ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಕ್ಷ್ಮ ಪೋಷಕಾಂಶಗಳ ಕೊರತೆ; ಚರ್ಮ ಸಮಸ್ಯೆ

Last Updated 29 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಆಹಾರದಲ್ಲಿನ ಪೋಷಕಾಂಶಗಳನ್ನು ಮುಖ್ಯ ಪೋಷಕಾಂಶಗಳು ಹಾಗೂ ಸೂಕ್ಷ್ಮ ಪೋಷಕಾಂಶಗಳು ಎಂಬುದಾಗಿ ವಿಂಗಡಿಸಲಾಗುತ್ತದೆ. ಈ ಎಲ್ಲ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿರುವ ಆಹಾರವೇ ಸಮತೋಲನ ಆಹಾರ. ವ್ಯಕ್ತಿಯು ಆರೋಗ್ಯವಂತನಾಗಿರಲು ದಿನವೂ ಸಮತೋಲನ ಆಹಾರದ ಸೇವನೆ ಬಹುಮುಖ್ಯ. ಮುಖ್ಯ ಪೋಷಕಾಂಶಗಳು ಶರೀರದ ಜೀವಕೋಶಗಳಿಗೆ ಅತ್ಯಗತ್ಯವಾದ ಶಕ್ತಿಯನ್ನು ಪೂರೈಸಿದರೆ, ಸೂಕ್ಷ್ಮ ಪೋಷಕಾಂಶಗಳಾದ ಜೀವಸತ್ವಗಳು (ವಿಟಮಿನ್) ಮತ್ತು ಖನಿಜಾಂಶಗಳು ಶರೀರದಲ್ಲಿ ನಡೆಯುವ ಚಯಾಪಚಯ ಕ್ರಿಯೆಗಳಲ್ಲಿ ಕಿಣ್ವಗಳಾಗಿ ಮುಖ್ಯಪಾತ್ರವನ್ನು ವಹಿಸುತ್ತವೆ. ಅಂಗಾಂಶಗಳ ದುರಸ್ತಿ ಹಾಗೂ ನಿರ್ವಹಣೆಯಲ್ಲಿಯೂ ಈ ಸೂಕ್ಷ್ಮಪೋಷಕಾಂಶಗಳು ಸಹಕರಿಸುತ್ತವೆ.

ಈ ಸೂಕ್ಷ್ಮ ಪೋಷಕಾಂಶಗಳ ಕೊರತೆಯಿಂದ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ. ಕೆಲವು ಸೂಕ್ಷ್ಮಪೋಷಕಾಂಶಗಳ ಕೊರತೆಯು ಚರ್ಮ ಹಾಗೂ ಚರ್ಮದ ಇತರ ಅಂಗಗಳಿಗೆ ಸಂಬಂಧಿಸಿದ ಸಮಸ್ಯೆಗಳಂತೆ ಕಾಣಿಸಿಕೊಳ್ಳಬಹುದು. ಈ ಬಗ್ಗೆ ಜನಸಾಮಾನ್ಯರಲ್ಲಿ ಅರಿವಿದ್ದರೆ ಕೂಡಲೇ ಕಾಳಜಿ ವಹಿಸಬಹುದು.

ವಿಟಮಿನ್ ‘ಎ’: ಚರ್ಮದ ಮೇಲ್ಪದರದ ಜೀವಕೋಶಗಳ ಬೆಳವಣಿಗೆಗೆ ವಿಟಮಿನ್ ‘ಎ’ ಅತ್ಯವಶ್ಯಕ. ಅಂತೆಯೇ ಕಣ್ಣಿನ ಕಾರ್ಯಕ್ಷಮತೆಗೂ ಇದು ಅಗತ್ಯ. ವ್ಯಕ್ತಿಯು ಸೇವಿಸುವ ಆಹಾರದಲ್ಲಿ ವಿಟಮಿನ್ ‘ಎ’ ಕೊರತೆಯಿದ್ದಾಗ ಅದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಾಗಿ ತೋರಬಹುದು. ಸಾಮಾನ್ಯವಾಗಿ ಚರ್ಮದ ಮೇಲೆ ಅತಿ ಸಣ್ಣಸಣ್ಣ ಗುಳ್ಳೆಗಳು ಗುಂಪು ಗುಂಪಾಗಿ ಕಾಣಿಸಿಕೊಳ್ಳುತ್ತವೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ‘ಫ್ರೈನೊಡರ್ಮಾ’ ಎಂದು ಹೇಳುತ್ತಾರೆ. ಈ ಗುಳ್ಳೆಗಳು ಮುಖ್ಯವಾಗಿ ಕೈ ಹಾಗೂ ಕಾಲುಗಳ ಮೇಲೆ, ಒಮ್ಮೊಮ್ಮೆ ಕಂಕುಳಲ್ಲಿ ಮತ್ತು ಗುದದ್ವಾರದ ಬಳಿಯೂ ಕಾಣಿಸಿಕೊಳ್ಳಬಹುದು. ಇವುಗಳನ್ನು ಒಮ್ಮೊಮ್ಮೆ ಮೊಡವೆ ಗುಳ್ಳೆಗಳೆಂದು ತಪ್ಪಾಗಿ ಗ್ರಹಿಸುವ ಸಾಧ್ಯತೆಗಳೂ ಇವೆ.

ವಿಟಮಿನ್ ‘ಬಿ-1’: ಸೇವಿಸುವ ಆಹಾರದಲ್ಲಿ ವಿಟಮಿನ್ ‘ಬಿ-1’ ಅಂಶವು ಕಡಿಮೆಯಿದ್ದಾಗ ಚರ್ಮವು ತನ್ನ ಸಾಮಾನ್ಯ ಹೊಳಪನ್ನು ಕಳೆದುಕೊಂಡು ಮೇಣದ ಮೇಲ್ಮೈಯಂತೆ ಕಾಣಲು ತೊಡಗುತ್ತದೆ.

ವಿಟಮಿನ್ ‘ಬಿ-2’: ಈ ಅಂಶದ ಕೊರತೆಯಿದ್ದಾಗ, ಪುರುಷ ಮತ್ತು ಮಹಿಳೆ ಇಬ್ಬರಲ್ಲಿಯೂ ಜನನಾಂಗದ ಭಾಗದ ಚರ್ಮವು ಒಣಗಿ, ಕೆಂಪಾದಂತಾಗಿ ಚರ್ಮದ ಮೇಲಿನ ತೆಳು ಪಕಳೆಗಳು ಉದುರುತ್ತದೆ. ಬಾಯಿಯಲ್ಲಿ ಕೂಡ ವಿವಿಧ ಬದಲಾವಣೆಗಳನ್ನೂ ಕಾಣಬಹುದು. ಬಾಯಿಯ ಕೋನಗಳ (ಮೇಲ್ದುಟಿ ಹಾಗೂ ಕೆಳತುಟಿಗಳು ಸೇರುವ ಸ್ಥಳ) ಚರ್ಮದಲ್ಲಿ ಬಿರುಕುಗಳಾಗಿ, ಆಳವಾದ ಬಿರುಕುಗಳಿಂದ ರಕ್ತ ಸ್ರವಿಸುವುದೂ ಇರುತ್ತದೆ.

ವಿಟಮಿನ್ ‘ಬಿ-6’: ಇದರ ಕೊರತೆಯಲ್ಲಿ ಮೂಗು ಹಾಗೂ ಬಾಯಿಯ ಸುತ್ತಲಿನ ಚರ್ಮವು ಉರಿಯೂತಕ್ಕೊಳಗಾಗಬಹುದು. ಆ ಭಾಗದಲ್ಲಿ ಚರ್ಮವು ಜಿಡ್ಡು ಜಿಡ್ಡಾಗಿ, ತೆಳುವಾದ ಪಕಳೆಗಳು ಉದುರಬಹುದು.

ವಿಟಮಿನ್ ‘ಬಿ-12’: ಈ ಪೋಷಕಾಂಶವು ಚರ್ಮದ ಬೆಳವಣಿಗೆಗೆ ಹಾಗೂ ರಕ್ತಕಣಗಳು ಪಕ್ವವಾಗಲು ಬಹಳ ಮುಖ್ಯ. ಇದರ ಕೊರತೆಯಲ್ಲಿ ವ್ಯಕ್ತಿಯ ನಾಲಗೆಯು ಅಸಹಜ ಗುಣಲಕ್ಷಣಗಳನ್ನು ತೋರುತ್ತದೆ. ನಾಲಗೆಯು ಅತ್ಯಂತ ಪ್ರಕಾಶಮಾನವಾಗಿ ಅಚ್ಚಕೆಂಪು ಬಣ್ಣ ಬಣ್ಣದ್ದಾಗಿ, ಅಲ್ಲಲ್ಲಿ ಬಿರುಕುಗಳನ್ನೂ ತೋರಬಹುದು. ಚರ್ಮದ ಮೇಲೆ ಅಸಹಜ ಕಪ್ಪು - ಕೆಂಪುಬಣ್ಣದ ಮಚ್ಚೆಗಳು ಕಂಡು ಬರಬಹುದು. ಮುಖ್ಯವಾಗಿ ಮೊಣಕೈ ಒಳಭಾಗದಲ್ಲಿ, ಕೈ ಬೆರಳುಗಳಲ್ಲಿ, ಅಂಗೈನ ಗೆರೆಗಳಲ್ಲಿ ಈ ಬಗೆಯ ಅಸಹಜ ಕೆಂಪು – ಕಪ್ಪು ಬಣ್ಣದ ಮಚ್ಚೆಗಳು ಸಾಮಾನ್ಯ. ಹಾಗೆಯೇ ಉಗುರುಗಳ ಮೇಲೂ ಒಂದು ಬಗೆಯ ಗಾಢಬಣ್ಣದ ಗೆರೆಗಳು/ಬಿರುಕುಗಳು ಉಂಟಾಗಬಹುದು.

ವಿಟಮಿನ್ ‘ಬಿ-7’ (ಬಯೋಟಿನ್): ಈ ಅಂಶದ ಕೊರತೆಯಾದಾಗ ವ್ಯಕ್ತಿಯಲ್ಲಿ ತಲೆಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳಬಹುದು. ಅಲ್ಲದೆ, ಕಾಲು ಮತ್ತು ಕೈಗಳ ಚರ್ಮದ ಸ್ಪರ್ಶಜ್ಞಾನದಲ್ಲಿ ವ್ಯತ್ಯಾಸವಾಗಬಹುದು. ಅಲ್ಲಿ ಒಂದು ಬಗೆಯ ಜುಮ್ಮೆನಿಸುವಿಕೆ, ಸ್ವಲ್ಪ ತಾಗಿದರೂ ಉರಿಯಂತಹ ಅನುಭವವಾಗಬಹುದು.

ಫೋಲಿಕ್ ಆ್ಯಸಿಡ್: ಫೋಲಿಕ್ ಆ್ಯಸಿಡ್ ಕೊರತೆಯು ನಾಲಿಗೆ ಹಾಗೂ ಬಾಯಿಯ ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಾಲಗೆಯ ಬಣ್ಣವು ಗಾಢವಾದ ಕೆಂಪು ಬಣ್ಣಕ್ಕೆ ತಿರುಗುವುದಲ್ಲದೆ ನಾಲಗೆಯ ಮೇಲ್ಮೈಯಲ್ಲಿ ಸಣ್ಣ ಸಣ್ಣ ಬಿರುಕುಗಳಾಗಬಹುದು. ಸಾಮಾನ್ಯ ಭಾಷೆಯಲ್ಲಿ ಇದನ್ನು ನಾಲಗೆ ಒಡೆಯುವುದು ಅಥವಾ ನಾಲಗೆ ಹುಣ್ಣು ಎಂದೇ ಕರೆಯುತ್ತಾರೆ. ನಾಲಗೆಯು ಆಹಾರ ಪದಾರ್ಥಗಳ ಸಂಪರ್ಕ ಬರುತ್ತಲೂ ವ್ಯಕ್ತಿ ತೀವ್ರತರವಾದ ಉರಿಯನ್ನು ಅನುಭವಿಸುತ್ತಾನೆ. ಅಂತೆಯೇ ಬಾಯಿಯ ಒಳಭಾಗದಲ್ಲಿಯೂ ಉರಿಯೂತದಂತಾಗಿ (ಬಾಯಿ ಒಡೆಯುವುದು /ಬಾಯಿ ಹುಣ್ಣು) ವ್ಯಕ್ತಿಗೆ ಆಹಾರಸೇವನೆಯಲ್ಲಿ ತೊಡಕುಂಟಾಗಬಹುದು.

ವಿಟಮಿನ್ ‘ಬಿ-3’ ( ನಿಯಾಸಿನ್ ): ಈ ಅಂಶದ ಕೊರತೆಯು ‘ಪೆಲೆಗ್ರಾ’ ಎಂಬ ಕಾಯಿಲೆಗೆ ಕಾರಣವಾಗುತ್ತದೆ. ಪೆಲೆಗ್ರಾ ಕಾಯಿಲೆಯಲ್ಲಿ ವ್ಯಕ್ತಿಯ ಸೂರ್ಯನ ಬಿಸಿಲಿಗೆ ತೆರೆದುಕೊಂಡ ದೇಹದ ಭಾಗದ ಚರ್ಮದಲ್ಲಿ ಉರಿಯೂತ ಉಂಟಾಗುವುದು ಸಾಮಾನ್ಯ. ಇದರ ಜೊತೆಯಲ್ಲಿಯೇ ವ್ಯಕ್ತಿಯು ಅತಿಸಾರ ಮತ್ತು ನೆನಪಿನ ಶಕ್ತಿಯು ಕುಂದುವಂತಹ ಸಮಸ್ಯೆಯಿಂದಲೂ ಬಳಲಬಹುದು. ಈ ಕಾಯಿಲೆಯಲ್ಲಿ ಕಾಯಿಲೆಗೆ ಒಳಗಾದ ಚರ್ಮವು ಮೊದಲು ಕೆಂಪಾಗಿ ನಂತರ ಅಸಹಜವಾಗಿ ದಪ್ಪಗಾದಂತೆ ಕಂಡುಬರಬಹುದು. ಒಮ್ಮೊಮ್ಮೆ ಚರ್ಮದ ಮೇಲೆ ನೀರು ತುಂಬಿದ ಗುಳ್ಳೆಗಳಾಗಿ, ಚರ್ಮವು ಗಾಢವಾದ ಕಂದುಬಣ್ಣಕ್ಕೆ ತಿರುಗಬಹುದು. ಇನ್ನು ಕೆಲವೊಮ್ಮೆ ಚರ್ಮದ ಮೇಲೆ ಗಾಯಗಳಾದಂತಾಗಿ ವ್ಯಕ್ತಿಗೆ ಬಹಳ ನೋವಾಗಬಹುದು.

ವಿಟಮಿನ್ ‘ಕೆ’: ಪಿತ್ತಜನಕಾಂಗದ ಸಮಸ್ಯೆಯಿಂದ ಬಳಲುವವರಲ್ಲಿ ವಿಟಮಿನ್‘ಕೆ’ ಕೊರತೆ ಸಾಮಾನ್ಯ. ಈ ವಿಟಮಿನ್ ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇದರ ಕೊರತೆಯಿದ್ದಾಗ ಚರ್ಮದ ಒಳಭಾಗದಲ್ಲಿ ರಕ್ತಸ್ರಾವವಾಗಿ ಅದು ಅಲ್ಲಲ್ಲಿ ಸಣ್ಣ ಸಣ್ಣ ಕೆಂಪು, ಕಪ್ಪು ಹಾಗೂ ನೇರಳೆಬಣ್ಣದ ಮಚ್ಚೆಗಳಂತೆ ತೋರಬಹುದು.

ವಿಟಮಿನ್ ‘ಈ’: ಹೇರಳವಾದ ಆ್ಯಂಟಿ ಆ್ಯಕ್ಸಿಡೆಂಟ್ ಗುಣವುಳ್ಳ ವಿಟಮಿನ್ ಎಂದರೆ ವಿಟಮಿನ್ ‘ಈ’. ಇದರ ಕೊರತೆಯು ಚರ್ಮದ ಸುಕ್ಕುಗಟ್ಟುವಿಕೆಗೆ ಕಾರಣವಾಗಬಹದು. ಅತಿ ಸಣ್ಣ ಪ್ರಾಯದಲ್ಲಿಯೇ ನಿಮ್ಮ ಚರ್ಮ ಸುಕ್ಕುಗಟ್ಟುತ್ತಿದೆ ಎಂದರೆ ಅದಕ್ಕೆ ಕಾರಣ ವಿಟಮಿನ್ ‘ಈ’ ಕೊರತೆ ಇದ್ದರೂ ಇರಬಹುದು.

ವಿಟಮಿನ್ ‘ಸಿ’: ವಿಟಮಿನ್ ‘ಸಿ’ ಕೊರತೆಯು ಕೂದಲಿನ ಬೆಳವಣಿಗೆಯ ಮೇಲೆ ಮತ್ತು ಒಸಡುಗಳ ಆರೋಗ್ಯದ ಮೇಲೆ ತೀವ್ರತರವಾದ ಪರಿಣಾಮವನ್ನು ಬೀರುತ್ತದೆ. ಇದರ ಕೊರತೆಯಲ್ಲಿ ಕೂದಲು ಬುಡದಲ್ಲಿಯೇ ತಿರುಚಿಕೊಂಡಂತಾಗಿ ಅದರ ಬೆಳವಣಿಗೆ ಅಲ್ಲೇ ಕುಂಠಿತವಾಗುತ್ತದೆ. ಕೈ, ಕಾಲು, ಬೆನ್ನು ಹಾಗೂ ನಿತಂಬಗಳ ಭಾಗದ ಚರ್ಮದ ಮೇಲಿನ ಕೂದಲುಗಳ ಬೇರಿನಲ್ಲಿಯೇ ಉರಿಯೂತ ಕಂಡು ಬರುತ್ತದೆ. ಅದನ್ನು ವೈದ್ಯಕೀಯ ಭಾಷೆಯಲ್ಲಿ ಫಾಲಿಕುಲೈಟಿಸ್ ಎನ್ನುತ್ತಾರೆ. ಅಲ್ಲದೆ, ವಿಟಮಿನ್ ‘ಸಿ’ ಕೊರತೆ ಮುಖ್ಯವಾಗಿ ಒಸಡುಗಳಲ್ಲಿ ಊತ ಹಾಗೂ ರಕ್ತಸ್ರಾವಕ್ಕೂ ಕಾರಣವಾಗಬಹುದು.

ಮೆಗ್ನಿಶಿಯಂ, ಝಿಂಕ್, ಸೆಲೆನಿಯಂ, ಸಲ್ಫರ್ ಮುಂತಾದ ಖನಿಜಾಂಶಗಳ ಕೊರತೆಯಲ್ಲಿಯೂ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಂಡುಬರುತ್ತವೆ.

ಝಿಂಕ್: ಝಿಂಕ್ ಅಂಶವು ಚರ್ಮ ಹಾಗೂ ಕೂದಲಿನ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಆಹಾರದಲ್ಲಿ ಝಿಂಕ್ ಕೊರತೆಯು ವ್ಯಕ್ತಿಯನ್ನು ‘ಆಕ್ರೋಡರ್ಮಟೈಟಿಸ್ ಎಂಟೆರೋಪತಿಕಾ’ ಎಂಬ ಆರೋಗ್ಯ ಸಮಸ್ಯೆಗೆ ಗುರಿಪಡಿಸುತ್ತದೆ. ಈ ಸಮಸ್ಯೆಯಲ್ಲಿ ಮುಂಗೈ, ಪಾದಗಳ ಚರ್ಮ ಅಲ್ಲದೆ ಜನನಾಂಗ, ಗುದದ್ವಾರದ ಭಾಗದ ಚರ್ಮದಲ್ಲಿ ಒಂದು ಬಗೆಯ ತುರಿಕೆ, ಕೆಂಪಾಗುವಿಕೆ, ಉರಿ ಹಾಗೂ ಗಾಯಗಳಾಗಬಹುದು. ಕೂದಲಿನ ಬೆಳವಣಿಗೆಯು ಕುಂಠಿತಗೊಳ್ಳುತ್ತದೆ. ಅಂಗೈ ಹಾಗೂ ಪಾದಗಳಲ್ಲಿನ ಗೆರೆಗಳ ಬಳಿ ನೀರು ತುಂಬಿದ ದೊಡ್ಡ ದೊಡ್ಡ ಗುಳ್ಳೆಗಳಾಗಿ, ಅವುಗಳ ಸುತ್ತಲಿನ ಚರ್ಮವು ಕೆಂಪಾಗುತ್ತದೆ. ಕೈ ಹಾಗೂ ಕಾಲು ಬೆರಳುಗಳ ಉಗುರುಗಳ ಸುತ್ತಲಿನ ಚರ್ಮದಲ್ಲಿ ಉರಿಯೂತ ಕಂಡುಬರುತ್ತದೆ. ಅಲ್ಲಿನ ಚರ್ಮವು ಕೆಂಪಾಗಿ, ಊದುತ್ತದೆ ಹಾಗೂ ಒಮ್ಮೊಮ್ಮೆ ಕೀವು ತುಂಬಿ ಬಹಳ ನೋವನ್ನು ಉಂಟುಮಾಡುತ್ತದೆ. ಇದನ್ನು ಸಾಮಾನ್ಯ ಭಾಷೆಯಲ್ಲಿ ಉಗುರುಸುತ್ತು ಎನ್ನುತ್ತಾರೆ.

ಸೆಲೆನಿಯಂ: ಸೆಲೆನಿಯಂ ಕೊರತೆಯಲ್ಲಿ ತಲೆಹೊಟ್ಟು, ತಲೆಗೂದಲು ತೆಳ್ಳಗಾಗುವಿಕೆ, ಕೈಕಾಲುಗಳ ಉಗುರುಗಳ ಮೇಲೆ ಆಳವಾದ ಗೆರೆಗಳು ಬಂದಂತಾಗುವುದು, ಉಗುರು ಮತ್ತು ಕೂದಲು ಟೊಳ್ಳಾಗುವುದು ಮೊದಲಾದ ಲಕ್ಷಣಗಳಿರುತ್ತವೆ.

ಮೆಗ್ನಿಶಿಯಂ: ಬಣ್ಣ ಮಾಸಿದ ಹಾಗೂ ಬೆಳವಣಿಗೆಯಿಲ್ಲದ, ಹೊಳಪಿಲ್ಲದ ಕೂದಲು ಮೆಗ್ನಿಶಿಯಂ ಕೊರತೆಯ ಮುಖ್ಯ ಲಕ್ಷಣ.

ಹೀಗೆ ಸೂಕ್ಷ್ಮಪೋಷಕಾಂಶಗಳ ಕೊರತೆಯು ಚರ್ಮ ಮತ್ತು ಅದರ ಉಪ ಅಂಗಗಳಾದ ಕೂದಲು, ಉಗುರಿನ ಸಮಸ್ಯೆಗಳಿಗೂ ಕಾರಣವಾಗಬಹುದು. ಆದ್ದರಿಂದ ಸೂಕ್ಷ್ಮಪೋಷಕಾಂಶಗಳು ಹೇರಳವಾಗಿರುವ ತರಕಾರಿಗಳು ಮತ್ತು ವಿವಿಧ ಬಗೆಯ ಹಣ್ಣುಗಳು, ದಿನನಿತ್ಯ ನಮ್ಮ ಆಹಾರದಲ್ಲಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT