ಸಂಪಾದಕೀಯ

ಸಂವಿಧಾನದ ಮೂಲಪಠ್ಯಕ್ಕೆ ಸಲ್ಲದ ಮಾತಿನ ಕೇಡು

ಸಂವಿಧಾನದ ವಿರುದ್ಧ ಮಾತನಾಡುವವರನ್ನು ಮಾತ್ರವಲ್ಲದೆ, ಎಲ್ಲ ಬಗೆಯ ಬಾಯಿಬಡುಕತನಗಳನ್ನೂ ವಿರೋಧಿಸುವುದು ಇಂದಿನ ತುರ್ತು ಅಗತ್ಯವಾಗಿದೆ

ಸಂವಿಧಾನದ ಮೂಲಪಠ್ಯಕ್ಕೆ ಸಲ್ಲದ ಮಾತಿನ ಕೇಡು

ಕೇಂದ್ರ ಸಚಿವ ಅನಂತಕುಮಾರ್‍ ಹೆಗಡೆ ಅವರ ವಿವಾದಾಸ್ಪದ ಮಾತುಗಳಿಂದ ದೂರ ಉಳಿಯುವ ಕೇಂದ್ರ ಸರ್ಕಾರದ ನಿಲುವು ಹಾಗೂ ತಮ್ಮ ಮಾತುಗಳಿಗೆ ಸಚಿವರು ಕ್ಷಮೆ ಕೋರಿರುವುದು ದೇಶದ ಜಾತ್ಯತೀತ ಸ್ವರೂಪದ ಹಿತದೃಷ್ಟಿಯ ಹಿನ್ನೆಲೆಯಲ್ಲಿ ಅಗತ್ಯವಾಗಿದ್ದ
ಕ್ರಮಗಳು. ‘ನನಗೆ ಸಂವಿಧಾನ, ಸಂಸತ್ತು ಮತ್ತು ಬಾಬಾ ಸಾಹೇಬ್‌ ಅಂಬೇಡ್ಕರ್‌ ಬಗ್ಗೆ ಅಪಾರ ಗೌರವವಿದೆ. ಸಂವಿಧಾನ ನನಗೆ ಸರ್ವೋಚ್ಚ. ದೇಶದ ಪ್ರಜೆಯಾಗಿ ಸಂವಿಧಾನಕ್ಕೆ ವಿರುದ್ಧವಾಗಿ ನಡೆಯಲಾರೆ’ ಎಂದು ಹೇಳುವ ಮೂಲಕ ತಮ್ಮ ಮಾತುಗಳಿಂದ ಉಂಟಾದ ವಿವಾದವನ್ನು ತಿಳಿಗೊಳಿಸಲು ಅವರು ಪ್ರಯತ್ನಿಸಿದ್ದಾರೆ. ಕೊಪ್ಪಳದಲ್ಲಿ ನಡೆದ ಬ್ರಾಹ್ಮಣ ಯುವ ಪರಿಷತ್‍ ಸಮಾರಂಭದಲ್ಲಿ ಸಚಿವರು ಆಡಿದ್ದ ಮಾತುಗಳು ಭಾರತದ ಜಾತ್ಯತೀತ ಪರಿಕಲ್ಪನೆ ಹಾಗೂ ಸಾಂವಿಧಾನಿಕ ಆಶಯಗಳನ್ನು ಪ್ರಶ್ನಿಸುವಂತಿದ್ದವು. ‘ಜಾತ್ಯತೀತತೆಯನ್ನು
ಪ್ರತಿಪಾದಿಸುವ ಸಂವಿಧಾನವನ್ನು ಬದಲಿಸಲಿಕ್ಕಾಗಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಜಾತ್ಯತೀತರು ಎಂದು ಹೇಳಿಕೊಳ್ಳುವವರಿಗೆ ತಮ್ಮ ಅಪ್ಪಅಮ್ಮನ ಪರಿಚಯವೇ ಇರುವುದಿಲ್ಲ’ ಎಂದು ಅವರು ಹೇಳಿದ್ದುದನ್ನು ‘ಬಹುತ್ವ ಭಾರತ’ದ ಬಗ್ಗೆ ನಂಬಿಕೆಯುಳ್ಳ ಯಾರೂ ಒಪ್ಪಿಕೊಳ್ಳುವಂತಿರಲಿಲ್ಲ. ಬೀದಿ ಬದಿಯ ಕಿಡಿಗೇಡಿಗಳನ್ನು ಮೀರಿಸುವಂತೆ ಕೇಂದ್ರ ಸರ್ಕಾರದ ಸಚಿವರೊಬ್ಬರು ಆಡಿದ ಈ ಮಾತುಗಳು ದೇಶದೆಲ್ಲೆಡೆ ಸಹಜವಾಗಿಯೇ ಚರ್ಚೆಗೆ ಎಡೆಮಾಡಿಕೊಟ್ಟಿದ್ದವು. ಈ ಪ್ರತಿರೋಧ ಲೋಕಸಭೆಯಲ್ಲೂ ಪ್ರತಿಧ್ವನಿಸುವ ಮೂಲಕ, ಸಚಿವರು
ಕ್ಷಮೆ ಯಾಚಿಸುವಂತಾಗಿದೆ. ಅನಂತಕುಮಾರ್ ಹೆಗಡೆ ವಿವೇಚನಾರಹಿತವಾಗಿ ಮಾತನಾಡಿರುವುದು ಇದು ಮೊದಲೇನಲ್ಲ. ಟಿಪ್ಪು ಜಯಂತಿ ಸಂದರ್ಭದಲ್ಲಿ ಅವರು ತಮ್ಮ ಸಚಿವ ಸ್ಥಾನದ ಘನತೆಯನ್ನು ಮರೆತು ವರ್ತಿಸಿದ್ದರು. ವೈದ್ಯರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪವೂ ಅವರ ಮೇಲಿದೆ. ಪ್ರತಿಪಕ್ಷಗಳ ನಾಯಕರನ್ನು ಟೀಕಿಸಲು ಅವರು ಬಳಸುವ ಭಾಷೆ ಕೂಡ ಸಾರ್ವಜನಿಕ ಜೀವನದಲ್ಲಿ ಮಾದರಿಯಾದುದಲ್ಲ. ಅಭಿವೃದ್ಧಿ ಕಾರ್ಯಗಳ ಮೂಲಕ ಜನರ ಗಮನಸೆಳೆಯಬೇಕಾದ ಸಂಸದ-ಸಚಿವರೊಬ್ಬರು ವಿವಾದಗಳ ಮೂಲಕ ಸುದ್ದಿಯಲ್ಲಿರುವುದು ದೇಶದ ರಾಜಕಾರಣ ಹಿಡಿಯುತ್ತಿರುವ ದಿಕ್ಕನ್ನು ಸೂಚಿಸುವಂತಿದೆ.

ದೇಶದ ಜಾತ್ಯತೀತ ಸ್ವರೂಪವನ್ನು ಕುರೂಪಗೊಳಿಸುವಂತಹ ಮಾತುಗಳನ್ನು ಬಿಜೆಪಿ ನಾಯಕರು ಆಡಿರುವುದು ಇದು ಮೊದಲೇನಲ್ಲ. ತಮ್ಮ ವಿಚಾರಧಾರೆಗೆ ಒಪ್ಪದವರನ್ನು ಪಾಕಿಸ್ತಾನಕ್ಕೆ ಕಳುಹಿಸುವ ಅಥವಾ ಅವರ ಕೈಕಾಲು-ತಲೆ ಕತ್ತರಿಸುವ ಮಾತುಗಳನ್ನು ಅನೇಕ ನಾಯಕರು ಆಡಿದ್ದಾರೆ, ಅವುಗಳನ್ನು ಅರಗಿಸಿಕೊಂಡಿಯೂ ಇದ್ದಾರೆ. ಆಹಾರಸಂಸ್ಕೃತಿ ಕುರಿತ ಚರ್ಚೆಗಳು, ದಲಿತರ ಮೇಲಿನ ಹಲ್ಲೆಗಳು ಹಾಗೂ ಸಂವಿಧಾನದ ರಚನೆಯಲ್ಲಿ ಅಂಬೇಡ್ಕರ್‍ ಪಾತ್ರವನ್ನು ಗೌಣಗೊಳಿಸುವ ಪ್ರಯತ್ನಗಳು ಮತ್ತೆ ಮತ್ತೆ ನಡೆಯುತ್ತಿವೆ. ಇಂಥ ಸಂದರ್ಭಗಳಲ್ಲಿ ಪ್ರತಿಕ್ರಿಯಿಸಬೇಕಾದ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಮೌನವಾಗಿರುವುದೇ ಹೆಚ್ಚು. ಅಭಿವೃದ್ಧಿ ಕುರಿತಂತೆ ಸಮ್ಮೋಹಕವಾಗಿ ಮಾತನಾಡುವ ಪ್ರಧಾನಿ ಕೂಡ ಗುಜರಾತ್‍ ಚುನಾವಣಾ ಸಂದರ್ಭದಲ್ಲಿ, ಅಭಿವೃದ್ಧಿಯೇತರ ವಿಷಯಗಳ ಬಗ್ಗೆ ಮಾತನಾಡಿದ್ದರು. ನಾಗರಿಕರಿಗೆ ಯಾವ ರೀತಿಯಿಂದಲೂ ಉಪಯುಕ್ತವಲ್ಲದ ಸಂಗತಿಗಳನ್ನು ಚುನಾವಣಾ ಸಂದರ್ಭದಲ್ಲಿ ಮುನ್ನೆಲೆಗೆ ತರುವುದು ಹಾಗೂ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವುದು ಇತ್ತೀಚೆಗೆ ಸಾಮಾನ್ಯ ಎನ್ನುವಂತಾಗಿದೆ. ಕರ್ನಾಟಕದಲ್ಲಿ ಕೂಡ ಇಂಥ ಚಟುವಟಿಕೆಗಳು ಇತ್ತೀಚೆಗೆ ಹೆಚ್ಚುತ್ತಿವೆ. ಹುಣಸೂರಿನಲ್ಲಿ ನಡೆದ ಹನುಮ ಜಯಂತಿ ಸಂದರ್ಭದಲ್ಲಿ ನೀತಿಸಂಹಿತೆಯನ್ನು ಉಲ್ಲಂಘಿಸುವ ಮೂಲಕ ಬಿಜೆಪಿ ಸಂಸದ ಪ್ರತಾಪ ಸಿಂಹ ಪೊಲೀಸರ ಬಂಧನಕ್ಕೊಳಗಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಕಿತ್ತೂರ ಚೆನ್ನಮ್ಮ ಮತ್ತು ಒನಕೆ ಓಬವ್ವರ ಕುರಿತ ಲಘುವಾದ ಮಾತುಗಳ ಹಿನ್ನೆಲೆಯಲ್ಲಿಯೂ ಅವರು ವಿವಾದಕ್ಕೆ ಸಿಲುಕಿದ್ದರು. ಇವೆಲ್ಲವೂ ರಾಜಕಾರಣಕ್ಕೆ ದಾಳಿಕೋರ ಮನೋಧರ್ಮ ಆರೋಪಿಸುವ ಪ್ರಯತ್ನಗಳು ಹಾಗೂ ಚುನಾವಣಾ ಸಂದರ್ಭದಲ್ಲಿ ಧರ್ಮದ ಹೆಸರಿನಲ್ಲಿ ನಡೆಸುವ ಕ್ಷುಲ್ಲಕ ತಂತ್ರಗಳಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರೇ ‘ಜಾತ್ಯತೀತ ಭಾರತ’ದ ಬಗ್ಗೆ ತಮ್ಮ ನಂಬಿಕೆಯನ್ನು ಸ್ಪಷ್ಟಪಡಿಸಿದ್ದರೂ, ಅದಕ್ಕೆ ವಿರುದ್ಧವಾದ ಘಟನೆಗಳು ಪಕ್ಷದ ವೇದಿಕೆಗಳಲ್ಲಿ ನಡೆಯುತ್ತಿರುವುದನ್ನು ಕಾಕತಾಳೀಯ ಎಂದುಕೊಳ್ಳುವುದು ಕಷ್ಟ. ಸಂವಿಧಾನದ ವಿರುದ್ಧ ಮಾತನಾಡುವವರನ್ನು ಮಾತ್ರವಲ್ಲದೆ, ಎಲ್ಲ ಬಗೆಯ ಬಾಯಿಬಡುಕತನಗಳನ್ನೂ ವಿರೋಧಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಪುರಾಣಕಥನಗಳ ಪಾತ್ರಗಳನ್ನು ಕಾವ್ಯದ ದೃಷ್ಟಿಯಿಂದ ನೋಡುವುದರ ಹೊರತಾಗಿ ವಿಕೃತಗೊಳಿಸಲು ಪ್ರಯತ್ನಿಸುವುದು ಕೂಡ ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡುವ ಪ್ರಯತ್ನವೇ ಆಗಿದೆ. ಎಲ್ಲ ಬಗೆಯ ಬಾಯಿಬಡುಕರನ್ನು ಹತೋಟಿಯಲ್ಲಿಡುವುದು ಸಾಮಾಜಿಕ ಸಾಮರಸ್ಯವನ್ನು ಕಾಪಾಡುವ ನಿಟ್ಟಿನಿಂದ ಮುಖ್ಯವಾದುದು. ಮಾತಿನ ಕೆಲಸ ಮನಸ್ಸುಗಳನ್ನು ಬೆಸೆಯುವುದೇ ಹೊರತು ಒಡಕನ್ನುಂಟುಮಾಡುವುದಲ್ಲ ಎನ್ನುವುದನ್ನು ಎಲ್ಲ ಪಕ್ಷಗಳಲ್ಲಿನ ಮಾತಿನ ಪೈಲ್ವಾನರು ಅರ್ಥ ಮಾಡಿಕೊಳ್ಳಬೇಕು.

Comments
ಈ ವಿಭಾಗದಿಂದ ಇನ್ನಷ್ಟು
ಮೈತ್ರಿ ಒಲವು:  ಕಾರ್ಯತಂತ್ರಕ್ಕೆ  ಕಸುವು ತುಂಬುವ ಯತ್ನ

ಸಂಪಾದಕೀಯ
ಮೈತ್ರಿ ಒಲವು: ಕಾರ್ಯತಂತ್ರಕ್ಕೆ ಕಸುವು ತುಂಬುವ ಯತ್ನ

20 Mar, 2018
ಪಬ್ ದಾಳಿ ಖುಲಾಸೆ ಅಸಂಗತ ವಿದ್ಯಮಾನ

ಸಂಪಾದಕೀಯ
ಪಬ್ ದಾಳಿ ಖುಲಾಸೆ ಅಸಂಗತ ವಿದ್ಯಮಾನ

17 Mar, 2018
ಹಿಂದಿ ಹೃದಯಭಾಗದ ರಾಜಕೀಯ ಸಂದೇಶ

ಸಂಪಾದಕೀಯ
ಹಿಂದಿ ಹೃದಯಭಾಗದ ರಾಜಕೀಯ ಸಂದೇಶ

16 Mar, 2018
ರೈತ ಹೋರಾಟದ ಅನುಕರಣೀಯ ಮಾದರಿ

ಸಂಪಾದಕೀಯ
ರೈತ ಹೋರಾಟದ ಅನುಕರಣೀಯ ಮಾದರಿ

15 Mar, 2018
ಪೊಲೀಸ್‌ ವ್ಯವಸ್ಥೆ ಸುಧಾರಣೆ ಕಾಗದದಲ್ಲೇ ಉಳಿದ ಶಿಫಾರಸು

ಸಂಪಾದಕೀಯ
ಪೊಲೀಸ್‌ ವ್ಯವಸ್ಥೆ ಸುಧಾರಣೆ ಕಾಗದದಲ್ಲೇ ಉಳಿದ ಶಿಫಾರಸು

14 Mar, 2018