ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನ್ನೆಚ್ಚರಿಕೆಯಾಗಿ ರಮೇಶ್, ಯಶವಂತರಾಜು ಬಂಧನ: ಟೀಕೆ

Last Updated 29 ಡಿಸೆಂಬರ್ 2017, 9:11 IST
ಅಕ್ಷರ ಗಾತ್ರ

ಹಿರಿಯೂರು: ‌ನಗರಕ್ಕೆ ಮುಖ್ಯಮಂತ್ರಿ ಬಂದಾಗ ತೊಂದರೆಯಾದೀತು ಎಂದು ರೈತ ಹೋರಾಟಗಾರರಾದ ಕಸವನಹಳ್ಳಿ ರಮೇಶ್ ಹಾಗೂ ಜಿ.ಪಿ. ಯಶವಂತರಾಜು ಅವರನ್ನು ಪೊಲೀಸರು ಗುರುವಾರ ಗೃಹ ಬಂಧನದಲ್ಲಿ ಇರಿಸಿದ್ದು, ಇದಕ್ಕೆ ಟೀಕೆ ವ್ಯಕ್ತವಾಗಿದೆ.

ಅರಣ್ಯ ಭೂಮಿ ಸಾಗುವಳಿ ಮಾಡಿಕೊಂಡು ಬರುತ್ತಿರುವ ಬಡವರಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ನಡೆಯುತ್ತಿದ್ದ ಹೋರಾಟದಲ್ಲಿ ರಮೇಶ್ ಮುಂಚೂಣಿಯಲ್ಲಿದ್ದರು. ಇಂದಿರಾ ಕ್ಯಾಂಟೀನ್ ಸ್ಥಳ ಬದಲಾಯಿಸಬೇಕು, ಹಕ್ಕುಪತ್ರ ನೀಡಬೇಕು ಎಂಬ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಕಪ್ಪು ಪಟ್ಟಿ ಪ್ರದರ್ಶಿಸಿ ಮುಜುಗರ ಉಂಟು ಮಾಡಬಹುದು ಎಂದು ಕಸವನಹಳ್ಳಿಯ ಅವರ ಮನೆಯಲ್ಲಿ ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಗೃಹ ಬಂಧನದಲ್ಲಿ ಇಡಲಾಗಿತ್ತು ಎಂದು ತಿಳಿದುಬಂದಿದೆ.

ಬರಗಾಲದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿದ ಬಾಬ್ತು ಹಣ ನೀಡುವಂತೆ ಆಗ್ರಹಿಸಿದ ಡಿ. 21ರಿಂದ ನಡೆಯುತ್ತಿದ್ದ ಹೋರಾಟದ ನೇತೃತ್ವವನ್ನು ಯಶವಂತರಾಜು ವಹಿಸಿದ್ದರು. ಮುಖ್ಯಮಂತ್ರಿ ಕಾರ್ಯಕ್ರಮದ ಮುನ್ನಾದಿನ ಶಾಸಕರ ಭರವಸೆಗೂ ಮಣಿಯದೆ ಹೋರಾಟ ಮುಂದುವರಿಸಿದ್ದರಿಂದ ಅವರನ್ನು ಪೊಲೀಸರು ಬಂಧಿಸಿದರು. ಮೇಟಿಕುರ್ಕೆ ಗ್ರಾಮದ ಅರಣ್ಯ ಇಲಾಖೆ ಪ್ರವಾಸಿ ಮಂದಿರದಲ್ಲಿ ಇರಿಸಿ, ರಾತ್ರಿ 8.25ಕ್ಕೆ ಬಿಡುಗಡೆ ಮಾಡಿದ್ದಾರೆ.

ಪೊಲೀಸರ ಕ್ರಮಕ್ಕೆ ಟೀಕೆ: ‘ಭೂರಹಿತ ಬಡವರ ಪರವಾಗಿ ಎರಡು ವರ್ಷಗಳಿಂದ ಗಾಂಧೀಮಾರ್ಗದಲ್ಲಿ ಹೋರಾಟ ನಡೆಸಿಕೊಂಡು ಬರುತ್ತಿದ್ದ ನನ್ನನ್ನು ಬಂಧಿಸಿ, ಸಂವಿಧಾನಕ್ಕೆ ಅಪಚಾರ ಎಸಗಲಾಗಿದೆ. ಸಂವಿಧಾನದ ಪಾವಿತ್ರ್ಯದ ಬಗ್ಗೆ ಮಾತನಾಡುವ ಸಿ.ಎಂ ಇದಕ್ಕೆ ಏನು ಹೇಳುತ್ತಾರೆ? ಅನ್ಯಾಯದ ವಿರುದ್ಧ ದನಿ ಎತ್ತುವ ಹಕ್ಕು ಜನರಿಗೆ ಇಲ್ಲವೆ? ಇವರು ನಡೆಸಿದ ಬಳ್ಳಾರಿ ಪಾದಯಾತ್ರೆಯನ್ನು ಒಂದು ವೇಳೆ ತಡೆದಿದ್ದರೆ ಇವರೆಲ್ಲ ಭೂಮಿ, ಆಕಾಶ ಒಂದು ಮಾಡುತ್ತಿರಲಿಲ್ಲವೇ? ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕೆ ಗೃಹಬಂಧನ ವಿಧಿಸಿದ್ದು ಸರಿಯೆ?’ ಎಂದು ರಮೇಶ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಕ್ಷೇತ್ರದಲ್ಲಿ ₹ 672 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮಾಡಲು ಬಂದಿದ್ದ ಮುಖ್ಯಮಂತ್ರಿ ಅವರಿಗೆ ಬರಗಾಲದಲ್ಲಿ ಬಾಯಾರಿದ ಜನರಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಿದ ಬಾಬ್ತು ಕೊಡಲು ಆಗುವುದಿಲ್ಲವೇ ಎಂದು ನಾವು ಕೇಳಬೇಕಿತ್ತು. ಇದರಲ್ಲಿ ಅದ್ಯಾವ ಕಾನೂನು ತೊಡಕಿದೆಯೋ ತಿಳಿದಿಲ್ಲ’ ಎಂದು ಯಶವಂತರಾಜು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಚುನಾವಣಾ ಕಾರ್ಯಕ್ರಮ: ಹಿರಿಯೂರಿನಲ್ಲಿ ಬುಧವಾರ ನಡೆದದ್ದು ಸರ್ಕಾರದ ಸಾಧನಾ ಸಮಾವೇಶವಲ್ಲ; ಸರ್ಕಾರದ ದುಡ್ಡಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ.ಇಡೀ ಕಾರ್ಯಕ್ರಮವನ್ನು ಬಿಜೆಪಿ ನಾಯಕರನ್ನು ನಿಂದಿಸಲು ಬಳಸಿಕೊಂಡಿದ್ದು ಸಿದ್ದರಾಮಯ್ಯ ಅವರ ನೈತಿಕ ದಿವಾಳಿತನ ತೋರಿಸುತ್ತದೆ ಎಂದು ರಾಜ್ಯ ಬಿಜೆಪಿ ಒಬಿಸಿ ವಿಭಾಗದ ಉಪಾಧ್ಯಕ್ಷ ಡಿ.ಟಿ. ಶ್ರೀನಿವಾಸ್ ಹೇಳಿಕೆ ಮೂಲಕ ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT