ಹೊಸ ವರ್ಷ

ಹೊಸವರ್ಷಕ್ಕೆ ಪ್ರೇಮದೀವಿಗೆ

ಪ್ರಾಜ್ಞರೊಬ್ಬರ ಮಾತಿನಲ್ಲಿಯೇ ಹೇಳುವುದಾದರೆ ‘ನಮ್ಮ ದೇಹದ ಬೆಳವಣಿಗೆಯೊಂದಿಗೆ ವ್ಯಕ್ತಿತ್ವ ಮತ್ತು ಅಂತರಾತ್ಮವೂ ಬೆಳೆಯುತ್ತಿರುತ್ತದೆ. ಈ ಬೆಳವಣಿಗೆಯ ಜಿಗಿತ ನಮ್ಮ ಪಾಲಿಗೆ ಅದೇ ಬದುಕಿನಲ್ಲಿ ಸಿಕ್ಕಿದ ಮರುಹುಟ್ಟೂ ಆಗಿರುತ್ತದೆ’.

ನಗರದ ಸ್ಯಾಂಕಿ ಟ್ಯಾಂಕ್‌ನಲ್ಲಿ ಗುರುವಾರ ಸಂಜೆ ತಾಯಿ ಮತ್ತು ಮಗು ಸೂರ್ಯಾಸ್ತವನ್ನು ಸಂಭ್ರಮಿಸಿದ ಕ್ಷಣ –ಚಿತ್ರ: ಎಂ.ಎಸ್. ಮಂಜುನಾಥ

ನೋಡಿ, ಅಷ್ಟು ದೂರದಲ್ಲಿ ಹೊಸವರ್ಷ ಮೈಕೊಡವಿಕೊಂಡು ಉದಯಿಸುತ್ತಿದೆ. ಇನ್ನಷ್ಟು ಸೂಕ್ಷ್ಮವಾಗಿ ಗಮನಿಸಿ, ಹೊಸವರ್ಷದ ಉದಯದೊಟ್ಟಿಗೇ ಒಂದಿಷ್ಟು ಹೊಸ ಚಿಂತನೆಗಳೂ ಹೊಳೆಯುತ್ತ ಬಾಳ ಬಾನನ್ನು ಏರಲು ಕಾತರಿಸುತ್ತಿವೆ. ಅಂಥದ್ದೊಂದು ಉಜ್ವಲ, ಹೃದಯಸ್ಪರ್ಶಿ ಚಿಂತನೆ: ‘ನಮ್ಮನ್ನು ನಾವು ಹೊಸತಾಗಿಸಿಕೊಳ್ಳಬೇಕು’ ಎನ್ನುವುದು.

ಪ್ರಾಜ್ಞರೊಬ್ಬರ ಮಾತಿನಲ್ಲಿಯೇ ಹೇಳುವುದಾದರೆ ‘ನಮ್ಮ ದೇಹದ ಬೆಳವಣಿಗೆಯೊಂದಿಗೆ ವ್ಯಕ್ತಿತ್ವ ಮತ್ತು ಅಂತರಾತ್ಮವೂ ಬೆಳೆಯುತ್ತಿರುತ್ತದೆ. ಈ ಬೆಳವಣಿಗೆಯ ಜಿಗಿತ ನಮ್ಮ ಪಾಲಿಗೆ ಅದೇ ಬದುಕಿನಲ್ಲಿ ಸಿಕ್ಕಿದ ಮರುಹುಟ್ಟೂ ಆಗಿರುತ್ತದೆ’.

ಇದೇ ಬದುಕಿನಲ್ಲಿಯೆ ಅಮರತ್ವ ಪಡೆದುಕೊಳ್ಳುವ ಆಯ್ಕೆಯೊಂದನ್ನು ಪ್ರಕೃತಿ ನೀಡಿರುತ್ತದೆ. ನಿಮ್ಮ ಕೈತೋಟದಲ್ಲಿ ಬೆಳೆದು ನಿಂತಿರುವ ಯಾವುದೇ ಗಿಡದ ಜೀವನಚಕ್ರವನ್ನು ಗಮನಿಸಿದರೆ ಅಮರತ್ವದ ಈ ಪರಿಕಲ್ಪನೆಯ ಅರ್ಥ ನಿಮಗೆ ಹೊಳೆದೀತು. ನಾವು ಮನೆಯಲ್ಲಿ ದೊಡ್ಡದೊಂದು ಮಣ್ಣಿನ ಮಡಿಕೆಯಲ್ಲಿ ಒಂದು ಗಿಡ ಬೆಳೆಸಿದ್ದೆವು. ಸ್ವಲ್ಪ ದಿನಗಳಲ್ಲಿ ಅದು ಬೆಳೆದು ಮನೆಯ ತಾರಸಿಗೆ ತಾಕಿತು. ಅದರ ಸಣ್ಣ ಹಸಿರು ಕವಲುಗಳೆಲ್ಲ ಕಂದುಬಣ್ಣಕ್ಕೆ ತಿರುಗಿ ಬಲಿಷ್ಠ ಕಾಂಡಗಳಾದವು. ಅದರ ಉದ್ದುದ್ದ ಹಸಿರು ಎಲೆಗಳು ಹಳದಿಯಾಗಿ ನಂತರ ಕಂದುಬಣ್ಣಕ್ಕೂ ತಿರುಗಿದವು. ಕೊನೆಗೊಂದು ದಿನ ಎಲೆಗಳೆಲ್ಲವನ್ನೂ ಉದುರಿಸಿಕೊಂಡು, ಬರೀ ರೆಂಬೆಕೊಂಬೆಗಳನ್ನಿಟ್ಟುಕೊಂಡು ಬೋಳು ಬೋಳಾಗಿ ನಿಂತುಬಿಟ್ಟಿತು.

ಆ ಗಿಡ ಸತ್ತುಹೋಯ್ತು ಎಂದು ನಾವು ಅಂದುಕೊಂಡೆವು. ನಮ್ಮ ಅನಿಸಿಕೆ ಒಂದು ರೀತಿಯಲ್ಲಿ ನಿಜವೂ ಆಗಿತ್ತೆನ್ನಿ. ಆದರೆ ನಾವು ಗಿಡದ ಬುಡಕ್ಕೆ ನೀರು ಹಾಕುವುದನ್ನು ಮಾತ್ರ ನಿಲ್ಲಿಸಲಿಲ್ಲ. ಅದಾಗಿ ಒಂದು ವರ್ಷದ ನಂತರ ಅದರ ಬುಡದ ಕಾಂಡದಲ್ಲಿ ಒಂದು ಸಣ್ಣ ಸುಳಿ ಚಿಗುರಿತು. ಎರಡೇ ದಿನಗಳಲ್ಲಿ ಆ ಚಿಗುರು ಇನ್ನಷ್ಟು ಬೆಳೆದು ಹೊಸ ಕವಲೊಡೆಯಿತು. ತಿಳಿಗೆಂಪು ಸುಳಿ ಹಸಿರಾಗಿ, ಉದ್ದುದ್ದ ಎಲೆ ಬಿಟ್ಟು ಬೆಳೆಯತೊಡಗಿತು.

ಈ ಗಿಡದ ಜೀವನಚಕ್ರ ನೋಡುತ್ತ ನಮ್ಮ ಮನಸ್ಸಿನಲ್ಲಿ ‘ಅಮರತ್ವ ಎಂದರೆ ಏನು?’ ಎಂಬ ಪ್ರಶ್ನೆಯೊಂದು ಸುತ್ತಿ ಸುಳಿದು ಕಾಡತೊಡಗಿತು. ರೋಗ–ರುಜಿನಗಳು, ಕಷ್ಟ–ಕಾರ್ಪಣ್ಯದ ಸಂದರ್ಭಗಳು, ಮಾನಸಿಕ ಒತ್ತಡಗಳು, ಅಯೋಗ್ಯರೊಂದಿಗಿನ ಸಂಬಂಧಗಳು – ಈ ಎಲ್ಲದರಿಂದ ನಮ್ಮ ದೇಹ ಹಂತಹಂತವಾಗಿ ಸಾವಿನತ್ತ ನಡೆಯತೊಡಗುತ್ತದೆ. ನಮ್ಮ ವ್ಯಕ್ತಿತ್ವವನ್ನು ನಾವೇ ವಿಮರ್ಶಾತ್ಮಕವಾಗಿ, ನಿರ್ಮಮಕಾರದಿಂದ, ನಮ್ಮ ದೇಹವನ್ನೂ ಪರೋಕ್ಷವಾಗಿ ಜರ್ಜರಿತಗೊಳಿಸುತ್ತಿರುವ  ಅಹಂಭಾವವನ್ನು ಪಕ್ಕಕ್ಕಿಟ್ಟು ನೋಡಬಲ್ಲೆವಾದರೆ ಮೇಲೆ ಹೇಳಿದ ಸಮಸ್ಯೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದಾಗಿದೆ.

ನಾವು ನಕಾರಾತ್ಮಕವಾಗಿ ಯೋಚಿಸುತ್ತಿದ್ದರೆ ಅದಕ್ಕೆ ನಮ್ಮ ದೇಹವೂ ಅದೇ ದಾರಿಯಲ್ಲಿ ಪ್ರತಿಕ್ರಿಯಿಸುತ್ತಿರುತ್ತದೆ. ‘ನಾನು ರೋಗಿಷ್ಠ’, ‘ನಾನು ದುರ್ಬಲ’, ‘ಈ ಕೆಲಸ ನನ್ನಿಂದ ಸಾಧ್ಯವಿಲ್ಲ. ಆ ಶಕ್ತಿ ನನ್ನಲ್ಲಿ ಇಲ್ಲ’, ‘ನಾನು ಯಾವುದೇ ಕೆಲಸ ಮಾಡಲು ಹೊರಟರೂ ಸೋಲುತ್ತೇನೆ’ – ಇಂಥ ಯೋಚನೆಗಳೇ ನಮ್ಮ ಮನಸ್ಸಿನಲ್ಲಿ ತುಂಬಿದ್ದರೆ ದೇಹವೂ ಅದಕ್ಕೆ ಪೂರಕವಾಗಿಯೇ ವರ್ತಿಸಲಾರಂಭಿಸುತ್ತದೆ. ನಮ್ಮ ಮನಸ್ಸಿನ ಯೋಚನೆಗಳನ್ನು ಸಾಧ್ಯವಾಗಿಸಲು ಪ್ರಯತ್ನಿಸುತ್ತದೆ. ಪರಿಣಾಮವಾಗಿ ಈ ಸೋಲಿನ ವಿಷಜಾಲದಿಂದ ನಮಗೆ ಬಿಡುಗಡೆಯೇ ಇರುವುದಿಲ್ಲ.

ಅದರ ಬದಲಾಗಿ ಸಕಾರಾತ್ಮಕ ಆಲೋಚನೆಗಳಿಂದಲೇ ನಿಮ್ಮ ಮನಸ್ಸನ್ನು ತುಂಬಿಕೊಳ್ಳಿ. ‘ಈ ಸೋಲು ಶಾಶ್ವತ ಅಲ್ಲ. ಈ ಸಂಕಷ್ಟ ಹೀಗೆಯೇ ಮುಂದುವರಿಯುವುದಿಲ್ಲ’, ‘ನನ್ನ ಮನಸ್ಸು ಮತ್ತು ದೇಹ ಎರಡೂ ಶಕ್ತವಾಗಿದೆ, ಸತ್ವಶಾಲಿಯಾಗಿದೆ, ಎಂಥ ಸಂಕಷ್ಟವನ್ನೂ ಎದುರಿಸಿ ಸಾಗುವಷ್ಟು ನಾನು ಶಕ್ತನಾಗಿದ್ದೇನೆ’ ಎಂಬುದನ್ನು ಮನಸ್ಸಿನಲ್ಲಿ ತುಂಬಿಕೊಂಡರೆ, ದೇಹದ ಕಣಕಣವೂ ಸಕಾರಾತ್ಮಕವಾಗಿ ಸ್ಪಂದಿಸಲು ಶುರುವಾಗುತ್ತದೆ.

ಇದು ಒಂದು ದಿನ, ಒಂದು ವಾರ, ತಿಂಗಳಲ್ಲಿ ಮುಗಿದು ಬಿಡುವ ಬದಲಾವಣೆ ಅಲ್ಲವೇ ಅಲ್ಲ. ಈ ಬದಲಾವಣೆಗೆ ಮೇಲೆ ಉಲ್ಲೇಖಿಸಿದ ಗಿಡದ ಧ್ಯಾನಸ್ಥ ಮನಃಸ್ಥಿತಿ ಬೇಕಾಗುತ್ತದೆ. ದೇಹ–ಮನಸ್ಸು ಎರಡಕ್ಕೂ ಸಾಕಷ್ಟು ವಿಶ್ರಾಂತಿ ಕೊಡಬೇಕು. ಆರೋಗ್ಯಕರ ವ್ಯಾಯಾಮ, ಚಿಂತನೆಗಳು, ಆಹಾರ – ಈ ಎಲ್ಲವೂ ನಮ್ಮ ದೈನಂದಿನ ಚಟುವಟಿಕೆಯಲ್ಲಿ ಇರಬೇಕು. ಹೀಗೆ ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದರೆ ನಿಮ್ಮ ಮನಸ್ಸು ಮತ್ತು ದೇಹ ಎರಡೂ ಚೈತನ್ಯದ ಹೂದೋಟವನ್ನು ಅರಸಿಕೊಳ್ಳಲು ಅಣಿಯಾಗುತ್ತವೆ.

ನಮ್ಮ ಬಗ್ಗೆ ನಾವು ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳುವುದರ ಜೊತೆಗೆ ಇತರರ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿಸುವುದನ್ನು ನಿಲ್ಲಿಸುವುದೂ ಅಷ್ಟೇ ಮುಖ್ಯ. ನಿಮ್ಮ ಮನಸ್ಸಲ್ಲಿ ತುಂಬಿರುವ ಅಂಥ ಯೋಚನೆಗಳನ್ನು ಕಿತ್ತೊಗೆದು ಆ ಜಾಗದಲ್ಲಿ ಶುಭಾಶಯದ ದೀಪವನ್ನು ಹಚ್ಚಿಟ್ಟುಕೊಳ್ಳಿ. ಅದು ಇತರರಿಗೂ ಬೆಳಕು ನೀಡುವಂತಿರಲಿ. ಈ ಮಾನಸಿಕ ಬದಲಾವಣೆಯ ಛಾಯೆ ಬಹುಬೇಗನೇ ನಿಮ್ಮ ಮುಖದಲ್ಲಿಯೂ ಬೆಳಗಲಾರಂಭಿಸುತ್ತದೆ. ಈ ಬದಲಾವಣೆಯೇ ನಿಜವಾದ ‘ಅಮರತ್ವ’.

ಹೊಸ ವರ್ಷದ ಈ ಸಂದರ್ಭದಲ್ಲಿ ‘ಇಡೀ ವರ್ಷವನ್ನು ಒತ್ತಡರಹಿತ ವರ್ಷವನ್ನಾಗಿರಿಸಿಕೊಳ್ಳುತ್ತೇನೆ’ ಎಂಬ ಸಂಕಲ್ಪ ಮಾಡಿಕೊಳ್ಳಿ.

ನೆನಪಿಟ್ಟುಕೊಳ್ಳಿ: ಯಾವುದು ಮೇಲ್ನೋಟಕ್ಕೆ ಸಾವಿನಂತೆ ಕಾಣಿಸುತ್ತಿರುತ್ತದೆಯೋ ಅದೇ ನಮ್ಮ ವ್ಯಕ್ತಿತ್ವದ ಜಿಗಿತದ ಘಟ್ಟವೂ ಆಗಿರಬಹುದು. ನಿಮ್ಮ ದೇಹ–ಮನಸ್ಸಿಗೆ ಮರುಹುಟ್ಟು ನೀಡುವ ಸಂದರ್ಭವೂ ಆಗಬಹುದು.

Comments
ಈ ವಿಭಾಗದಿಂದ ಇನ್ನಷ್ಟು
ಇರ್ಫಾನ್‌– ದೀಪಿಕಾ ಚಿತ್ರ ಮುಂದೂಡಿದ ವಿಶಾಲ್‌

ಮೆಟ್ರೋ
ಇರ್ಫಾನ್‌– ದೀಪಿಕಾ ಚಿತ್ರ ಮುಂದೂಡಿದ ವಿಶಾಲ್‌

20 Mar, 2018
ಕಾಕೋಳು ದೇವಸ್ಥಾನದಲ್ಲಿ 85ನೇ ಬ್ರಹ್ಮರಥೋತ್ಸವ

ಮೆಟ್ರೋ
ಕಾಕೋಳು ದೇವಸ್ಥಾನದಲ್ಲಿ 85ನೇ ಬ್ರಹ್ಮರಥೋತ್ಸವ

20 Mar, 2018
‘ಹಾಸ್ಯವಿಲ್ಲದ ಸಿನಿಮಾ ಸಪ್ಪೆ’

ನಗರದ ಅತಿಥಿ
‘ಹಾಸ್ಯವಿಲ್ಲದ ಸಿನಿಮಾ ಸಪ್ಪೆ’

20 Mar, 2018
ಸಲ್ಲೂ ಪದ್ಯ ಬರೀತಾರಂತೆ!

ಬಾಲಿವುಡ್‌
ಸಲ್ಲೂ ಪದ್ಯ ಬರೀತಾರಂತೆ!

20 Mar, 2018
ನಿಯತಿ

ಮಕ್ಕಳ ಪದ್ಯ
ನಿಯತಿ

18 Mar, 2018