ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆಗುಂದುತ್ತಿದೆ ಕ್ಯಾಲೆಂಡರ್‌ ಉದ್ಯಮ

Last Updated 29 ಡಿಸೆಂಬರ್ 2017, 5:41 IST
ಅಕ್ಷರ ಗಾತ್ರ

ಪಾಕೆಟ್‌ ಕ್ಯಾಲೆಂಡರ್‌.... ಪಾಕೆಟ್‌ ಕ್ಯಾಲೆಂಡರ್‌... ಬಸ್‌ಗಳಲ್ಲಿ, ರೈಲಿನಲ್ಲಿ, ನಿಲ್ದಾಣಗಳಲ್ಲಿ, ಜನ ದಟ್ಟಣೆ ಇರುವ ರಸ್ತೆಗಳಲ್ಲಿ ಕೇಳುತ್ತಿದ್ದ ಈ ಧ್ವನಿ ಇತ್ತೀಚಿನ ದಿನಗಳಲ್ಲಿ ಕಿವಿಗೆ ಬೀಳುವುದೇ ಕಡಿಮೆಯಾಗಿದೆ. ಡಿಸೆಂಬರ್‌ ತಿಂಗಳು ಬಂತೆಂದರೆ ಸಾಕು ಮಾರುಕಟ್ಟೆಗೆ ಕ್ಯಾಲೆಂಡರ್‌ಗಳು ಲಗ್ಗೆ ಇಡುತ್ತಿದ್ದವು. ಸಾಮಾನ್ಯವಾಗಿ ಎಲ್ಲ ಅಂಗಡಿಗಳ ಮುಂದೆಯೂ ಆಕರ್ಷಕವಾದ, ವಿವಿಧ ಕ್ಯಾಲೆಂಡರ್‌ಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿದ್ದವು.

ಈಗ ತಂತ್ರಜ್ಞಾನದ ಪೈಪೋಟಿಯಿಂದಾಗಿ ಎಲ್ಲರೂ ಮುಂದಿನ ನೂರಾರು ವರ್ಷಗಳ ದಿನಾಂಕ, ವಾರ, ಸಮಯ, ಗಂಟೆ, ವಿಶೇಷ ದಿನಗಳ ಮಾಹಿತಿಗಳನ್ನು ಜೇಬಿನಲ್ಲಿಟ್ಟುಕೊಂಡು ಓಡಾಡುತ್ತಿರುವುದರಿಂದ ಕ್ಯಾಲೆಂಡರ್‌ ಉದ್ಯಮ ಬೇಡಿಕೆ ಕಳೆದುಕೊಳ್ಳುತ್ತಿದೆ. ಅದರ ನಡುವೆಯೂ ಮೈಸೂರಿನ ಶಿವರಾಂ ಪೇಟೆಯ ಕೆಲವು ಗಲ್ಲಿಗಳಲ್ಲಿ ಪ್ರಿಂಟಿಂಗ್‌ ಪ್ರೆಸ್‌ಗಳು ಹೆಚ್ಚಾಗಿದ್ದು ಅಲ್ಲಿ ಈಗ ಕ್ಯಾಲೆಂಡರ್‌ ಮುದ್ರಣದ ಸದ್ದು ಕೇಳಿಬರುತ್ತಿದೆ.

‘ಸಾಮಾನ್ಯವಾಗಿ ಡಿಸೆಂಬರ್‌ ಅಂತ್ಯದಲ್ಲಿ, ಜನವರಿ ಮೊದಲೆರೆಡು ವಾರಗಳಲ್ಲಿ ಕ್ಯಾಲೆಂಡರ್‌ಗಳ ವ್ಯಾಪಾರ ಬಿರುಸಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಕ್ಯಾಲೆಂಡರ್ ಕೊಳ್ಳುವವರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ. ಮೊದಲು ಕೆಲವು ಕಾರ್ಪೊರೇಟ್ ಕಂಪೆನಿಗಳು ಪ್ರಚಾರದ ಉದ್ದೇಶದಿಂದ ಉಚಿತವಾಗಿ ಕಾಲೆಂಡರ್‌ಗಳನ್ನು ಹಂಚಲು ಆರಂಭಿಸಿದವು. ನಂತರ ಬ್ಯಾಂಕ್‌ಗಳೂ ತಮ್ಮ ಗ್ರಾಹಕರಿಗೆ ಉಚಿತವಾಗಿ ಕ್ಯಾಲೆಂಡರ್‌ ನೀಡುತ್ತಿದ್ದವು. ಸಹಕಾರಿ ಸಂಘಗಳು, ವಿವಿಧ ಸಂಘ ಸಂಸ್ಥೆಗಳು, ಎಲ್‌ಐಸಿ ಏಜೆಂಟರ್‌ಗಳು, ಖಾಸಗಿ ಕಂಪೆನಿಗಳು ಕ್ಯಾಲೆಂಡರ್‌ ಮುದ್ರಣ ಮಾಡಿಸಿ ಗ್ರಾಹಕರಿಗೆ ಹಂಚುತ್ತಿದ್ದವು’ ಎನ್ನುತ್ತಾರೆ ಮೈಸೂರಿನ ಕ್ಯಾಲೆಂಡರ್‌ ಮುದ್ರಕರೊಬ್ಬರು.

ವೈಟ್‌ ಪೇಪರ್‌, ಹಾರ್ಡ್‌ ಪೇಪರ್‌, ಸಿಂಗಲ್‌ ಶೀಟ್‌, ಟೇಬಲ್‌ ಕ್ಯಾಲೆಂಡರ್‌ಗಳು ಸೇರಿದಂತೆ ವಿವಿಧ ರೀತಿಯ ಕ್ಯಾಲೆಂಡರ್‌ಗಳನ್ನು ಆಕರ್ಷಕವಾಗಿ ಮುದ್ರಣ ಮಾಡಲಾಗುತ್ತದೆ.

‘ಈ ವರ್ಷ ಕ್ಯಾಲೆಂಡರ್‌ ಮಾಡಿಸಲು ಜನ ಅಷ್ಟೊಂದು ಆಸಕ್ತಿ ತೋರಿಸುತ್ತಿಲ್ಲ. ವಿಧಾನಸಭೆ ಚುನಾವಣೆ ಬರುತ್ತಿರುವುದರಿಂದ, ಪ್ರಚಾರಕ್ಕಾಗಿ ಫೆಬ್ರುವರಿ ಮಾರ್ಚ್‌ ತಿಂಗಳಲ್ಲಿ ಕ್ಯಾಲೆಂಡರ್‌ ಮಾಡಿಸಿ ಹಂಚುವವರು ಇದ್ದಾರೆ, ಆದ್ದರಿಂದ ಆಗ ಕ್ಯಾಲೆಂಡರ್‌ ಹೆಚ್ಚಿನ ಸಂಖ್ಯೆಯಲ್ಲಿ ಮಾಡಿಸಬಹು ಎನ್ನುವ ನಿರೀಕ್ಷೆಯಲ್ಲಿ ಇದ್ದೇವೆ’ ಎನ್ನುತ್ತಾರೆ ಅಗ್ರಹಾರದ ರಮಾನುಜ ರಸ್ತೆಯಲ್ಲಿರುವ ತಾರಾ ಪ್ರಿಂಟ್ಸ್‌ನ ಮಾಲೀಕ ಎಂ.ಎನ್‌.ಶಶಿಕುಮಾರ್‌.

‘30 ವರ್ಷಗಳಿಂದ ಕ್ಯಾಲೆಂಡರ್‌ ಮುದ್ರಣ ಮಾಡುತ್ತಿದ್ದೇವೆ. ಪ್ರತಿ ವರ್ಷ 2 ಲಕ್ಷ ಕ್ಯಾಲೆಂಡರ್‌ಗಳನ್ನು ಮುದ್ರಿಸುತ್ತೇವೆ. ಒಮ್ಮೆಲೆ ಉಂಡೆ ಪೇಪರ್‌ ತರಿಸುತ್ತೇವೆ. ಇತ್ತೀಚೆಗೆ ವರ್ಷದಿಂದ ವರ್ಷಕ್ಕೆ ಪೇಪರ್‌ಗಳ, ಬಣ್ಣಗಳ ಬೆಲೆ ಹೆಚ್ಚಾಗಿದೆ. ಅದರ ಜೊತೆಗೆ ಈ ವರ್ಷ ಜಿಎಸ್‌ಟಿ ಹೊಡೆತ ಬಿದ್ದಿದೆ. ಎಲ್ಲ ವೆಚ್ಚಗಳನ್ನು ಕಳೆದು ಒಂದು ಕ್ಯಾಲೆಂಡರ್‌ನಲ್ಲಿ ಕೇವಲ ₹1 ಮಾತ್ರ ಲಾಭ ಉಳಿಯುತ್ತದೆ’ ಎನ್ನುತ್ತಾರೆ ಅವರು.

‘ಕಾರ್ಟೂನ್‌, ಪ್ರಾಣಿ, ಪಕ್ಷಿಗಳ ಚಿತ್ರಗಳಿರುವ ಕ್ಯಾಲೆಂಡರ್‌ಗಳನ್ನು ಮಕ್ಕಳು ಇಷ್ಟ ಪಡುತ್ತಿದ್ದರು. ಜತೆಗೆ, ರೂಪದರ್ಶಿಗಳಿರುವ, ಸಿನಿಮಾ ನಟ, ನಟಿಯರು ಇರುವ ಕ್ಯಾಲೆಂಡರ್‌ಗಳಿಗೆ ಕೆಲ ವರ್ಷಗಳ ಹಿಂದೆ ಭಾರಿ ಬೇಡಿಕೆ ಇತ್ತು. ಆದರೆ, ಈಗ ಅವುಗಳನ್ನು ಯಾರೂ ಕೇಳುತ್ತಿಲ್ಲವಾದ್ದರಿಂದ ಆ ವಿನ್ಯಾಸಗಳನ್ನೇ ಕೈಬಿಟ್ಟಿದ್ದೇವೆ’ ಎನ್ನುತ್ತಾರೆ ಡಿಸೈನರ್‌ ಸಂದೇಶ್‌.

‘ದೇವರ ಚಿತ್ರವಿರುವ ಸಿಂಗಲ್‌ ಶೀಟ್‌ ಕ್ಯಾಲೆಂಡರ್‌ಗಳಿಗೆ ಹಿಂದೆ ಭಾರಿ ಬೇಡಿಕೆ ಇತ್ತು. ಇತ್ತೀಚಿನ ದಿನಗಳಲ್ಲಿ ಕೆಲವರು ಮುದ್ರಿಸಲು ಆರ್ಡರ್‌ ಕೊಡುತ್ತಿದ್ದಾರೆ. ಅವುಗಳನ್ನು ಉಚಿತವಾಗಿ ಹಂಚುತ್ತಾರೆ. ಜತೆಗೆ, ವನ್ಯಜೀವಿಗಳ, ಪರಿಸರದ ಚಿತ್ರಗಳಿರುವ ಕ್ಯಾಲೆಂಡರ್‌ಗಳನ್ನು ಕೆಲವು ಸಂಸ್ಥೆಗಳು ಮಾಡಿಸುತ್ತಿವೆ. ಅನೇಕ ಕಾರ್ಪೊರೇಟ್ ಕಂಪೆನಿಗಳು, ಸ್ಥಳೀಯ ಕಂಪೆನಿಗಳು ಆ ಸಂಸ್ಥೆಯ ವಿವರ, ಚಿತ್ರವಿರುವಂಥ ಕ್ಯಾಲೆಂಡರ್‌ಗಳನ್ನು ಮಾಡಿಸುತ್ತಿದ್ದಾರೆ ಎನ್ನುತ್ತಾರೆ ಪ್ರಿಂಟಿಂಗ್‌ ಪ್ರೆಸ್‌ ಮಾಲೀಕ ಲೋಕೇಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT