ಪುತ್ತೂರು

11 ಸಾವಿರ ಕಸದ ಬುಟ್ಟಿ

‘ಸ್ವಸಹಾಯ ಸಂಘಗಳು ಕಸ ಸಂಗ್ರಹಣೆಯಲ್ಲಿ ಸೋತಿದ್ದರೆ ಬೇರೆಯವರಿಗೆ ಕೊಡುವುದು ಉತ್ತಮ. ಇಲ್ಲದಿದ್ದರೆ ಜನರಿಗೆ ಸಮಸ್ಯೆಯಾಗುತ್ತದೆ. ಕಸ ಸಂಗ್ರಹಕ್ಕೆ ಬರೋದಿಲ್ಲ. ಹಣಕ್ಕೆ ಮಾತ್ರ ಬರುತ್ತಾರೆ

ಪುತ್ತೂರು: ನಗರದ ಕಸ ಸಂಗ್ರಹ ಹೊಣೆಯನ್ನು 2 ಸ್ವಸಹಾಯ ಸಂಘಗಳಿಗೆ ನೀಡಿದ್ದು, ಇವು ವಿಫಲಗೊಂಡಿರುವುದರಿಂದ ಹೊರಗುತ್ತಿಗೆಗೆ ಟೆಂಡರ್ ಕರೆಯಲು ಗುರುವಾರ ನಡೆದ ನಗರಸಭಾ ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

‘ಸ್ವಸಹಾಯ ಸಂಘಗಳು ಕಸ ಸಂಗ್ರಹಣೆಯಲ್ಲಿ ಸೋತಿದ್ದರೆ ಬೇರೆಯವರಿಗೆ ಕೊಡುವುದು ಉತ್ತಮ. ಇಲ್ಲದಿದ್ದರೆ ಜನರಿಗೆ ಸಮಸ್ಯೆಯಾಗುತ್ತದೆ. ಕಸ ಸಂಗ್ರಹಕ್ಕೆ ಬರೋದಿಲ್ಲ. ಹಣಕ್ಕೆ ಮಾತ್ರ ಬರುತ್ತಾರೆ ಎಂಬ ದೂರುಗಳಿವೆ’ ಎಂದು ಝೋಹಾರಾ ನಿಸಾರ್ ಹೇಳಿದರು. ರಾಜೇಶ್ ಬನ್ನೂರು ಮಾತನಾಡಿ, ‘ಸ್ವಸಹಾಯ ಸಂಘಗಳು ಯಾಕೆ ವಿಫಲವಾಗಿವೆ ಎಂದು ನಾವು ಆತ್ಮವಿಮರ್ಶೆ ಮಾಡೋಣ. ನೂರು ಮನೆಯಿಂದ ಕಸ ಸಂಗ್ರಹಿಸಿದರೆ ಹತ್ತು ಮನೆಯವರು ಹಣ ಕೊಡುತ್ತಾರೆ’ ಎಂದರು.

‘ನಗರಸಭೆಗೆ ನಾವು ತೆರಿಗೆ ಕಟ್ಟುವಾಗ ಮತ್ತೆ ಕಸ ಸಂಗ್ರಹಗಾರರಿಗೂ ಹಣ ಯಾಕೆ ಕಟ್ಟಬೇಕೆಂದು ಕೇಳುತ್ತಾರೆ’ ಎಂದು ಅನ್ವರ್ ಖಾಸಿಂ ಹೇಳಿದರು. ಕಸಕ್ಕೆ ಪ್ರತ್ಯೇಕ ತೆರಿಗೆ ಪಡೆಯುತ್ತಿಲ್ಲ. ಕೇವಲ ಟ್ರೇಡ್ ಲೈಸನ್ಸ್‌ಗೆ ಮಾತ್ರ ತ್ಯಾಜ್ಯದ ಕರ ಪಡೆಯಲಾಗುತ್ತಿದೆ’ ಎಂದು ಪೌರಾಯುಕ್ತೆ ರೂಪಾ ಶೆಟ್ಟಿ ಹೇಳಿದರು.

‘ಸರ್ಕಾರದ ಸುತ್ತೋಲೆ ಪ್ರಕಾರ ಪೌರ ಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳಬೇಕಾಗಿದೆ. ಅದರಂತೆ ಪುತ್ತೂರು ನಗರಸಭೆ 76 ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕು. ನಂತರ ನಾವು ಅವರಿಂದಲೇ ಕಸ ವಿಲೇವಾರಿ ಮಾಡಿಸಬೇಕು. ಹೊರಗುತ್ತಿಗೆ ಕೊಡುವ ಹಾಗಿಲ್ಲ’ ಎಂದು ಪೌರಾಯುಕ್ತರು ಸ್ಪಷ್ಟಪಡಿಸಿದರು.

‘ನೇಮಕಾತಿ ಪ್ರಕ್ರಿಯೆ ಮುಗಿದು, ಅವರಿಗೆ ತರಬೇತಿ ನೀಡುವವರೆಗೆ ಒಂದು ವರ್ಷವಾಗುತ್ತದೆ. ಅಲ್ಲಿಯವರೆಗೆ ಹೊರಗುತ್ತಿಗೆ ನೀಡೋಣ’ ಎಂದು ಅಧ್ಯಕ್ಷರು ತಿಳಿಸಿದರು. ‘ಬನ್ನೂರಿನ ಡಂಪಿಂಗ್ ಯಾರ್ಡ್ ಸಮಸ್ಯೆ ಹಾಗೆಯೇ ಉಳಿದಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕಸ ಹಾಕಲು ಬಿಡುವುದಿಲ್ಲ’ ಎಂದು ಉಪಾಧ್ಯಕ್ಷ ವಿಶ್ವನಾಥ ಗೌಡ ಎಚ್ಚರಿಸಿದರು.

ಐತಿಹಾಸಿಕ ಕಿಲ್ಲೆ ಮೈದಾನದಲ್ಲಿ ತನ್ನ ಆಡಳಿತ ಕಚೇರಿ ನಿರ್ಮಿಸಲು ಜಾಗ ನೀಡುವಂತೆ ಪುತ್ತೂರು ನಗರ ಯೋಜನಾ ಪ್ರಾಧಿಕಾರ ಜಾಗ ಕೇಳಿರುವ ವಿಚಾರ ಸಭೆಯಲ್ಲಿ ಪ್ರಸ್ತಾಪಗೊಂಡಿತು. ಸದಸ್ಯೆ ಝೊಹರಾ ನಿಸಾರ್ ಈ ಬಗ್ಗೆ ಪ್ರಶ್ನಿಸಿ ಪತ್ರಿಕೆಯಲ್ಲಿ ಈ ಬಗ್ಗೆ ವರದಿ ನೋಡಿದೆ. ಏನಿದು ಹೀಗೆ? ಸಾರ್ವಜನಿಕ ಮೈದಾನದಲ್ಲಿ ಇಲಾಖೆಗೆ ಜಾಗ ಕೊಟ್ಟರೆ ಪುತ್ತೂರಿನ ಭವಿಷ್ಯವೇನು ಎಂದು ಕೇಳಿದರು. ಈ ಬಗ್ಗೆ ವಿವರಣೆ ನೀಡುವಂತೆ ಸದಸ್ಯ ರಾಜೇಶ್ ಬನ್ನೂರು ಆಗ್ರಹಿಸಿದರು.

ಆಡಳಿತದ ಕಡೆಯಿಂದ ಮಹಮ್ಮದ್ ಆಲಿ ಮಾತನಾಡಿ, ಪ್ರಾಧಿಕಾರದವರು ಐದು ಸೆಂಟ್ಸ್ ಜಾಗ ಕೇಳಿದ್ದಾರೆ. ನಾವು ಈ ಬಗ್ಗೆ ಕೌನ್ಸಿಲ್ ಮೀಟಿಂಗ್‌ನಲ್ಲಿ ಚರ್ಚಿಸಿಲ್ಲ. ಹಾಗೆಂದು ಇವತ್ತು ಅದರ ಅಜೆಂಡಾ ಇಟ್ಟಿಲ್ಲ. ಮುಂದೆ ಅದಕ್ಕೆಂದೇ ವಿಶೇಷ ಸಭೆ ಕರೆದು ಚರ್ಚಿಸೋಣ ಎಂದರು.

ಸದಸ್ಯರಾದ ಜಯಲಕ್ಷ್ಮೀ ಸುರೇಶ್, ಶೈಲಾ ಪೈ, ಮುಕೇಶ್ ಕೆಮ್ಮಿಂಜೆ, ಅನ್ವರ್ ಕಾಸಿಂ, ಝೊಹರಾ ನಿಸಾರ್, ವಾಣಿ ಶ್ರೀಧರ್, ಜೀವಂಧರ ಜೈನ್, ಬಾಲಚಂದ್ರ, ಶ್ಯಾಮಲಾ ಬಪ್ಪಳಿಗೆ, ಸೋಮಪ್ಪ ಸಫಲ್ಯ, ರಾಮಣ್ಣ ಗೌಡ ಹಲಂಗ, ವಿನಯ ಭಂಡಾರಿ, ರಮೇಶ್ ಶೆಟ್ಟಿ ಮುಂತಾದವರು ಚರ್ಚೆಯಲ್ಲಿ ಪಾಲ್ಗೊಂಡರು. ಪೌರಾಯುಕ್ತೆ ರೂಪಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ನೆಲ್ಲಿಕಟ್ಟೆ ಉದ್ಯಾನದಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆ

ನಗರದ ನೆಲ್ಲಿಕಟ್ಟೆಯ ಎಂ.ಜಿ.ರಸ್ತೆಯಲ್ಲಿರುವ ಉದ್ಯಾನದಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆ ಅಳವಡಿಸಲು ಸಭೆ ನಿರ್ಣಯಿಸಿತು. ಅದೇ ರೀತಿ ಬಲ್ನಾಡ್ ಕ್ರಾಸ್ ಬಪ್ಪಳಿಗೆ ಜಂಕ್ಷನ್‌ನಲ್ಲಿ ಅಂಬೇಡ್ಕರ್ ಹೆಸರಿನ ವೃತ್ತ ರಚಿಸಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಬೇಕೆಂದು ಸದಸ್ಯೆ ಶ್ಯಾಮಲಾ ಅವರು ಸಲ್ಲಿಸಿದ ಮನವಿ ಬಗ್ಗೆ ಚರ್ಚಿಸಿ ಒಪ್ಪಿಗೆ ನೀಡಿತು.

Comments
ಈ ವಿಭಾಗದಿಂದ ಇನ್ನಷ್ಟು
ಫೆಬ್ರುವರಿಯಲ್ಲಿ ಸಾಮರಸ್ಯ ನಡಿಗೆ

ಮಂಗಳೂರು
ಫೆಬ್ರುವರಿಯಲ್ಲಿ ಸಾಮರಸ್ಯ ನಡಿಗೆ

23 Jan, 2018
ಫಲ್ಗುಣಿ ನದಿ ಸೇರುತ್ತಿದೆ ಕಪ್ಪು ನೀರು, ಎಣ್ಣೆ ಅಂಶ

ಮಂಗಳೂರು
ಫಲ್ಗುಣಿ ನದಿ ಸೇರುತ್ತಿದೆ ಕಪ್ಪು ನೀರು, ಎಣ್ಣೆ ಅಂಶ

23 Jan, 2018
‘ರಾಜಕೀಯ’ಕ್ಕೆ ನಾಗರಿಕರ ಆಕ್ರೋಶ

ಬಂಟ್ವಾಳ
‘ರಾಜಕೀಯ’ಕ್ಕೆ ನಾಗರಿಕರ ಆಕ್ರೋಶ

22 Jan, 2018

ಮಂಗಳೂರು
ಸೂರ್ಯದೇವನಿಗೆ ಸಾವಿರ ನಮಸ್ಕಾರ

ನಗರದ ಮಂಗಳಾ ಕ್ರೀಡಾಂಗಣದಲ್ಲಿ ಭಾನುವಾರ ಬೆಳಗ್ಗೆ ಎಸ್‍ಪಿವೈಎಸ್‍ಎಸ್ ವತಿಯಿಂದ ನಡೆದ `ಆರೋಗ್ಯಕ್ಕಾಗಿ ಸೂರ್ಯನಮಸ್ಕಾರ' ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದರು.

22 Jan, 2018
ಹೊಸ ಕೃಷಿ ರಫ್ತು ನೀತಿ ಜಾರಿ: ಪ್ರಭು

ಪುತ್ತೂರು
ಹೊಸ ಕೃಷಿ ರಫ್ತು ನೀತಿ ಜಾರಿ: ಪ್ರಭು

22 Jan, 2018