ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಹರೂ ಮೈದಾನದ ಶುಲ್ಕ ಹೆಚ್ಚಳ

Last Updated 29 ಡಿಸೆಂಬರ್ 2017, 6:57 IST
ಅಕ್ಷರ ಗಾತ್ರ

ಸಿದ್ದಾಪುರ: ಪಟ್ಟಣದ ನೆಹರೂ ಮೈದಾನದಲ್ಲಿ ನಡೆಸುವ ಕಾರ್ಯಕ್ರಮಗಳಿಗೆ ವಿಧಿಸುವ ಶುಲ್ಕವನ್ನು ಹೆಚ್ಚಿಸಲು ಗುರುವಾರ ಇಲ್ಲಿ ನಡೆದ ಪಟ್ಟಣ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು. ‘ನೆಹರೂ ಮೈದಾನದ ಸ್ವಚ್ಛತೆ ಹಾಗೂ ಕಸ ವಿಲೇವಾರಿ ಮಾಡುವ ಹಿನ್ನೆಲೆಯಲ್ಲಿ ಶುಲ್ಕ ಹೆಚ್ಚಿಸಬೇಕು’ ಎಂದು ಪಟ್ಟಣ ಪಂಚಾಯ್ತಿ ಸದಸ್ಯರು ಅಭಿಪ್ರಾಯ ಪಟ್ಟರು.

‘ಈ ಮೈದಾನದಲ್ಲಿ ನಡೆಯುವ ಮನರಂಜನಾ ಕಾರ್ಯಕ್ರಮಕ್ಕೆ ₹ 1,500 ಬದಲಾಗಿ, ₹ 2,000, ಕ್ರೀಡಾಕೂಟ ಮತ್ತಿತರ ಕಾರ್ಯಕ್ರಮಗಳಿಗೆ ₹ 1,000 ಬದಲಾಗಿ ₹ 1,500 ಶುಲ್ಕ ಪಾವತಿಸಬೇಕು’ ಎಂದು ಪಟ್ಟಣ ಪಂಚಾಯ್ತಿ ಸದಸ್ಯ ಕೆ.ಜಿ.ನಾಯ್ಕ ಹಣಜಿಬೈಲ್ ವಿವರ ನೀಡಿದರು.

‘ಪಟ್ಟಣ ಪಂಚಾಯ್ತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ನಿಷ್ಕ್ರಿಯತೆ ಹಾಗೂ ಬೇಜವಾಬ್ದಾರಿಯಿಂದಾಗಿ ಪಟ್ಟಣ ಪಂಚಾಯ್ತಿಯ ಹಣ ಪೋಲಾಗುತ್ತಿದೆ. ಈ ಕುರಿತು ಮುಖ್ಯಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕು. ಪಟ್ಟಣದಲ್ಲಿ ಎಲ್ಲ ಕಡೆ ಪ್ಲಾಸ್ಟಿಕ್ ಕೊಟ್ಟೆಗಳು ಬಿದ್ದುಕೊಂಡಿವೆ. ಸ್ವಚ್ಛತೆ ಕುರಿತು ಗಮನ ನೀಡದ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ’ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಮಾರುತಿ ಟಿ.ನಾಯ್ಕ ಹೊಸೂರು, ಸದಸ್ಯ ಕೆ.ಜಿ.ನಾಯ್ಕ ಹಣಜೀಬೈಲ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

‘ನಗರೋತ್ಥಾನದ -1 ಹಂತದ ಯೋಜನೆಯಲ್ಲಿ 2009–-10ರಲ್ಲಿ ಪಟ್ಟಣ ಪಂಚಾಯ್ತಿ ನಿರ್ಮಿಸಿರುವ 11 ಅಂಗನವಾಡಿ ಕಟ್ಟಡಗಳನ್ನು ಒಂದು ವಾರದೊಳಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತನ್ನ ಸುಪರ್ದಿಗೆ ವಹಿಸಿಕೊಳ್ಳಬೇಕು’ ಎಂದು ನೋಟಿಸ್ ನೀಡಲು ಸದಸ್ಯರು ಸೂಚನೆ ನೀಡಿದರು.

‘ನಗರೋತ್ಥಾನ ಯೋಜನೆಯಲ್ಲಿ ಹೊನ್ನೆಗುಂಡಿಯ 100 ಮೀಟರ್ ಉದ್ದದ ಗಟಾರ ಹಾಗೂ ರಸ್ತೆ- ಪಕ್ಕದ ಚರಂಡಿ ನಿರ್ಮಾಣವಾಗುತ್ತಿದೆ’ ಎಂದು ಎಂಜಿನಿಯರ್ ರಮೇಶ ನಾಯ್ಕ ಸಭೆಗೆ ಮಾಹಿತಿ ನೀಡಿದರು.

ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸುಮನಾ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ದೇವಮ್ಮ ಚೆಲವಾದಿ, ಸದಸ್ಯರಾದ ಮಾರುತಿ ಕಿಂದ್ರಿ, ಗುರುರಾಜ ಶಾನಭಾಗ, ಸುರೇಶ ನಾಯ್ಕ, ರವಿ.ನಾಯ್ಕ, ಪುಷ್ಪಾ ಗೌಡರ್, ಮೋಹಿನಿ ನಾಯ್ಕ, ಚಂದ್ರಮ್ಮ, ಪುಷ್ಪಲತಾ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT