ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಚ್ಛಾಶಕ್ತಿ ಕೊರತೆ: ಬಗೆಹರಿಯದ ಮಹದಾಯಿ ವಿವಾದ’

Last Updated 29 ಡಿಸೆಂಬರ್ 2017, 8:12 IST
ಅಕ್ಷರ ಗಾತ್ರ

ಮಹಾಲಿಂಗಪುರ: 1972ರಲ್ಲಿ ಮಲಪ್ರಭಾ ನದಿಗೆ ಅಣೆಕಟ್ಟು ನಿರ್ಮಾಣವಾಯಿತು. ಆಗ ಗೋವಾ, ಮಹಾರಾಷ್ಟ್ರದ ಯಾವುದೇ ತಕರಾರು ಇರಲಿಲ್ಲ. ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಮಹಾದಾಯಿ ವಿವಾದವಾಗಿ ಪರಿಣಮಿಸಿದೆ. 38 ದಿನಗಳು ಸತ್ಯಾಗ್ರಹ ಮಾಡಿ ಗಮನ ಸೆಳೆದ ಮಹಾಲಿಂಗಪುರ ರೈತರ ಸಭೆಯನ್ನು ಇದೇ ಗುರುವಾರ ಸಚಿವ ಎಂ.ಬಿ. ಪಾಟೀಲರ ಮನೆಯಲ್ಲಿ ಕರೆಯಲಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.

ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ಸಸಾಲಟ್ಟಿ ಏತ ನೀರಾವರಿ ಹೋರಾಟ ಸಮಿತಿ ಬುಧವಾರ ಆಯೋಜಿಸಿದ್ದ ಮಹಾಲಿಂಗಪುರದಿಂದ ಬೈಕ್ ರ‍್ಯಾಲಿಯಲ್ಲಿ ವಿಜಯಪುರಕ್ಕೆ ತೆರಳಿ ಸಚಿವ ಎಂ.ಬಿ. ಪಾಟೀಲರ ಮನೆಗೆ ಮುತ್ತಿಗೆ ಹಾಕುವ ಯೋಜನೆಯಲ್ಲಿದ್ದ ರೈತರನ್ನುದ್ದೇಶಿಸಿ ಮಾತನಾಡಿದರು.

ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಸಮಸ್ಯೆಯನ್ನು ಬಗೆಹರಿಸುತ್ತಿಲ್ಲ, ಕೇಂದ್ರ ಹಾಗೂ ಗೋವಾದಲ್ಲಿ ಬಿಜೆಪಿ ಸರ್ಕಾರಗಳಿವೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಹೀಗಾಗಿ ಸಮಸ್ಯೆಯನ್ನು ಬಗೆಹರಿಸುವ ಜವಾಬ್ದಾರಿ ಶೇ 75ರಷ್ಟು ಬಿಜೆಪಿ ಹಾಗೂ ಶೇ 25ರಷ್ಟು ಕಾಂಗ್ರೆಸ್ ಪಕ್ಷದ ಮೇಲಿದೆ. ಸದ್ಯಕ್ಕೆ ಹೋರಾಟ ಬೇಡ, ಮಾತುಕತೆಗೆ ನಾವು ತಯಾರಿದ್ದೇವೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ. ಮಾತುಕತೆಯೇ ಸಮಸ್ಯೆಗೆ ಪರಿಹಾರ. ಆದ್ದರಿಂದ ಸಚಿವರ ಸಂದೇಶವನ್ನು ಸ್ವಾಗತಿಸುತ್ತೇನೆ ಎಂದರು.

ಸ್ಥಳಕ್ಕೆ ಬಂದ ಬಾಗಲಕೋಟೆ ಜಿಲ್ಲಾಧಿಕಾರಿ ಜಯರಾಮ್ ಸಚಿವ ಎಂ.ಬಿ. ಪಾಟೀಲರು ಕಳುಹಿಸಿದ ಸಂದೇಶವನ್ನು ಓದಿ ಹೇಳಿದರು. ಚಿತ್ರನಟ ಶಿವರಾಂ, ಎಸ್.ಪಿ.ರಿಶ್ವಂತ, ಚಿಮ್ಮಡದ ಪ್ರಭುಲಿಂಗ ಶ್ರೀಗಳು, ರೈತ ಸಂಘದ ರಾಜ್ಯ ಸಂಚಾಲಕ ಗಂಗಾಧರ ಮೇಟಿ, ರಾಜ್ಯ ನೇಕಾರರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ, ಬಂದೇನವಾಜ ಪಕಾಲಿ, ರಮೇಶ,ಭಾವಿಕಟ್ಟಿ, ಹೊನ್ನಪ್ಪ ಬಿರಡಿ, ಅರ್ಜುನ ಬಂಡಿವಡ್ಡರ, ಕರೆಪ್ಪ ಮೇಟಿ, ಅಸ್ಲಂ ಕೌಜಲಗಿ, ನಿಂಗಪ್ಪ ಬಾಳಿಕಾಯಿ, ಸುರೇಶ ಮಡಿವಾಳರ, ಶ್ರೀಕಾಂತ ಗೂಳನ್ನವರ, ರಾಜೇಂದ್ರ ಮಿರ್ಜಿ ತೇರದಾಳ, ರಬಕವಿ, ಬನಹಟ್ಟಿ, ಹೊಸೂರ ಚಿಮ್ಮಡ ಹಾಗೂ ಮಹಾಲಿಂಗಪುರದ ಸುತ್ತಮುತ್ತಲಿನ ಗ್ರಾಮಗಳ ರೈತರು ಉಪಸ್ಥಿತರಿದ್ದರು.

ಪರಿಣತರ ತಂಡ ರಚನೆ: ಸಚಿವ

ಬೆಂಗಳೂರಿನಲ್ಲಿ ಸಚಿವ ಎಂ.ಬಿ ಪಾಟೀಲರ ನೇತೃತ್ವದಲ್ಲಿ ಗುರುವಾರ ಸಸಾಲಟ್ಟಿ ಏತ ನೀರಾವರಿ ಹೋರಾಟಗಾರರ ನಡುವೆ ಸಭೆ ನಡೆಯಿತು. ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಸಸಾಲಟ್ಟಿ ಯೋಜನೆಯನ್ನು ಮಾಡಬಾರದು ಎಂಬ ಉದ್ದೇಶ ಸರ್ಕಾರಕ್ಕಿಲ್ಲ. ಆದರೆ ಕೃಷ್ಣಾ ನದಿ ಪಾತ್ರದಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ನೀರು ಉಳಿತಾಯವಾಗಬಹುದು ಹಾಗೂ ಉಳಿದ ನೀರಿನಲ್ಲಿ ಎಷ್ಟು ಪ್ರಮಾಣದ ನೀರನ್ನು ಹೇಗೆ ಬಳಸಿಕೊಳ್ಳಬಹುದು ಎಂದು ಅಂದಾಜು ಲೆಕ್ಕಹಾಕಬೇಕು. ಇದಕ್ಕಾಗಿ ಸರ್ಕಾರದ ಪರವಾಗಿ 5 ಜನ ಪರಿಣತರ ತಂಡ ರಚಿಸಿ ಅವರ ಅಭಿಪ್ರಾಯದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು

ಈ 5 ಜನ ಸದಸ್ಯರ ನೇಮಕಾತಿಯನ್ನು ನೀರಾವರಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಉಳಿದ ನಾಲ್ಕು ಜನ ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನೊಳಗೊಂಡತೆ ಸಮಿತಿ ರಚಿಸಿ ಜ.15ರೊಳಗೆ ವರದಿ ಸಲ್ಲಿಸುವಂತೆ ಸಚಿವರು ಆದೇಶಿಸಿದರು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ರಾಜ್ಯ ರೈತ ಸಂಘಟನೆಯ ಸಂಚಾಲಕ ಗಂಗಾಧರ ಮೇಟಿ ದೂರವಾಣಿಯಲ್ಲಿ ‘ಪತ್ರಿಕೆಗೆ’ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT