ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತ್ತು ಕಳೆದುಕೊಂಡ ಬುಗುರಿ ಆಟ

Last Updated 29 ಡಿಸೆಂಬರ್ 2017, 8:17 IST
ಅಕ್ಷರ ಗಾತ್ರ

ವಿಜಯಪುರ: ಕ್ರಿಕೆಟ್ ಆರ್ಭಟದ ನಡುವೆ ಈಗಲೂ ಉಳಿದಿರುವ ಆಟ ‘ಬುಗುರಿ‌’. ಇದಕ್ಕೆ ಬೇಕಾಗಿರುವುದು ಕೇವಲ ಒಂದು ಬುಗುರಿ ಮತ್ತು ಅದನ್ನು ತಿರುಗಿಸಿಲು ಒಂದು ಚಾಟಿ. ಒಂದು ತುದಿಯಲ್ಲಿ ಮೊಳೆ ಹೊಂದಿರುವ, ಒಂದು ಬಗೆ ಗುಂಡನೆ ಮರದ ಆಟಿಕೆ. ಬಾಲಕರಿಗೆ ಈ ಆಟ ಬಲು ಅಚ್ಚು ಮೆಚ್ಚು.

ಈಗೆಲ್ಲಾ ಕ್ರಿಕೆಟ್, ಮೊಬೈಲ್ ಗೇಮ್‌ಗಳನ್ನು ಆಡುವುದರಲ್ಲಿ ಮಕ್ಕಳು, ಯುವಕರು ನಿರತರಾಗಿದ್ದಾರೆ. ‌ಕೊಕ್ಕೊ, ಕಬಡ್ಡಿ, ವಾಲಿಬಾಲ್, ಕುಂಟೆಬಿಲ್ಲೆ, ಚೌಕಾಬಾರ, ಮರಕೋತಿ ಆಟ ಮುಂತಾದ ಬಾಲಕರಲ್ಲಿ ಒಗ್ಗಟ್ಟು ಮೂಡಿಸುತ್ತಿದ್ದ ಬಹುತೇಕ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಈ ಸಾಲಿಗೆ ಬುಗರಿ ಆಟವೂ ಸೇರಿದೆ ಎಂದು ಕ್ರೀಡಾಪಟು ಆನಂದ್ ಬೇಸರ ವ್ಯಕ್ತಪಡಿಸಿದ್ದಾರೆ.

ಬುಗುರಿಗೆ ದಾರ ಸುತ್ತಿ ನೆಲದಲ್ಲಿ ಅದು ತಿರುಗುವ ಹಾಗೆ ಬಿಡುವ ಆಟವೇ ಬುಗುರಿಯಾಟ. ಹೀಗೆ ಸುತ್ತುವ ದಾರಕ್ಕೆ ಚಾಟಿ ಎಂದು ಕರೆಯುತ್ತಾರೆ. ಸುತ್ತಿದ ಚಾಟಿಯನ್ನು ಒಮ್ಮೆಲೇ ಜೋರಾಗಿ ಬಿಚ್ಚುವುದರಿಂದಾಗಿ ಉಂಟಾಗುವ ‘ಪ್ರಚ್ಚನ್ನ’ ಶಕ್ತಿಯು ಬುಗುರಿ ತಿರುಗುವಂತೆ ಮಾಡುತ್ತದೆ. ಬುಗುರಿಯಾಟವನ್ನು ಒಂದು ಜಾನಪದ ಕ್ರೀಡೆಯಾಗಿ ಗುರುತಿಸಬಹುದು.

ಆಟದ ಆರಂಭದಲ್ಲಿ ಒಂದು ಅಡಿ ವ್ಯಾಸದ ವೃತ್ತ ಎಳೆಯುತ್ತಾರೆ. ಅದರ ಮಧ್ಯದಲ್ಲಿ ಒಂದು ಮರದ ಚೂರನ್ನಾಗಲಿ, ಮರದ ಕಡ್ಡಿಯನ್ನಾಗಲೀ ಇಡುತ್ತಾರೆ. ಇದನ್ನು ಯಾರಾದರೊಬ್ಬರು ಸುತ್ತುತ್ತಿರುವ ಬುಗುರಿಯಿಂದ ವೃತ್ತದಿಂದ ಹೊರಗೆ ತಳ್ಳಬೇಕು. ಈ ರೀತಿ ತಳ್ಳಿದ ನಂತರ ಎಲ್ಲರೂ ಬುಗುರಿಯನ್ನು ನೆಲದ ಮೇಲೆ ಬಿಟ್ಟು ಆಡುತ್ತಿರುವ ಬುಗುರಿಯನ್ನು ದಾರದ ಸಹಾಯದಿಂದ ಮೇಲಕ್ಕೆ ಎಸೆದು ನೆಲದ ಮೇಲೆ ಬೀಳಿಸದ ಹಾಗೆ ಕೈಗಳಿಂದ ಹಿಡಿದು ‘ಅಪೀಟ್’ ಎನ್ನುತ್ತಾರೆ.

ಯಾರು ಕೊನೆಯಲ್ಲಿ ಎತ್ತುತ್ತಾರೋ ಅವರು ಸೋತಂತೆ. ಸೋತವರು ಬುಗುರಿಯನ್ನು ವೃತ್ತದೊಳಗಡೆ ಇಡಬೇಕು. ಉಳಿದವರು ವೃತ್ತದಲ್ಲಿರುವ ಬುಗುರಿಗೆ ಸರದಿಯ ಪ್ರಕಾರವಾಗಿ ಹೊಡೆಯುತ್ತಿರಬೇಕು. ಈ ರೀತಿ ಹೊಡೆಯುತ್ತಿರುವಾಗ ವೃತ್ತದಲ್ಲಿರುವ ಬುಗುರಿಯು ಹೊರಗಡೆ ಹೋದರೆ ತಕ್ಷಣ ಎಲ್ಲರೂ (ಸೋತವರು ಸೇರಿದಂತೆ) ‘ಅಪೀಟ್’ ಎತ್ತುತ್ತಾರೆ.

ಕೊನೆಯಲ್ಲಿ ಎತ್ತಿದವರು ಸೋತಂತೆ. ವೃತ್ತದಲ್ಲಿರುವ ಬುಗುರಿಗೆ ಹೊಡೆಯುವಾಗ ಒಂದು ವೇಳೆ ಹೊಡೆದವರ ಬುಗುರಿ ಸುತ್ತದಿದ್ದರೆ ಎಲ್ಲರೂ ಕೂಡಲೇ ಅಪೀಟ್ ಎತ್ತಬೇಕು. ಯಥಾಪ್ರಕಾರ ಕೊನೆಯಲ್ಲಿ ಎತ್ತಿದವರು ಸೋತಂತೆ. ಹೊಡೆದವರ ಬುಗುರಿ ಅಕಸ್ಮಾತ್ತಾಗಿ ವೃತ್ತದೊಳಗಡೆ ಸುತ್ತುತ್ತಿದ್ದರೆ ಸೋತಿರುವ ಆಟಗಾರ ತಕ್ಷಣ ಆ ಬುಗುರಿಯನ್ನು ಕೈಯಿಂದ ಹಿಡಿಯುತ್ತಾರೆ.

ಆಗ ಎರಡು ಬುಗುರಿಗಳನ್ನು ವೃತ್ತದೊಳಗಡೆ ಇಟ್ಟು ಅನಂತರ ಉಳಿದವರು ಸರದಿಯ ಪ್ರಕಾರ ಆ ಎರಡು ಬುಗುರಿಗಳಿಗೆ ಹೊಡೆಯುತ್ತಾರೆ. ಅವುಗಳು ವೃತ್ತದಿಂದ ಹೊರಗಡೆ ಹೋದರೆ ಎಲ್ಲರೂ ಅಪೀಟ್ ಎತ್ತಬೇಕು. ನಿಧಾನವಾಗಿ ಅಪೀಟ್ ಎತ್ತಿದವರು ಸೋತಂತೆ. ಇಂತಹ ಆಟಗಳೆಲ್ಲಾ ಕಣ್ಮರೆಯಾಗಿ, ಯುವ ಜನರು ಜಡತ್ವ ಸ್ಥಿತಿಗೆ ತಲುಪಿದ್ದಾರೆ ಎಂದು ವಾಲಿಬಾಲ್ ಕ್ರೀಡಾಪಟು ಜಗದೀಶ್ ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT