ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಸ್ಪತ್ರೆಯಲ್ಲಿ ‘ಆರೋಗ್ಯ ಅಳಿಲು ಸೇವೆ’ ಭಾಗ್ಯ

Last Updated 29 ಡಿಸೆಂಬರ್ 2017, 7:10 IST
ಅಕ್ಷರ ಗಾತ್ರ

ಕೋಲಾರ: ಗುಣಮಟ್ಟದ ಆರೋಗ್ಯ ಸೇವೆಗೆ ಹೆಸರಾಗಿರುವ ನಗರದ ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆಯು ರೋಗಿಗಳು ಹಾಗೂ ಅವರ ಸಂಬಂಧಿಕರ ಅನುಕೂಲಕ್ಕಾಗಿ ವಿನೂತನ ಸೇವೆಯೊಂದನ್ನು ಆರಂಭಿಸಲು ಮುಂದಾಗಿದೆ.

ಆಸ್ಪತ್ರೆಯು ‘ಆರೋಗ್ಯ ಅಳಿಲು ಸೇವೆ’ ಎಂಬ ಜನಸ್ನೇಹಿ ಕಾರ್ಯಕ್ರಮ ರೂಪಿಸಿದ್ದು, ದಿನದ 24 ತಾಸೂ ರೋಗಿಗಳಿಗೆ ವೈದ್ಯಕೀಯ ಸೇವೆ ಸಿಗಲಿದೆ. ‘ರೋಗಿಗಳ ಸೇವೆಯೇ ನಮ್ಮ ಗುರಿ, ರೋಗಿಗಳ ಸೇವೆಗೆ ಸದಾ ಸಿದ್ಧ’ ಎಂಬ ಘೋಷ ವಾಕ್ಯದೊಂದಿಗೆ ಹೊಸ ವರ್ಷದಿಂದ ಈ ಸೇವೆ ಆರಂಭವಾಗಲಿದೆ.

ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಪೈಕಿ ನಗರದ ಆಸ್ಪತ್ರೆಯಲ್ಲೇ ಪ್ರಪ್ರಥಮ ಬಾರಿಗೆ ಈ ಸೇವೆ ರೂಪಿಸಲಾಗಿದೆ. ಆಸ್ಪತ್ರೆಯ ಪ್ರವೇಶ ಭಾಗದಲ್ಲೇ ಚಿಕ್ಕ ಕೌಂಟರ್‌ ತೆರೆಯಲಾಗಿದ್ದು, ಕೌಂಟರ್‌ಗೆ ಮೂರು ಪಾಳಿಗಳಲ್ಲಿ ತಲಾ 10 ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಆ ಸಿಬ್ಬಂದಿಯು ರೋಗಿಗಳ ತುರ್ತು ಅಗತ್ಯಗಳಿಗೆ ಸ್ಪಂದಿಸುತ್ತಾರೆ. ಹಗಲು ರಾತ್ರಿ ಎನ್ನದೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ರೋಗಿಗಳು ಮಧ್ಯ ರಾತ್ರಿಯಲ್ಲಿ ಆಸ್ಪತ್ರೆಗೆ ಬಂದರೂ ಸಿಬ್ಬಂದಿ ಸೇವೆಗೆ ಸಿದ್ಧರಿರುತ್ತಾರೆ.

ನರ್ಸ್‌ಗಳು, ಆಂಬುಲೆನ್ಸ್‌ ಚಾಲಕರು, ಭದ್ರತಾ ಸಿಬ್ಬಂದಿ ಈ ಕೌಂಟರ್‌ನಲ್ಲಿರುತ್ತಾರೆ. ವೈದ್ಯರ ಕೊಠಡಿ, ಹೆರಿಗೆ ವಾರ್ಡ್‌, ಪ್ರಯೋಗಾಲಯ, ರಕ್ತನಿಧಿ ಕೇಂದ್ರ, ಎಕ್ಸ್‌–ರೇ, ಸಿ.ಟಿ ಸ್ಕ್ಯಾನಿಂಗ್‌, ಔಷಧ, ಮಾತ್ರೆ ಸೇರಿದಂತೆ ಯಾವುದೇ ಸೇವೆಯ ಅಗತ್ಯವಿದ್ದರೂ ಸಿಬ್ಬಂದಿಯೇ ರೋಗಿಗಳನ್ನು ಸಂಬಂಧಪಟ್ಟ ವಿಭಾಗಕ್ಕೆ ಜತೆಯಲ್ಲೇ ಕರೆದೊಯ್ದು ಸೇವೆ ಸಿಗುವಂತೆ ಮಾಡುತ್ತಾರೆ. ಹೀಗಾಗಿ ರೋಗಿಗಳು ಅಥವಾ ಅವರ ಸಂಬಂಧಿಕರು ಚಿಕಿತ್ಸೆಗಾಗಿ ಕೊಠಡಿಯಿಂದ ಕೊಠಡಿಗೆ ಅಲೆಯುವ ಪರಿಸ್ಥಿತಿ ಇಲ್ಲ.

ಮಾಹಿತಿ ರವಾನೆ: ಸಿಬ್ಬಂದಿಯು ರೋಗಿಗಳ ಸಂಬಂಧಿಕರಿಗೆ ಮಾಹಿತಿ ರವಾನಿಸಿ ಆಸ್ಪತ್ರೆಗೆ ಬರುವಂತೆ ಸೂಚನೆ ನೀಡುವ ಕಾಳಜಿ ತೋರುತ್ತಾರೆ. ಅಪಘಾತದಂತಹ ತುರ್ತು ಸಂದರ್ಭಗಳಲ್ಲಿ ಕೌಂಟರ್‌ ಸಿಬ್ಬಂದಿಯೇ ರೋಗಿಗಳನ್ನು ಗಮನಿಸಿ ಸಕಾಲಕ್ಕೆ ಚಿಕಿತ್ಸೆ ಕೊಡಿಸುತ್ತಾರೆ.

ರಾತ್ರಿ ಪಾಳಿ ಸಿಬ್ಬಂದಿಯ ವಿಶ್ರಾಂತಿಗೆ ಅನುಕೂಲವಾಗುವಂತೆ ಕೌಂಟರ್‌ನಲ್ಲಿ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಜತೆಗೆ ದೂರವಾಣಿ ಸಂಪರ್ಕ ಕಲ್ಪಿಸಲಾಗಿದೆ. ಕೌಂಟರ್‌ನ ಪ್ರವೇಶ ಭಾಗದಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಿ, ಜಿಲ್ಲಾ ಶಸ್ತ್ರ ಚಿಕಿತ್ಸಕರ ಕೊಠಡಿಯಲ್ಲಿ ಟಿ.ವಿಗೆ ಸಂಪರ್ಕ ಕಲ್ಪಿಸಲಾಗಿದೆ. ಶಸ್ತ್ರ ಚಿಕಿತ್ಸಕರು ತಮ್ಮ ಕೊಠಡಿಯಲ್ಲೇ ಕುಳಿತು ‘ಆರೋಗ್ಯ ಅಳಿಲು ಸೇವೆ’ ಕೌಂಟರ್‌ನ ಸಿಬ್ಬಂದಿಯ ಕಾರ್ಯ ವೈಖರಿ ಮೇಲೆ ನಿಗಾ ವಹಿಸುತ್ತಾರೆ. ಸಮಯ ಎಷ್ಟಾದರೂ ಸಿಬ್ಬಂದಿ ಎಚ್ಚರಿಕೆಯಿಂದಿರುತ್ತಾರೆ. ರೋಗಿ ಬಂದ ಕೂಡಲೇ ಯಾರಿಗೂ ಕಾಯುವ ಪರಿಸ್ಥಿತಿ ಇರುವುದಿಲ್ಲ. ಬದಲಿಗೆ ತಕ್ಷಣವೇ ಚಿಕಿತ್ಸೆ ಆರಂಭವಾಗುತ್ತದೆ.

ಮಿತ ಬಂಡವಾಳ: ಆಸ್ಪತ್ರೆಯಲ್ಲಿನ ವೈದ್ಯಕೀಯ ಸಲಕರಣೆಗಳ ಖಾಲಿ ಪೆಟ್ಟಿಗೆ, ನಿರುಪಯುಕ್ತ ಪೀಠೋಪಕರಣಗಳಿಗೆ ಹೊಸ ಸ್ಪರ್ಶ ನೀಡಿ ಮಿತ ಬಂಡವಾಳದೊಂದಿಗೆ ಈ ಕೌಂಟರ್‌ ನಿರ್ಮಿಸಲಾಗಿದೆ. ಕೌಂಟರ್‌ಗೆ ಸುಮಾರು ₹ 15 ಸಾವಿರ ವೆಚ್ಚವಾಗಿದೆ. ಸರ್ಕಾರದಿಂದ ಹೆಚ್ಚುವರಿ ಅನುದಾನ ಪಡೆಯದೆ ಲಭ್ಯ ಸಂಪನ್ಮೂಲ ಬಳಸಿ ಕೌಂಟರ್‌ ತೆರೆಯಲಾಗಿದೆ.

* * 

ಆಸ್ಪತ್ರೆಗೆ ಬರುವ ರೋಗಿಗಳು ಚಿಕಿತ್ಸೆಗಾಗಿ ಅಲೆದಾಡುವ ಪರಿಸ್ಥಿತಿ ಇರಬಾರದೆಂಬ ಸದುದ್ದೇಶದೊಂದಿಗೆ ಆರೋಗ್ಯ ಅಳಿಲು ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. 2018ರ ಜ.1ರಿಂದ ಈ ಸೇವೆ ಕಾರ್ಯಾರಂಭ ಮಾಡುತ್ತದೆ
ಡಾ.ಎಚ್‌.ಆರ್‌.ಶಿವಕುಮಾರ್‌, ಜಿಲ್ಲಾ ಶಸ್ತ್ರ ಚಿಕಿತ್ಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT