ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆದ ಮಗಳಿಗೆ ಅಮ್ಮನಾಗುವ ಬೆರಗು

Last Updated 30 ಡಿಸೆಂಬರ್ 2017, 8:57 IST
ಅಕ್ಷರ ಗಾತ್ರ

ಹದಿನಾರು ದಾಟಿದ ಮಗಳು ಮೊದಲಿನ ಲವಲವಿಕೆ ತುಂಟಾಟ ಬಿಟ್ಟು ಹೆಚ್ಚು ಹೊತ್ತು ಗಂಭೀರವಾಗಿರಲು ಕಲಿತಿದ್ದಾಳೆ ಅಂದರೆ, ಅವಳಲ್ಲಿ ಇತ್ತ ತೀರ ದೊಡ್ಡವಳೂ ಅಲ್ಲದ ಅತ್ತ ತೀರ ಚಿಕ್ಕವಳೂ ಅಲ್ಲದ ಭಾವವೊಂದು ಮನೆ ಮಾಡುತ್ತಿದೆ ಎಂದೇ ಅರ್ಥ. ಪ್ರತಿ ವಿವೇಚನಾಶೀಲ ಮನುಷ್ಯನ ಬೆಳವಣಿಗೆಯ ಮಾನಸಿಕ ಹಂತದಲ್ಲಿ ನಾಲ್ಕು ಭಾವಗಳು ಹಾದು ಹೋಗುತ್ತವಂತೆ. ಮೊದಲ ಹಂತದಲ್ಲಿ ನಾನೆಷ್ಟು ಒಳ್ಳೆಯವಳು, ಇತರರು ನನ್ನನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ ಎಂಬುದು.

ಎರಡನೆಯ ಹಂತದಲ್ಲಿ, ನನಗೆ ನಾನೂ ಅರ್ಥವಾಗುತ್ತಿಲ್ಲ, ಇತರರೂ ಅರ್ಥವಾಗುತ್ತಿಲ್ಲ ಅನಿಸುತ್ತದಂತೆ. ಮೂರನೆಯ ಹಂತದಲ್ಲಿ ಎಲ್ಲರೂ ಅವರಷ್ಟಕ್ಕೇ ಅವರು ಸರಿಯಾಗಿ ಇದ್ದಾರೆ, ನಾನೇ ಸರಿಯಾಗಿಲ್ಲ ಅನಿಸುತ್ತದಂತೆ. ಅದೇ ಮನಃಸ್ಥಿತಿ ನಾಲ್ಕನೇ ಹಂತ ತಲುಪಿದರೆ, ನನ್ನದೂ ತಪ್ಪಿಲ್ಲ ಇತರರದೂ ತಪ್ಪಿಲ್ಲ ಎಂಬ ವಿಶಾಲಭಾವ ಆವರಿಸುತ್ತದಂತೆ. ಈ ನಾಲ್ಕನೇ ಹಂತದವರೆಗಿನ ಮಗಳ ಭಾವ ಜಗತ್ತನ್ನು ಹಿಡಿದಿಟ್ಟುಕೊಳ್ಳುವುದು ಅಥವಾ ಕಾಲಕಾಲಕ್ಕೆ ಇದರ ತಿಳಿವಳಿಕೆ ಮೂಡಿಸಿ ಮಗಳಲ್ಲಿ ಆತ್ಮವಿಶ್ವಾಸ ತುಂಬುವುದು ತಾಯಿಯಾದವಳ ಆದ್ಯ ಕರ್ತವ್ಯಗಳಲ್ಲೊಂದು.

ಹದಿಹರೆಯದ ಹೆಣ್ಣುಮಕ್ಕಳನ್ನು ಸಹಜವಾಗಿ ಆವರಿಸುವ ಖಿನ್ನತೆಯ ಈ ಹಂತದಲ್ಲಿ ಅಪಾಯಕಾರಿಯಾದ ಬೆಳವಣಿಗೆಯನ್ನು ನಾವು ಕಡೆಗಣಿಸಕೂಡದು. ಈಗಿನ ಕೆಲ ತಾಯಂದಿರು ಏಕ್ತಾ ಕಪೂರ್‌ಳ ಅತ್ತೆ–ಸೊಸೆಯರ ಹುಚ್ಚು ವಿರಸದ ಧಾರಾವಾಹಿಗಳಲ್ಲಿ ತೋರಿಸುವ ದ್ವೇಷ, ಅಸೂಯೆ, ಕೌಟುಂಬಿಕ ಕಲಹ ರಾದ್ಧಾಂತಗಳನ್ನು ಹೀರುತ್ತ ಕೂತು, ಜೊತೆಯಲ್ಲಿ ಬಾಳಿ ಬದುಕ ಬೇಕಾದ ಮಗಳನ್ನೂ ಕೂಡಿಸಿಕೊಂಡು ಅವೇ ಅವೇ ಸಂಗತಿಗಳ ಕುರಿತು ಪುನಃ ಪುನಃ ಚರ್ಚಿಸುತ್ತ ಅತ್ತ ಅಮ್ಮನೂ ಮಾನಸಿಕವಾಗಿ ಬೆಳೆಯದೆ ಇತ್ತ ಮಗಳಿಗೂ ಬೆಳೆಯಲು ಅವಕಾಶ ಕೊಡದೆ, ತಮ್ಮಲ್ಲಿದ್ದ ಮೌಢ್ಯವನ್ನು ಮಗಳಿಗೂ ವರ್ಗಾಯಿಸಿ ಅವಳ ಭವಿಷ್ಯಕ್ಕೆ ಮಾರಕವಾಗುವುದನ್ನು  ಕಾಣುತ್ತೇವೆ.

ತಾಯಂದಿರ ಏಕಮಾತ್ರ ಮುಖ್ಯ ಕಾಳಜಿಯೆಂದರೆ ಮಗಳ ಕುರಿತಾದ ಚಾರಿತ್ರ್ಯಕ್ಕೆ ಸಂಬಂಧಪಟ್ಟದ್ದು. ಅದನ್ನು ಹೊರತುಪಡಿಸಿಯೂ ಅವಳ ಬೆಳವಣಿಗೆಗೆ ಇನ್ನೂ ಅನೇಕ ವಿಚಾರಗಳಿರುತ್ತವೆಯೆಂಬುದನ್ನೆ ನಾವು ಮರೆತುಬಿಡುತ್ತೇವೆ. ಊಟ, ತಿಂಡಿ, ಬಟ್ಟೆ – ಹೊತ್ತು ಹೊತ್ತಿಗೆ ಒದಗಿಸುವುದಷ್ಟೇ ನಮ್ಮ ಕರ್ತವ್ಯವೆಂಬ ಭ್ರಮೆಯಲ್ಲೇ ನಾವಿರುತ್ತೇವೆ. ನಮ್ಮ ಅಂತರಂಗದಲ್ಲಿ ಮಗಳಿಗೆ ಎಂಥ ಸ್ಥಾನವನ್ನು ನಾವು ದಯಪಾಲಿಸಿದ್ದೇವೆ ಎಂಬುದೆಲ್ಲ ನಮಗೆ ಗೌಣವಾಗಿರುತ್ತದೆ. ಆ ಮಗಳಿಗೆ ಒಬ್ಬ ಅಣ್ಣನೋ ತಮ್ಮನೋ ಇದ್ದರಂತೂ ಮುಗಿದೇ ಹೋಯಿತು. ಅವನನ್ನು ಸರ್ವಶ್ರೇಷ್ಠನನ್ನಾಗಿ ಬೆಳೆಸುವ ಮಹತ್ವಾಕಾಂಕ್ಷೆಯಲ್ಲಿ ಮಗಳ ವ್ಯಕ್ತಿತ್ವವನ್ನು ಭಗ್ನಗೊಳಿಸುತ್ತ ಮಾತು ಮಾತಿಗೆ ‘ಅವನು ಹುಡುಗ' ಎಂದು ತಿವಿಯುತ್ತ ದೊಡ್ಡಸ್ತಿಕೆ ಮೆರೆಯುವ ತಾಯಿಯೆ ಈ ಸಮಾಜದಲ್ಲಿ ಮುಗ್ಧ ಮಗಳಿಗೆ ಖಾಸಾ ವೈರಿ.

ಎಲ್ಲಕ್ಕೂ ಮೂಲದಲ್ಲಿ ಅವಳ ಸಮಸ್ಯೆಗಳೇನು? ಅದು ಸಾಮಾಜಿಕವಾದುದ್ದೆ? ಆರ್ಥಿಕವಾದುದ್ದೆ? ಮಾನಸಿಕವಾದುದ್ದೆ? ಅಥವಾ ಶೈಕ್ಷಣಿಕವಾದುದ್ದೆ? - ಎಂಬುದನ್ನು ಅಮ್ಮನಾದವಳು ಮೊದಲು ಅರಿಯಬೇಕಾಗುತ್ತದೆ. ಎಲ್ಲ ಹದಿಹರೆಯದ ಹೆಣ್ಣುಮಕ್ಕಳಲ್ಲೂ ಖಿನ್ನತೆ ಆವರಿಸಲು ಈ ಮೇಲಿನ ಒಂದಿಲ್ಲೊಂದು ಕಾರಣ ಇದ್ದೇ ಇರುತ್ತದೆ. ಅವಳನ್ನು ಆದಷ್ಟು ಒಂಟಿಯಾಗಿರಲು ಬಿಡದೇ ಅಮ್ಮನ ಮಾನಸಿಕ ಬೆಂಬಲ ಅವಳ ಜೊತೆಗಿರಬೇಕಾಗುತ್ತದೆ. ತಾನಿನ್ನೂ ಚಿಕ್ಕವಳು ಅನ್ನಿಸುತ್ತಿರುವಾಗ 'ಇಷ್ಟು ದೊಡ್ಡವಳಾಗಿದ್ದೀ, ಅಷ್ಟೂ ಗೊತ್ತಾಗುವುದಿಲ್ಲವೇ?' ಎಂದು ಗದರುತ್ತೇವೆ. ಅಥವಾ ಅವಳು ತಾನಿನ್ನು ದೊಡ್ಡವಳಾದೆ ಎಂದು ಸಂಭ್ರಮಿಸುವಾಗ 'ಸುಮ್ಮನಿರು ನೀನಿನ್ನೂ ಚಿಕ್ಕವಳು, ನಿನ್ನ ಭವಿಷ್ಯ ನಾವೇ ತೀರ್ಮಾನಿಸುವುದು' ಎಂದೆಲ್ಲ ಅವಳನ್ನು ದೊಡ್ಡ ಅನುಮಾನಕ್ಕೆ ಈಡು ಮಾಡಿಬಿಡುತ್ತೇವೆ. ಆಗಲೇ ಶುರುವಾಗುವುದು ತಾಯಿ ಮತ್ತು ಮಗಳ ನಡುವಿನ ಸಂಘರ್ಷ. ಆಗ ಅವಳು ಇಡಿ ದಿನ ಅಮ್ಮನೊಡನೆ ಒಂದು ಮಾತನ್ನೂ ಆಡದೇ ಇದ್ದುಬಿಡಲು ಕಲಿಯುತ್ತಾಳೆ.

ಅವಳ ಯೋಚನೆಯ ದಾರಿಯೇ ಬೇರೆ. ಅಮ್ಮನ ವಿಚಾರಗಳ ಹಳಿಯೇ ಬೇರೆ. ಇವೆಲ್ಲ ತಲೆಮಾರುಗಳ ಅಂತರದಿಂದ ತಲೆದೋರುವ ಬಿಕ್ಕಟ್ಟುಗಳು. ಇಬ್ಬರ ತುಮುಲಗಳೂ ಒಂದಕ್ಕೊಂದು ತಾಳೆಯಾಗುವುದೇ ಇಲ್ಲ. ಎದುರಿಗೆ ನಡೆಯುವ ಅನೇಕ ಸಂಗತಿಗಳು ಮಗಳಿಗೆ ಅಸಹಜ ಅಪ್ರಮಾಣಿಕವೆನಿಸಲು ಶುರು. ಆಗ ತುಂಬ ಜನ ಸೇರುವ ಸಂಬಂಧಿಕರ ಕಾರ್ಯಕ್ರಮಗಳಿಗೆ ಅವಳು ಎಂಥದ್ದೋ ನೆಪ ಹೇಳಿ ಅಮ್ಮನೊಂದಿಗೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಾಳೆ.

ಹರೆಯದ ಹೆಣ್ಣುಮಕ್ಕಳ ಮನಸ್ಸು ಹೂವಿನಷ್ಟು ಮೃದು. ಅದಕ್ಕೆ ಒಮ್ಮೆ ಈಟಿಯ ಇರಿತ ತಟ್ಟಿದರೂ ಸಾಕು ಅವಳು ಕೈತಪ್ಪಿ ಹೋಗುತ್ತಾಳೆ. ಸರಿ–ತಪ್ಪುಗಳ ಕುರಿತು ಮೃದುವಾಗಿ ಸರಿಯಾದ ತಿಳಿವಳಿಕೆ ನೀಡುವುದು, ಅವಳ ದೈನಂದಿನ ಗಳಿಗೆಯಲ್ಲಿ ಸಾಧ್ಯವಾದಷ್ಟು ಹೆಚ್ಚು ಹೊತ್ತು ಅವಳೊಂದಿಗಿರುವುದು, ಅವಳಿಗೆ ತಾನು ಒಂಟಿಯೆನ್ನಿಸದ ಹಾಗೆ ಪೊರೆಯುವುದನ್ನು ತಾಯಿಯಾದವಳೇ ಮಾಡಬೇಕು. ಕೆಲವು ಸಂದರ್ಭಗಳಲ್ಲಿ ಕುಟುಂಬದ ಎಲ್ಲರ ಸಹಕಾರ ಬೇಕಾಗಿದ್ದರೂ ತಾಯಿಯ ಅಂತರ್ಯದ ಬೆಚ್ಚಗೆ ಅನುಭೂತಿ ಮಗಳಿಗೆ ಅಗತ್ಯವಿರುತ್ತದೆ.

ಹದಿಹರೆಯದ ಮಗಳ ಮೊಬೈಲಿನಲ್ಲಿರುವ ಇನ್‍ಬಾಕ್ಸನ್ನು ಅವಳಿಗೆ ಕಾಣದಂತೆ ಕದ್ದು ಓದುವ ತಾಯಂದಿರು ನಮ್ಮಲ್ಲಿ ಬಹಳಷ್ಟಿದ್ದಾರೆ. ಆದರೆ ಅವಳ ಎದುರು ಆ ಇನ್‍ಬಾಕ್ಸನ್ನು ಪರೀಕ್ಷಿಸುವಷ್ಟು ಅಂತರಂಗದ ಸ್ನೇಹಿತೆಯಾಗಿರುವುದು ಅಪರೂಪ. ಅವಳ ವಸ್ತ್ರವಿನ್ಯಾಸದಿಂದ ಹಿಡಿದು ಅವಳ ಊಟ, ತಿಂಡಿ ಆಹಾರಾದಿಯಾಗಿ ಮೆಚ್ಚಿಗೆ ಮಾತನ್ನು ಹೇಳಿ, ಹುರಿದುಂಬಿಸುತ್ತಲೇ ಅವಳ ಒಳಜಗತ್ತನ್ನು ತಿದ್ದುವಿಕೆಯ ಕ್ರಿಯೆ ಕೂಡ ನಿರಂತರವಾಗಿ ಸಾಗಿರಬೇಕಾಗುತ್ತದೆ.

ಅವಳು ಕೂಡುವ, ನಿಲ್ಲುವ, ನಡೆಯುವ, ಮಾತಾಡುವ, ಉಣ್ಣುವ, ಮಲಗುವ, ಶೃಂಗಾರ ಮಾಡಿಕೊಳ್ಳುವ – ಪ್ರತಿಯೊಂದಕ್ಕೂ ನಮ್ಮ ಮೆಚ್ಚುಗೆಯನ್ನು ಹೇಳುತ್ತಲೇ ಒಬ್ಬ ಜಾಣ ತಾಯಿಯು ಮಗಳನ್ನು ತನ್ನ ಅಂತರಂಗದ ಗೆಳತಿಯನ್ನಾಗಿಸಿಕೊಳ್ಳಬಹುದು. ಎಷ್ಟೋ ಬಾರಿ ಮಗಳು ಮಗಳಷ್ಟೇ ಆಗಿರುವುದಿಲ್ಲ. ಅವಳು ಕೆಲವು ಸಂದರ್ಭದಲ್ಲಿ ಅಮ್ಮನನ್ನು ಆಪ್ತ ಗೆಳತಿಯಂತೆಯೂ ಪೊರೆಯಬಲ್ಲಳು. ಅಮ್ಮ ತನ್ನ ಅನುಭವಗಳನ್ನು ಹೇಳುತ್ತಲೇ ಮಗಳ ಅನುಭವದ ಭಾಗವಾಗಬಲ್ಲಳು. ಮಾಗಿದ ಅಮ್ಮನ ಅನುಭವದಿಂದಲೇ ಮಗಳು ಬಹಳಷ್ಟನ್ನು ಕಲಿಯುತ್ತಾಳೆ. ಒಬ್ಬ ಅಮ್ಮ ಸ್ವಂತ ತನ್ನ ಗಂಡನ ಹತ್ತಿರ ಹೇಳಿಕೊಳ್ಳಲಾಗದ ಕೆಲವು ಸಾಮಾಜಿಕ ವಿಡಂಬನೆಗಳನ್ನು ಹದಿಹರೆಯದ ಮಗಳ ಬಳಿ ಚರ್ಚಿಸುವ ಅವಕಾಶವಿರುತ್ತದೆ. ಹೀಗಾದಾಗ ಅವಳ ಚಿತ್ತದಲ್ಲಿ ಈ ಸಮಾಜದ ಬಗ್ಗೆ ಈ ವ್ಯವಸ್ಥೆಯ ಬಗ್ಗೆ ಹುಟ್ಟುವ ಅನೇಕ ಕಟುಸತ್ಯಗಳನ್ನು ಮನದಟ್ಟು ಮಾಡಿಕೊಡಲು ಸಹಾಯಕವಾಗುತ್ತದೆ.

ಅಮ್ಮನಾದವಳಿಗೆ ಮಗಳ ಆಗುಹೋಗುಗಳ ವಿಚಾರವಿನಿಮಯಕ್ಕೆ ಸಮಯವಿರಬೇಕು. ಎಂಥದೇ ಪರಿಸ್ಥಿತಿಯಲ್ಲೂ ಅಮ್ಮನ ಆತ್ಮೀಯ ವಲಯದಿಂದ ಅವಳನ್ನು ಆಚೆ ಹೋಗಲು ಬಿಡಬಾರದು. ಮಗಳಿಗೆ ದುಃಖವಾದಾಗ ಅಸಮಾಧಾನವಾದಾಗ ಬಳಿಯೇ ಇದ್ದು ಅವಳ ಅಹವಾಲನ್ನು ಆಲಿಸಬೇಕು. ಅವಳ ಅಗತ್ಯಗಳನ್ನು ಒದಗಿಸುವ ಹಂತದಲ್ಲಿ ಪ್ರಾಮಾಣಿಕವಾಗಿರಬೇಕು. ಪ್ರೀತಿ–ಪ್ರೇಮ ಅನುಬಂಧಗಳನ್ನು ಕೊಟ್ಟು ಪಡೆಯಬೇಕೇ ಹೊರತು ಎಲ್ಲದಕ್ಕೂ ಪರಸ್ಪರ ದೂರು ದಾಖಲಿಸುವ ರೂಢಿಯಾಗಬಾರದು.

ತಿಳಿವಳಿಕೆ ಮೂಡಿಸುವ ಕ್ರಿಯೆಯಲ್ಲಿ ನಾವೆಷ್ಟು ಸೂಕ್ಷ್ಮಮತಿಗಳಾಗಿದ್ದೇವೆ ಎಂಬುದೇ ಅಲ್ಲಿ ಮಹತ್ವದ್ದು. ತನ್ನೆಲ್ಲ ದೈನಿಕದ ವ್ಯವಹಾರಗಳನ್ನು ಅವಳು ದಿನಕ್ಕೊಮ್ಮೆ ಅಥವಾ ವಾರಕ್ಕೊಮ್ಮೆಯಾದರೂ ತಾಯಿಯೊಡನೆ ಹೇಳಿಕೊಳ್ಳುವ ಹಂಚಿಕೊಳ್ಳುವ ಸ್ನೇಹಸಂಬಂಧವನ್ನು ಅನುದಿನ ಪೋಷಿಸಿಕೊಂಡು ಬರಬೇಕಾಗುತ್ತದೆ. ನಿನ್ನೊಟ್ಟಿಗಿದ್ದೇನೆ, ಯಾವುದೇ ಪರಿಸ್ಥಿತಿಯಲ್ಲೂ ನಿನ್ನೊಂದಿಗಿದ್ದೇನೆ, ಹೇಗೆ ಇದ್ದರೂ ನಿನ್ನ ಹಿತೈಷಿ ಬಂಧುವಾಗಿದ್ದೇನೆ ಎಂಬ ನಂಬಿಕೆ ಮಗಳನ್ನು ಪೊರೆಯುತ್ತಿರಬೇಕು. ಅಂದಾಗ ಮಾತ್ರ ಅವಳು ತನ್ನ ದೈನಿಕದ ಒಂದು ಭಾಗವಾಗಿ ತನ್ನ ಅಮ್ಮನನ್ನು ಭರಿಸಬಲ್ಲಳು.

ಯಾವತ್ತೂ ಮೂಗಿನ ಮೇಲೆ ಕೋಪವಿಟ್ಟುಕೊಂಡಿರುವ ಮಗಳನ್ನು ಆ ಸಿಡುಕಿನ ಸ್ವಭಾವವನ್ನು ಮುದ್ದಾಗಿ ತುಂಟತನವಾಗಿ ಪರಿವರ್ತಿಸುವ ತಾಳ್ಮೆ ತಾಯಿಗಿರಬೇಕಾಗುತ್ತದೆ. ಕೊಂಚ ದೊಡ್ಡ ಬಾಯಲ್ಲಿ ಮಾತಾಡಿದರೂ ಅಮ್ಮನೊಂದಿಗೆ ಮೂರು ದಿನ ಮಾತು ಬಿಡುವ ತರಲೆಯನ್ನು ಒಲಿಸಿಕೊಳ್ಳಲು ಅಮ್ಮನೇ ಕೊನೆಗೂ ಸೋಲಬೇಕಾಗುತ್ತದೆ. ಹೀಗೆ ಸೋತೇ ಮಗಳ ಮನಸ್ಸನ್ನು ಗೆಲ್ಲುವ ಉಪಾಯವನ್ನು ಹುಡುಕಬೇಕಾಗುತ್ತದೆ. ಮಗಳ ಸದ್ಯದ ಸಮಸ್ಯೆಗಳೇನು ಎಂಬುದು ಅಮ್ಮನ ಗ್ರಹಿಕೆಗೆ ಬಂತು ಅಂದರೆ, ಅರ್ಧ ಸಮಸ್ಯೆ ಬಗೆಹರಿದಂತೆಯೇ ಸರಿ. ತುಂಬ ಸೂಕ್ಷ್ಮವಾದ ದಾರಿಯದು. ತನ್ನ ಯಾವ ಮಾತಿನಿಂದ ಮಗಳಿಗೆ ನೋವಾಗುತ್ತದೆ ಎಂಬುದನ್ನು ತಿಳಿದುಕೊಂಡು ಅಂಥದನ್ನು ಮಾತಾಡದೇ ಅಮ್ಮನಾದವಳು ಅವಳನ್ನು ಮೌನದಿಂದಲೇ ಸಲಹಬೇಕಾಗುತ್ತದೆ. ಇದ್ದುದನ್ನು ನುಡಿದರೆ ಅವಳಲ್ಲಿ ಸಹಿಸಲಾರದಷ್ಟು ಕೋಪ ಬರುತ್ತಿರುತ್ತದೆ. ಅಂಥ ಯಾವುದನ್ನೂ ಆಡಿಕೊಳ್ಳದೆ ಹಂತಹಂತವಾಗಿ ಅವಳ ಮನಸ್ಸನ್ನು ಶುದ್ಧಿ ಮಾಡಬೇಕು. ಯಾಕೆಂದರೆ ಕತ್ತಿಯ ಗಾಯವಾದರೂ ಮಾಯಬಹುದು, ಆದರೆ ಮಾತಿನಿಂದ ಮನಸ್ಸಿಗಾದ ಗಾಯ ಮಾಯಲು ಸಾಧ್ಯವಿಲ್ಲ.

ಅರಿತೂ ಅರಿತೂ ಯಾರೂ ಅಡ್ಡ ದಾರಿ ಹಿಡಿಯಲಾರರು. ಅವರಿಗೆ ಹಿತಕರವೂ ಆರೋಗ್ಯಕರವೂ ಆದ ದಾರಿಗಳ ಮಹತ್ವ ತಿಳಿದಿರುವುದಿಲ್ಲ ಅಷ್ಟೇ. ಅವರಿಗೆ ವಾಸ್ತವಗಳ ಕುರಿತು ಅಲ್ಪ ಜ್ಞಾನವಿರುತ್ತದೆ. ಇದು ಅಜ್ಞಾನಕ್ಕಿಂತ ಭೀಕರವಾದುದು. ಕಹಿಯಾದರೂ ಆರೋಗ್ಯಕ್ಕೆ ಹಿತಕಾರಕವಾದ ಕೆಲವು ಮಾನಸಿಕ ಔಷಧಗಳನ್ನು ಆಗಾಗ ಅವರ ಚಿತ್ತದಲ್ಲಿ ಸರಿಯೆನ್ನಿಸುವ ಹಾಗೆ ಸಮಯ ಸಂದರ್ಭ ರೂಪಿಸಿ ಸ್ಪಷ್ಟಪಡಿಸುತ್ತಿರಬೇಕಾಗುತ್ತದೆ. ಅವಳ ಮೇಧಸ್ಸು ಕ್ರಿಯಾಶೀಲವಾಗಿದ್ದರೆ, ಅವಳು ಯಾವತ್ತೂ ಸಂತೋಷದಲ್ಲೇ ಇರುತ್ತಾಳೆ. ಈ ಮಧ್ಯೆಯೂ ನಮಗಿರುವಷ್ಟೇ ಘನತೆ ನಮ್ಮ ಅವಲಂಬಿತರಲ್ಲೂ ಇರುತ್ತದೆ ಎಂಬುದನ್ನು ತಾಯಿ ಮರೆಯಬಾರದು.

ಶಾಲಾ–ಕಾಲೇಜುಗಳ ಅಭ್ಯಾಸದ ವಿಷಯದಿಂದ ಹಿಡಿದು ಸಹಪಾಠಿಗಳು ಶಿಕ್ಷಕರು, ಪರಿಚಿತರು, ಸ್ನೇಹಿತರು – ಎಲ್ಲರೂ ಅವಳಿಗೆ ಅನ್ಯರೇ ಆಗಿದ್ದರೂ ಅಮ್ಮ ಮಾತ್ರ ತನ್ನ ಸ್ವಂತದವಳು ಎಂಬ ಭಾವ ಅವಳಲ್ಲಿ ಸದಾ ಸ್ಫುರಿಸುತ್ತಿರಬೇಕು. ಆಗ ಮಾತ್ರ ಅವಳು ಅಂದು ತನ್ನ ಮೊಬೈಲಿಗೆ ಯಾರು ಯಾರ ಎಸ್‍ಎಂಎಸ್ ಗಳು ಯಾವ್ಯಾವ ರೂಪದಲ್ಲಿ ಬಂದವು, ಯಾವ್ಯಾವ ಹುಡುಗರು ಯಾವ ಸಮಯದಲ್ಲಿ ಫೋನು ಮಾಡಿ ತಮ್ಮ ಹೊಸ ಕವಿತೆಗಳನ್ನು ಓದಿ ಆನಂದಿಸಿದರು ಎಂಬುದನ್ನು ಕೂಡ ಅಮ್ಮನೊಂದಿಗೆ ಹಂಚಿಕೊಳ್ಳಬಲ್ಲಳು.

ಈ ಜಗತ್ತಿನಲ್ಲಿ ಎಲ್ಲರೂ ಅನ್ಯರಾದರೂ ಅಮ್ಮ ಮಾತ್ರ ನನ್ನವಳು ಅಂತ ಯಾವ ಮಗಳಿಗೆ ಅನ್ನಿಸುತ್ತದೆಯೋ ಅಂತಹ ಧೀರ ದಿಟ್ಟ ಹುಡುಗಿ ಎಂದಿಗೂ ಜೀವನದಲ್ಲಿ ನೊಂದು ಜುಗುಪ್ಸೆಯ ಕಡೆಗೆ ವಾಲಲಾರಳು. ಹಾಗೆ ಮಗಳ ವಿಚಾರ ಕೇಂದ್ರದಲ್ಲಿ ಅಮ್ಮನ ಪಾತ್ರ ಬಹುದೊಡ್ಡದು. ಈ ಕಾರಣದಿಂದಲೇ ನೂಲಿನಂತೆ ಸೀರೆ, ಅಮ್ಮನಂತೆ ಮಗಳು ಎಂಬ ನಾಣ್ನುಡಿ ಜನಮಾನಸದಲ್ಲಿ ಸೇರಿಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT