಿಚ್ಛೇದನದಲ್ಲಿ ಅಂತ್ಯವಾಯಿತು. ಕೊನೆಗೆ 1997ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಡಯಾನಾ ತೀರಿಕೊಂಡರು. ನಿಜ, ಡಯಾನಾ ಇಂಗ್ಲೆಂಡ್ ರಾಜಕುಮಾರಿಯಾಗಿ ಸಂತಸದಿಂದ ಬದುಕಿ ಬಾಳಲಿಲ್ಲ, ಆದರೆ ಬದಲಾದ ಕಾಲಕ್ಕೆ ತಕ್ಕಂತೆ ರಾಜವಂಶ ಹೆಜ್ಜೆ ಇರಿಸಬೇಕು ಎಂಬ ಪಾಠವನ್ನಂತೂ ಕಲಿಸಿದರು. ಇದೀಗ ಮೇಘನ್‌ಳನ್ನು ಮನೆತುಂಬಿಸಿಕೊಳ್ಳಲು ಎಲಿಜಬೆತ್ ಒಪ್ಪಿದ್ದರೆ ಆ ಪಾಠವೂ ಕಾರಣವಾಗಿರಬೇಕು.

ಹೀಗೆ ರಾಜಕುಟುಂಬದಲ್ಲಿ ಬದಲಾವಣೆ ಗಾಳಿ ಬೀಸಿದರೂ ‘ಚರ್ಚ್ ಆಫ್ ಇಂಗ್ಲೆಂಡ್’ ಧೋರಣೆಯಲ್ಲಿ ಹೆಚ್ಚೇನೂ ವ್ಯತ್ಯಾಸವಾಗಿರಲಿಲ್ಲ. ಕಳೆದ ದಶಕದಿಂದೀಚೆಗೆ ಚರ್ಚ್ ಕೂಡ ಬದಲಾವಣೆಗೆ ತೆರೆದುಕೊಂಡಂತಿದೆ. 2002ರಲ್ಲಿ ವಿಚ್ಛೇದಿತರ ಪುನರ್ವಿವಾಹ ಕುರಿತಾಗಿ ತನ್ನ ಧೋರಣೆ ಬದಲಿಸಿತು. 2014ರಲ್ಲಿ ಮಹಿಳೆಯನ್ನು ಬಿಷಪ್ ಸ್ಥಾನಕ್ಕೆ ನೇಮಿಸಬಹುದು ಎಂಬ ಚಾರಿತ್ರಿಕ ನಿರ್ಧಾರ ಪ್ರಕಟಿಸಿತು. ಇದೀಗ ಚರ್ಚ್, ಹ್ಯಾರಿ ಮತ್ತು ಮೇಘನ್ ವಿವಾಹ ನಿಶ್ಚಯವನ್ನು ಅನುಮೋದಿಸಿ ರಾಜಕುಟುಂಬದ ವಿವಾಹಗಳ ಕುರಿತಾಗಿ ತನ್ನ ಧೋರಣೆ ಬದಲಿಸಿದಂತೆ ಕಾಣುತ್ತಿದೆ. ಇದು ಕಾಲದೊಟ್ಟಿಗೆ ಹೆಜ್ಜೆಹಾಕುವ ನಿರ್ಣಯವೋ, ಅಳವಡಿಸಿಕೊಂಡ ಉದಾರವಾದಿ ನಿಲುವೋ ಎಂಬುದು ಬೇರೆಯದೇ ಮಾತು.

ಏನೇ ಇರಲಿ, ಬಿಳಿಯ ದೊರೆಮಗ ಹ್ಯಾರಿ ಕಂದು ಬಣ್ಣದ, ವಿಚ್ಛೇದಿತೆ ಮೇಘನ್ ಅವರನ್ನು ವಿವಾಹ ಆಗುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆ. ರಾಜಮನೆತನವನ್ನು ಮೆಚ್ಚುವ, ಎತ್ತರದಲ್ಲಿ ಕಾಣುವ ಜನಸಮೂಹ ಇದರಿಂದ ಸ್ಫೂರ್ತಿ ಪಡೆದು ಜಾತಿ, ವರ್ಣ, ವರ್ಗಗಳಾಚೆ ಮನಸ್ಸನ್ನು ಅರಳಿಸಿಕೊಂಡರೆ ಅಷ್ಟರ ಮಟ್ಟಿಗೆ ಸಮಾಜದ ವಿಕಸನಕ್ಕೆ ದಾರಿಯಾಗುತ್ತದೆ. ಒಂದಾನೊಂದು ಕಾಲದಲ್ಲಿ ತಮ್ಮನ್ನು ಆಳಿದ್ದ ರಾಜವಂಶಸ್ಥರ ಮನೆಗೆ ತಮ್ಮದೇ ವರ್ಣೀಯ ಹುಡುಗಿ ಸೊಸೆಯಾಗಿ ಹೋಗುತ್ತಾಳೆ ಎಂಬ ಹಿಗ್ಗು ಸಹಜವಾಗಿ ಅಮೆರಿಕದ ಆಫ್ರಿಕನ್ ಅಮೆರಿಕನ್ ಸಮುದಾಯದಲ್ಲಿದೆ. 2018ರ ಮೇ ತಿಂಗಳಿನಲ್ಲಿ ಹ್ಯಾರಿ– ಮೇಘನ್ ವಿವಾಹ ನಡೆಯಲಿದೆ. ರಾಣಿ ಎಲಿಜಬೆತ್ ಕುಟುಂಬದ ಮಟ್ಟಿಗೆ ಹೇಳುವುದಾದರೆ, ವೈವಾಹಿಕ ಜೀವನದಲ್ಲಿ ಎಡವಿದವರೇ ಹೆಚ್ಚು. ಹಗರಣ, ವಿಚ್ಛೇದನ, ದುರಂತಗಳು ಆ ಕುಟುಂಬವನ್ನು ಈವರೆಗೆ ಕಂಗೆಡಿಸಿವೆ. ಹಾಗಾಗಿ, ವೈಭವದ ಮದುವೆ, ಕೀರ್ತಿ ಖ್ಯಾತಿಗಳಾಚೆ ಹ್ಯಾರಿ ಮತ್ತು ಮೇಘನ್ ಬದುಕು ಸುಖಮಯವಾಗಿರಲಿ ಎಂಬುದಷ್ಟೇ ಆಶಯ. ನೂತನ ಆಂಗ್ಲ ವರ್ಷದಲ್ಲಿ ಇಂತಹ ಹರ್ಷದ ವಾರ್ತೆಗಳು ಹೆಚ್ಚೆಚ್ಚು ಕೇಳಸಿಗುತ್ತಿರಲಿ, ಅಲ್ಲವೇ?

Comments
ಈ ವಿಭಾಗದಿಂದ ಇನ್ನಷ್ಟು
ಕ್ಸಿ ಜಿನ್ ಪಿಂಗ್ ಮತ್ತೊಬ್ಬ ಮಾವೊ ಆಗುವರೇ?

ಸೀಮೋಲ್ಲಂಘನ
ಕ್ಸಿ ಜಿನ್ ಪಿಂಗ್ ಮತ್ತೊಬ್ಬ ಮಾವೊ ಆಗುವರೇ?

9 Mar, 2018
ಸಮರೋತ್ಸಾಹದ ನಡುವೆ ಸಂಧಾನ ಅರ್ಥಹೀನ

ಸೀಮೋಲ್ಲಂಘನ
ಸಮರೋತ್ಸಾಹದ ನಡುವೆ ಸಂಧಾನ ಅರ್ಥಹೀನ

23 Feb, 2018
ಪೆಡಸು ಮೇಲ್ದುಟಿ ಜನರ ಒಂಟಿತನದ ಸಂಕಟ

ಸೀಮೋಲ್ಲಂಘನ
ಪೆಡಸು ಮೇಲ್ದುಟಿ ಜನರ ಒಂಟಿತನದ ಸಂಕಟ

9 Feb, 2018
ಎಂದೂ ಮುಗಿಯದ ಕದನ, ಏನೀ ಮೂರ್ಖತನ?

ಸೀಮೋಲ್ಲಂಘನ
ಎಂದೂ ಮುಗಿಯದ ಕದನ, ಏನೀ ಮೂರ್ಖತನ?

26 Jan, 2018
ಗೋಳು ಗೋಡೆಯ ಊರಿಗೆ ಒಡೆಯನ್ಯಾರು?

ಸೀಮೋಲ್ಲಂಘನ
ಗೋಳು ಗೋಡೆಯ ಊರಿಗೆ ಒಡೆಯನ್ಯಾರು?

15 Dec, 2017