ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ವೈಕುಂಠ ದ್ವಾರ ದರ್ಶನ

Last Updated 29 ಡಿಸೆಂಬರ್ 2017, 7:09 IST
ಅಕ್ಷರ ಗಾತ್ರ

ಮಾಲೂರು: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ತಾಲ್ಲೂಕಿನ ಚಿಕ್ಕತಿರುಪತಿಯ ಪ್ರಸನ್ನ ವೆಂಕಟರಮಣಸ್ವಾಮಿ ದೇಗುಲದಲ್ಲಿ ಶುಕ್ರವಾರ ವೈಕುಂಠ ಏಕಾದಶಿ ಅಂಗವಾಗಿ ಸ್ವಾಮಿಯ ವೈಕುಂಠ ದ್ವಾರ ದರ್ಶನ ಹಮ್ಮಿಕೊಳ್ಳಲಾಗಿದೆ.

ಕಾರ್ತಿಕ ಮಾಸದ ನಂತರ ಶುಕ್ರವಾರ (ಡಿ.28) ನಡೆಯುವ ವೈಕುಂಠ ಏಕಾದಶಿಯಂದು ಸ್ವಾಮಿಗೆ ವಿಶೇಷ ಅಲಂಕಾರ ನಡೆಸಲಾಗುವುದು. ತಿರುಮಂಜನ, ವಜ್ರ ವೈಢೂರ್ಯ ಭರಿತ ಆಭರಣಗಳಿಂದ ಆಲಂಕರಿಸಿ ವಿಶೇಷ ಪೂಜ ಕೈಂಕರ್ಯ ಮಾಡಲಾಗುತ್ತದೆ. ನಂತರ ಸಿಂಗರಿಸಿದ ಉತ್ಸವ ಮೂರ್ತಿಗಳನ್ನು ವೈಕುಂಠ ದ್ವಾರದಲ್ಲಿ ಉಯ್ಯಾಲೆಯ ಮಣೆಯ ಮೇಲೆ ಕೂರಿಸಿ ವಿಶೇಷ ಆಸ್ಥಾನ ಸೇವೆ ನಡೆಸಲಾಗುತ್ತದೆ.

ಬೆಂಗಳೂರು ಸೇರಿದಂತೆ ತಮಿಳು ನಾಡು, ಆಂಧ್ರ ಪ್ರದೇಶ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿ ಮೂಲ ಮೂರ್ತಿಯ ದರ್ಶನ ಪಡೆದ ನಂತರ ಉತ್ತರ ದ್ವಾರದಲ್ಲಿ ಉತ್ಸವ ಮೂರ್ತಿ ದರ್ಶನ ಮಾಡುತ್ತಾರೆ. ಈ ರೀತಿ ಸ್ವಾಮಿಯ ದರ್ಶನ ಮಾಡುವುದು ಮಹಾಭಾಗ್ಯವೆಂದೂ ಹಾಗೂ ಮೋಕ್ಷದಾಯಕ ಎಂಬುವುದು ಭಕ್ತರ ಅಚಲ ನಂಬಿಕೆಯಾಗಿರುವುದು ವಿಶೇಷ.

ಈ ದೇವಾಲಯವು ದತ್ತಿ ಇಲಾಖೆಗೆ ಒಳಪಟ್ಟಿದ್ದು, ಪ್ರತಿ ದಿನ ವಿಶೇಷ ಪೂಜ ಕೈಂಕರ್ಯಗಳ ಜತೆಗೆ ವರ್ಷದಲ್ಲಿ ನಡೆಯುವ ವೈಕುಂಠ ಏಕಾದಶಿ, ನೂತನ ವರ್ಷಾಚರಣೆ, ಬ್ರಹ್ಮ ರಥೋತ್ಸವ, ಶ್ರಾವಣ ಶನಿವಾರ ಹಾಗೂ ಆಭಿಷೇಕ, ಕಲ್ಯಾಣೋತ್ಸವ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿ ದೇವರ ದರ್ಶನ ಪಡೆದು ಕೃತಾರ್ಥರಾಗುತ್ತಾರೆ.

ದೇಗುಲ ಅಭಿವೃದ್ಧಿ ಪಡಿಸಲು ಶ್ರಮಿಸುತ್ತಿರುವ ಶಾಸಕ ಕೆ.ಎಸ್.ಮಂಜುನಾಥಗೌಡ ದರ್ಶನಕ್ಕೆ ಬರುವ ಭಕ್ತರಿಗೆ ಮೂಲ ಸೌಲಭ್ಯ ಕಲ್ಪಿಸಲು ಮುಂದಾಗಿದ್ದಾರೆ. ಖಾಸಗಿ ಅನುದಾನದಡಿಯಲ್ಲಿ ₹ 2 ಕೋಟಿ ವಚ್ಚದಲ್ಲಿ ನಿರ್ಮಾಸಲಾಗುತ್ತಿರುವ ಹೆಬ್ಬಾಗಿಲು ಕಾಮಗಾರಿ ಮುಗಿದಿದೆ. ದೆಗುಲದ ಸುತ್ತಲು ಕಾಂಪೌಂಡ್ ಕಾಮಗಾರಿ ನಡೆಯುತ್ತಿದೆ. ವಿದ್ಯುತ್ ದೀಪ ಅಳವಡಿಸಲಾಗಿದೆ.

ದೇಗುಲದ ಎಡ ಭಾಗದಲ್ಲಿ ಕಲ್ಯಾಣಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಸರ್ಕಾರದಿಂದ ಸುಮಾರು ₹ 4.56 ಕೋಟಿ ಬಿಡುಗಡೆಯಾಗಿದ್ದು, 101 ಅಡಿಗಳ ರಾಜಗೋಪುರ ಕಾಮಗಾರಿ ಭರದಿಂದ ಸಾಗಿದೆ. ಜತೆಗೆ ದೇಗುಲದ ರಥ ಬೀದಿಯನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದ್ದು, ಸರ್ಕಾರದಿಂದ ₹ 2 ಕೋಟಿ ಬಿಡುಗಡೆ ಮಾಡಲಾಗಿದೆ.

ದೇವಾಲಯಕ್ಕೆ ಸೇರಿದ ಭೂಮಿ ವಿಚಾರದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಕಲ್ಕೇರಿ ದಿ.ಶ್ರೀನಿವಾಸಗೌಡ ಮನವೊಲಿಸಿ ದೇಗುಲದ ಅಭಿವೃದ್ಧಿಗೆ ಸಹಕರಿಸುವಂತೆ ಮಾಡಿದ ಕೀರ್ತಿ ಶಾಸಕರಿಗೆ ಸಲ್ಲುತ್ತದೆ.

2ನೇ ತಿರುಪತಿಯನ್ನಾಗಿಸಲು ಪ್ರಯತ್ನ

ದೇವಾಲಯದ ಅಭಿವೃದ್ಧಿ ಕಾರ್ಯ ಭರದಿಂದ ಸಾಗಿದೆ. ಸರ್ಕಾರ ಹಾಗೂ ಖಾಸಗಿ ಕಂಪೆನಿಗಳ ಸಹಕಾರದಿಂದ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರಿಗೆ ಮೂಲ ಸೌಕರ್ಯ ಸೇರಿದಂತೆ ವಸತಿ, ಪ್ರತಿ ದಿನ ಅನ್ನ ಪ್ರಸಾದ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ. ದೇಶದಲ್ಲಿ 2ನೇ ತಿರುಪತಿಯಾನ್ನಾಗಿ ಅಭಿವೃದ್ಧಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಶಾಸಕ ಕೆ.ಎಸ್. ಮಂಜುನಾಥಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT